ಮಾಡದ ತಪ್ಪಿಗೆ ಕ್ಷಮೆ ಏಕೆ ಕೇಳಬೇಕು
ಗುಜರಾತ್ ಗೋಧ್ರಾ ಗಲಭೆ ಬಗ್ಗೆ ಸಂದರ್ಶನದಲ್ಲಿ ನರೇಂದ್ರ ಮೋದಿ ಮಾತು
ನಾನು ತಪ್ಪೇ ಮಾಡಿಲ್ಲ, ಮಾಡದ ತಪ್ಪಿಗೆ ಕ್ಷಮೆ ಏಕೆ ಕೇಳಬೇಕು, ತಪ್ಪು ಮಾಡಿದ್ರೆ ಬಹಿರಂಗ ಗಲ್ಲಿಗೆ ಹಾಕಿ
ಸಂದರ್ಶನದಲ್ಲಿ ನರೇಂದ್ರ ಮೋದಿ ಸವಾಲು
ಗುಜರಾತ್ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ತಪ್ಪೇ ಮಾಡಿಲ್ಲ. ಹೀಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಸಾಧನೆ ತೋರಲಿದೆ. ಆದರೆ ಬಿಜೆಪಿ ನೇತೃತ್ವದ ಎನ್ಡಿಎ ಉತ್ತಮ ಫಲಿತಾಂಶ ದಾಖಲಿಸಲಿದೆ ಎಂದು ತಿಳಿಸಿದ್ದಾರೆ.
-ಗುಜರಾತ್ ಗಲಭೆ ವಿಚಾರಕ್ಕೆ ನಾನು ಕ್ಷಮೆ ಕೇಳುವುದಿಲ್ಲ. ನಾನು ತಪ್ಪೇ ಮಾಡಿಲ್ಲ. ಹೀಗಿರುವಾಗ ನಾನು ಕ್ಷಮೆ ಕೇಳುವ ವಿಚಾರವೇ ಬರುವುದಿಲ್ಲ. ಕೇವಲ ಕ್ಷಮೆಯಿಂದ ಯಾವುದೇ ಪರಿಹಾರ ಸಿಗದು. ಗುಜರಾತ್ ಗಲಭೆಯಂಥ ಪರಿಸ್ಥಿತಿಯನ್ನು ಕ್ಷಮೆ ಕೇಳಿ ನಿರ್ವಹಿಸುವುದು ಸರಿಯಲ್ಲ.
-ನಾನೇನಾದರೂ ಅಪರಾಧ ಕೃತ್ಯಗಳನ್ನು ಮಾಡಿದ್ದೇ ಆದರೆ ನನಗೆ ಕ್ಷಮೆ ನೀಡುವ ಅಗತ್ಯವೇ ಇಲ್ಲ. ಇಂಥ ಕೃತ್ಯ ಎಸಗಿದವರಿಗೆ ಕ್ಷಮೆ ನೀಡಿ ಮಾಡುವುದಾದರೂ ಏನು? ಮೋದಿಯನ್ನು ಖಂಡಿತವಾಗಿಯೂ ಕ್ಷಮಿಸಬಾರದು.
- ನನ್ನ ಮೇಲೆ ಇರುವ ಆರೋಪಗಳಲ್ಲಿ ಕಾಳಿನಷ್ಟಾದರೂ ಸತ್ಯ ಇರುವುದಾದರೆ ಸಾರ್ವಜನಿಕವಾಗಿ ಗಲ್ಲಿಗೇರಿಸಿ. ಮುಂದಿನ ನೂರು ವರ್ಷಗಳಲ್ಲಿ ಯಾರೂ ಕೂಡ ಅಂಥ ಅಪರಾಧಗಳನ್ನು ಎಸಗಲೇಬಾರದು.
-ಒಂದು ವೇಳೆ 2002 ಅಥವಾ 2007ರಲ್ಲಿ ನಡೆದ ಚುನಾವಣೆಯಲ್ಲಿ ನಾನು ಸೋತಿದ್ದರೆ ಕ್ಷಮೆ ಕೇಳುವ ವಿಚಾರವೇ ಪ್ರಸ್ತಾಪವಾಗುತ್ತಿರಲಿಲ್ಲ. ಮೋದಿ ವಿರುದ್ಧ ಕೆಲಸ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಒಕ್ಕೂಟವೊಂದಿದೆ. ನನ್ನನ್ನು ಕೆಳಗೆ ತಳ್ಳುವುದೇ ಅವರ ಪ್ರಮುಖ ಗುರಿ. ಆದರೆ ಮೋದಿ ಸೋಲಲೂ ಇಲ್ಲ, ಸಾಯಲೂ ಇಲ್ಲ.
- ಗುಜರಾತ್ ಗಲಭೆಗಳಿಗೆ ಸಂಬಂಧಿಸಿದಂತೆ ಯಾವುದೇ ವಿಚಾರಕ್ಕೆ ಮೌನವಾಗಿರಲಿಲ್ಲ. 2002 ರಿಂದ 2007ರ ವರೆಗೆ ದೇಶದ ಪ್ರಮುಖ ಪತ್ರಕರ್ತರಿಗೆ ನೀಡಿದ ಸಂದರ್ಶನದಲ್ಲಿ ಈ ಬಗೆಗಿನ ಎಲ್ಲ ಮಾಹಿತಿ ನೀಡಿದ್ದೇನೆ. ಆದರೆ ಸತ್ಯವನ್ನು ಅರಿಯುವ ಪ್ರಯತ್ನವೇ ನಡೆದಿಲ್ಲ.
- ಈ ಬಾರಿಯ ಚುನಾವಣೆ ಕಾಂಗ್ರೆಸ್ನ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಚುನಾವಣೆಯಾಗಲಿದೆ. ಆದರೆ ಬಿಜೆಪಿ ನೇತೃತ್ವದ ಎನ್ಡಿಎಯ ಇತಿಹಾಸದಲ್ಲಿ ಉತ್ತಮ ಸಾಧನೆ ತೋರಿಸಲಿದೆ.
- ಅಮಿತ್ ಶಾ ನನ್ನ ಬೆಂಬಲಿಗ ಎಂಬ ಕಾರಣಕ್ಕೆ ನಾನು ಅವರಿಗೆ ಯಾವುದೇ ಹೊಣೆಯನ್ನು ವಹಿಸಲಿಲ್ಲ. ಸದ್ಯ ಅವರು ಯಾವ ಸ್ಥಾನಕ್ಕೆ ಏರಿದ್ದಾರೆಯೋ ಅದಕ್ಕೆ ಅವರ ಶ್ರಮವೇ ಕಾರಣ.
-ಅಮಿತ್ ಶಾ ಅವರ ಭಾಷಣದ ಬಗ್ಗೆ ವಿನಾಕಾರಣ ವಿವಾದ ಸೃಷ್ಟಿಸಲಾಗಿದೆ. ಈಗಾಗಲೇ ಆರೋಪಿಸಿರುವಂತೆ ಅವರು ಪ್ರಚೋದನಾಕಾರಿಯಾಗಿ ಮಾತನಾಡಿಯೇ ಇಲ್ಲ. ಪ್ರಜಾಸತ್ತಾತ್ಮಕ ವಿಚಾರಗಳ ಬಗ್ಗೆ ಮಾತ್ರ ಪ್ರಸ್ತಾಪಿಸಿದ್ದರು. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಕೂಡ ಮಾಹಿತಿ ನೀಡಲಾಗಿತ್ತು. ಸದ್ಯ ಈ ವಿಚಾರ ಆಯೋಗದ ಬಳಿ ಇದೆ. ಅದರ ನಿರ್ಧಾರಕ್ಕಾಗಿ ಕಾಯೋಣ.
-ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಯಾಕೆ ಮುಸ್ಲಿಮರ ಟೋಪಿ ಧರಿಸುತ್ತಿಲ್ಲ? ಈ ಬಗ್ಗೆ ಯಾಕೆ ಯಾರೂ ಪ್ರಶ್ನಿಸುತ್ತಿಲ್ಲ?
- ನಾಯಿ ಮರಿ ಹೇಳಿಕೆ ಬಗ್ಗೆ ವಿನಾ ಕಾರಣ ವಿವಾದ ಸೃಷ್ಟಿಸಲಾಗಿದೆ. ಅದರ ಅರ್ಥ ಅಸುನೀಗಿದವರನ್ನು ನಾನು ಇರುವೆಗೆ ಹೋಲಿಸುತ್ತೇನೆ ಎಂದಲ್ಲ. ನಮ್ಮ ದೇಶದಲ್ಲಿ ಭಾಷೆ ಮತ್ತು ಅಭಿವ್ಯಕ್ತಿ ನಡುವೆ ವ್ಯತ್ಯಾಸವಿದೆ.
- ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ವಿವಿಧ ಆರೋಪಗಳಿಗೆ ಗುರಿಯಾಗಿರುವ ಶಾಸಕರು, ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆಗಾಗಿಯೇ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇವೆ. ವರ್ಷದ ಒಳಗಾಗಿ ಅವರಿಗೆ ಶಿಕ್ಷೆಯಾಗುವಂತೆ ಮಾಡುತ್ತೇವೆ. ರಾಜಕೀಯದಲ್ಲಿ ಅಪರಾಧೀಕರಣ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.
- ಇದನ್ನು ನಾವು ಮಾಡುತ್ತೇವೆ ಎಂದು ಎಲ್ಲರೂ ಹೇಳುತ್ತಾರೆ. ನಂತರ ಅದನ್ನು ನಿರ್ಲಕ್ಷಿಸುತ್ತಾರೆ. ಆದರೆ ನಾವು ಇಂಥ ಕ್ರಮಗಳನ್ನು ಜಾರಿ ಮಾಡಲು ಸಿದ್ಧರಾಗಿದ್ದೇವೆ. ಈಗಿನ ವ್ಯವಸ್ಥೆಗಿಂತ ಹೊಸತನದ್ದು ಏನಾದರೂ ಇದ್ದರೆ ಅದನ್ನು ಜಾರಿಗೊಳಿಸಲು ಮುಂದಾಗಿದ್ದೇನೆ. ರಾಜಕಾರಣಿಗಳ ವಿರುದ್ಧದ ಪ್ರಕರಣ ದೀರ್ಘ ಕಾಲ ನ್ಯಾಯಾಲಯದಲ್ಲಿ ಇರಲು ನಾನು ಬಯಸುವುದಿಲ್ಲ.
- ವ್ಯೂಹಾತ್ಮಕ ನಿರ್ಧಾರಗಳನ್ನು ನನ್ನ ಪಕ್ಷದ ವರಿಷ್ಠರೇ ತೆಗೆದುಕೊಳ್ಳುತ್ತಾರೆ. ವಾರಾಣಸಿ ಮತ್ತು ವಡೋದರಾದಿಂದ ಸ್ಪರ್ಧಿಸುವ ಬಗ್ಗೆ ನಾನು ನಿರ್ಧಾರ ಕೈಗೊಂಡದ್ದೇ ಅಲ್ಲ.
-ನಾನು ಎಲ್ಲರಿಗೂ ಬೇಕಾದವನು. ಹೀಗಾಗಿ ಚುನಾವಣೆ ಬಳಿಕ ಯಾವ ಕ್ಷೇತ್ರಕ್ಕೆ ರಾಜಿನಾಮೆ ಕೊಡುತ್ತೇನೆ ಎಂಬ ಬಗ್ಗೆ ನಂತರ ಚರ್ಚಿಸೋಣ.
- ವಾರಾಣಸಿಯಲ್ಲಿ ನಾನು ಯಾರನ್ನೂ ಸೋಲಿಸಲು ಬಂದವನಲ್ಲ. ನಾನು ಎಲ್ಲರ ಹೃದಯ ಗೆಲ್ಲಲು ಬಂದವನು.
- ಇದೇ ಮೊದಲ ಬಾರಿಗೆ ದೇಶದಲ್ಲಿ 25 ಪಕ್ಷಗಳ ಮಧ್ಯೆ ಚುನಾವಣಾ ಪೂರ್ವ ಮೈತ್ರಿ ಏರ್ಪಟ್ಟಿದೆ.
- ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧ ಕೃತ್ಯಗಳು ನಿಜಕ್ಕೂ ರಾಷ್ಟ್ರೀಯ ಅವಮಾನ.
- ರಾಹುಲ್ ಆಗಲಿ ನಾನಾಗಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳನ್ನು ರಾಜಕೀಕರಣಗೊಳಿಸಬೇಕೆ?
- ಮಹಿಳೆಯರ ವಿರುದ್ಧ ಹತ್ತು ರಾಜ್ಯಗಳಲ್ಲಿ ಹೆಚ್ಚು ಅಪರಾಧ ಕೃತ್ಯಗಳು ನಡೆಯುತ್ತಿವೆ. ಈ ಪೈಕಿ ಏಳು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ.
- ನಾವು ಅಧಿಕಾರಕ್ಕೆ ಬಂದರೆ ಮಹಿಳೆಯರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ.
- ಒಂದು ದೇಶ ಮತ್ತೊಂದು ದೇಶದ ಜತೆ ಹೊಂದಿರುವ ಸಂಬಂಧಗಳು ವ್ಯಕ್ತಿಯೊಬ್ಬ ಏನು ಮಾಡುತ್ತಾನೆ ಎಂಬುದರ ಮೇಲೆ ನಿಂತಿಲ್ಲ.
- ನರೇಂದ್ರ ಮೋದಿಗೆ ಅಮೆರಿಕ ಏನು ಮಾಡಿತು ಎಂಬುದರ ಮೇಲೆ ನಮ್ಮ ದೇಶದ ವಿದೇಶಾಂಗ ನೀತಿ ಅವಲಂಬಿತವಾಗಿಲ್ಲ.
- ನೆರೆಯ ದೇಶಗಳೊಂದಿಗೆ ಸಂಘರ್ಷದ ವಾತಾವರಣ ಒಳ್ಳೆಯದಲ್ಲ. ಹಾಗೆಂದು ನಮಗೆ ನಮ್ಮ ದೇಶದ ಹಿತಾಸಕ್ತಿಯೇ ಮುಖ್ಯ.
- ನಾನು ಅಧಿಕಾರಕ್ಕೆ ಬಂದರೆ ಇತರ ದೇಶಗಳ ಜತೆಗಿನ ಸಂಬಂಧ ಕಠಿಣ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವಿಶ್ಲೇಷಿಸಲಾಗುತ್ತದೆ. ನಾನು ಇನ್ನೂ ಅಲ್ಲಿಯ ವರೆಗೆ ಬಂದಿಲ್ಲ. ಅದಕ್ಕಿಂತ ಮೊದಲು ಇಂಥ ವ್ಯಾಖ್ಯಾನ ಮಾಡುವುದು ಎಷ್ಟು ಸರಿ?
- ಬದಲಾವಣೆಗಳು ಆಗಬೇಕು. ಹಳೆಯ ವಿಚಾರಗಳ ಜತೆಯೇ ನಾವು ಇರಲು ಸಾಧ್ಯವೇ ಇಲ್ಲ. ಅದರಂತೆ ಉತ್ತರಪ್ರದೇಶ ಬಿಜೆಪಿ ಘಟಕದಲ್ಲಿಯೂ ನಡೆದಿದೆ.
- ಸಂವಿಧಾನದ 370ನೇ ವಿಧಿ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆಯೂ ನಾವು ಚರ್ಚಿಸಲು ಸಿದ್ಧರಾಗಿದ್ದೇವೆ. ಅಭಿವೃದ್ಧಿ ಎನ್ನುವುದು ಜಮ್ಮು-ಕಾಶ್ಮೀರಕ್ಕೂ ತಲುಪಬೇಕು.
- ಗುಜರಾತ್ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಆಗಬೇಕು ಎನ್ನುವುದನ್ನು ಪಕ್ಷದ ನಾಯಕರು ನಿರ್ಧರಿಸುತ್ತಾರೆ.
- ನನಗೆ 'ಹಳೆಯ ನಾಯಕರು' ಎಂಬ ವಿಶ್ಲೇಷಣೆಯೇ ಗೊತ್ತಾಗುತ್ತಿಲ್ಲ. ಅವರೇ ನಮ್ಮ ಪಕ್ಷದ ಪ್ರೇರಣಾಶಕ್ತಿ
- ರಾಜಕೀಯದಲ್ಲಿ ಅವರು ಬೇಡ. ಇವರು ಬೇಡ ಎಂಬ ತತ್ವ ಪಾಲಿಸಲು ಸಿದ್ಧನಿಲ್ಲ. ಹೀಗಾಗಿ ಜಯಲಲಿತಾ ನೇತೃತ್ವದ ಪಕ್ಷದ ಜತೆ ಮೈತ್ರಿ ಬೇಡ ಎನ್ನಲು ಸಾಧ್ಯವಿಲ್ಲ.
- ಮಾಜಿ ಪ್ರಧಾನಿ ವಾಜಪೇಯಿ ಅಣ್ವಸ್ತ್ರಗಳನ್ನು ಮೊದಲು ಪ್ರಯೋಗ ಮಾಡುವುದಿಲ್ಲ ಎಂದು ಹೇಳಿದ್ದರು. ಅದನ್ನು ನಾವು ಮುಂದುವರಿಸುತ್ತೇವೆ. ಇದರಲ್ಲಿ ರಾಜಿ ಇಲ್ಲ.
ರಾಬರ್ಟ್ ವಾದ್ರಾರನ್ನು ಗುರಿ ಮಾಡಲ್ಲ
ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾರನ್ನು ವಿನಾಕಾರಣ ಗುರಿ ಮಾಡುವುದಿಲ್ಲ ಎಂದಿದ್ದಾರೆ ನರೇಂದ್ರ ಮೋದಿ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವುದೇ ನಮ್ಮ ಪ್ರಥಮ ಆದ್ಯತೆಯಾಗಲಿದೆ ಎಂದಿದ್ದಾರೆ.