ಗ್ಯಾಸ್ ಪೈಪ್ಲೈನ್: ಭೂ ಸ್ವಾಧೀನಕ್ಕೆ ಬಂದ ಅಧಿಕಾರಿಗಳ ಹಿಂದಕ್ಕೆ ಕಳುಹಿಸಿದ ಸಂತ್ರಸ್ತರು
ಬೆಳ್ತಂಗಡಿ: ಯಾವುದೇ ಮಾಹಿತಿ ನೀಡದೆ ಗ್ಯಾಸ್ ಪೈಪ್ಲೈನ್ಗಾಗಿ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ನೆರಿಯ ಗ್ರಾಮದ ಪಿಜಕ್ಕಳಕ್ಕೆ ಬಂದಿದ್ದ ಅಧಿಕಾರಿಗಳನ್ನು ಸಂತ್ರಸ್ತರು ತಡೆದು ಹಿಂದಕ್ಕೆ ಕಳುಹಿಸಿದ ಘಟನೆ ಶನಿವಾರ ನಡೆದಿದೆ.
ವಾರದ ಹಿಂದೆ ಸರ್ವೇ ಕಾರ್ಯಕ್ಕೆ ಬರುವುದಾಗಿ ಸಂತ್ರಸ್ತ ಕುಟುಂಬಗಳಿಗೆ ನೋಟಿಸ್ ನೀಡಲಾಗಿತ್ತು. ಜನರು ಯಾವುದೇ ಕಾರಣಕ್ಕೂ ಪೈಪ್ಲೈನ್ ಮತ್ತು ಪಂಪ್ ಹೌಸ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲವೆಂದು ಪ್ರತಿಭಟನೆಗೆ ಮುಂದಾಗಿದ್ದರು. ಸರ್ವೇಗೆ ದಿನಾಂಕ ನಿಗದಿಪಡಿಸಿದ್ದರೂ ಅಂದು ಅಧಿಕಾರಿಗಳು ಬರಲೇ ಇಲ್ಲ. ಜನರಿಗೆ ಯಾವುದೇ ಮಾಹಿತಿ ಇಲ್ಲದೆ ಶನಿವಾರ ಮಾತುಕತೆಗೆಂದು ವಿಶೇಷ ಭೂಸ್ವಾಧೀನ ಅಧಿಕಾರಿ ಹಾಗೂ ಪುತ್ತೂರು ಸಹಾಯಕ ಕಮಿಷನರ್, ಕಂದಾಯ ಅಧಿಕಾರಿಗಳೊಂದಿಗೆ ಪಿಜಕ್ಕಳಕ್ಕೆ ತೆರಳಿದ್ದರು.
ರಸ್ತೆಯಲ್ಲೇ ತಡೆದರು: ಅಲ್ಲಿಗೆ ಬಂದ ಅಧಿಕಾರಿಗಳನ್ನು ರಸ್ತೆಯಲ್ಲೇ ತಡೆದ ಸಂತ್ರಸ್ತರು 'ನಮ್ಮ ಜಮೀನುಗಳಿಗೆ ಬರುವುದೇ ಬೇಡ. ಅಲ್ಲದೆ ನಾವು ಯಾವುದೇ ಮಾತುಕತೆ ಸಿದ್ಧರಿಲ್ಲ. ಜಮೀನು ಕೊಡುವ ಪ್ರಶ್ನೆಯೇ ಇಲ್ಲ' ಎಂದು ವಿರೋಧ ವ್ಯಕ್ತಪಡಿಸಿದರು.
ಅಧಿಕಾರಿಗಳು ಮತ್ತು ಸಂತ್ರಸ್ತರ ನಡುವೆ ಒಂದು ಹಂತದಲ್ಲಿ ಹಲ್ಲೆ ಯಾಗುವ ಸನ್ನಿವೇಶವೂ ನಿರ್ಮಾಣಗೊಂಡಿತು. ಬಳಿಕ ಅಧಿಕಾರಿಗಳು ಬಂದದಾರಿಗೆ ಸುಂಕವಿಲ್ಲ ಎಂಬಂತೆ ಹಿಂತಿರುಗಿದರು.
ಪಟ್ಟು ಬಿಡದ ಸಂತ್ರಸ್ತರು, ಅಧಿಕಾರಿಗಳು: ಗ್ಯಾಸ್ ಪೈಪ್ಲೈನ್, ಪಂಪ್ ಹೌಸ್ಗೆ ಸಂಬಂಧಿಸಿದಂತೆ ಭೂಸ್ವಾಧೀನಕ್ಕಾಗಿ ಕಳೆದ ಸುಮಾರು 6 ತಿಂಗಳಿನಿಂದ ಅಧಿಕಾರಿಗಳು ನಿರಂತರ ಪ್ರಯತ್ನ ನಡೆಸುತ್ತಿದ್ದರೂ ಜನರ ಪ್ರತಿರೋಧದಿಂದಾಗಿ ಸರ್ವೇ ಸೇರಿದಂತೆ ಯಾವುದೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಇದೀಗ ಪಂಪ್ ಹೌಸ್ಗೆಂದು ಗುರುತಿಸಲ್ಪಟ್ಟಿರುವ ಸುಮಾರು 7 ಎಕರೆ ಜಾಗ ಫಲವತ್ತಾದ ಕೃಷಿ ಭೂಮಿಯಾಗಿದೆ. ಈ ಕಾರಣದಿಂದಾಗಿ ಜಮೀನು ಬಿಟ್ಟುಕೊಡಲು ಮುಂದಾಗುತ್ತಿಲ್ಲ.
ಆದರೆ ಈಗಾಗಲೇ ಸಂಬಂಧಪಟ್ಟ ಇಲಾಖೆ ಪೈಪ್ಲೈನ್ ಅಳವಡಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಉಜಿರೆ ಸಮೀಪ ಸಾವಿರಾರು ಪೈಪ್ಗಳನ್ನು ಸಂಗ್ರಹಿಸಿಟ್ಟಿದೆ. ಕಾಮಗಾರಿ ನಡೆಸುವ ಬೃಹತ್ ಯಂತ್ರಗಳೂ ಬಂದಿವೆ. ತಮ್ಮನ್ನು ಯಾವಾಗ ಒಕ್ಕಲೆಬ್ಬಿಸುತ್ತಾರೆ ಎಂಬ ಭಯದಲ್ಲಿರುವ ಕೃಷಿಕರು 'ಜೀವ ಇರುವವರೆಗೆ ಕೃಷಿ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ' ಎಂದು ಪಟ್ಟು ಹಿಡಿದಿದ್ದಾರೆ.