ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಗಡ್ಕರಿ, ಗಿರಿರಾಜ್ ವಿರುದ್ಧ ಕೇಸು

ನರೇಂದ್ರ ಮೋದಿ ವಿರೋಧಿಗಳಿಗೆ ಪಾಕಿಸ್ತಾನದಲ್ಲಿದೆ ಅವಕಾಶ ಎಂದು ಹೇಳಿಕೆ ನೀಡಿದ ಬಿಹಾರದ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ವಿರುದ್ಧ..

Srinivasa Murthy VN
Updated On : 21 Apr 2014, 1:08 am

ಜಾತೀಯತೆ ಬಿಹಾರದ ಡಿಎನ್‌ಎಯಲ್ಲೇ ಇದೆ ಎಂದು ಟೀಕಿಸಿದ್ದ ಗಡ್ಕರಿ
ಮೋದಿ ವಿರೋಧಿಗಳು ಪಾಕಿಸ್ತಾನಕ್ಕೆ ಹೋಗಲಿ ಎಂದಿದ್ದ ಬಿಜೆಪಿ ನಾಯಕ


ನವದೆಹಲಿ/ಮುಂಬೈ/ಭಾಗಲ್ಪುರ
ನರೇಂದ್ರ ಮೋದಿ ವಿರೋಧಿಗಳಿಗೆ ಪಾಕಿಸ್ತಾನದಲ್ಲಿದೆ ಅವಕಾಶ ಎಂದು ಹೇಳಿಕೆ ನೀಡಿದ ಬಿಹಾರದ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಜಾರ್ಖಂಡ್ ಜಿಲ್ಲೆಯ ದೇವಗಡ ಜಿಲ್ಲೆಯ ಮೋಹನಪುರ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದರ ಜತೆಗೆ ಬಿಹಾರದ ಡಿಎನ್‌ಎಯಲ್ಲಿಯೇ ಜಾತೀಯತೆ ಇದೆ ಎಂದು ಹೇಳಿಕೆ ನೀಡಿರುವ ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ವಿರುದ್ಧವೂ ಇದೇ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ದೇವಗಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಕೇಶ್ ಬನ್ಸಲ್ ಇಬ್ಬರು ಮುಖಂಡರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದನ್ನು ಖಚಿತಪಡಿಸಿದ್ದಾರೆ.  ಗಿರಿರಾಜ್ ಸಿಂಗ್ ಮತ್ತು ನಿತಿನ್ ಗಡ್ಕರಿ ಮಾತ್ರವಲ್ಲದೆ ಇತರ ಬಿಜೆಪಿ ನಾಯಕರ ವಿರುದ್ಧವೂ ಕೇಸು ದಾಖಲಿಸಲಾಗಿದೆ.
ಇದಕ್ಕೂ ಮೊದಲು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಸೇರಿದಂತೆ ಪಕ್ಷದ ನಾಯಕರು ಗಿರಿರಾಜ್ ಸಿಂಗ್ ನೀಡಿದ್ದ ಹೇಳಿಕೆಯನ್ನು ಸರಾಸಗಟಾಗಿ ತಿರಸ್ಕರಿಸಿದ್ದರಲ್ಲದೆ, ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದರ ಜತೆಗೆ ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಬಿಹಾರದ ಡಿಎನ್‌ಎಯಲ್ಲಿಯೇ ಜಾತೀಯತೆ ಇದೆ ಎಂಬ ಹೇಳಿಕೆಯೂ ವಿವಾದಕ್ಕೆ ಕಾರಣವಾಗಿದೆ.

 ಬೆಂಡೆತ್ತಿದ ರಾಜನಾಥ್
ಮೋದಿ ವಿರೋಧಿಗಳಿಗೆ ಭಾರತದಲ್ಲಿ ಇಲ್ಲ ಜಾಗ. ಅವರು ಪಾಕಿಸ್ತಾನಕ್ಕೆ ತೆರಳಲಿ ಎಂದು ಗಿರಿರಾಜ್ ಸಿಂಗ್ ಶನಿವಾರ ಜಾರ್ಖಂಡ್‌ನ ಗೊಡ್ಡಾದಲ್ಲಿ ಹೇಳಿಕೆ ನೀಡಿದ್ದರು. ಬಿಜೆಪಿ ವರಿಷ್ಠರು ಸಿಂಗ್ ಹೇಳಿಕೆಗೆ ಕೆಂಡಾಮಂಡಲವಾಗಿದ್ದಾರೆ. ಭಾನುವಾರ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್, ಗಿರಿರಾಜ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇಂಥ ಹೇಳಿಕೆ ಬಿಹಾರ ಮತ್ತು ದೇಶದ ಇತರ ಭಾಗಗಳಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಸಾಧ್ಯತೆ ಇದೆ. ಇಂಥ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕೆಂದು ರಾಜನಾಥ್ ಸಿಂಗ್ ಅವರಿಗೆ ತಾಕೀತು ಮಾಡಿದ್ದಾರೆ.

 ಪಕ್ಷಕ್ಕೆ ಸಂಬಂಧವಿಲ್ಲ

ಮುಜುಗರಕ್ಕೆ ಈಡಾಗಿರುವ ಬಿಜೆಪಿ, ಸಿಂಗ್ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಹೇಳಿಕೊಂಡಿದೆ. ಬಿಹಾರದ ಬಿಜೆಪಿ ನಾಯಕ ಸುಶೀಲ್‌ಕುಮಾರ್ ಮೋದಿ ಟ್ವೀಟ್ ಮಾಡಿದ್ದು ಇದೊಂದು ಬೇಜವಾಬ್ದಾರಿ ಹೇಳಿಕೆ. ಇಂಥ ನಿಲುವುಗಳನ್ನು ಪಕ್ಷ ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.

 ಆಯೋಗಕ್ಕೆ ದೂರು
ಮೋದಿ ಹೇಳಿಕೆ ನೀಡಿರುವ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಯು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿವೆ. ಆಯೋಗಕ್ಕೆ ಪತ್ರ ಬರೆದಿರುವ ಕಾಂಗ್ರೆಸ್ ಕಾನೂನು ವಿಭಾಗದ ಮುಖ್ಯಸ್ಥ ಕೆ.ಸಿ.ಮಿತ್ತಲ್ ಸಿಂಗ್ ನೀಡಿದ ಹೇಳಿಕೆ ಚುನಾವಣೆ ಸಂದರ್ಭದಲ್ಲಿ ಕೋಮು ಭಾವನೆ ಕೆರಳಿಸುವ ಪ್ರಯತ್ನ. ಇದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಸಾರ್ವಜನಿಕ ಅಶಾಂತಿಗೆ ಕಾರಣವಾಗುತ್ತಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.  ಜತೆಗೆ ಜಾತೀಯತೆ ಬಿಹಾರದ ಡಿಎನ್‌ಎಯಲ್ಲಿದೆ ಎಂದು ಹೇಳಿರುವ ನಿತಿನ್ ಗಡ್ಕರಿ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಅವರನ್ನು ಬಂಧಿಸಬೇಕು ಎಂದು ಮನವಿ ಮಾಡಿದ್ದಾರೆ. ಜೆಡಿಯು ನಾಯಕ ಕೆ.ಸಿ.ತ್ಯಾಗಿ ಬರೆದಿರುವ ಪತ್ರದಲ್ಲಿ ಇದೇ ರೀತಿಯ ಮನವಿ ಮಾಡಿದ್ದಾರೆ.

ಮೊಂಡುತನ ಬಿಡದ ಗಿರಿರಾಜ್
ಖಾಸಗಿ ವಾಹಿನಿಯೊಂದರ ಜತೆ ಮಾತನಾಡಿದ ಗಿರಿರಾಜ್ ಸಿಂಗ್ ತಮ್ಮ ಹೇಳಿಕೆಗೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ. ಪಾಕಿಸ್ತಾನ ಸೇರಿದಂತೆ ಹಲವು ದೇಶಗಳು ಮೊದಿ ಪ್ರಧಾನಿಯಾಗುವುದನ್ನು ತಡೆಯಲು ಮುಂದಾಗಿವೆ. ವಿಶೇಷವಾಗಿ ಪಾಕಿಸ್ತಾನ ಇನ್ನಿಲ್ಲದ ಯತ್ನ ನಡೆಸಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ವಿರೋಧಿಸುವ ಹಕ್ಕು ಇದೆ. ಅದಕ್ಕೆ ನಾನು ಚಿಂತಿಸುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
                                                 
ಮಾದರಿ ನೀತಿ ಸಂಹಿತೆ, ಸಂವಿಧಾನ ಮತ್ತು ಭಾರತೀಯ ದಂಡ ಸಂಹಿತೆಯ ಉಲ್ಲಂಘನೆ ಇದು. ಇಂಥ ಹೇಳಿಕೆ ಸಮುದಾಯಗಳ ನಡುವೆ ಬಿರುಕು ಹುಟ್ಟಿಸುತ್ತದೆ. ಕೇಂದ್ರ ಚುನಾವಣಾ ಆಯೋಗ ಗಿರಿರಾಜ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಬೇಕು.
-ಮಜೀದ್ ಮೆಮನ್, ಎನ್‌ಸಿಪಿ ಕಾರ್ಯದರ್ಶಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement