ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ನಿಮ್ಮ ಮತ ಏಕೆ ಬೇಕು?

ಚುನಾವಣೆಗಾಗಿ ಸಾವಿರಾರು ಕೋಟಿ ವೆಚ್ಚ ಮಾಡಲಾಗುತ್ತಿದೆ, ರಾಜಕಾರಣಿಗಳು ತಮ್ಮ ವಾಗಾಡಂಬರವನ್ನು..

Srinivasa Murthy VN
Updated On : 14 Apr 2014, 1:57 am

ಚುನಾವಣೆಗಾಗಿ ಸಾವಿರಾರು ಕೋಟಿ ವೆಚ್ಚ ಮಾಡಲಾಗುತ್ತಿದೆ, ರಾಜಕಾರಣಿಗಳು ತಮ್ಮ ವಾಗಾಡಂಬರವನ್ನು ತೋರಿಸುತ್ತಿದ್ದಾರೆ. ನೀವೂ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ, ಬೆರಳಿಗೆ ಶಾಯಿ ಹಾಕಿಸಿಕೊಳ್ಳದಿದ್ದರೆ ಎಲ್ಲವೂ ವ್ಯರ್ಥ. ಮತ ಹಾಕುವುದು ಕರ್ತವ್ಯ ಎಂಬುದು ಎಲ್ಲರಿಗೂ ಗೊತ್ತು. ಅದನ್ನು ಹೊರತುಪಡಿಸಿ ನೀವು ಈ ಚುನಾವಣೆಯಲ್ಲಿ ಏಕೆ ಹಕ್ಕು ಚಲಾಯಿಸಬೇಕು ಗೊತ್ತೇ?

ಚಿಂತನೆಗಳನ್ನು ನಿರೂಪಿಸಲು
ಈ ಬಾರಿಯ ಚುನಾವಣೆಯಲ್ಲಿ ಯುವ ಮತದಾರರ ಸಂಖ್ಯೆ ದಾಖಲೆ ಮಟ್ಟದಲ್ಲಿದೆ. ನಿಮ್ಮ ಚಿಂತನೆಗಳು, ಯೋಚನೆಗಳು ಯಾವ ಪಕ್ಷಕ್ಕೆ ಸರಿಯಾಗಿ ಹೊಂದಿಕೆಯಾಗುತ್ತದೆ ಎಂಬುದನ್ನು ಅರಿತು ಅಂತಹ ಪಕ್ಷಕ್ಕೆ ಮತ ನೀಡಿ. ಇಲ್ಲದಿದ್ದರೆ ನಿಮ್ಮ ಚಿಂತನೆಗಳು, ಕನಸುಗಳು ನನಸಾಗಲು ಸಾಧ್ಯವೇ ಇಲ್ಲ.

ಕರ್ತವ್ಯ ನಿರ್ವಹಿಸಲು
ಪ್ರಜಾಪ್ರಭುತ್ವದಲ್ಲಿ ಮತದಾರ, ನಮ್ಮ ನಾಯಕರು ಏನು ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಲೆಂದು ದಿನದಲ್ಲಿ ಕೆಲವು ಗಂಟೆಗಳನ್ನಾದರೂ ಮೀಸಲಿಡಬೇಕು. ರಾಜಕಾರಣಿಗಳ ಪೈಕಿ ಒಬ್ಬ ನಾಯಕನನ್ನು ಆಯ್ಕೆ ಮಾಡಬೇಕೆಂದರೆ, ನೀವು ಗೋದಿಯಿಂದ ತವುಡನ್ನು ಪ್ರತ್ಯೇಕಿಸಲೇಬೇಕು. ಬದಲಾವಣೆ ಬೇಕು ಎಂದು ನೀವು ಬಯಸಿದ್ದೇ ಆದರೆ, ಮತಹಾಕುವ ಕರ್ತವ್ಯವನ್ನು ಪಾಲಿಸುವ ಮೂಲಕ ಆ ಬದಲಾವಣೆಗೆ ನೀವು ನಾಂದಿ ಹಾಡಿ.

ಸ್ಥಿರತೆಗಾಗಿ
ದೇಶದ ಆರ್ಥಿಕ ಸ್ಥಿತಿ ಹೀನಾಯ ಮಟ್ಟಕ್ಕೆ ತಲುಪಿದೆ. ಅದನ್ನು ಅರ್ಥಮಾಡಿಕೊಳ್ಳಲು ಜಿಡಿಪಿ, ವಿತ್ತೀಯ ಕೊರತೆಯನ್ನು ವಿವರಿಸಬೇಕಾಗಿಲ್ಲ. ಒಮ್ಮೆ ಮಾರುಕಟ್ಟೆಗೆ ಹೋಗಿ ತರಕಾರಿ ಬೆಲೆ, ಇಂಧನದ ದರ ತಿಳಿದುಕೊಂಡರೆ ಸಾಕು, ನಿಮ್ಮ ವೆಚ್ಚಮಾಡುವ ಸಾಮರ್ಥ್ಯ ಎಷ್ಟು ಕಡಿಮೆಯಾಗಿದೆ ಎಂಬುದು ತಿಳಿಯುತ್ತದೆ. ಇದುವೇ ರಾಜಕೀಯ ಅಸ್ಥಿರತೆಗೆ ಕಾರಣ. ಎಲ್ಲರೂ ಸೇರಿ ಒಂದು ಪಕ್ಷಕ್ಕೆ ಮತ ಹಾಕುವುದರಿಂದ ಆ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಹೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ. ಆಗ ರಾಜಕೀಯ ಸ್ಥಿರತೆ ಕಾಣುತ್ತದೆ. ತನ್ನಿಂತಾನೇ ಆರ್ಥಿಕ ಸ್ಥಿತಿ ಸುಧಾರಣೆಯಾಗುತ್ತದೆ.

ಮನಸ್ಸಾಕ್ಷಿಗಾಗಿ
ಯಾರಿಗೋ ಏನನ್ನೋ ಹೇಳಬೇಕು ಎಂದು ನೀವು ಮತ ಹಾಕುವುದಲ್ಲ. ಇದು ನೀವು ಮತ್ತು ನೀವು ಬಯಸುವ ಬದುಕಿನ ನಡುವಿನ ಖಾಸಗಿ ಒಪ್ಪಂದ. ನಿಮ್ಮ ಮನಸ್ಸಿನ ಜತೆ ಮಾತನಾಡಿ, ಅದೇನು ಹೇಳುತ್ತದೋ ಅದನ್ನು ಮತದ ರೂಪದಲ್ಲಿ ಹೊರಹಾಕಿ. ಯಾರೋ ಹೇಳುತ್ತಾರೆ ಎಂದಾಗಲೀ, ಹೆತ್ತವರ, ಮನೆಯವರ ಒತ್ತಡಕ್ಕೆ ಮಣಿದಾಗಲೀ ಮತ ಹಾಕಬೇಡಿ. ಕಾಂಗ್ರೆಸ್, ಬಿಜೆಪಿ, ಆಪ್, ಪ್ರಾದೇಶಿಕ ಪಕ್ಷಗಳು... ಹೀಗೆ ನಿಮ್ಮ ಮನಸ್ಸು ಏನು ಹೇಳುತ್ತದೋ ಅದನ್ನು ಮಾಡಿ.

ನೀವೂ ಅಮೂಲ್ಯ ಎಂದು ತೋರಿಸಲು
ಸಮಾಜವನ್ನು ಬದಲಿಸಲು ನನ್ನೊಬ್ಬನಿಂದ ಸಾಧ್ಯವಿಲ್ಲ ಎಂದು ಹೇಳುತ್ತಿರಾ? ಇದು ಖಂಡಿತಾ ತಪ್ಪು. ಹೆಚ್ಚಿನ ರಾಜಕೀಯ ಪಕ್ಷಗಳು ಚುನಾವಣೆ ಬಂದಾಗ ಗ್ರಾಮಗಳಿಗೆ ಧಾವಿಸುವುದು ಏಕೆ ಗೊತ್ತೇ? ಏಕೆಂದರೆ ಗ್ರಾಮಗಳ ಜನರೇ ನೈಜ ಶ್ರದ್ಧೆಯಿಂದ ಮತದಾನ ಮಾಡುವವರು. ಮಧ್ಯಮ ವರ್ಗದವರಂತೂ ಮತದಾನದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವುದಿಲ್ಲ. ಶ್ರೀಮಂತ ವರ್ಗ, ಯಾರು ಬಂದರೂ ಒಂದೇ ಎಂಬ ಭಾವನೆ ಹೊಂದಿರುತ್ತಾರೆ. ಆದರೆ ಈ ಬಾರಿ ಮೂರನೇ ಎರಡರಷ್ಟು ಮತದಾರರು 35ಕ್ಕಿಂತ ಕಡಿಮೆ ವಯಸ್ಸಿನವರು. ನಿಮ್ಮ ಮತಕ್ಕಿಂತ ಬಲಶಾಲಿಯಾದದ್ದು ಯಾವುದೂ ಇಲ್ಲ. ಒಂದೊಂದು ಮತವೂ ಅಮೂಲ್ಯ. ನಿಮ್ಮ ಮತ ಒಬ್ಬ ಅಭ್ಯರ್ಥಿಯ ಭವಿಷ್ಯವನ್ನೇ ಬದಲಿಸಬಲ್ಲದು. ಹಾಗಾಗಿ ಹೋಗಿ, ಮತ ಚಲಾಯಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement