ಟ್ವಿಟರಲ್ಲಿ ಮೋದಿಗೆ 37 ಲಕ್ಷ ಅಭಿಮಾನಿಗಳು!
ಟ್ವಿಟರ್‌ನಲ್ಲಿ ಅತಿ ಹೆಚ್ಚು ಬೆಂಬಲಿಗರನ್ನು ಹೊಂದಿರುವ ಭಾರತೀಯ ರಾಜಕಾರಣಿಗಳ..
ನವದೆಹಲಿ: ಟ್ವಿಟರ್‌ನಲ್ಲಿ ಅತಿ ಹೆಚ್ಚು ಬೆಂಬಲಿಗರನ್ನು ಹೊಂದಿರುವ ಭಾರತೀಯ ರಾಜಕಾರಣಿಗಳ ಪಟ್ಟಿಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ. 2ನೇ ಸ್ಥಾನದಲ್ಲಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್‌ಗಿಂತಲೂ 15 ಲಕ್ಷ ಹೆಚ್ಚುವರಿ ಅಭಿಮಾನಿಗಳು ಮೋದಿಗಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ತಲುಪುವಲ್ಲಿ ಟ್ವಿಟರ್ ಪ್ರಮುಖ ಪಾತ್ರವಹಿಸುತ್ತಿದೆ. ಟ್ವಿಟರ್ ಇಂಡಿಯಾದ ಹೊಸ ಅಂಕಿ- ಅಂಶಗಳ ಪ್ರಕಾರ ಮೋದಿ ಅವರು 37 ಲಕ್ಷ, ಎರಡನೇ ಸ್ಥಾನದಲ್ಲಿರುವ ಶಶಿ ತರೂರ್ 21 ಲಕ್ಷ ಅಭಿಮಾನಿಗಳನ್ನು ಹೊಂದಿದ್ದಾರೆ. ಮೂರನೇ ಸ್ಥಾನದಲ್ಲಿರುವ ಕೇಜ್ರಿವಾಲ್ 16 ಲಕ್ಷ, ಫಾಲೋವರ್‌ಗಳಿದ್ದಾರೆ.
ಹಲವು ಪುಸ್ತಕಗಳು
'ಬಾಲ್ ನರೇಂದ್ರ' ಬಳಿಕ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ಸಂಬಂಧಿಸಿ ಮತ್ತೊಂದು ಕೃತಿ ಹೊರಬರುತ್ತಿದೆ.
'ನರೇಂದ್ರ ಮೋದಿ: ದಿ ಐಕಾನ್ ಆಫ್ ಡೆವಲಪ್‌ಮೆಂಟ್'!
- ಪ್ರಭಾತ್ ಪ್ರಕಾಶನ್ ಹೊರತಂದಿರುವ ಈ ಕೃತಿ ಹಿಂದಿ, ಗುಜರಾತಿಯಲ್ಲೂ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಕಳೆದೆರಡು ವರ್ಷಗಳಿಂದ ನರೇಂದ್ರ ಮೋದಿಗೆ ಸಂಬಂಧಿಸಿ ಈಗಾಗಲೇ 10ಕ್ಕೂ ಹೆಚ್ಚು ಪುಸ್ತಕಗಳು ಬಿಡುಗಡೆಯಾಗಿವೆ. ಇನ್ನೂ ಹಲವು ಪುಸ್ತಕಗಳು ಬಿಡುಗಡೆಗಾಗಿ ಎದುರು ನೋಡುತ್ತಿವೆ. 'ದಿ ಐಕಾನ್ ಆಫ್ ಡೆವಲಪ್‌ಮೆಂಟ್' ಕೃತಿಯು ಮೋದಿ ಬಾಲ್ಯದಿಂದ ಹಿಡಿದು ಅವರ ಬದುಕಿನ ಎಲ್ಲ ಹಂತದ ಗ್ರಾಫಿಕ್ಸ್ ವಿವರಣೆಯನ್ನೊಳಗೊಂಡಿದೆ.
ಲೇಖಕನಿಗೆ ಜೀವ ಬೆದರಿಕೆ
ಚೆನ್ನೈ: ಮೋದಿಗೆ ಬೆಂಬಲ ನೀಡಿದ ತಪ್ಪಿಗೆ ಜನಪ್ರಿಯ ತಮಿಳು ಲೇಖಕ ಆರ್.ಎನ್. ಜಾಯ್ ಡಿ.ಕ್ರೂಸ್ ಅವರೀಗ ಜೀವ ಬೆದರಿಕೆ ಎದುರಿಸುತ್ತಿದ್ದಾರೆ. 'ಗುಜರಾತ್‌ನಲ್ಲಿ ಮೋದಿ ಅವರದು ದೂರದೃಷ್ಟಿಯುಳ್ಳ ಸರ್ಕಾರ' ಎಂದು ಮೆಚ್ಚುಗೆ ಸೂಚಿಸಿದ್ದಕ್ಕಾಗಿ ಜಾಯ್ ಅವರಿಗೆ ಹಲವು ಮಂದಿ ಕರೆ ಮಾಡಿ ಬೆದರಿಕೆ ಹಾಕಿದ್ದಾರಂತೆ. ಕೆಲವರಂತು ದ್ವೇಷಪೂರಿತ, ಧಮಕಿ ಹಾಕುವ ಇ-ಮೇಲ್‌ಗಳನ್ನೂ ಕಳುಹಿಸುತ್ತಿದ್ದಾರೆ. ಫೇಸ್‌ಬುಕ್‌ನಲ್ಲೂ ಮೋದಿ ಪರ ಹೇಳಿಕೆ ನೀಡಿದ್ದಕ್ಕಾಗಿ ಹಲವರು ಜೋಯ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ಇದ್ಯಾವುದಕ್ಕೂ ತಾವು ಹೆದರಲ್ಲ ಎಂದಿದ್ದಾರೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜಾಯ್.