ಜಗತ್ತಿಗೇ ನಂಬಿಕೆ ಇಲ್ಲ
ನವದೆಹಲಿ: 'ಮೋದಿ ಮೇಲೆ ಇಡೀ ಜಗತ್ತಿಗೇ ನಂಬಿಕೆಯಿಲ್ಲ, ನೀವು ನಂಬುತ್ತೀರಾ?' ಇದು ದೇಶದ ಜನತೆಗೆ ಕಾಂಗ್ರೆಸ್ ಕೇಳುತ್ತಿರುವ ಪ್ರಶ್ನೆ. ಬ್ರಿಟನ್‌ನ ಗಾರ್ಡಿಯನ್ ಪತ್ರಿಕೆ ಪ್ರಕಟಿಸಿದ ಲೇಖನವೊಂದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಈ ಪ್ರಶ್ನೆ ಕೇಳಿದೆ. ಪತ್ರಿಕೆ ಏ.7ರಂದು ಪ್ರಕಟಿಸಿದ ಲೇಖನದಲ್ಲಿ, ಮೋದಿ ಅವರೊಬ್ಬ ದೇಶ ವಿಭಜಿಸುವ ನಾಯಕ ಎನ್ನಲಾಗಿತ್ತು. ಜತೆಗೆ, ಮೋದಿ ಅವರ ಅಭಿವೃದ್ಧಿ ಮಾದರಿಯ ವಿಶ್ವಾಸಾರ್ಹತೆಯನ್ನು ಪತ್ರಿಕೆ ಪ್ರಶ್ನಿಸಿತ್ತು.
ರಜನಿ, ಮೋದಿ ಭೇಟಿ ಇಂದು
ನವದೆಹಲಿ: ಬಿಜೆಪಿಯ 'ಸ್ಟಾರ್' ಪ್ರಚಾರಕ ನರೇಂದ್ರ ಮೋದಿ ಸೂಪರ್‌ಸ್ಟಾರ್ ಅನ್ನು ಭೇಟಿಯಾಗಲಿದ್ದಾರೆ. ನಿಜ, ಭಾನುವಾರ ತಮಿಳುನಾಡಿಗೆ ಭೇಟಿ ನೀಡಲಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅವರು ಸಂಜೆ ಸೂಪರ್‌ಸ್ಟಾರ್ ರಜನೀಕಾಂತ್ ಅವರ ಚೆನ್ನೈನ ನಿವಾಸಕ್ಕೂ ತೆರಳಿ ಮಾತುಕತೆ ನಡೆಸಲಿದ್ದಾರೆ. ಹೀಗೆಂದು ತಮಿಳುನಾಡಿನ ಉಸ್ತುವಾರಿ ಹೊತ್ತಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ಮುರಳೀಧರ ರಾವ್ ಟ್ವೀಟ್ ಮಾಡಿದ್ದಾರೆ.
ಬಿಜೆಪಿಯಿಂದ ದೇಶ ವಿಭಜನೆ
ಪಿಲಿಭಿಟ್: ಬಿಜೆಪಿ ಯಾವಾಗಲೂ ದೇಶವನ್ನು ವಿಭಜಿಸುವ ಕೆಲಸವನ್ನೇ ಮಾಡುತ್ತಾ ಬಂದಿದೆ. ಆ ಪಕ್ಷದ ಸಿದ್ಧಾಂತ ದೇಶದ ಸಮ್ಮಿಶ್ರ ಸಂಸ್ಕೃತಿಗೆ ವಿರುದ್ಧವಾದದ್ದು. ಇದು ಉತ್ತರಪ್ರದೇಶದಲ್ಲಿ ಶನಿವಾರ ಕಾಂಗ್ರೆಸ್ ಪರ ಪ್ರಚಾರ ಆರಂಭಿಸಿರುವ ಪ್ರಧಾನಿ ಮನಮನೋಹನ್‌ಸಿಂಗ್ ಆಡಿದ ಮಾತು. ಫಿಲಿಬಿಟ್‌ನ ಹಾಲಿ ಶಾಸಕ ಸಂಜಯ್ ಕಪೂರ್ ಪರ ಪ್ರಚಾರ ರ್ಯಾಲಿ ನಡೆಸಿದ ಪಿಎಂ ಸಿಂಗ್ ಬಿಜೆಪಿ ವಿರುದ್ಧ ಹರಿಹಾಯ್ದರು. ಅಮಿತ್ ಶಾ ವಿರುದ್ಧ ಡಾ. ಸಿಂಗ್ ಕಿಡಿಕಾರಿದರು.
4ನೇ ಹಂತದಲ್ಲಿ ಭಾರಿ ಮತದಾನ
ಅಗರ್ತಲಾ/ಗುವಾಹಟಿ/ಗ್ಯಾಂಗ್ಟಕ್: ತ್ರಿಪುರಾ, ಅಸ್ಸಾಂ, ಸಿಕ್ಕಿಂ ಹಾಗೂ ಗೋವಾದ 7 ಲೋಕಸಭಾ ಕ್ಷೇತ್ರಗಳಿಗೆ ಶನಿವಾರ 4ನೇ ಹಂತದ ಮತದಾನ ನಡೆದಿದ್ದು, ಶೇ.71ರಿಂದ ಶೇ.82ರಷ್ಟು ಮತದಾನ ದಾಖಲಾಗಿದೆ. ತ್ರಿಪುರಾದಲ್ಲಿ ದಾಖಲೆಯ ಮತದಾನ ನಡೆದಿದ್ದು, ಶೇ.82ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ. ಇದೇ ವೇಳೆ, ಅಸ್ಸಾಂನ 3 ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಶೇ.75, ಸಿಕ್ಕಿಂನ ಒಂದು ಲೋಕಸಭಾ ಕ್ಷೇತ್ರ ಮತ್ತು 32 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.76ರಷ್ಟು ಮತದಾನ ದಾಖಲಾಗಿದೆ. ಇದೇ ವೇಳೆ, ಗೋವಾದ 2 ಕ್ಷೇತ್ರಗಳಲ್ಲಿ ಶೇ.75ರಷ್ಟು ಮತದಾನ ನಡೆದಿದೆ.