ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಈ ಮಳೆಗಾಲದಲ್ಲೂ ಕೊಲ್ಲಮೊಗ್ರು- ಕಲ್ಮಕಾರು ದ್ವೀಪಸದೃಶ ಅನಿವಾರ್ಯ!

Srinivasa Murthy VN
Updated On : 25 May 2014, 12:55 pm

ವಿಶೇಷ ವರದಿ
ಸುಬ್ರಹ್ಮಣ್ಯ: ಮಳೆಗಾಲ ಆರಂಭದ ಹಂತ ತಲುಪುತಿದ್ದಂತೆ ಕೊಲ್ಲಮೊಗ್ರು-ಕಲ್ಮಕಾರು ಜನತೆಯಲ್ಲಿ ಆತಂಕ ಶುರುವಿಟ್ಟುಕೊಂಡಿದೆ. ಸಂಪರ್ಕ ಕಡಿತದ ಭೀತಿ ಇವರನ್ನು ಕಾಡುತ್ತಿದೆ.
ಜೂನ್ ತಿಂಗಳಲ್ಲಿ ಶಾಲಾ ದಿನಗಳು ಆರಂಭಗೊಳ್ಳುತ್ತಿವೆ. ಶಾಲಾ ಆರಂಭದ ಮೊದಲ ದಿನಗಳಲ್ಲೇ ಇಲ್ಲಿ ಸಮಸ್ಯೆಗಳು ತೆರೆದುಕೊಳ್ಳುವ ಲಕ್ಷಣ ಕಾಣಿಸೆದ.ಚೊಳುಗೋಳು ಚೋಡಿ ಸೇತುವೆ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದೆ. ಮುಂದಿನ ವಾರದೊಳಗೆ ಸೇತುವೆ ಕಾರ್ಯ ಪೂರ್ಣಗೊಳ್ಳದಿದ್ದರೆ ಈ ಭಾಗದ ಜನತೆ ಈ ಮಳೆಗಾಲದಲ್ಲಿ ತ್ರಿಶಂಕು ಸ್ಥಿತಿ ಅನುಭವಿಸಲಿದ್ದಾರೆ.
ಏನಿದು ಸಮಸ್ಯೆ?: ಕೊಲ್ಲಮೊಗ್ರು-ಕಲ್ಮಕಾರು ಸಂಪರ್ಕ ರಸ್ತೆಯ ಚೊಳುಗೋಳು ಚೋಡಿ ಎಂಬಲ್ಲಿ ನೂತನ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಅತ್ಯಂತ ತಗ್ಗಿನಲ್ಲಿ ಇದ್ದ ಹಳೆ ಸೇತುವೆ ಕೆಡವಿ ಸುಮಾರು ರು. 40 ಲಕ್ಷ ವೆಚ್ಚದಲ್ಲಿ ಇಲ್ಲಿ ಕಟ್ಟ ಕಡೆಯಿಂದ ಹರಿದು ಬರುವ ಹೊಳೆಗೆ ಹೊಸ ಸೇತುವೆ ನಿರ್ಮಿಸಲಾಗುತ್ತಿದೆ. ಈ ಸೇತುವೆ ತಗ್ಗಿನಲ್ಲಿ ಇದ್ದ ಕಾರಣ ಪ್ರತಿ ಮಳೆಗಾಲ ಮುಳುಗಿ ಸಂಚಾರಕ್ಕೆ ತಾಪತ್ರಯ ನೀಡುತಿತ್ತು. ಇಲ್ಲಿಯ ಸಮಸ್ಯೆ ಬಗ್ಗೆ ಪ್ರತಿಕೆಗಳು ಹಲವು ಬಾರಿ ವರದಿ ಮಾಡಿದ್ದವು. ಸ್ಥಳಿಯರು ಜನಪ್ರತಿನಿಧಿಗಳಲ್ಲಿ ಮನವಿ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದರು.
ಈ ಭಾಗದ ಬಹು ವರ್ಷಗಳ ಬೇಡಿಕೆ ಮನಗಂಡ ಸ್ಥಳಿಯ ಶಾಸಕ ಎಸ್. ಅಂಗಾರ ಇಲ್ಲಿಗೆ ವಿಶೇಷ ಯೋಜನೆ ಅಡಿ ರು. 40 ಲಕ್ಷ ಅನುದಾನ ಒದಗಿಸಿದ್ದರು. ಹಾಗಾಗಿ ಈ ಭಾಗದ ಬಹು ದಿನಗಳ ಕನಸು ಈಡೇರಿದಂತಾಗಿತ್ತು.
ಆದರೇ ಇದೀಗ ನೂತನ ಸೇತುವೆ ನಿರ್ಮಾಣ ಕಾಮಗಾರಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಇನ್ನೇನು ಮಳೆ ಪ್ರಾರಂಭದ ಹಂತ ಸಮೀಪಿಸಿದರೂ ಇನ್ನೂ ಸೇತುವೆ ಪೂರ್ಣಗೊಳ್ಳದಿರುವುದು ಜನತೆಯನ್ನು ಆತಂಕಕ್ಕೆ ತಳ್ಳಿದೆ. ಈ ತಿಂಗಳಿನ ಅಂತ್ಯದ ವೇಳೆಗೆ  ನಿರ್ಮಾಣ ಕಾರ್ಯ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗದಿದ್ದಲ್ಲಿ ಕೊಲ್ಲಮೊಗ್ರು-ಕಲ್ಮಕಾರು ಭಾಗಕ್ಕೆ ಸಂಪರ್ಕ ಕಡಿತಗೊಂಡು ಆ ಭಾಗದ ಜನತೆ ಸಂಕಷ್ಟಕ್ಕೆ ಒಳಗಾಗುವುದರಲ್ಲಿ ಸಂಶಯವಿಲ್ಲ.
ವಿದ್ಯಾರ್ಥಿಗಳಿಗೆ ಸಂಕಷ್ಟ: ಜೂನ್‌ನಲ್ಲಿ ಶಾಲಾ ಕಾಲೇಜುಗಳು ಆರಂಭಗೊಳ್ಳಲಿವೆ. ಈ ಭಾಗದಿಂದ ಅಸಂಖ್ಯಾತ ಸಂಖ್ಯೆಯಲ್ಲಿ ಶಾಲಾ ಮಕ್ಕಳು ಸುಬ್ರಹ್ಮಣ್ಯ, ಹರಿಹರ ಸುಳ್ಯ ಮುಂತಾದ ಕಡೆಗಳಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಜನೆಗೆ ಬರುತ್ತಾರೆ. ಈ ಭಾಗದವರು ಏನೇ ಕೆಲಸ ಕಾರ್ಯಕ್ಕೂ ಈ ಸೇತುವೇ ದಾಟಿ ಇತರ ಊರುಗಳಿಗೆ ಬರಲೇಬೇಕಾದ ಅನಿವಾರ್ಯತೆ ಇದೆ.
ಸರ್ಕಾರಿ, ಖಾಸಗಿ ವಾಹನಗಳಲ್ಲಿ ಈ ಸೇತುವೆ ಆಶ್ರಯಿಸಿ ಪ್ರಯಾಣ ಬೆಳೆಸಬೇಕಿದೆ. ಈ ರಸ್ತೆ ಈ ಬಾರಿ ಕಡಿತಗೊಂಡರೆ ಇವರೆಲ್ಲ ಸಂಕಷ್ಟಕ್ಕೆ ಒಳಗಾಗುತ್ತಾರೆ.

