'ಮೋದಿ ವಿನಾಶ ಪುರುಷ'
ಮೋದಿ ಟೀಕಿಸಿದ್ದ ಉಮಾಭಾರತಿ, 3ವರ್ಷದ ಹಿಂದಿನ ವಿಡಿಯೋ ಬಿಡುಗಡೆ ಮಾಡಿದ 'ಕೈ'
ನವದೆಹಲಿ: ಬಿಜೆಪಿ ನಾಯಕಿ ಉಮಾಭಾರತಿಯವರು ಮೋದಿಯನ್ನು ಟೀಕಿಸುತ್ತಿರುವ 3 ವರ್ಷಗಳ ಹಿಂದಿನ ವಿಡಿಯೋ ಕ್ಲಿಪ್ ಅನ್ನು ಗುರುವಾರ ಕಾಂಗ್ರೆಸ್ ಬಿಡುಗಡೆ ಮಾಡಿದೆ. ಆಗ ಬಿಜೆಪಿ ತೊರೆದು ಭಾರತೀಯ ಜನಶಕ್ತಿ ಪಾರ್ಟಿ ಸ್ಥಾಪಿಸಿದ್ದ ಉಮಾಭಾರತಿ, ಮೋದಿ 'ವಿಕಾಸ ಪುರುಷ' ಅಲ್ಲ, 'ವಿನಾಶ ಪುರುಷ'. ಮೋದಿ ಹೇಳುತ್ತಿರುವ ಗುಜರಾತ್‌ನ ಜಿಡಿಪಿ ಪ್ರಗತಿ, ಬಿಪಿಎಲ್‌ನಿಂದ ಎಪಿಎಲ್‌ಗೆ ಬಡವರ ಉದ್ಧಾರ ಎಲ್ಲವೂ ನಕಲಿ. ಮಾಧ್ಯಮಗಳೇ ಮೋದಿಯನ್ನು ಬಲೂನ್‌ನಂತೆ ಉಬ್ಬಿಸಿದೆ ಎಂದಿದ್ದರು. ಈ ವಿಡಿಯೋವನ್ನು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ದೆಹಲಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಇದು ಕಾಂಗ್ರೆಸ್‌ನ ಹತಾಶೆಯನ್ನು ಪ್ರತಿಬಿಂಬಿಸುತ್ತದೆ ಎಂದಿದೆ.