ಕಟೀಲು ಮೇಳಗಳ ತಿರುಗಾಟ ಸಮಾಪ್ತಿ ಇಂದು
ಮೂಲ್ಕಿ: ಕಟೀಲು ಕ್ಷೇತ್ರದ ಆರು ಮೇಳಗಳ ಯಕ್ಷಗಾನ ಪ್ರದರ್ಶನದ 2013-14 ರ ಸಾಲಿನ ತಿರುಗಾಟದ ಅಂತಿಮ ಹಂತ ತಲುಪಿದ್ದು ಪತ್ತನಾಜೆಯ ಮಾರನೇ ದಿನವಾದ 25ರ ರಾತ್ರಿ ಕಟೀಲು ದೇವಳದ ರಥಬೀದಿಯಲ್ಲಿ ಒಂದೇ ಸ್ಥಳದಲ್ಲಿ ಆರು ರಂಗ ಸ್ಥಳಗಳಲ್ಲಿ ಒಂದೇ ಅವಧಿಯಲ್ಲಿ ಎಲ್ಲಾ ಆರು ಮೇಳಗಳ ಪ್ರದರ್ಶನದ ಮೂಲಕ ಸಮಾಪ್ತಿಗೊಳ್ಳಲಿದೆ.
ಕಟೀಲು ಕ್ಷೇತ್ರದಲ್ಲಿ ಆರು ಯಕ್ಷಗಾನ ಮೇಳಗಳಿದ್ದು ಪ್ರತಿ ಮೇಳಗಳಿಂದ ತಲಾ 200 ಯಕ್ಷಗಾನದಂತೆ ಒಟ್ಟು ಆರು ಮೇಳಗಳಿಂದ ವರ್ಷದಲ್ಲಿ 1200 ಯಕ್ಷಗಾನ ಪ್ರದರ್ಶನ ನಡೆಯುತ್ತಿವೆ. ಈಗಾಗಲೇ ಸುಮಾರು 10 ವರ್ಷಗಳವರೆಗೆ ಪ್ರದರ್ಶನ ಕಾಯ್ದಿರಿಸಲಾಗಿದೆ.
2014-15 ರ ಸಾಲಿನ ತಿರುಗಾಟ ನವಂಬರ್ನಲ್ಲಿ ದೀಪೋತ್ಸವದ ಸಂದರ್ಭದಲ್ಲಿ ಆರಂಭಗೊಳ್ಳಲಿದೆ. ಮಳೆಗಾಲದ ಅವಧಿಯಲ್ಲಿ ಕ್ಷೇತ್ರದಲ್ಲಿ ಪ್ರತಿದಿನ ಕಾಲಮಿತಿಯ ಯಕ್ಷಗಾನ ಪ್ರದರ್ಶನ ನಡೆಯಲಿದ್ದು ಜೂನ್ನಿಂದ ಮುಂದಿನ ತಿರುಗಾಟದ ಆರಂಭದರೆಗೆ ಕಟೀಲು ಕ್ಷೇತ್ರದ ಎಲ್ಲಾ 6 ಮೇಳಗಳ ಸುಮಾರು 300 ಕಲಾವಿದರಿಗೆ ಕಟೀಲಿನ ಯಕ್ಷ ಧರ್ಮ ಬೋಧಿನಿ ಟ್ರಸ್ಟ್ ಮೂಲಕ ಮಾಸಿಕ ವೇತನವನ್ನು ಕಳೆದ ಹಲವಾರು ವರ್ಷಗಳಿಂದ ನೀಡುತ್ತಾ ಬಂದಿದೆ. ಇದರಿಂದ ಕಲಾವಿದರಿಗೆ ತಮ್ಮ ಜೀವನೋಪಾಯಕ್ಕೆ ಸಹಾಯವಾಗಲಿದೆ. ಯಕ್ಷ ಧರ್ಮ ಬೋಧಿನಿ ಟ್ರಸ್ಟ್ ಮೂಲಕ ಎಲ್ಲಾ ಆರು ಮೇಳಗಳಿಗೆ ಬಸ್ನ ಹಾಗೂ ರಂಗಸ್ಥಳದ ವ್ಯವಸ್ಥೆ ಮಾಡಿದ್ದು ಇದರಲ್ಲಿ ಸಂಗ್ರಹವಾಗುವ ಹಣದಲ್ಲಿ ಕಲಾವಿದರಿಗೆ ರಜಾ ದಿನದಲ್ಲಿ ಮಾಸಿಕ ವೇತನವನ್ನು ನೀಡುವ ವ್ಯವಸ್ತೆ ಮಾಡಿದ್ದು ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿಯವರ ಸಂಚಾಲಕತ್ವದಲ್ಲಿ ಕಟೀಲಿನ ಎಲ್ಲಾ ಆರು ಮೇಳಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಈ ಹಿಂದೆ ಕಟೀಲಿನಲ್ಲಿ 5 ಮೇಳಗಳು ಪ್ರದರ್ಶನ ನೀಡುತ್ತಿದ್ದು ಕಳೆದ ವರ್ಷದ ತಿರುಗಾಟದ ಆರಂಭದಲ್ಲಿ ನವಂಬರ್ನಲ್ಲಿ ಆರನೇ ಮೇಳ ಆರಂಭಗೊಂಡಿದ್ದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಆರನೇ ಮೇಳಕ್ಕೆ ಚಾಲನೆ ನೀಡಿದ್ದರು.