ಪರ್ಯಾಯ ದಾರಿಗೂ ಕಂಟಕ
ಕೊಲ್ಲಮೊಗ್ರು- ಕಲ್ಮಕಾರು ಪ್ರದೇಶ ಸಂಪರ್ಕಿಸಲು ಈ ಸೇತುವೆ ಹೊರತುಪಡಿಸಿ ಇರುವ ಏಕೈಕ ಪರ್ಯಾಯ ದಾರಿ ಎಂದರೆ ಕಟ್ಟ-ಕೊಲ್ಲಮೊಗ್ರು ಸಂರ್ಪದ ಕಚ್ಛಾ ರಸ್ತೆ ಮಾತ್ರ. ಆದರೆ ಈ ರಸ್ತೆ ನಾದುರಸ್ತಿ ಸ್ಥಿತಿಯಲ್ಲಿ ಇರುವುದರಿಂದ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ವಾಹನಗಳು ಸಂಚಾರಿಸಲು ಅಸಾಧ್ಯ.

ಸೇತುವೆಯ ಬಾಕಿ ಕೆಲಸ ಶೀಘ್ರ ಮುಗಿಸಿ ಈ ಮಳೆಗಾಲ ಆರಂಭದ ಹೊತ್ತಿಗೆ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಹಾಗಾಗಿ ಮಳೆ ಆರಂಭದ ಹೊತ್ತಿಗೆ ಸೇವೆಗೆ ಲಭ್ಯವಾಗಲಿದೆ.
 ಎಸ್ ಅಂಗಾರ, ಸುಳ್ಯ ಶಾಸಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement