ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ವಡೋದರಾ ನನ್ನ ಕರ್ಮಭೂಮಿ

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಡೋದರಾದಿಂದ ಬುಧವಾರ ನಾಮಪತ್ರ..

Srinivasa Murthy VN
Updated On : 10 Apr 2014, 2:10 am

ಪಿಟಿಐ ವಡೋದರಾ ಏ.9
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಡೋದರಾದಿಂದ ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರಕ್ಕೆ ಸೂಚಕರಾಗಿ ಸಹಿ ಮಾಡಿದ್ದು ಅಹಮದಾಬಾದ್‌ನಲ್ಲಿ ಟೀ ಮಾರುವ ಕಿರಣ್ ಮಹಿಂದಾ ಮತ್ತು ಹಿಂದಿನ ಬರೋಡಾ ರಾಜಮನೆತನದ ರಾಜಮಾತೆ ಶುಭಾಂಗಿನಿ ದೇವಿ ರಾಜೆ. ಅಂದ ಹಾಗೆ ಈ ಕ್ಷೇತ್ರದಿಂದ ಮೋದಿ ಬಿಜೆಪಿ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ ಅವರ ಮೊದಲ ಭೇಟಿ ಇದಾಗಿದೆ. ಹಾಲಿ ಸಂಸದ ಬಾಲಕೃಷ್ಣ ಶುಕ್ಲಾ ಮೋದಿಯವರಿಗಾಗಿ ಸ್ಥಾನ ಬಿಟ್ಟುಕೊಟ್ಟಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಟೀ ಮಾರಲು ಲಾಯಕ್ಕು ಎಂದು ಟೀಕಿಸಿದ್ದ ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್ ಮಾತುಗಳನ್ನೇ ಸವಾಲಾಗಿ ತೆಗೆದುಕೊಂಡಿದ್ದ ಬಿಜೆಪಿ ದೇಶಾದ್ಯಂತ 'ಚಾಯ್‌ಪೆ ಚರ್ಚಾ' ಕಾರ್ಯಕ್ರಮಗಳನ್ನು ಆಯೋಜಿಸಿ ಅದನ್ನೇ ಚುನಾವಣಾ ಪ್ರಚಾರತಂತ್ರವನ್ನಾಗಿ ಮಾರ್ಪಡಿಸಿದ್ದು ಹಳೆಯ ವಿಚಾರ.

ಇದು ನನ್ನ ಕರ್ಮಭೂಮಿ
ನಾಮಪತ್ರ ಸಲ್ಲಿಕೆ ಬಳಿಕ ಬಿಜೆಪಿ ಅಭ್ಯರ್ಥಿ ಮೋದಿ ಹೇಳಿದ್ದಿಷ್ಟು:
- ಬರೋಡಾ ರಾಜಮನೆತನದ ಆಡಳಿತದ ಅವಧಿಯಲ್ಲಿ ಈ ಪ್ರದೇಶದಲ್ಲಿ ಹೆಚ್ಚಿನ ಅಭಿವೃದ್ಧಿಯಾಗಿತ್ತು.
- ಸಯ್ಯಾಜಿ ರಾವ್ ಗಾಯಕ್ವಾಡ್ ಒಬ್ಬ ಉತ್ತಮ ಆಡಳಿತಗಾರನಾಗಿದ್ದರು. ಅವರು ಒಬ್ಬ ದೂರದೃಷ್ಟಿಯುಳ್ಳರಾಗಿದ್ದರು. ನೀರು ಪೂರೈಕೆ ಮತ್ತು ಮಹಿಳೆಯರ ವಿದ್ಯಾಭ್ಯಾಸ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಕೈಗೊಂಡಿದ್ದ ಕ್ರಮಗಳು ಶ್ಲಾಘನೀಯ.
- ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಅಧಿಕಾರಿಗಳು ಮಹಾರಾಜ ಗಾಯಕ್ವಾಡ್ ಬರೆದ 'ಮೈನರ್ ಹಿಂಟ್ಸ್‌' ಪುಸ್ತಕ ಓದಲೇಬೇಕು.
- ರಾಜಮನೆತನದ ಆಡಳಿತವಿದ್ದ ವದ್‌ನಗರದಲ್ಲಿ ನಾನು ಜನಿಸಿದೆ. ಅವರು ನಿರ್ಮಿಸಿದ ಶಾಲೆಯಲ್ಲಿಯೇ ನಾನು ಪ್ರಾಥಮಿಕ ಶಿಕ್ಷಣ ಪೂರೈಸಿದೆ.
- ಇದು ನನ್ನ ಕರ್ಮಭೂಮಿಯಾಗಿದೆ. ಆರ್‌ಎಸ್‌ಎಸ್ ಪ್ರಚಾರಕನಾಗಿ ಇಲ್ಲಿಂದಲೇ ನಾನು ನನ್ನ ಜೀವನ ಆರಂಭಿಸಿದೆ. ನನಗೆ ಅದ್ಧೂರಿ ಸ್ವಾಗತ ನೀಡಿದ ವಡೋದರಾದ ಜನರಿಗೆ ನಾನು ಆಭಾರಿ.
- ಸೌರಾಷ್ಟ್ರ, ಉತ್ತರ ಗುಜರಾತ್‌ನಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಈಗ ನನ್ನ ಪಕ್ಷ ಈ ಕ್ಷೇತ್ರದ ಜನರ ಸೇವೆ ಮಾಡಲು ಅವಕಾಶ ಕೊಟ್ಟಿದೆ. ಅದಕ್ಕಾಗಿ ಧನ್ಯವಾದಗಳು.
- ಏ.30ಕ್ಕೆ ಮತದಾನ ನಡೆಯಲಿದೆ. ಹಬ್ಬದ ದಿನ ಯಾವ ರೀತಿ ಸಂಭ್ರಮ ಇರುತ್ತದೆಯೋ ಅದೇ ರೀತಿ ಆ ದಿನ ಮತದಾನ ಮಾಡಿ.

ಒಂದು ಗಂಟೆ ರೋಡ್ ಶೋ
ನಾಮಪತ್ರ ಸಲ್ಲಿಸುವ ಮೊದಲು ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ವಡೋದರಾದ ಪ್ರಮುಖ ರಸ್ತೆಗಳಲ್ಲಿ ರೋಡ್‌ಶೋ ನಡೆಸಿದರು. ಬೆಳಗ್ಗೆ 9.45ರಿಂದ ಈ ಕಾರ್ಯಕ್ರಮ ಆರಂಭವಾಯಿತು. ಈ ಮೂಲಕ ಕ್ಷೇತ್ರದಲ್ಲಿ ಪ್ರಚಾರವನ್ನೂ ಆರಂಭಿಸಿದರು. ವಡೋದರಾದ ಕೀರ್ತಿ ಸ್ತಂಭದಿಂದ ರೋಡ್‌ಶೋ ಆರಂಭಿಸಿದರು. ರಸ್ತೆಯ ಎರಡೂ ಬದಿಗಳಲ್ಲಿ ಸಾರ್ವಜನಿಕರು ಮೋದಿಯವರನ್ನು ಸ್ವಾಗತಿಸಿದರು. ಬರೋಬ್ಬರಿ 2 ಕಿಮೀ ದೂರದಷ್ಟು ರೋಡ್ ಶೋ ನಡೆಯಿತು.
ಮೋದಿ ಜತೆ ಯಾರಿದ್ದರು?: ಗುಜರಾತ್ ಬಿಜೆಪಿಯ ಹಿರಿಯ ನಾಯಕರು, ವಿಶೇಷವಾಗಿ ಅವರ ಆಪ್ತ ಸಚಿವೆ ಆನಂದಿ ಬೆನ್ ಪಟೇಲ್, ಸೌರಭ್ ಪಟೇಲ್  ಮೋದಿ ನಾಮಪತ್ರ ಸಲ್ಲಿಕೆ ವೇಳೆ ಇದ್ದರು. ದಾರಿಯುದ್ದಕ್ಕೂ ಸಂಗೀತ ತಂಡವೊಂದರಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸೂಚಕರನ್ನು ಆಲಂಗಿಸಿದ ಮೋದಿ: ಜಿಲ್ಲಾ ಚುನಾವಣಾ ಅಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಇಬ್ಬರು ಸೂಚಕರ ಪೈಕಿ ಒಬ್ಬರಾಗಿರುವ ಟೀ ಮಾರುವ ಕಿರಣ್ ಮಹಿಂದಾ ಅವರನ್ನು ಮೋದಿ ಆತ್ಮೀಯವಾಗಿ ಆಲಂಗಿಸಿದರು. ಈ ಮೂಲಕ ಎಲ್ಲರಲ್ಲೂ ಅಚ್ಚರಿ ಹುಟ್ಟಿಸಿದರು.

ಯಾವೊಬ್ಬ ಪ್ರಧಾನಿ ಅಭ್ಯರ್ಥಿಯೂ ನನ್ನಂಥ ಸಾಮಾನ್ಯ ಜನರನ್ನು ನೆನಪಿನಲ್ಲಿಟ್ಟುಕೊಳ್ಳುವುದೇ ಇಲ್ಲ. ಆದರೆ ನರೇಂದ್ರ ಭಾಯಿ ಹಾಗೆ ಅಲ್ಲವೇ ಅಲ್ಲ. ಅವರು ನನ್ನ ಮೇಲೆ ವಿಶ್ವಾಸವಿಟ್ಟು ನಾಮಪತ್ರಕ್ಕೆ ಸೂಚಕನ ಸ್ಥಾನಕ್ಕೆ ನನ್ನನ್ನು ಆರಿಸಿದ್ದಾರೆ.
-ಕಿರಣ್ ಮಹಿಂದಾ,
ಮೋದಿಯನ್ನು ಸೂಚಿಸಿದ ವ್ಯಕ್ತಿ


ಅವರು ಭಾರಿ ಅಂತರದಿಂದ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ. ದೇಶವೇ ಅವರು ಪ್ರಧಾನಿಯಾಗಬೇಕೆಂದು ಬಯಸುತ್ತಿದೆ.
-ಶುಭಾಂಗಿನಿ ದೇವಿ ರಾಜೆ,  
ಬರೋಡಾ ರಾಜವಂಶಸ್ಥೆ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement