ತಪ್ಪೆಸಗಿದ್ರೆ ಬಿಡಲ್ಲ, ಹಗೆಸಾಧಿಸಲ್ಲ
ಅಮೃತಸರ: ರಾಬರ್ಟ್ ವಾದ್ರಾ ಅವರು ತಪ್ಪು ಮಾಡಿರುವುದು ಸಾಬೀತಾದರೆ ಅವರನ್ನು ಬಿಡುವುದೂ ಇಲ್ಲ, ಅವರ ವಿರುದ್ಧ ಸುಮ್ಮನೇ ವೈರತ್ವ ಸಾಧಿಸುವುದೂ ಇಲ್ಲ. ಇದು ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರ ಮಾತು. ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಜಕೀಯ ಮಧ್ಯಪ್ರವೇಶವಿಲ್ಲದೇ ಕೆಲಸ ಮಾಡಲು ತನಿಖಾ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಬೇಕು. ತಪ್ಪು ಮಾಡಿದವರನ್ನು ಕ್ಷಮಿಸಲೂ ಬಾರದು, ಸುಮ್ಮನೇ ಅವರ ವಿರುದ್ಧ ಹಗೆತನ ಸಾಧಿಸಲೂ ಬಾರದು. ಸೂಕ್ತ ಸಾಕ್ಷ್ಯಗಳು ಸಿಕ್ಕರೆ ತನಿಖೆ ಮುಂದುವರಿಸಬೇಕು ಎಂದಿದ್ದಾರೆ. ಇತ್ತೀಚೆಗಷ್ಟೇ ಉಮಾಭಾರತಿ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ವಾದ್ರಾರನ್ನು ಜೈಲಿಗಟ್ಟುತ್ತೇವೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಜೇಟ್ಲಿ, ಯಾರು ಜೈಲಿಗೆ ಹೋಗಬೇಕು ಎಂಬುದನ್ನು ತನಿಖಾ ಸಂಸ್ಥೆಗಳು ನಿರ್ಧರಿಸಬೇಕೇ ವಿನಾ ಸರ್ಕಾರವಲ್ಲ ಎಂದಿದ್ದಾರೆ.