ಆಸ್ತಿ ಲಕ್ಷ ಲಕ್ಷ, ಶಿಕ್ಷಣ ಅಲಕ್ಷ್ಯ!
ನಿಮಗೆ ಗೊತ್ತಾ? ಮೊದಲ 5 ಹಂತಗಳಲ್ಲಿನ ಅಭ್ಯರ್ಥಿಗಳು ಶಿಕ್ಷಣದಲ್ಲಿ ಹಿಂದೆ, ಆದ್ರೆ ಅಪರಾಧದಲ್ಲಿ ಮುಂದೆ!
ನಿಮಗೆ ಗೊತ್ತಾ? ಮೊದಲ 5 ಹಂತಗಳಲ್ಲಿನ ಅಭ್ಯರ್ಥಿಗಳು ಶಿಕ್ಷಣದಲ್ಲಿ ಹಿಂದೆ, ಆದ್ರೆ ಅಪರಾಧದಲ್ಲಿ ಮುಂದೆ! ಕಣದಲ್ಲಿರುವ 3,305 ಅಭ್ಯರ್ಥಿಗಳ ಪೈಕಿ ಅರ್ಧದಷ್ಟು ಮಂದಿ ಪದವಿಯನ್ನೂ ಪಡೆದಿಲ್ಲ. ಅಚ್ಚರಿಯೆಂದರೆ, ಶಿಕ್ಷಣ ಕ್ಷೇತ್ರದಲ್ಲಿ ಇವರು ಸಾಧಿಸದ್ದನ್ನು ಅಪರಾಧ ಪ್ರಕರಣ ಹಾಗೂ ಆಸ್ತಿಯ ವಿಚಾರದಲ್ಲಿ ಸಾಧಿಸಿದ್ದಾರೆ. ಒಟ್ಟಾರೆಯಾಗಿ ಅಭ್ಯರ್ಥಿಗಳ ಶಿಕ್ಷಣ, ಆಸ್ತಿ, ಅಪರಾಧ ಹಿನ್ನೆಲೆ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಕ್ರಿಮಿನಲ್ ಹಿನ್ನೆಲೆ
ಮೊದಲ 5 ಹಂತಗಳಲ್ಲಿ ಕಣಕ್ಕಿಳಿದಿರುವ ಅಭ್ಯರ್ಥಿಗಳ ಪೈಕಿ ಕ್ರಿಮಿನಲ್ ಹಿನ್ನೆಲೆಯುಳ್ಳವರು ಬಿಜೆಪಿಯಲ್ಲೇ ಹೆಚ್ಚು. ಪಕ್ಷದ 68 ಮಂದಿ (ಶೇ.34) ಅಭ್ಯರ್ಥಿಗಳು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಎರಡನೇ ಸ್ಥಾನದಲ್ಲಿ ಕಾಂಗ್ರೆಸ್(45 ಮಂದಿ, ಶೇ.23) ಇದೆ. ಬೆಂಗಳೂರು ಗ್ರಾಮಾಂತರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು 7 ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ. ಬಿಎಸ್ಪಿಯ ಬಕ್ಸಾರ್ ಅಭ್ಯರ್ಥಿ ದಾದನ್ ಯಾದವ್ 22 ಕೇಸುಗಳನ್ನು ಎದುರಿಸುತ್ತಿದ್ದಾರೆ. ಆಪ್ನ 31 ಮಂದಿ ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಈ ಮಾಹಿತಿ ಒದಗಿಸಿದೆ.
ನಿಲೇಕಣಿಯೇ ಕುಬೇರ
ದೇಶಾದ್ಯಂತ ಕಣಕ್ಕಿಳಿದಿರುವ 3,305 ಅಭ್ಯರ್ಥಿಗಳ ಪೈಕಿ 921 ಮಂದಿ ಕೋಟ್ಯಧಿಪತಿಗಳು. ಕಾಂಗ್ರೆಸ್ನ 162 ಮಂದಿ (ಶೇ.84) ಮತ್ತು ಬಿಜೆಪಿಯ 149 ಮಂದಿ (ಶೇ.74) ಕೋಟಿಯ ಒಡೆಯರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿಯವರು ಕುಬೇರರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ನಿಲೇಕಣಿ ದಂಪತಿಯ ಒಟ್ಟು ಆಸ್ತಿ ಮೌಲ್ಯ 7,710 ಕೋಟಿ.
ಆಪ್ ಅಭ್ಯರ್ಥಿಗಳು ಆಮ್ ಆದ್ಮಿಗಳಲ್ಲ
ಆಸ್ತಿಯ ವಿಚಾರಕ್ಕೆ ಬಂದಾಗ ಆಪ್ನಿಂದ ಕಣಕ್ಕಿಳಿದಿರುವ ಅಭ್ಯರ್ಥಿಗಳು ಸಾದಾ ಆಮ್ ಆದ್ಮಿಗಳಲ್ಲ, ಏಕೆಂದರೆ ಅವರಲ್ಲಿ 86 ಮಂದಿ (ಶೇ.43) ಕೋಟ್ಯಧಿಪತಿಗಳು. ಬೆಂಗಳೂರು ಕೇಂದ್ರ ಕ್ಷೇತ್ರದ ಆಪ್ ಅಭ್ಯರ್ಥಿ ವಿ. ಬಾಲಕೃಷ್ಣನ್ ಅವರ ಒಟ್ಟು ಆಸ್ತಿ ಮೌಲ್ಯ 189 ಕೋಟಿ.