ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಜನಸಂಸ್ಕೃತಿ ಉತ್ಸವ, ಡಿ.ಕೆ.ಚೌಟರ 75ರ ಸಂಭ್ರಮ ನಾಳೆಯಿಂದ

Srinivasa Murthy VN
Updated On : 25 May 2014, 12:54 pm

ಮಂಗಳೂರು: ಬೆಂಗಳೂರಿನ ರಂಗಚೇತನ ಸಂಸ್ಕೃತಿ ಕೇಂದ್ರ ಮತ್ತು ಮಂಗಳೂರು ವಿವಿ ಕನ್ನಡ ಸಂಘದ ಆಶ್ರಯದಲ್ಲಿ 25ರಂದು ಜನಸಂಸ್ಕೃತಿ ಉತ್ಸವ ಮತ್ತು ಡಾ.ಡಿ.ಕೆ.ಚೌಟ-75ರ ಸಂಭ್ರಮ ಸಮಾರೋಪ ನಗರದ ರವೀಂದ್ರ ಕಲಾಭವನದಲ್ಲಿ ನಡೆಯಲಿದೆ.
ಬೆಳಗ್ಗೆ 9.45ಕ್ಕೆ ಡಾ.ಬಿ.ಎ.ವಿವೇಕ ರೈ ಉದ್ಘಾಟಿಸಿ ಆಶಯ ಭಾಷಣ ಮಾಡಲಿದ್ದು, ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ.ದಯಾನಂದ, ವಿಶ್ವವಿದ್ಯಾಲಯ ಕಾಲೇಜು ಪ್ರಾಂಶುಪಾಲ ಡಾ.ಸತ್ಯನಾರಾಯಣ ಮಲ್ಲಿಪಟ್ಣ ಅತಿಥಿಯಾಗಿ ಆಗಮಿಸುವರು ಎಂದು ಮಂಗಳೂರು ವಿವಿ ಕನ್ನಡ ವಿಭಾಗ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
11ರಿಂದ ವಿಚಾರ ಮಂಥನ ನಡೆಯಲಿದ್ದು, 'ಕರಾವಳಿಯ ಕೃಷಿರಂಗ: ಎಡರು ತೊಡರುಗಳು, ಪರಿಸರದ ಸೂಕ್ಷ್ಮತೆಗಳು ಮತ್ತು ನಮ್ಮ ಅರಿವು, ಆರೋಗ್ಯದತ್ತ ನಮ್ಮ ಚಿತ್ತ ಒಂದು ಚಿಂತನೆ' ಬಗ್ಗೆ ಪಡಾರು ರಾಮಕೃಷ್ಣ ಶಾಸ್ತ್ರಿ, ಡಾ.ನಾಗೇಶ ಹೆಗಡೆ, ಡಾ.ನಾ.ಸೋಮೇಶ್ವರ ಮಾತನಾಡುವರು. ಶ್ರೀಪಡ್ರೆ ಸಮನ್ವಯಕಾರರಾಗಿ ಭಾಗವಹಿಸುವರು.
ಮಧ್ಯಾಹ್ನ 2.30ಕ್ಕೆ 'ತುಳು ಕಥನ ಸಾಹಿತ್ಯ: ಮಾದರಿ ಮತ್ತು ಸಾಧ್ಯತೆಗಳು' ವಿಚಾರದಲ್ಲಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು, 'ತುಳು ರಂಗಭೂಮಿ: ಸೃಜನಶೀಲ ಆವಿಷ್ಕಾರಗಳು' ಬಗ್ಗೆ ವಿಜಯ ಕುಮಾರ್ ಕೊಡಿಯಾಲಬೈಲ್ ಮಾತನಾಡುವರು. ಪ್ರೊ.ಎ.ವಿ.ನಾವಡ ಸಮನ್ವಯಕಾರರಾಗಿ ಭಾಗವಹಿಸುವರು.
ಸಂಜೆ 4.30ರಿಂದ ಡಾ.ಡಿ.ಕೆ.ಚೌಟರೊಂದಿಗೆ ಸಂವಾದ ನಡೆಯಲಿದ್ದು, ಡಾ.ಕೆ.ಚಿನ್ನಪ್ಪ ಗೌಡ ಸಂವಾದ ನಡೆಸಿಕೊಡುವರು. ಡಾ.ನಾಗತಿಹಳ್ಳಿ ಚಂದ್ರಶೇಖರ್ ಸಮಾರೋಪ ಭಾಷಣ ಮಾಡುವರು. ಈ ಸಂದರ್ಭ ಡಿ.ಕೆ.ಚೌಟರನ್ನು ಗೌರವಿಸಲಾಗುವುದು ಎಂದರು.
ಈ ಉತ್ಸವದಲ್ಲಿ ರಂಗಪಯಣದ ರಾಜಗುರು, ಗೆಳೆಯರಿಂದ ರಂಗಗೀತೆ, ಸಂಜೆ 6ರಿಂದ ಡಿ.ಕೆ.ಚೌಟ ಜೀವನಗಾಥೆಯ ಸಾಕ್ಷ್ಯಚಿತ್ರ ಪಚ್ಚೆತೆನೆ ಪ್ರದರ್ಶನ, ಆ ಬಳಿಕ ಜೀವನರಾಮ್ ಸುಳ್ಯ ನಿರ್ದೇಶನದಲ್ಲಿ ನಮ ತುಳುವೆರ್ ಕಲಾ ಸಂಘಟನೆ ಮುದ್ರಾಡಿ ಇವರಿಂದ ಡಿ.ಕೆ.ಚೌಟ ವಿರಚಿತ 'ಪಿಲಿಪತ್ತಿ ಗಡಸ್‌' ನಾಟಕ ಪ್ರದರ್ಶನವಾಗಲಿದೆ.
ಸುದ್ದಿಗೋಷ್ಠಿಯಲ್ಲಿ ಪ್ರಾಧ್ಯಾಪಕ ಡಾ.ನಾಗಪ್ಪ ಗೌಡ, ಯಶೋಧರ ಕರ್ಕೇರಾ, ಸಂಚಾಲಕ ನಾಗೇಶ ಕಲ್ಲೂರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement