ರಾಜಸ್ಥಾನ ಗಡಿಗೂ ಹಬ್ಬಿದೆ ಮೋದಿ ಮಾರುತ
ಇಲ್ಲಿ ಬೆಳಗಾಗುವುದೇ ಚತ್ತೇಕಾ ಗ್ರಾಮದ ಮಸೀದಿಯ ನಮಾಜು ಕರೆ ಕೇಳಿದ ನಂತರ. ಮುಂಜಾನೆ ಐದಕ್ಕೆಲ್ಲ ಧ್ವನಿವರ್ಧಕದ ಮೂಲಕ ಕೇಳುವ ನಮಾಜಿಗೆ ಹೊಂದಿಕೊಂಡಿರುವ ಗ್ರಾಮ ಹಿಂದೂಮಲ್ಕೋಟ್ .
-ಕನ್ನಡಪ್ರಭ ಪ್ರತಿನಿಧಿಯಿಂದ
ಹಿಂದುಮಲ್ಕೋಟ್ (ರಾಜಸ್ಥಾನ): ಇಲ್ಲಿ ಬೆಳಗಾಗುವುದೇ ಚತ್ತೇಕಾ ಗ್ರಾಮದ ಮಸೀದಿಯ ನಮಾಜು ಕರೆ ಕೇಳಿದ ನಂತರ. ಮುಂಜಾನೆ ಐದಕ್ಕೆಲ್ಲ ಧ್ವನಿವರ್ಧಕದ ಮೂಲಕ ಕೇಳುವ ನಮಾಜಿಗೆ ಹೊಂದಿಕೊಂಡಿರುವ ಗ್ರಾಮ ಹಿಂದೂಮಲ್ಕೋಟ್ .
ಚತ್ತೇಕಾ ಗ್ರಾಮದ ಜನರೂ ಹಿಂದೂಮಲ್ಕೋಟ್ ರಾಮಮಂದಿರದ ಭಜನೆ ಕೇಳುತ್ತಾರೆ. ಉಭಯ ಗ್ರಾಮಗಳ ನಡುವೆ ಇರುವ ಅಂತರ ಹೆಚ್ಚುಕಮ್ಮಿ ಒಂದು ಕಿಲೋಮೀಟರ್. ಆ ಗ್ರಾಮದ ಜನರು ರಾಮಮಂದಿರಕ್ಕೆ ಬರುವುದಿಲ್ಲ, ಈ ಗ್ರಾಮದ ಜನರು ಮಸೀದಿಗೆ ಹೋಗಿದ್ದಿಲ್ಲ. ಹಬ್ಬ- ಹರಿದಿನಗಳಲ್ಲಿ ಭೇಟಿಯಾಗಿದ್ದಿಲ್ಲ, ಪರಸ್ಪರ ಶುಭಾಶಯ ಹೇಳಿಕೊಂಡಿದ್ದಿಲ್ಲ. ಜನರಿಗೆ ಆಸೆ ಇದ್ದರೂ ಅದು ಸಾಧ್ಯವಾಗಿಲ್ಲ. ಮುಂದೆಯೂ ಸಾಧ್ಯವಾಗುವುದಿಲ್ಲವೇನೋ ಏಕೆಂದರೆ- ಹಿಂದೂಮಲ್ಕೋಟ್ ಗ್ರಾಮ ಭಾರತದಲ್ಲಿದ್ದರೆ ಚತ್ತೇಕಾ ಗ್ರಾಮ ಪಾಕಿಸ್ತಾನದಲ್ಲಿದೆ.
ರಾಜಸ್ಥಾನದ ಶ್ರೀಗಂಗಾನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಹಿಂದೂಮಲ್ಕೋಟ್ ಭಾರತ- ಪಾಕಿಸ್ತಾನದ ಗಡಿ ಗ್ರಾಮ. ಗಡಿಭಾಗಕ್ಕೆ ಅತ್ಯಂತ ಸಮೀಪ ಇರುವ ಜನವಸತಿ ಪ್ರದೇಶ ಇದು. ಕೇವಲ 300 ಮೀಟರ್ ದೂರದಲ್ಲಿರುವ ಗಡಿಭಾಗದ ವಿದ್ಯುತ್ಚಾಲಿತ ಮುಳ್ಳುತಂತಿಯ ಬೇಲಿ ನೋಡು ನೋಡುತ್ತಲೇ ಇಲ್ಲಿ ಮೂರು ತಲೆಮಾರು ಆಗಿ ಹೋಗಿವೆ. ಗಂಗಾ ಕಾಲುವೆಯಿಂದ ಸಮೃದ್ಧವಾಗಿ ಹರಿಯುವ ನೀರು ಬಳಸಿ ಯಥೇಚ್ಛ ಗೋದಿ ಬೆಳೆಯುವ ಪ್ರದೇಶ ಇದು. ಆಗಾಗ ಗಡಿಯಲ್ಲಿ ಸಮವಸ್ತ್ರಧಾರಿಗಳ ಕವಾಯತಿನ ಶಬ್ದದ ಹೊರತಾಗಿ ಸದಾ ಶಾಂತವಾಗಿರುವ ಈ ಗ್ರಾಮದಲ್ಲಿ ಪಾಕಿಸ್ತಾನ ಗಡಿ ತಂಟೆ ಮಾಡಿದ ಸುದ್ದಿ ಬಿತ್ತರವಾಗುವಾಗ ಜನರ ಮನಸ್ಸಿಗೆ ಕಿರಿಕಿರಿ.
'ಸಂಸತ್ಗೆ ಚುನಾವಣೆ ನಡೆಯುವ ಹೊತ್ತಿಗೂ ನಮಗೆ ಸಣ್ಣದೊಂದು ಕಿರಿಕಿರಿ ಆಗುತ್ತದೆ. ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೋ ಪಾಕಿಸ್ತಾನದ ಬಗ್ಗೆ ಅದರ ನಿಲುವು ಎಂಥದ್ದೋ ಎಂಬ ಕಾರಣಕ್ಕೆ ಆ ಕಿರಿಕಿರಿ' ಎನ್ನುತ್ತಾರೆ ಮೆಡಿಕಲ್ ಶಾಪ್ ಮಾಲೀಕ ಸುರೇಂದರ್ ಗುಪ್ತಾ.
1971ರ ಭಾರತ- ಪಾಕಿಸ್ತಾನ ಯುದ್ಧವಾದಾಗ ಗುಪ್ತಾ ಇನ್ನು ಶಾಲಾ ಬಾಲಕ. '1971ರ ಯುದ್ಧದ ನಂತರ ನಾವೆಂದೂ ಇಲ್ಲಿ ಗುಂಡಿನ ಚಮಮಕಿ ನಡೆದದ್ದನ್ನು ನೋಡಿಲ್ಲ, ಕೇಳಿಲ್ಲ. ಭಯೋತ್ಪಾದಕರು ನುಸುಳುವ ಪ್ರಯತ್ನವೂ ಇಲ್ಲಿ ಆಗಿಲ್ಲ. ಈ ಪ್ರದೇಶ ಅದಕ್ಕೆ ಪೂರಕವಾಗಿಯೂ ಇಲ್ಲ. ಸದಾ ಕಟ್ಟೆಚ್ಚರದ ಕಾವಲಿದೆ ಇಲ್ಲಿ' ಎನ್ನುತ್ತಾರೆ. ಯುದ್ಧ ಕಂಡ ಹಿರಿ ತಲೆಮಾರಿನವರಿಗೆ ಪಾಕ್ ಗಡಿ ತಂಟೆ ತೆಗೆದಾಗಲೆಲ್ಲ ಅಸಮಾಧಾನ ಉಂಟಾಗುತ್ತದೆ. ಅದು ಸಹಜ ಎನ್ನುತ್ತಾರೆ 65 ವರ್ಷದ ಕೃಷಿಕ ಸತ್ಪಾಲ್ ಸಿಂಗ್.
ಪಾಕ್ ಬಗ್ಗೆ ಕಠಿಣ ನಿಲುವು ತಳೆಯುವ ಸರ್ಕಾರ ಕೇಂದ್ರದಲ್ಲಿ ಬರಬೇಕು, ಸಮ್ಮಿಶ್ರ ಸರ್ಕಾರಕ್ಕಿಂತ ಏಕಪಕ್ಷ ಸರ್ಕಾರ ಬಂದರೆ ಒಳಿತು ಎನ್ನುತ್ತಾರೆ. ಚುನಾವಣೆ ಹೇಗೆ ನಡೆದಿದೆ ಎಂಬ ಪ್ರಶ್ನೆಗೆ ಎಲ್ಲರದ್ದು ಒಂದೇ ಉತ್ತರ. 'ಯಹಾ ಭಿ ಮೋದಿ ಕೀ ಹವಾ ಚಲ್ರಹೀಹೈ' ( ಇಲ್ಲೂ ಮೋದಿ ಗಾಳಿ ಬೀಸುತ್ತಿದೆ...)
ಗಡಿಗ್ರಾಮಗಳ ಸಮಸ್ಯೆಗಳೇನು?
ಸ್ವಾತಂತ್ರ್ಯಪೂರ್ವದಲ್ಲೇ ನೀರಾವರಿ ಸೌಲಭ್ಯ ಪಡೆದ ಪ್ರದೇಶ ಇದು. ನೀರಾವರಿ ಮತ್ತು ಕುಡಿಯುವ ನೀರಿಗೆ ಬರವಿಲ್ಲ. ಆದರೆ, ವಿದ್ಯುತ್ ಆಗಾಗ ಕೈಕೊಡುತ್ತದೆ. ನೀರಾವರಿ ಪ್ರದೇಶ ಆದ್ದರಿಂದ ರಸ್ತೆಗಳು ಆಗಾಗ್ಗೆ ಹಾಳಾಗುತ್ತವೆ. ಇತ್ತೀಚೆಗೆ ಟಾರು ರಸ್ತೆ ಬದಲಿಗೆ ಸಿಮೆಂಟ್ ರಸ್ತೆಗಳು ಈ ಭಾಗದಲ್ಲಿ ಮೈತಳೆಯುತ್ತಿವೆ. ಧರೆ ಹತ್ತಿ ಉರಿಯುವಷ್ಟು ಬಿಸಿಲು ಇಲ್ಲಿ. ಲೋಕಸಭಾ ಚುನಾವಣೆ ಬಿರುಸು ಬಿಸಿಲನ್ನು ಮತ್ತಷ್ಟು ಪ್ರಖರಗೊಳಿಸಿದೆ.
ಒಂದೇ ಪಂಚಾಯಿತಿ
ನಾಲ್ಕು ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೊಚ್ಚಿ ಹೋಗಿತ್ತು. ಬಿಜೆಪಿ ಅಭೂತಪೂರ್ವ ಜಯಗಳಿಸಿತ್ತು. ಆಗ ಮೋದಿ ಹವಾ ಇರಲಿಲ್ಲ. ಚುನಾವಣೆ ಮುನ್ನಡೆಸಿದ್ದ ವಸುಂಧರಾ ರಾಜೇ ಮುಖ್ಯಮಂತ್ರಿಯಾಗಿದ್ದಾರೆ. ಸುಜಾವಲ್ಪುರ್ ಧಾಮ್- ಹಿಂದುಮಲ್ಕೋಟ್ ಅವಳಿ ಗ್ರಾಮಗಳು. ಎರಡೂ ಗ್ರಾಮ ಸೇರಿ ಒಂದು ಪಂಚಾಯಿತಿ. ಈ ಪಂಚಾಯಿತಿ ಸರಪಂಚರಾಗಿದ್ದ ಮೋಹಿಂದರ್ 'ಬಿಜೆಪಿ ಕೆಲಸ ಆರಂಭಿಸಿದೆ. ಈಗ ಮೋದಿ ಹೆಸರೂ ಸೇರಿಕೊಂಡಿದೆ. ಜನ ಮೋದಿ ಬಗ್ಗೆಯೇ ಮಾತನಾಡುತ್ತಿದ್ದಾರೆ. ಬಿಜೆಪಿಯವರ ಪ್ರಚಾರವೂ ಅದೇ ದಿಕ್ಕಿನಲ್ಲಿದೆ' ಎನ್ನುತ್ತಾರೆ. ಗಡಿಗುಂಟ ಇರುವ ಖೇರಿ, ಪಕ್ಕಿ, ಒಡೆಕ್ಕಿ ಗ್ರಾಮಗಳಲ್ಲೂ ಜನ ಬಿಜೆಪಿ ಜತೆಜತೆಗೆ ಮೋದಿ ಹೆಸರನ್ನು ಹೇಳುತ್ತಿದ್ದಾರೆ. ಪಾಕಿಸ್ತಾನ-ರಾಜಸ್ಥಾನ - ಪಂಜಾಬ್ ಈ ಮೂರು ಗಡಿಗಳಿಗೆ ಹೊಂದಿಕೊಂಡಿರುವ ಖಖ್ಕೋ ಗ್ರಾಮದಲ್ಲೂ ನರೇಂದ್ರ ಮೋದಿ ಹೆಸರು ಕೇಳುತ್ತಿದೆ. ಈ ಗ್ರಾಮ ರಾಜಸ್ಥಾನಕ್ಕೆ ಸೇರಿದ್ದರೂ ಬಹುತೇಕ ಪಂಜಾಬಿಗಳಿದ್ದಾರೆ. ಶಿರೋಮಣಿ ಅಕಾಲಿದಳದ(ಎಸ್ಎಡಿ) ಪ್ರಾಬಲ್ಯ ಇರುವ ಗ್ರಾಮ. ಪಂಜಾಬ್ನಲ್ಲಿ ಬಿಜೆಪಿ- ಎಸ್ಎಡಿ ಮೈತ್ರಿ ಇದೆ. ಗಡಿ ಗ್ರಾಮಗಳಲ್ಲೂ ಮೋದಿ ಜಪ ಮಾಡುವಂತೆ ಬಿಜೆಪಿ ವ್ಯವಸ್ಥಿತ ಪ್ರಚಾರ ಮಾಡುತ್ತಿದ್ದರೆ, ಕಾಂಗ್ರೆಸ್ ಪ್ರತಿತಂತ್ರ ಇಲ್ಲೆಲ್ಲೂ ಕಾಣುತ್ತಲೇ ಇಲ್ಲ.