ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

20 ನಿಮಿಷ 20 ಸುದ್ದಿ

Srinivasa Murthy VN
Updated On : 25 May 2014, 12:54 pm

ವಿಟ್ಲ: ಕಳೆದ ವಾರ ಸುರಿದ ಭಾರೀ ಮಳೆಗೆ ವಿಟ್ಲ ಪಡ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪರ್ತಿಪ್ಪಾಡಿ ಎಂಬಲ್ಲಿರುವ ಏಕೈಕ ಬಸ್ ತಂಗುದಾಣದ ಶೀಟುಗಳು ಹಾರಿ ಹೋಗಿದ್ದು, ಇದೀಗ ಪ್ರಯಾಣಿಕರು ಕಷ್ಟಪಡುವಂತಹ ದುಸ್ಥಿತಿ ಎದುರಾಗಿದೆ. ವಿಟ್ಲ ಪಡ್ನೂರು ಗ್ರಾಮ ಪಂಚಾಯಿತಿ ವತಿಯಿಂದ ಹತ್ತು ವರ್ಷಗಳ ಹಿಂದೆ ಪರ್ತಿಪ್ಪಾಡಿಯಿಂದ ವಿಟ್ಲ, ಸಾಲೆತ್ತೂರು, ಕೊಣಾಜೆ ಹಾಗೂ ಮಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಬಸ್ ತಂಗುದಾಣ ನಿರ್ಮಿಸಲಾಗಿತ್ತು. ನಿರ್ಮಾಣವಾದ ಕೆಲವೇ ವರ್ಷದಲ್ಲಿ ನಿಲ್ದಾಣದ ಮಹಡಿಗೆ ಅಳವಡಿಸಲಾಗಿದ್ದ ಶೀಟುಗಳು ಹಾರಿ ಹೋಗಿತ್ತು. ಈ ಬಗ್ಗೆ ಗ್ರಾಮಸ್ಥರು ಗ್ರಾಪಂ ಗಮನಕ್ಕೂ ತಂದಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಕಳೆದ ಬಾರಿಯ ಮಳೆಗಾಲದಲ್ಲಿ ಪ್ರಯಾಣಿಕರು ಮಳೆಗೆ ಒದ್ದೆಯಾಗುವುದನ್ನು ಮನಗಂಡ ಸಾರ್ವಜನಿಕರು ಸ್ವತಃ ತಾವೇ ಶೀಟ್ ಅಳವಡಿಸಿದ್ದೆವು ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಅಪ್ರಾಪ್ತೆ ಅಪಹರಣ: ತುರ್ತು ಕ್ರಮಕ್ಕೆ ಸೂಚನೆ
ಸುಳ್ಯ: ಅಜ್ಜಾವರ ಗ್ರಾಮ ಮುಳ್ಯದ ಬಾಲಕಿಯೊಬ್ಬಳನ್ನು ಬಿಹಾರದ ಯುವಕನೊಬ್ಬ ಪುಸಲಾಯಿಸಿ ತನ್ನ ಊರಿಗೆ ಕರೆದೊಯ್ದನೆನ್ನಲಾದ ಘಟನೆಯೊಂದು ವರದಿಯಾಗಿದೆ. ಮುಳ್ಯ ಹೊಸಗದ್ದೆಯ ಅಂಗಾರ- ಪುಷ್ಪಾವತಿ ಇವರ ಪುತ್ರಿ ಸ್ವಾತಿ(15) ಎಂಬಾಕೆ ಏ.27ರಿಂದ ಕಾಣೆಯಾಗಿದ್ದಾಳೆ. ಆಕೆಯ ತಾಯಿ ಸುಳ್ಯದ ಕಟ್ಟಡ ಕಾಮಗಾರಿ ಕೂಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ ಬರುತ್ತಿದ್ದ ಸ್ವಾತಿಗೆ ಗ್ರಾನೈಟ್ ಕೆಲಸ ಮಾಡುತ್ತಿದ್ದ ಬಿಹಾರದ ಯುವಕನ ಪರಿಚಯವಾಗಿತೆನ್ನಲಾಗಿದೆ. ಏ.27ರಂದು ಆಕೆ ಆ ಯುವಕನನೊಂದಿಗೆ ಹೊರಟು ಹೋಗಿದ್ದು, ಏ.28ರಂದು ಫೋನ್ ಮಾಡಿ ವಿಷಯ ತಿಳಿಸಿದ್ದಳು. ಆದರೆ ನಂತರ ಫೋನ್ ಸಂಪರ್ಕ ಸಿಗದಿದ್ದುದರಿಂದ ಅವರು ಏ.29ರಂದು ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಮಗಳನ್ನು ಹುಡುಕಿಸಿಕೊಡಿ ಎಂದು ಆಕೆಯ ಹೆತ್ತವರು ಬಾಲ್ಯವಿವಾಹ ನಿಷೇಧಾಧಿಕಾರಿಗಿರುವ ಸಿಡಿಪಿಒರವರಿಗೆ ಹಾಗೂ ಜಿಪಂ ಸದಸ್ಯ ನವೀನ್ ಕುಮಾರ್, ತಾಪಂ ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ ಇವರಿಗೆ ಮನವಿ ಮಾಡಿಕೊಂಡಿದ್ದಾರೆ. ತಾಪಂ ಅಧ್ಯಕ್ಷರು ಕೆಡಿಪಿ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ತುರ್ತುಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಮೋದಿ ಸರ್ಕಾರ ಶ್ರೇಯಸ್ಸಿಗೆ ದುರ್ಗಾ ಪೂಜೆ, ಭಜನೆ
ಉಪ್ಪಿನಂಗಡಿ: ದೇಶದಲ್ಲಿ ನರೇಂದ್ರ ಮೋದಿ ಸರ್ಕಾರದ ಸ್ಥಾಪನೆ ಮತ್ತು ಯಶಸ್ವಿ ರಾಷ್ಟ್ರಾಡಳಿತಕ್ಕಾಗಿ ಉಪ್ಪಿನಂಗಡಿ 2ನೇ ವಾರ್ಡ್ ಬಿಜೆಪಿ ಗ್ರಾಮ ಸಮಿತಿ ಮತ್ತು ಭಜನಾ ಮಂದಿರ ವತಿಯಿಂದ ಸ್ಥಳೀಯ ಶ್ರೀದುರ್ಗಾ ಭಜನಾ ಮಂದಿರ ದುರ್ಗಾಗಿರಿಯಲ್ಲಿ ವಿಶೇಷವಾಗಿ ಶ್ರೀದುರ್ಗಾ ಪೂಜೆ ಮತ್ತು ಭಜನಾ ಸೇವೆ ಶುಕ್ರವಾರ ನಡೆಯಿತು. ಭಜನಾ ಮಂದಿರ ಗೌರವಾಧ್ಯಕ್ಷ ವೆಂಕಟ್ರಮಣ ಭಟ್ ಪಾತಾಳ, ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ಕಂಗ್ವೆ, ಬಿಜೆಪಿ ಮುಖಂಡರಾದ ಸಂಜೀವ ಮಠಂದೂರು, ತಾಲೂಕು ಪಂಚಾಯಿತಿ ಸದಸ್ಯ ಉಮೇಶ್ ಶೆಣೈ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಧರ್ಣಪ್ಪ ಗೌಡ ವರೆಕ್ಕ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್ ಅತ್ರಮಜಲು, ಮಾಲತಿ ಗಿರಿಯಪ್ಪ ಬೆತ್ತೋಡಿ ಮತ್ತು ಭಜನಾ ಮಂದಿರ ಸದಸ್ಯರು ಮತ್ತು ನಮೋ ಮೋದಿ ಬಳಗದ ಸದಸ್ಯರು ಇದ್ದರು.

ಮರ ಬಿದ್ದು ಹಾನಿ
ಸುಳ್ಯ: ದೊಡ್ಡತೋಟದಲ್ಲಿ ಮರ್ಕಂಜ ತಿರುವಿನಲ್ಲಿರುವ ಬಸ್ ನಿಲ್ದಾಣದ ಮೇಲೆ ಮೇ ಪ್ಲವರ್ ಮರ ಬಿದ್ದು ಸಂಪೂರ್ಣ ಹಾನಿಗೊಂಡಿದೆ. ಬಿದ್ದ ಮರವನ್ನು ರಿಕ್ಷಾ ಚಾಲಕರು ತೆರವುಗೊಳಿಸಿದ್ದು, ವಾರ ಕಳೆದರೂ ಬಸ್ ನಿಲ್ದಾಣ ದುರಸ್ತಿಗೊಳಿಸುವ ಬಗ್ಗೆ ಇನ್ನೂ ಕ್ರಮ ಕೈಗೊಂಡಿಲ್ಲ

ಯೋಗದೀಪಿಕಾ ವಿದ್ಯಾಪೀಠ ಪ್ರವೇಶಕ್ಕೆ ಅರ್ಜಿ ಆಹ್ವಾನ
ಉಡುಪಿ: ಶ್ರೀ ಪಲಿಮಾರು ಮಠದ ಯೋಗದೀಪಿಕಾ ಟ್ರಸ್ಟಿನ ಮೂಲಕ 25 ವರ್ಷಗಳಿಂದ ನಡೆಯುತ್ತಿರುವ ಯೋಗದೀಪಿಕಾ ವಿದ್ಯಾಪೀಠಕ್ಕೆ ಸೇರಬಯಸುವ ವಿಪ್ರವಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವೇದ, ಸಂಸ್ಕೃತ, ಪೌರೋಹಿತ್ಯ, ಜ್ಯೋತಿಷ, ಆಗಮಗಳ ಶಿಕ್ಷಣವನ್ನು ಊಟ - ವಸತಿಗಳ ಸಹಿತ ಉಚಿತವಾಗಿ ನೀಡುವುದಲ್ಲದೆ ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕದತ್ತಿ ಇಲಾಖೆಯ ರಾಜ್ಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಮಂಡಳಿಯು ನಡೆಸುತ್ತಿರುವ ಪ್ರವರ ಮತ್ತು ಪ್ರವೀಣ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಾಗುವುದು. 7ನೇ ತರಗತಿ ಪಾಸಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಎಸ್‌ಎಲ್‌ಎಸ್‌ಸಿ ಪರೀಕ್ಷೆ ಹಾಗೂ ಸರ್ಕಾರದಿಂದ ನಡೆಯುವ ಸಂಸ್ಕೃತ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಾಗುವುದು. ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನ. ಮಾಹಿತಿಗಾಗಿ ಉಡುಪಿಯ ಪಲಿಮಾರು ಮಠವನ್ನು, ದೂ. 0820- 2523402 ಅಥವಾ ಸಂಸ್ಥೆಯ ಪ್ರಾಂಶುಪಾಲರನ್ನು, ಮೊ. 9964372431 ಅನ್ನು ಸಂಪರ್ಕಿಸಬಹುದು.

ಡಾ. ಅಮ್ಮೆಂಬಳ ಬಾಳಪ್ಪಗೆ ಸಾರ್ವಜನಿಕ ಶ್ರದ್ಧಾಂಜಲಿ
ಬಂಟ್ವಾಳ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಸಮಾಜಸೇವಾ ಸಹಕಾರಿ ಬ್ಯಾಂಕಿನ ವತಿಯಿಂದ ಶುಕ್ರವಾರ ಬಂಟ್ವಾಳ ಬೈಪಾಸ್‌ನಲ್ಲಿರುವ ಬ್ಯಾಂಕ್‌ನ ಸಭಾಂಗಣದಲ್ಲಿ ನಡೆಯಿತು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮನಾಥ ರೈ, ಸಿಪಿಐ(ಎಂ)ನ ಹಿರಿಯ ನಾಯಕ ವಾಸುಗಟ್ಟಿ ಮಾತನಾಡಿದರು. ಪ್ರಮುಖರಾದ ಲಿಂಗಪ್ಪ ಮಾಸ್ತರ್ ಕೈಕುಂಜ, ಜಿ. ಆನಂದ, ಮುತ್ತಪ್ಪ ಪೂಜಾರಿ, ಎಂ.ಆರ್. ನಾರಾಯಣ, ನ್ಯಾಯವಾದಿ ಶ್ರೀನಿವಾಸ ದೈಪಲ ಮತ್ತಿತರರು ನುಡಿನಮನ ಸಲ್ಲಿಸಿದರು. ಸಮಾಜಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ದಯಾನಂದ, ಪುರಸಭಾ ಸದಸ್ಯ ಸದಾಶಿವ ಬಂಗೇರಾ, ಪ್ರಮುಖರಾದ ರಾಮದಾಸ್ ಬಂಟ್ವಾಳ್, ಮಚ್ಚೇಂದ್ರ ಸಾಲ್ಯಾನ್, ದಾಮೋದರ ಬಿ.ಎಂ. ಭೋಜ ಸರಳಪಾದೆ ಇದ್ದರು.

ಬಂಡಿಮಠ ನಿಲ್ದಾಣಕ್ಕೆ ಸರ್ಕಾರಿ ಬಸ್‌ಗಳ ಪ್ರವೇಶ ಕಡ್ಡಾಯ
ಕಾರ್ಕಳ: ಇಲ್ಲಿನ ಬಂಡಿಮಠದ ನೂತನ ಬಸ್ ನಿಲ್ದಾಣಕ್ಕೆ ಎಲ್ಲಾ ಸರ್ಕಾರಿ ಬಸ್‌ಗಳು ಕಡ್ಡಾಯವಾಗಿ ಬರಬೇಕು ಹಾಗೂ ಈ ಬಸ್ ನಿಲ್ದಾಣಕ್ಕೆ ಬೇಕಾಗಿರುವ ಎಲ್ಲಾ ಮೂಲ ಸೌಲಭ್ಯಗಳನ್ನು ಪುರಸಭೆಯೇ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್ ಆದೇಶಿಸಿದ್ದಾರೆ. ಅವರು ಶುಕ್ರವಾರ ಕಾರ್ಕಳಕ್ಕೆ ಭೇಟಿ ನೀಡಿ ಪುರಸಭಾ ವ್ಯಾಪ್ತಿಯ ಸಮಸ್ಯೆಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಸಭೆಯನ್ನು ನಡೆಸಿದರು. ಹೊಸ ಬಸ್ ಪರವಾನಗಿ ನೀಡುವಾಗ ಬಂಡಿಮಠ ಬಸ್ ನಿಲ್ದಾಣದಿಂದಲೇ ಹೊರಡುವಂತೆ ನೀಡಬೇಕು. ಮುಂಬೈಗೆ ಹೋಗುವ ಎಲ್ಲಾ ಖಾಸಗಿ ಬಸ್‌ಗಳು ಕೂಡ ಬಂಡಿಮಠ ನಿಲ್ದಾಣದಿಂದಲೇ ಹೊರಡಬೇಕು ಎಂದವರು ಅಧಿಕಾರಿಗಳಿಗೆ ಹೇಳಿದರು. ಸಭೆಯಲ್ಲಿ ಪುರಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪ್ರಾದೇಶಿಕ ಸಾರಿಗೆ ಆಯುಕ್ತರು, ನಗರ ಯೋಜನಾ ನಿರ್ದೇಶಕರು, ಪೊಲೀಸ್ ಅಧಿಕಾರಿಗಳು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು, ಬಸ್ ಮಾಲೀಕ ಸಂಘದ ಪದಾಧಿಕಾರಿಗಳು ಮುಂತಾದವರಿದ್ದರು.

ಕಾಪು ಪೇಟೆ ಅತಿಕ್ರಮಣ ಜೂನ್‌ನಲ್ಲಿ ತೆರವು: ಜಿಲ್ಲಾಧಿಕಾರಿ
ಕಾಪು: ಇಲ್ಲಿನ ಪ್ರಸಿದ್ದ ಪ್ರವಾಸಿ ತಾಣವಾಗಿರುವ ಕಾಪು ಬೀಚ್ ಮತ್ತು ಕಾಪು ಪೇಟೆಯ ಅಭಿವೃದ್ಧಿಯ ಸಮಸ್ಯೆಗಳನ್ನು ಪರಿಶೀಲಿಸಲು ಖುದ್ದು ಜಿಲ್ಲಾಧಿಕಾರಿ ಡಾ. ಮುದ್ದುಮೋಹನ್ ಅವರು ಅಧಿಕಾರಿಗಳೊಂದಿಗೆ ಕಾಪು ಪೇಟೆ, ಬೀಚ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಜೂನ್ ಮೊದಲ ವಾರದೊಳಗೆ ಕಾಪು ಪೇಟೆಯ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿರುವ ಅತಿಕ್ರಮಣಗಳನ್ನು ತೆರವುಗೊಳಿಸುವಂತೆ, ಘನತ್ಯಾಜ್ಯ ವಿಲೇವಾರಿಗೆ ಈಗಾಗಲೇ ಸ್ಥಳೀಯ ಗ್ರಾ.ಪಂ. ವತಿಯಿಂದ ಈಗಾಗಲೇ ಕಳುಹಿಸಲಾದ ವರದಿಯನ್ನು ಪರಿಶೀಲಿಸುವಂತೆ, ಕಾಪು ಬೀಚ್‌ನಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲು ಮತ್ತು ಸ್ವಚ್ಛತೆ ಕೈಗೊಳ್ಳಲು ಪ್ರವಾಸೋದ್ಯಮ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ. ಸಿಇಒ ಕನಗವಲ್ಲಿ, ಉಪವಿಭಾಗಾಧಿಕಾರಿ ಯೋಗೇಶ್ವರ್, ಉಪಕಾರ್ಯದರ್ಶಿ ಪ್ರಾಣೇಶ್ ರಾವ್, ಡಿಎಚ್‌ಒ ಡಾ. ರಾಮಚಂದ್ರ ಬಾಯರಿ, ಪ್ರವಾಸೋದ್ಯಮ ಇಲಾಖಾಧಿಕಾರಿ ಜಿತೇಂದ್ರ, ತಹಸೀಲ್ದಾರ್ ಮೋಹನ್ ರಾವ್ ಇದ್ದರು.

ಸಿಇಟಿ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಕಾರ್ಯಾಗಾರ ನಾಳೆ
ಪುತ್ತೂರು: ಸಿಇಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಫಲಿತಾಂಶದ ನಂತರ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯುವ ವಿಧಾನ ಮತ್ತು ಇದರಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಹಾಗೂ ಪೋಷಕರ ಜವಾಬ್ದಾರಿಯ ಬಗ್ಗೆ ಸೂಕ್ತ ಮಾಹಿತಿ ನೀಡುವ ನಿಟ್ಟಿನಲ್ಲಿ ಉಚಿತ ಕೌನ್ಸೆಲಿಂಗ್ ಮಾಹಿತಿ ಕಾರ್ಯಾಗಾರ 26ರಂದು ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ರಾಧಾಕೃಷ್ಣ ಭಕ್ತ ತಿಳಿಸಿದ್ದಾರೆ. ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಇಟಿ ಫಲಿತಾಂಶದ ಬಳಿಕ ಕೌನ್ಸೆಲಿಂಗ್‌ನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಾಕಷ್ಟು ಗೊಂದಲ ಮತ್ತು ಸಮಸ್ಯೆಗಳಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಈ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಮತ್ತು ಪೋಷಕರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲಿದ್ದಾರೆ ಎಂದು ಅವರು ತಿಳಿಸಿದರು. ವಿವೇಕಾನಂದ ಎಂಜಿನಿಯರಿಂಗ್ ಕಾಲೇಜ್ ಉಪಪ್ರಾಂಶುಪಾಲ ಪಿ.ವಿ. ಭಟ್, ಉಪನ್ಯಾಸಕರಾದ ವಿವೇಕ್ ಭಂಡಾರಿ ಮತ್ತು ಪ್ರಶಾಂತ್ ರಾವ್ ಭಾಗವಹಿಸಿದ್ದರು.

ಕಡಬ: ಕಂದಾಯ ಅದಾಲತ್ ಉದ್ಘಾಟನೆ
ಉಪ್ಪಿನಂಗಡಿ: ಆಕಾರ್‌ಬಂದ್‌ನಲ್ಲಿರುವಂತೆ ವಿಸ್ತೀರ್ಣ ಹಾಗೂ ವಿವರಣೆ ಪಹಣಿ ಪತ್ರದಲ್ಲಿರಬೇಕು ಎಂದು ಪುತ್ತೂರು ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣ ಮೂರ್ತಿ ಹೇಳಿದರು.  ಅವರು ಕಡಬ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಂದಾಯ ಅದಾಲತ್ ಉದ್ಘಾಟಿಸಿ ಮಾತನಾಡಿದರು. ಪುತ್ತೂರು ತಾಲೂಕು ಪಂಚಾಯಿತಿ ಸದಸ್ಯ ಭಾಸ್ಕರ ಗೌಡ ಇಚ್ಲಂಪಾಡಿ, ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಹನೀಫ್ ಕೆ.ಎಂ. ಮಾತನಾಡಿದರು. ಅದಾಲತ್‌ನಲ್ಲಿ ಭೂಮಾಪನ ಅಧಿಕಾರಿ ಮಂಜುನಾಥ, ಸರ್ವೆ ಇಲಾಖೆಗೆ ಸಂಬಂಧಿಸಿದ ಮಾಹಿತಿ ನೀಡಿದರು. ಉಪ ತಹಸೀಲ್ದಾರ್ ಗಂಗಾಧರ ಹೆಗ್ಡೆ, ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ, ಕೊರಗಪ್ಪ ಹೆಗ್ಡೆ, ಬಾಬು ನೈಕ್, ನಾಡ ಕಚೇರಿ ಸಿಬ್ಬಂದಿ, ಗ್ರಾಮಕರಣಿಕರು ಇದ್ದರು. ಕಡಬ ವಿಶೇಷ ತಹಸೀಲ್ದಾರ್ ಬಿ.ಸಿ. ಶಿವಪ್ಪ ಸ್ವಾಗತಿಸಿ, ಕಂದಾಯ ಅದಾಲತ್‌ನ ಬಗ್ಗೆ ಮಾಹಿತಿ ನೀಡಿಸಿದರು.

'ರಾಮ್‌ದೇವ್ ಹೇಳಿಕೆಯಿಂದ
ಮಹಿಳೆಯರಿಗೆ ಅಪಚಾರ'
ಮಂಗಳೂರು: ಯೋಗ ಗುರು ರಾಮ್‌ದೇವ್ ದಲಿತ ವಿರೋಧಿ ಹೇಳಿಕೆ ನೀಡುವ ಮೂಲಕ ಮಹಿಳೆಯರಿಗೆ, ಹಿಂದೂಗಳಿಗೆ ಅಪಚಾರ ಎಸಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ. ಸನ್ಯಾಸಿ ಕಾಮ, ಕ್ರೋಧ, ಮೋಹ, ಮದ ಮತ್ಸರ ಹೊಂದಿರಬಾರದು. ಆದರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕುರಿತಂತೆ ರಾಮ್‌ದೇವ್ ಕೀಳು ಅಭಿರುಚಿ ಹೇಳಿಕೆ ನೀಡುವ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಮಹಾತ್ಮ ಗಾಂಧಿ ಕೂಡಾ ದಲಿತರ ಕೇರಿಗೆ ಭೇಟಿ ನೀಡಿ ಉದ್ಧಾರಕ್ಕೆ ಪ್ರಯತ್ನಿಸಿದ್ದರು. ಇದರಂತೆ ರಾಹುಲ್ ಗಾಂಧಿ ಕೂಡಾ ಭೇಟಿ ನೀಡಿದ್ದಾರೆ. ಆದರೆ ಸನ್ಯಾಸಿಯಾಗಿದ್ದು, ಬಿಜೆಪಿ ಏಜೆಂಟರಂತೆ ವರ್ತಿಸುವ ರಾಮ್‌ದೇವ್ ಕೆಟ್ಟ ಹೇಳಿಕೆ ನೀಡಿದ್ದಾರೆ. ರಾಮ್‌ದೇವ್ ಮೇಲೆ ಹಿಂದಿದ್ದ ಗೌರವ ಈಗ ಇಲ್ಲವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಐವನ್ ಡಿಸೋಜ, ನಝೀರ್ ಬಜಾಲ್, ನಾಗೇಂದ್ರ ಕುಮಾರ್, ಪದ್ಮನಾಭ ನರಿಂಗಾನ ಇದ್ದರು.

ಉಪ್ಪಿನಂಗಡಿ: ಗ್ರಾಮ ಸಡಕ್ ಕಾಮಗಾರಿ ಪರಿಶೀಲನೆ
ಉಪ್ಪಿನಂಗಡಿ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಪೆರಿಯಡ್ಕ-ಕಾಂಚನ ರಸ್ತೆ ಅಭಿವೃದ್ಧಿಗೆ ರು. 5.10 ಕೋಟಿ ಮತ್ತು ಸರ್ವೇ-ಮುಂಡೂರು ರಸ್ತೆ ಅಭಿವೃದ್ಧಿಗೆ ರು. 2. 77ಕೋಟಿ ಅನುದಾನ ಮಂಜೂರು ಆಗಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ತಿಳಿಸಿದರು. ಅವರು ಇತ್ತೀಚೆಗೆ ಪೆರಿಯಡ್ಕ- ಕಾಂಚನ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲನೆ ನಡೆಸಿ ಬಳಿಕ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಶ್ರಫ್ ಬಸ್ತಿಕ್ಕಾರ್, ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ ಮಾಣಿಕ್ಯರಾಜ್ ಪಡಿವಾಳ್, ಬಜತ್ತೂರು ವಲಯ ಕಾಂಗ್ರೆಸ್ ಅಧ್ಯಕ್ಷ ಸೇಸಪ್ಪ ಗೌಡ, ಬಜತ್ತೂರು ಗ್ರಾಮ ಪಂಚಾಯಿತಿ ಸದಸ್ಯ ಉಮ್ಮರ್ ಕೆಮ್ಮಾರ, ಸ್ಥಳೀಯ ಪ್ರಮುಖರಾದ, ಉದ್ಯಮಿ ಕೆ.ಎಸ್. ರಾಧಾಕೃಷ್ಣ, ಸುಬ್ರಹ್ಮಣ್ಯ, ಪೂವಣಿ, ಪ್ರಕಾಶ್, ಇಲಾಖಾ ಸಹಾಯಕ ಅಭಿಯಂತರ ಗೋಕುಲದಾಸ್, ಜ್ಯೂನಿಯರ್ ಎಂಜಿನಿಯರ್ ರವೀಂದ್ರ, ಬಜತ್ತೂರು ಗ್ರಾಮಕರಣಿಕ ರಮೇಶ್, ಗುತ್ತಿಗೆದಾರ ಸಂದೀಪ್ ಇದ್ದರು.

ಅರ್ಕುಳದಲ್ಲಿ ವಿಶ್ವ ಭೂಮಿ ದಿನ ಆಚರಣೆ
ಬೆಳ್ತಂಗಡಿ: ಭಾರತೀಯರ ಪಾಲಿಗೆ ಭೂಮಿ ತಾಯಿ. ಆದರೆ ನಮ್ಮ  ಮದರ್ ಅರ್ಥನ್ನು ಜೋಪಾನ ಮಾಡುವ ಜವಾಬ್ದಾರಿಯನ್ನು ಎಲ್ಲರೂ ಮರೆತಿದ್ದೇವೆ. ಹಾಗಾಗಿಯೇ ಇಂದು ಭೌಗೋಳಿಕವಾಗಿ ವಾತಾವರಣದಲ್ಲಿ ವ್ಯತ್ಯಯವನ್ನು ಕಾಣುತ್ತಿದ್ದೇವೆ ಉಜಿರೆ ಶ್ರೀ ಧ.ಮಂ. ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಹಾಗೂ ಬೆಳ್ತಂಗಡಿ ರೋಟರಿ  ನಿಯೋಜಿತ ಅಧ್ಯಕ್ಷ ಡಾ. ಎ. ಜಯಕುಮಾರ ಶೆಟ್ಟಿ ತಿಳಿಸಿದರು. ಬೆಳ್ತಂಗಡಿ ರೋಟರಿ ಕ್ಲಬ್ ಅರ್ಕುಳ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ವಿಶ್ವ ಭೂಮಿ ದಿನದ ಅಂಗವಾಗಿ ಆಯೋಜಿಸಲ್ಪಟ್ಟ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಂಟ್ವಾಳದ ನೋಟರಿ ಅಶ್ವನಿ ಕುಮಾರ್ ರೈ  ಕಾರ್ಯಕ್ರಮ ಉದ್ಘಾಟಿದರು.  ಅರ್ಕುಳ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಅರ್ಕುಳ ಬೀಡು ವಜ್ರನಾಭ ಶೆಟ್ಟಿ, ಟ್ರಸ್ಟಿ ರತ್ನರಾಜ ಶೆಟ್ಟಿ, ಬೆಳ್ತಂಗಡಿ ರೋಟರಿ ನಿಯೋಜಿತ ಕಾರ್ಯದರ್ಶಿ ರೊ.ವೈಕುಂಠ ಪ್ರಭು, ನ್ಯಾಯವಾದಿ ರೊ. ಪ್ರತಾಪಸಿಂಹ ನಾಯಕ್, ಸ್ಥಳೀಯ ತಾಲೂಕು ಪಂಚಾಯಿತಿ ಸದಸ್ಯೆ  ಗೀತಾ ಕೇಶವ್, ಗ್ರಾಪಂ ಸದಸ್ಯೆ ಪವಿತ್ರಾ ಇದ್ದರು.

ಮಹಿಳಾ ಪ್ರ.ದ. ಕಾಲೇಜು ಆರಂಭ: ಸಮಾಲೋಚನಾ ಸಭೆ
ಪುತ್ತೂರು: ಇಲ್ಲಿ ಜೂ. 16ರಿಂದ ಆರಂಭವಾಗಲಿರುವ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕುರಿತು ತಯಾರಿ ಸಮಾಲೋಚನಾ ಸಭೆ ಶನಿವಾರ ನೆಲ್ಲಿಕಟ್ಟೆ ಹಿ.ಪ್ರಾ. ಶಾಲೆಯಲ್ಲಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಪ್ರಸ್ತುತ ಕಾಲೇಜಿಗೆ 40 ಸೀಟುಗಳು ಮಂಜೂರಾಗಿವೆ. ಆದರೆ, ಪುತ್ತೂರಿನಲ್ಲಿ ಮಹಿಳೆಯರಿಂದ ಹೆಚ್ಚು ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಸೀಟುಗಳ ಸಂಖ್ಯೆಯನ್ನು 70ಕ್ಕೆ ಏರಿಸುವಂತೆ ವಿವಿಗೆ ಮನವಿ ಸಲ್ಲಿಸಲಾಗಿದೆ. ಆರಂಭವಾಗಲಿರುವ ಕಾಲೇಜಿಗೆ ಸೂಕ್ತ ಕಟ್ಟಡ ವ್ಯವಸ್ಥೆ ಇಲ್ಲ. ಸದ್ಯಕ್ಕೆ ನೆಲ್ಲಿಕಟ್ಟೆ ಶಾಲಾ ಹಿಂಬದಿಯ ಕಟ್ಟಡದಲ್ಲಿ ಶಾಲೆ ಆರಂಭಿಸಲು ಯೋಚಿಸಲಾಗಿದೆ. ಆದರೆ, ಇದೀಗ 40ಕ್ಕೂ ಅಧಿಕ ಪ್ರವೇಶ ಅರ್ಜಿಗಳು ಬಂದಿರುವುದರಿಂದ ಹೆಚ್ಚಿನ ಕಟ್ಟಡದ ಅವಶ್ಯಕತೆ ಇದೆ. ಆದ್ದರಿಂದ ಶಾಲೆಗೆ ಸಂಬಂಧಿಸಿದ ಒಂದೆರಡು ಕೊಠಡಿಗಳನ್ನು ದುರಸ್ತಿಗೊಳಿಸುವಂತೆ ಮನವಿ ಮಾಡಲಾಗುವುದು ಎಂದರು. ನೋಡೆಲ್ ಅಧಿಕಾರಿ ಡಾ. ಶ್ರೀಧರ್ ಗೌಡ ಪಿ., ಬಿ.ಜೆ. ಸುವರ್ಣ, ಪುರಂಧರ ಭಟ್, ಉಲ್ಲಾಸ್ ಕೋಟ್ಯಾನ್, ಪ್ರಸಾದ್ ಬೆಳ್ಳಿಪ್ಪಾಡಿ, ಬೆಟ್ಟ ಈಶ್ವರ ಭಟ್, ಪ್ರೊ. ಲೀಲಾವತಿ, ಇತರರು ಇದ್ದರು.

ಪಿಲಿಕುಳಕ್ಕೆ ಡಾ. ಹೆಗ್ಗಡೆ
ಮಂಗಳೂರು: ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಗುರುವಾರ ಪಿಲಿಕುಳ ಡಾ.ಶಿವರಾಮ ಕಾರಂತ ನಿಸರ್ಗಧಾಮಕ್ಕೆ ಭೇಟಿ ನೀಡಿದರು. ಅಲ್ಲಿನ ಜೈವಿಕ ಉದ್ಯಾನವನ, ಗುತ್ತುಮನೆ, ದೋಣಿ ವಿಹಾರ ಕೇಂದ್ರ ಮುಂತಾದ ಸ್ಥಳಗಳನ್ನು ವೀಕ್ಷಿಸಿದರು. ನಿಸರ್ಗಧಾಮ ಕಾರ್ಯನಿರ್ವಾಹಕ ನಿರ್ದೇಶಕ ಪ್ರಭಾಕರ ಶರ್ಮಾ, ಉದ್ಯಾನವನ ನಿರ್ದೇಶಕ ಎಚ್.ಜೆ.ಭಂಡಾರಿ ಇದ್ದರು.

'ಕನಸು ಕಣ್ಣು ತೆರೆದಾಗ'
ಮಕ್ಕಳ ಚಲನ ಚಿತ್ರಕ್ಕೆ ಮುಹೂರ್ತ
ಪುತ್ತೂರು: ಮಕ್ಕಳ ಚಲನ ಚಿತ್ರ ನಿರ್ಮಿಸುವ ಮೂಲಕ ಮನರಂಜನೆ ಜೊತೆಗೆ ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡುವ ಕೆಲಸ ನಿರ್ಮಾಪಕರಿಂದ ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದು ಪುತ್ತೂರಿನ ವೈದ್ಯ ಡಾ. ಗೋಪಿನಾಥ್ ಪೈ ಹೇಳಿದರು. ಪುತ್ತೂರಿನ ಗಾನಸಿರಿ ಕ್ರಿಯೇಷನ್ಸ್ ಅರ್ಪಿಸುವ 'ಕನಸು ಕಣ್ಣು ತೆರೆದಾಗ' ಮಕ್ಕಳ ಚಲನ ಚಿತ್ರಕ್ಕೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಚಿತ್ರದ ನಿರ್ದೇಶಕ ಮಂಗಳೂರಿನ ಇಮಿಗೇಷನ್ ವಿಷನ್‌ನ ಸಂತೋಷ್ ಕುಮಾರ್ ಶೆಟ್ಟಿ ಅವರು ಮಾತನಾಡಿ ಚಿತ್ರದ ಕುರಿತು ಮಾಹಿತಿ ನೀಡಿದರು. ಜ್ಯೋತಿಷಿ ಸುಬ್ರಹ್ಮಣ್ಯ ಬಲ್ಯಾಯ ಶುಭ ಹಾರೈಸಿದರು. ಚಿತ್ರದ ಸಾಹಿತ್ಯ ಮತ್ತು ಸಂಭಾಷಣೆಗಾರ ರಝಾಕ್, ಕ್ಯಾಮೆರ ನಿರ್ವಾಹಕ ಉದಯ್ ಬಲ್ಲಾಳ್, ಸಂಕಲನಗಾರ ರವಿರಾಜ್ ಗಾಣಿಗ, ಮಾಣಿಕ್ಯ ಕಂಬೈನ್ಸ್‌ನ ತಮ್ಮಣ್ಣ ಶೆಟ್ಟಿ ಇದ್ದರು. ಚಿತ್ರದ ಸಾರಥ್ಯ ವಹಿಸಿರುವ ಗಾನಸಿರಿ ಕಲಾಕೇಂದ್ರದ ಕಿರಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೊಳುವಾರು ಸಾಂಸ್ಕೃತಿಕ ಕಲಾ ವೇದಿಕೆ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು ನಿರೂಪಿಸಿದರು.

ಖಾದರ್ ಆಕ್ಷೇಪ ದುರದೃಷ್ಟಕರ: ಬಿಜೆಪಿ
ಮಂಗಳೂರು: ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗೆ ಅಹ್ವಾನ ನೀಡಿರುವ ವಿಚಾರವನ್ನು ಸಚಿವ ಖಾದರ್ ಅಕ್ಷೇಪ ವ್ಯಕ್ತಪಡಿಸಿರುವುದು ದುರದೃಷ್ಟಕರ ಎಂದು ಜಿಲ್ಲಾ ಬಿಜೆಪಿ ಹೇಳಿದೆ. ಭಾರತೀಯ ಸದಸ್ಯತ್ವ ಹೊಂದಿರುವ ಸಾರ್ಕ್ ದೇಶಗಳ ಮುಖ್ಯಸ್ಥರಿಗೆ ಅಹ್ವಾನ ಕೊಟ್ಟಂತೆ ಪಾಕ್ ಪ್ರಧಾನಿಗೂ ನೀಡಲಾಗಿದೆ. ಇದು ಮೋದಿ ಅವರ ದಿಟ್ಟ ಹೆಜ್ಜೆ. ಬಂಗಾಳ ಕೊಲ್ಲಿಯಲ್ಲಿ ದೃಢವಾಗಿ ನೆಲೆ ಊರಲು ಹವಣಿಸುತ್ತಿರುವ ಚೀನಾ ಸವಾಲುಗಳನ್ನು ನಿಭಾಯಿಸಲು ಭಾರತಕ್ಕೆ ಶ್ರೀಲಂಕಾ, ಪಾಕ್ ಮತ್ತು ಬಾಂಗ್ಲಾ ದೇಶಗಳ ಜತೆ ಸಂಬಂಧ ಸುಧಾರಣೆ ಅಗತ್ಯ ಇದೆ.  ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಜತೆ ಯಾವುದೇ ರಾಜಿ ಬೇಡ ಎಂಬ  ಹೇಳಿಕೆ ಹಾಗೂ ಚುನಾವಣೆ ಸಂದರ್ಭ ನೀಡಿದ ಭರವಸೆಗಳ ಕುರಿತು ಬಿಜೆಪಿ ನಿಲುವಿಗೆ ಬದ್ಧವಾಗಿದೆ. ಆದ್ದರಿಂದ ಮೋದಿ ಸಕಾರಾತ್ಮಕ ನಿರ್ಧಾರಗಳಿಗೆ ವಿರೋಧಿಸದೆ ಸಹಕರಿಸಿ, ದೇಶದ ಅಭಿವೃದ್ಧಿಯನ್ನು ಕಾದು ನೋಡಲು ಎಂದು ಜಿಲ್ಲಾ ಬಿಜೆಪಿ ವಕ್ತಾರ ಕೆ.ಜಯರಾಮ ಶೆಟ್ಟಿ ವಿನಂತಿಸಿದ್ದಾರೆ.

ನಿಗದಿತ ರಸ್ತೆಗಳ ಮೇಲ್ದರ್ಜೆಗೆ ಪ್ರಸ್ತಾವನೆ: ಮಹಾದೇವ ಪ್ರಸಾದ್
ಮೂಲ್ಕಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕೆಲವು ಗ್ರಾಮೀಣ ರಸ್ತೆಗಳನ್ನು ಉನ್ನತ ದರ್ಜೆಗೆ ಏರಿಸುವ ಹಾಗೂ ಕೆಲವು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಮಹಾದೇವ ಪ್ರಸಾದ್ ಹೇಳಿದ್ದಾರೆ. ಕಿನ್ನಿಗೋಳಿ ಸಮೀಪ ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರು. 3.45 ಕೋಟಿ ವೆಚ್ಚದಲ್ಲಿ ಅಗಲೀಕರಣಗೊಳ್ಳುತ್ತಿರುವ ಕುದ್ರಿ ಪದವು- ಪಟ್ಟೆ ಕ್ರಾಸ್- ಸಂಕಲಕರಿಯ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಸಿಆರ್‌ಎಫ್ ಯೋಜನೆಯಲ್ಲಿ ದ.ಕ. ಜಿಲ್ಲೆಗೆ ರು. 61 ಕೋಟಿ ಬಿಡುಗಡೆಯಾಗಿದೆ. ಅದರಲ್ಲಿ ಮೂಡುಬಿದಿರೆ ಕ್ಷೇತ್ರಕ್ಕೆ ರು. 6 ಕೋಟಿ ಮಂಜೂರಾಗಿದ್ದು, ಎಕ್ಕಾರು- ನೀರುಡೆ ರಸ್ತೆ, ದಾಮಸ್‌ಕಟ್ಟೆ- ಬಳ್ಕುಂಜೆ, ಮೂಲ್ಕಿ- ಮಾನಂಪಾಡಿ- ಪಂಜಿನಡ್ಕ ರಸ್ತೆ ಡಾಂಬರಿಕರಣಕ್ಕೆ ಅನುದಾನ ಬಿಡುಗಡೆಯಾಗಿದೆ ಎಂದರು. ಸಚಿವ ಕೆ. ಅಭಯಚಂದ್ರ ಜೈನ್, ಪದ್ಮಿನಿ ವಸಂತ್, ಇದ್ದರು.

ಭಜನಾ ಹಬ್ಬ ಸಂಪನ್ನ
ಬಂಟ್ವಾಳ: ತಾಲೂಕಿನ ಪಂಜಿಕಲ್ಲು ಶ್ರೀ ಕ್ಷೇತ್ರ ಕೇಲ್ದೋಡಿ ಬ್ರಹ್ಮಶ್ರೀ ನಾರಾಯಣಗುರು ಭಜನಾ ಮಂಡಳಿ ಮತ್ತು ಶ್ರೀ ವೈದ್ಯನಾಥ ಕೊಡಮಣಿತ್ತಾಯಿ ಬ್ರಹ್ಮ ಬೈದರ್ಕಳ ಕ್ಷೇತ್ರದ ಆಶ್ರಯದಲ್ಲಿ ವಿವಿಧ ಭಜನಾ ಮಂಡಳಿಗಳ ಕೂಡುವಿಕೆಯಲ್ಲಿ ಭಜನಾ ಪರ್ಬ (ಹಬ್ಬ)ವು ಶ್ರೀ ಕ್ಷೇತ್ರ ಕೇಲ್ದೋಡಿಯಲ್ಲಿ ಇತ್ತೀಚೆಗೆ ವೈಭವಯುತವಾಗಿ ಸಂಪನ್ನಗೊಂಡಿತು. ಸಹಸ್ರಾರು ಹಣತೆ ದೀಪಗಳ ಬೆಳಕಿನಲ್ಲಿ ನಡೆದ ಈ ಭಜನಾ ಪರ್ಬದಲ್ಲಿ ಏಕಕಾಲದಲ್ಲಿ 15ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದರು. ಕೇಲ್ದೋಡಿಗುತ್ತು ಕೋಟಿ ಪೂಜಾರಿ ಹಬ್ಬಕ್ಕೆ ಚಾಲನೆ ನೀಡಿದರು. ಶ್ರೀ ಕ್ಷೇತ್ರ ಕೇಲೋಡಿ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ಅಂಚನ್, ಭಜನ ಮಂಡಳಿ ಅಧ್ಯಕ್ಷ ಆನಂದ ಪೂಜಾರಿ, ಕಾರ್ಯದರ್ಶಿ ವಸಂತ ಪೂಜಾರಿ, ಉದ್ಯಮಿ ಚಂದ್ರಹಾಸ ಶೆಟ್ಟಿ ರಂಗೋಲಿ, ಸಮಿತಿ ಪ್ರಮುಖರಾದ ಕರುಣೇಂದ್ರ ಪೂಜಾರಿ, ಯೋಗೀಶ್ ಶಂಭೂರು, ಗೋಪಾಲ ಪೂಜಾರಿ, ಕೃಷ್ಣಪ್ಪ ಪೂಜಾರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement