ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಬಾರು ನನ್ನ ತಂದೆಯ ಬೆನ್ನಿಗೆ ಇರಿದರು: ಉಪೀಂದರ್ ಸಿಂಗ್

ಸಂಜಯ್ ಪುಸ್ತಕಕ್ಕೆ ಪ್ರಧಾನಿ ಪುತ್ರಿ ಉಪೀಂದರ್ ಸಿಂಗ್ ಕೆಂಡಾಮಂಡಲ

Srinivasa Murthy VN
Updated On : 16 Apr 2014, 12:39 pm

ಸಂಜಯ್ ಪುಸ್ತಕಕ್ಕೆ ಪ್ರಧಾನಿ ಪುತ್ರಿ ಉಪೀಂದರ್ ಸಿಂಗ್ ಕೆಂಡಾಮಂಡಲ
ಅಮೇಠಿ/ನವದೆಹಲಿ: ಪ್ರಧಾನಿ ಸಿಂಗ್ ಅವರ ಮಾಜಿ ಮಾಧ್ಯಮ ಸಲಹೆಗಾರ ಸಂಜಯ್ ಬಾರು ಬರೆದಿರುವ ವಿವಾದಾತ್ಮಕ 'ಆ್ಯಕ್ಸಿಡೆಂಟಲ್ ಪ್ರೈಂ ಮಿನಿಸ್ಟರ್..' ಪುಸ್ತಕಕ್ಕೆ ಸಂಬಂಧಿಸಿ ಪ್ರಧಾನಿ ಸಿಂಗ್ ಪುತ್ರಿ ಉಪೀಂದರ್ ಸಿಂಗ್ ಕಿಡಿಕಾರಿದ್ದಾರೆ. ಬಾರು ಅವರ ಈ ಪುಸ್ತಕ ವಿಶ್ವಾಸದ್ರೋಹವಲ್ಲದೇ ಬೇರೇನೂ ಅಲ್ಲ ಎಂದಿದ್ದಾರೆ.
ಬೆನ್ನಿಗೆ ಚೂರಿ: ದೆಹಲಿ ವಿವಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಉಪಿಂದರ್ ಸಿಂಗ್ ಅವರು ಬಾರು ಅವರ ಪುಸ್ತಕದ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ. ಬಾರು ಅವರು ಪ್ರಧಾನಿಯ ನಂಬಿಕೆಗೆ ವಂಚನೆ ಮಾಡಿದ್ದಾರೆ. ಅವರ ಬೆನ್ನಿಗೆ ಇರಿದಿದ್ದಾರೆ. ಇದು ನಿಜಕ್ಕೂ ಗಾಸಿಪ್ಗಳನ್ನೇ ಆಧರಿಸಿದ ಪುಸ್ತಕ ಎಂದಿದ್ದಾರೆ. ವರದಿಯಾದ ಕೋಟ್ಗಳನ್ನು ಪ್ರಧಾನಿಯವರ ನೇರ ಮಾತು ಎಂದು ಬಳಸಲಾಗಿದೆ. ನಿಜ ಹೇಳಬೇಕೆಂದರೆ, ಬಾರು ಅವರು ಪ್ರಧಾನಿ ಕಾರ್ಯಾಲಯದಲ್ಲಿ ನಿರ್ಧಾರ ಕೈಗೊಳ್ಳುವ ತಂಡದಲ್ಲೇ ಇರಲಿಲ್ಲ. ಅವರಿಗೆ ಯಾವ ಫೈಲುಗಳೂ ಸಿಗುತ್ತಿರಲಿಲ್ಲ. ಅವರು ತಾವು ಪ್ರಧಾನಿಯ ಪ್ರಧಾನ ಕಾರ್ಯದರ್ಶಿ ಎಂಬಂತೆ ಬರೆದಿದ್ದಾರೆ. ಇದನ್ನೆಲ್ಲ ಬರೆಯಲು ಅವರಿಗೆ ಸಿಕ್ಕಿದ ಮೂಲಗಳಾದರೂ ಯಾವುವು ಎಂದು ಪ್ರಶ್ನಿಸಿದ್ದಾರೆ ಉಪಿಂದರ್.
ರಾಜಕೀಯ ಉದ್ದೇಶ: ಬಾರು ಅವರು ಪುಸ್ತಕ ಬರೆದಿದ್ದು ನಮಗೆಲ್ಲರಿಗೂ ಗೊತ್ತಿತ್ತು. ಅದನ್ನು ಯಾವಾಗ ಬಿಡುಗಡೆ ಮಾಡುತ್ತೀರಿ ಎಂದು ನಾನು ಕೇಳಿದಾಗ ಅವರು 'ಖಂಡಿತಾ ಚುನಾವಣೆಯ ಬಳಿಕವೇ ಬಿಡುಗಡೆ' ಎಂದಿದ್ದರು. ಆದರೆ, ಚುನಾವಣೆ ಸಮಯದಲ್ಲೇ ಪುಸ್ತಕ ಬಿಡುಗಡೆ ಮಾಡಿದ್ದೇಕೆ? ಇಲ್ಲಿ ರಾಜಕೀಯ ಉದ್ದೇಶ ಇಲ್ಲ ಎನ್ನುವುದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದೂ ಉಪಿಂದರ್ ಅಭಿಪ್ರಾಯಪಟ್ಟಿದ್ದಾರೆ.

ಸಿಂಗ್ ಸೂಪರ್ ಪಿಎಂ: ಪ್ರಿಯಾಂಕಾ
ಅಮೇಠಿಯಲ್ಲಿ ಪ್ರಚಾರ ನಡೆಸುತ್ತಿರುವ ಪ್ರಿಯಾಂಕಾ ಗಾಂಧಿ ಅವರೂ ಪ್ರಧಾನಿ ಸಿಂಗ್ ಬೆನ್ನಿಗೆ ನಿಂತಿದ್ದಾರೆ. ಮಂಗಳವಾರ ಬಾರು ಪುಸ್ತಕದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ, 'ಯುಪಿಎ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಅವರೇ ಸೂಪರ್ ಪ್ರಧಾನಿ' ಎಂದಿದ್ದಾರೆ.

ಪ್ರಿಯಾಂಕಾ v/s ವರುಣ್
ಚುನಾವಣೆ ಎಂದರೆ ಫ್ಯಾಮಿಲಿ ಟೀ ಪಾರ್ಟಿ ಅಲ್ಲ, ಅದು ಸಿದ್ಧಾಂತಗಳ ಸಮರ. ಸಿದ್ಧಾಂತದ ರೇಖೆಯ ಇನ್ನೊಂದು ಬದಿಯಲ್ಲಿ ನನ್ನ ರಕ್ತಸಂಬಂಧಿಗಳಿದ್ದರೂ ನನ್ನ ಮಾತಿಗೆ ನಾನು ಬದ್ಧ. ವರುಣ್ರ ಪ್ರಚೋದನಕಾರಿ ಹೇಳಿಕೆಯನ್ನು ನಾನು ಒಪ್ಪಲಾರೆ. ಒಪ್ಪಿದರೆ ನಾನು ನನ್ನ ಕುಟುಂಬಕ್ಕೆ ದ್ರೋಹ ಬಗೆದಂತೆ. - ಪ್ರಿಯಾಂಕಾ ವಾದ್ರಾ, ಸೋನಿಯಾ ಪುತ್ರಿ

 ನನ್ನ ಸಭ್ಯತೆ, ವಿಶಾಲ ಹೃದಯವನ್ನು ದೌರ್ಬಲ್ಯ ಎಂದು ಅರ್ಥೈಸಬೇಕಾಗಿಲ್ಲ. ವೈಯಕ್ತಿಕ ದಾಳಿ ಬದಲು ನಿರುದ್ಯೋಗ, ಭ್ರಷ್ಟಾಚಾರ ಬಗ್ಗೆ ಚರ್ಚಿಸೋಣ. - ವರುಣ್ ಗಾಂಧಿ, ಸುಲ್ತಾನ್ಪುರ ಬಿಜೆಪಿ ಅಭ್ಯರ್ಥಿ

 ಸೋನಿಯಾ v/s ಮೋದಿ, ಜೇಟ್ಲಿ, ರಾಜನಾಥ್
ಅವರ ದೂರದೃಷ್ಟಿಯು ದ್ವೇಷ, ಸುಳ್ಳುಗಳಿಂದ ಕೂಡಿದೆ. ಅವರ ಸಿದ್ಧಾಂತವು ವಿಭಜನೆ ಹಾಗೂ ನಿರಂಕುಶ ನೀತಿಯನ್ನು ಒಳಗೊಂಡಿದೆ. ಇವುಗಳು ನಮ್ಮ ಭಾರತೀಯತೆ, ನಮ್ಮ ಹಿಂದೂಸ್ತಾನೀಯತೆಯನ್ನು ನಾಶ ಮಾಡಲಿದೆ.
- ಸೋನಿಯಾ ಗಾಂಧಿ (ಕಾಂಗ್ರೆಸ್ ಟಿವಿ ಜಾಹೀರಾತಿನಲ್ಲಿ)

ಚುನಾವಣಾ ಪ್ರಚಾರದ ಚುಕ್ಕಾಣಿ ಹಿಡಿಯಲು ದಿಢೀರನೆ ಸೋನಿಯಾ ಮುಂದೆ ಬಂದಿದ್ದಾರೆ. ಮಗ ಏನನ್ನೋ ಮಾಡುತ್ತಾನೆ ಎಂದು ಅವರು ಅಂದುಕೊಂಡಿದ್ದರು. ಆದರೆ ರಾಹುಲ್ರಿಂದ ಏನೂ ಮಾಡಲಾಗಲಿಲ್ಲ. ಪಾಪ, ಅವರಾದರೂ ಏನು ಮಾಡುವುದು? ಹಾಗಾಗಿ ತಾಯಿಯೇ ಪ್ರಚಾರಕ್ಕೆ ಬರಬೇಕಾಯ್ತು.
- ನರೇಂದ್ರ ಮೋದಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ

ರಾಹುಲ್ರ ಭಾಷಣ ಏನೂ ಕೆಲಸ ಮಾಡುತ್ತಿಲ್ಲ ಎಂದು ಕಾಂಗ್ರೆಸ್ನವರಿಗೆ ಗೊತ್ತಾಗಿದೆ. ಹಾಗಾಗಿ ಸೋನಿಯಾ ಪ್ರಮುಖ ಪ್ರಚಾರಕರಾಗಲು ಮುಂದೆ ಬಂದಿದ್ದಾರೆ. ಇನ್ನು ಕಾಂಗ್ರೆಸ್ನ ಸ್ಲೋಗನ್ ಬದಲಾಗಲಿದೆ. 'ಮೈಂ ನಹೀ, ಮೋಮ್' ಎಂಬುದು ಹೊಸ ಸ್ಲೋಗನ್. ಹಣ ನೀಡಿ ಟಿವಿ ಸಮಯವನ್ನು ಖರೀದಿಸಲಾಗಿದೆ. ಚುನಾವಣಾ ಅಜೆಂಡಾವನ್ನು ಕೊನೇ ಕ್ಷಣದಲ್ಲಿ ಬದಲಾಯಿಸುವ ಈ ಯತ್ನ ನಡೆಯದು.
- ಅರುಣ್ ಜೇಟ್ಲಿ, ಬಿಜೆಪಿ ನಾಯಕ

ಶ್ರೀಮತಿ ಗಾಂಧಿ ಹಾಗೂ ಕಾಂಗ್ರೆಸ್ ಮೊದಲು ಭಾರತೀಯತೆ ಎಂದರೆ ಏನು ಎಂಬುದನ್ನು ಕಲಿತು, ಅರ್ಥಮಾಡಿಕೊಳ್ಳಲಿ.
- ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ರಾಹುಲ್ ಗಾಂಧಿ V/S ನರೇಂದ್ರ ಮೋದಿ

ಮೋದಿ ಗುಜರಾತ್ನಲ್ಲಿ ರೈತರ, ಬಡವರ ಒಂದು ಮೀಟರ್ ಭೂಮಿಯನ್ನು 1 ರುಪಾಯಿಯಂತೆ ದೊಡ್ಡ ದೊಡ್ಡ ಉದ್ಯಮಿಗಳಿಗೆ ಮಾರಾಟ ಮಾಡಿದ್ದಾರೆ. ಇಲ್ಲೆಲ್ಲ ರುಪಾಯಿಗೆ ಟಾಫಿ(ಚಾಕ್ಲೆಟ್) ಸಿಗುತ್ತದೆ. ಹಾಗಾಗಿ ಅವರು ಹೇಳುತ್ತಿರುವ 'ಗುಜರಾತ್ ಮಾದರಿ' ನಿಜವಾಗಿ 'ಟಾಫಿ ಮಾದರಿ' ಅಷ್ಟೆ.
- ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ

ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆ ಬಗ್ಗೆ ನಾವೆಲ್ಲ ಚಿಂತಿಸುತ್ತಿದ್ದರೆ, ರಾಹುಲ್ ಇನ್ನೂ ಬಾಲಿಶವಾಗಿ ವರ್ತಿಸುತ್ತಿದ್ದಾರೆ. ಕಳೆದ 10 ದಿನಗಳಿಂದ ಬಲೂನ್ ಬಗ್ಗೆ ಮಾತನಾಡುತ್ತಿದ್ದರು. ಈಗ ಟಾಫಿ ಪದ ಸಿಕ್ಕಿದೆ.
- ನರೇಂದ್ರ ಮೋದಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement