ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮೋದಿ ರ್ಯಾಲಿಗೆ ಅನುಮತಿ ಕೊಡದ ಡಿಸಿ ವಿರುದ್ಧ ವಾರಾಣಸಿಯಲ್ಲಿ ಕೇಸರಿ ಬಲಪ್ರದರ್ಶನ

ಸಾಂವಿಧಾನಿಕ ಸಂಸ್ಥೆಗಳ..

Srinivasa Murthy VN
Updated On : 9 May 2014, 1:17 am

ವಾರಾಣಸಿ/ನವದೆಹಲಿ/ಅಜಂಗಡ: 'ಚುನಾವಣಾ ಆಯೋಗದಂಥ ಸಾಂವಿಧಾನಿಕ ಸಂಸ್ಥೆಗಳಲ್ಲಿರುವವರು ದಿಟ್ಟತನದ ನಿರ್ಧಾರ ಕೈಗೊಳ್ಳಬೇಕು. ಅಂಜುಬುರುಕರು ಮುಖ್ಯ ಸ್ಥಾನಗಳನ್ನು ಅಲಂಕರಿಸಲೇಬಾರದು'
- ಹೀಗೆಂದು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದು ಬಿಜೆಪಿ ನಾಯಕರು. ವಾರಾಣಸಿಯ ಬೇನಿಯಾಬಾಗ್‌ನಲ್ಲಿ ನರೇಂದ್ರ ಮೋದಿ ರ್ಯಾಲಿಗೆ ಅನುಮತಿ ನೀಡದೇ ಇದ್ದ ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿ ಪ್ರಾಂಜಲ್ ಯಾದವ್ ಮತ್ತು ಆಯೋಗದ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದ ವೇಳೆ ಅವರು ಕಠೋರ ವಾಕ್ಯಗಳಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಉತ್ತರಪ್ರದೇಶದಲ್ಲಿನ ಬಿಜೆಪಿ ಚುನಾವಣಾ ಪ್ರಚಾರದ ಹೊಣೆ ಹೊತ್ತಿರುವ ಅಮಿತ್ ಶಾ, ಅನಂತಕುಮಾರ್ ಧರಣಿಯ ಮುಖ್ಯ ಭೂಮಿಕೆ ವಹಿಸಿದ್ದರು. ಧರಣಿ ನಿರತರನ್ನುದ್ದೇಶಿಸಿ ಅಮಿತ್ ಶಾ, ಅನಂತಕುಮಾರ್ ಮಾತನಾಡಿದರು.

 ಜನವೋ ಜನ
ವಾರಾಣಸಿಯಲ್ಲಿ ಬಿಜೆಪಿ ಆಯೋಜಿಸಿದ್ದ ರೋಡ್ ಶೋಗೆ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಬಿಜೆಪಿ ಮೂಲಗಳ ಪ್ರಕಾರ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಸೇರಿದ್ದರು.

 ಜೇಟ್ಲಿ ವಾಗ್ದಾಳಿ
ಗುರುವಾರ ಬೆಳಗ್ಗೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಆವರಣದಲ್ಲಿ ಬಿಜೆಪಿ ನಾಯಕರಾದ ಜೇಟ್ಲಿ, ಶಾ ಮತ್ತು ಅನಂತಕುಮಾರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಜೇಟ್ಲಿ ಹೇಳಿದ್ದು
- ಚುನಾವಣಾ ಆಯೋಗದಂಥ ಸಾಂವಿಧಾನಿಕ ಸಂಸ್ಥೆಗಳಲ್ಲಿರುವವರು ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಪುಕ್ಕಲರು ಪ್ರಮುಖ ಹುದ್ದೆಗಳನ್ನು ಅಲಂಕರಿಸಬಾರದು.
- ಚುನಾವಣೆಯಲ್ಲಿ ಭದ್ರತೆ ನೀಡಲು ಸಾಧ್ಯವಿಲ್ಲ ಎಂದಾದರೆ ದೇಶಾದ್ಯಂತ ಚುನಾವಣೆಯನ್ನು ಹೇಗೆ ನಿರ್ವಹಿಸುತ್ತೀರಿ?
- ಭದ್ರತೆ ನೆಪದಲ್ಲಿ ಅಭ್ಯರ್ಥಿಗೆ ಸ್ವಕ್ಷೇತ್ರದಲ್ಲಿ ರ್ಯಾಲಿ ನಡೆಸುವ ಹಕ್ಕನ್ನು ಆಯೋಗ ಕಿತ್ತುಕೊಂಡಿದೆ. ರಾಹುಲ್ ಗಾಂಧಿ, ಕೇಜ್ರಿವಾಲ್ ರೋಡ್‌ಶೋ ನಡೆಸುವುದಾದರೆ ಮೋದಿಗೇಕೆ ಒಪ್ಪಿಗೆ ಇಲ್ಲ.
- ರ್ಯಾಲಿಗೆ ಜಿಲ್ಲಾಡಳಿತ ತಡರಾತ್ರಿ ಅನುಮತಿ ನೀಡಿತ್ತು. ನಂತರ ಅದನ್ನು ಹಿಂಪಡೆಯಲಾಯಿತು.
- ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿ ಪ್ರಾಂಜಲ್ ಯಾದವ್ ಪಕ್ಷಪಾತದ ಧೋರಣೆ ಅನುಸರಿಸಿದ್ದಾರೆ. ಹೀಗಾಗಿ ಅವರನ್ನು ವಜಾ ಮಾಡಲೇಬೇಕು.
- ಚುನಾವಣಾ ಆಯೋಗ ಪಕ್ಷಪಾತ ರಹಿತವಾಗಿ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ಚಿಂತಿಸದಿರುವುದು ವಿಷಾದನೀಯ.

 ಟ್ವೀಟ್ ಮಾಡಿದ ಮೋದಿ
ವಾರಾಣಸಿಯಲ್ಲಿ 'ಗಂಗಾ ಆರತಿ' ಕಾರ್ಯಕ್ರಮ ರದ್ದು ಮಾಡಿರುವ ಬಗ್ಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಟ್ವೀಟ್ ಮಾಡಿದರು. 'ಗಂಗಾ ಮಾತೆಗೆ ಆರತಿ ಮಾಡಲು ಸಾಧ್ಯವಾಗದೇ ಇರುವುದಕ್ಕೆ ತಾಯಿಯಲ್ಲಿ ಕ್ಷಮೆ ಕೋರುತ್ತೇನೆ. ರಾಜಕೀಯಕ್ಕಿಂತ ತಾಯಿಯ ಪ್ರೀತಿಯೇ ಹೆಚ್ಚು ಎಂಬುದನ್ನು ಜನರು ತಿಳಿಯಲಿ' ಎಂದು ಬರೆದುಕೊಂಡಿದ್ದಾರೆ.

 ದಿಲ್ಲಿಯಲ್ಲಿ ಮನವಿ ಸಲ್ಲಿಕೆ
ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಆಯೋಗದ ಕಚೇರಿ ಪರಿಸರದ ಸುತ್ತ ನಿಷೇಧಾಜ್ಞೆ ಹೇರಲಾಗಿತ್ತು. ಪಕ್ಷದ ನಾಯಕ ರವಿಶಂಕರ ಪ್ರಸಾದ್, ವೆಂಕಯ್ಯ ನಾಯ್ಡು ಮತ್ತು ಇತರರು ಜಿಲ್ಲಾಡಳಿತ ಮತ್ತು ಆಯೋಗದ ನಿರ್ಧಾರವನ್ನು ಖಂಡಿಸಿದರು. ಈ ಬಗ್ಗೆ ಅವರು ಮನವಿಯನ್ನೂ ಸಲ್ಲಿಸಿದರು. ಬಳಿಕ ಮಾತನಾಡಿದ ನಾಯ್ಡು ಆಯೋಗದ ಜತೆ ಸಂಘರ್ಷ ನಡೆಸಲು ನಾವು ಇಲ್ಲಿಗೆ ಬಂದಿಲ್ಲ. ವಾರಾಣಸಿ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ಸಲ್ಲಿಸಲು ಬಂದಿದ್ದೇವೆ ಎಂದರು.

 ಡಿ.ಸಿ. ಸಮರ್ಥಿಸಿದ ಆಯೋಗ

ಬಿಜೆಪಿ  ಆಯೋಗದ ವಿರುದ್ಧ ಮಾಡಿದ ಆರೋಪಗಳನ್ನು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ತಿರಸ್ಕರಿಸಿದ್ದಾರೆ. ಅವರು ಹೇಳಿದ್ದು:
- ವಾರಾಣಸಿ ಜಿಲ್ಲಾಧಿಕಾರಿ ವೃತ್ತಿಪರವಾಗಿಯೇ ರ್ಯಾಲಿಗೆ ಅನುಮತಿ ನೀಡದೆ ಇರುವ ನಿರ್ಧಾರ ಕೈಗೊಂಡಿದ್ದಾರೆ.
- ಬಿಜೆಪಿ ಮನವಿ ಮಾಡಿದಂತೆ ಅವರನ್ನು ವಜಾ ಮಾಡಲು ಸಾಧ್ಯವಿಲ್ಲ. ಜಿಲ್ಲಾಧಿಕಾರಿ ತಮ್ಮ ಕರ್ತವ್ಯದಲ್ಲಿ ಲೋಪ ಎಸಗಿದ ಬಗ್ಗೆ ಆಯೋಗಕ್ಕೇನೂ ಕಂಡುಬಂದಿಲ್ಲ.
- ರ್ಯಾಲಿಗೆ ಅನುಮತಿ ನೀಡದೇ ಇದ್ದ ಬಗ್ಗೆ ಬಿಜೆಪಿ ಆಯೋಗದ ಬಗ್ಗೆ ಕೇವಲವಾದ ಆರೋಪಗಳನ್ನು ಮಾಡಿದೆ. ಇದರಿಂದ ವಿಷಾದವಾಗಿದೆ. ರಾಷ್ಟ್ರೀಯ ಪಕ್ಷಗಳ ನಾಯಕರು ಮಾತನಾಡುವ ವೇಳೆ ಪ್ರೌಢಿಮೆಯಿಂದ ವರ್ತಿಸಬೇಕು.
- ಭದ್ರತಾ ವ್ಯವಸ್ಥೆ ಪ್ರಮುಖವಾಗಿ ಇಲ್ಲದೇ ಇರುವಾಗ ಜಿಲ್ಲಾಡಳಿತದ ಅಭಿಪ್ರಾಯ ಕೇಳುತ್ತದೆ. ಜಿಲ್ಲಾಧಿಕಾರಿ ಮತ್ತು ಅವರ ತಂಡ ಸಮರ್ಥವಾಗಿ ಯೋಚಿಸಿ ನಿರ್ಧಾರ ಕೈಗೊಳ್ಳುತ್ತದೆ.
- ಆಯೋಗದ ವಿರುದ್ಧ ಹಲವು ನಾಯಕರು ವಾಗ್ದಾಳಿ ನಡೆಸುತಿರುವುದು ಗಮನಕ್ಕೆ ಬಂದಿದೆ. ಪಕ್ಷಪಾತ ಧೋರಣೆ ವಹಿಸದೆ ಆಯೋಗ ಕಾರ್ಯ ನಿರ್ವಹಿಸುತ್ತಿದೆ.

 ಆಯೋಗದ್ದು ಪಕ್ಷಪಾತ ಧೋರಣೆ
ಚುನಾವಣಾ ಆಯೋಗ ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಆಯೋಗ ಒತ್ತಡದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ದೂರಿದರು. ಅವರು ಹೇಳಿದ್ದು.
- ಚುನಾವಣಾ ಆಯೋಗ ಒತ್ತಡದಿಂದ ಕಾರ್ಯ ನಿರ್ವಹಿಸುತ್ತಿದೆ. ರ್ಯಾಲಿಗೆ ಅನುಮತಿ ನೀಡದೇ ಇದ್ದದ್ದೇ ಸೂಕ್ತ ಉದಾಹರಣೆ.
- ರ್ಯಾಲಿಗೆ ಅನುಮತಿ ನೀಡದೇ ಇರುವುದು ತಾಯಿ-ಮಗನ ಸರ್ಕಾರದಿಂದ ಮ್ಯಾಚ್ ಫಿಕ್ಸಿಂಗ್.
- ಭದ್ರತೆಯ ಕಾರಣಗಳು ಇಲ್ಲದಿದ್ದರೂ ಕೇವಲ ಒಬ್ಬ ವ್ಯಕ್ತಿಗೆ ಕೇಂದ್ರ ಸರ್ಕಾರಕ್ಕೆ ರಕ್ಷಣೆ ನೀಡಲು ಸಾಧ್ಯವಿಲ್ಲವೇ?
- ವಾರಾಣಸಿ ನಗರದಿಂದ 12 ಕಿಮೀ ದೂರವಿರುವ ರೋಹನಿಯಾದಲ್ಲಿ ಜಿಲ್ಲಾಡಳಿತಕ್ಕೆ ಭದ್ರತೆ ನೀಡಲು ಸಾಧ್ಯವಿದೆ ಎಂದಾದರೆ ನಗರದ ಮಧ್ಯಭಾಗದಲ್ಲಿ ರಕ್ಷಣೆ ನೀಡಲು ಏಕೆ ಸಾಧ್ಯವಿಲ್ಲ?

ಆಯೋಗದ ನಿಲುವಿಗೆ ಬಿಜೆಪಿ ಅತೃಪ್ತಿ
ಮೋದಿ ರ್ಯಾಲಿಗೆ ಅನುಮತಿ ನೀಡದೆ ಇರುವ ವಾರಾಣಸಿ ಜಿಲ್ಲಾಡಳಿತದ ನಿರ್ಧಾರವನ್ನು ಸಮರ್ಥಿಸಿದ ಕೇಂದ್ರ ಚುನಾವಣಾ ಆಯೋಗದ ನಿರ್ಧಾರಕ್ಕೆ ಬಿಜೆಪಿ ಅತೃಪ್ತಿ ವ್ಯಕ್ತಪಡಿಸಿದೆ. ಚುನಾವಣಾ ಆಯೋಗದ ಸುದ್ದಿಗೋಷ್ಠಿ ಬಳಿಕ ಮಾತನಾಡಿದ ಪಕ್ಷದ ವಕ್ತಾರ ಪ್ರಕಾಶ್ ಜಾವಡೇಕರ್, ಅನುಮತಿಗೆ ಭದ್ರತಾ ಕಾರಣಗಳನ್ನು ನೀಡಿದ್ದು ಸಮರ್ಥನೀಯಲ್ಲ. ವಾರಾಣಸಿ ಜಿಲ್ಲಾಡಳಿತದ ನಿರ್ಧಾರದಿಂದ ಬೇಸತ್ತು ಪಕ್ಷ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಅಲ್ಲಿಯೂ ಪಕ್ಷಕ್ಕೆ ನಿರಾಸೆಯಾಗಿದೆ.  ವಿ.ಎಸ್. ಸಂಪತ್ ಜಿಲ್ಲಾಧಿಕಾರಿ ವೃತ್ತಿಪರವಾಗಿ ಸಲಹೆ ಪಡೆದುಕೊಂಡಿದ್ದಾರೆ ಎಂದು ಹೇಳಿರುವುದು ಸರಿಯಾದ ಕ್ರಮವಲ್ಲ. ಮುಂದೊಂದು ದಿನ  ಇದು ಅಪಾಯಕಾರಿ ಸಂಪ್ರದಾಯಕ್ಕೆ ದಾರಿ ಮಾಡಿಕೊಡಬಹುದು ಎಂದು ಬಿಜೆಪಿಯ ಮತ್ತೊಬ್ಬ ನಾಯಕ ಅರುಣ್ ಜೇಟ್ಲಿ ಪ್ರತಿಪಾದಿಸಿದ್ದಾರೆ. ಜಿಲ್ಲಾಡಳಿತ ರಾಜಕೀಯ ಒತ್ತಡದಿಂದಲೇ ಮೋದಿ ರ್ಯಾಲಿಗೆ ಅನುಮತಿ ನೀಡಿರಲಿಲ್ಲ ಎಂದು ಬಿಜೆಪಿ ಮತ್ತೊಮ್ಮೆ ಪ್ರತಿಪಾದಿಸಿದೆ.

ಮೋದಿ ನಕಲಿ ಒಬಿಸಿ ನಾಯಕ: ಕಾಂಗ್ರೆಸ್
ನವದೆಹಲಿ:
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇತರ ಹಿಂದುಳಿದ ಜಾತಿಗೆ (ಒಬಿಸಿ) ಸೇರಿದವರಲ್ಲ. ಅವರು ಮೇಲ್ಜಾತಿಗೆ ಸೇರಿದವರು. ಅವರೊಬ್ಬ ನಕಲಿ ಒಬಿಸಿ ಎಂದು ಕಾಂಗ್ರೆಸ್ ಆರೋಪಿಸಿದೆ. ಸುದ್ದಿಗಾರರ ಜತೆ ಮಾತನಾಡಿದ ಪಕ್ಷ ನಾಯಕ ಶಕ್ತಿಸಿಂಗ್ ಗೋಹಿಲ್, ಮೋದಿ ಅವರು ಒಬಿಸಿ ಸ್ಥಾನಮಾನವನ್ನು ಗುಜರಾತ್ ಮುಖ್ಯಮಂತ್ರಿ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದರು. 2001ರ ಸೆಪ್ಟೆಂಬರ್‌ನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾದ ಬಳಿಕ ಮೋದಿಯವರ ಜಾತಿಯಾಗಿರುವ 'ಮೋಧ್ ಘಾಂಚಿಸ್‌' ಅನ್ನು ಒಬಿಸಿ ವರ್ಗಕ್ಕೆ ಸೇರಿಸಿ ಆದೇಶ ಹೊರಡಿಸಿದ್ದರು ಎಂದು ದೂರಿದ್ದಾರೆ. ಈ ನಿಟ್ಟಿನಲ್ಲಿ ಮೋದಿ ಸತ್ಯ ವಿಚಾರವನ್ನು ದೇಶಕ್ಕೆ ಬಹಿರಂಗಪಡಿಸಬೇಕು ಎಂದು ಗೋಹಿಲ್ ಒತ್ತಾಯಿಸಿದ್ದಾರೆ.  'ಮೋಧ್ ಘಾಂಚಿಸ್‌' ಎಂಬ ಸಮುದಾಯ ಸಾಮಾಜಿಕವಾಗಿಯೂ, ಆರ್ಥಿಕವಾಗಿಯೂ ಪ್ರಬಲವಾಗಿರುವ ಸಮುದಾಯ ಎಂದು ಅವರು ಪ್ರತಿಪಾದಿಸಿದ್ದಾರೆ.

ಬಿಜೆಪಿಗೆ ನಿರಾಶೆಯಾಗಿದೆ
ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಕೇಂದ್ರ ಹಣಕಾಸು ಸಚಿವ ಚಿದಂಬರಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೋದಿ ಹೇಳಿಕೆ ಚುನಾವಣಾ ಫಲಿತಾಂಶದ ಬಗ್ಗೆ ಬಿಜೆಪಿ ಹೊಂದಿರುವ ಹತಾಶೆಯ ಭಾವನೆಯನ್ನು ವ್ಯಕ್ತಪಡಿಸುತ್ತದೆ ಎಂದು ಅವರು ಹೇಳಿದ್ದಾರೆ. ಮೋದಿ ಅವರ ರ್ಯಾಲಿಗೆ ಅನುಮತಿ ನೀಡಲಾಗಿಲ್ಲ ನಿಜ. ಆದರೆ ಬಿಜೆಪಿ ಆಯೋಜಿಸಿದ್ದ ಇತರ ಕಾರ್ಯಕ್ರಮಗಳಿಗೆ ಒಪ್ಪಿಗೆ ಸಿಕ್ಕಿತ್ತು. ಕೇಂದ್ರ ಚುನಾವಣಾ ಆಯೋಗ ಶ್ಲಾಘನೀಯ ಕ್ರಮ ಕೈಗೊಂಡಿದೆ ಎಂದು ಚಿದು ತಿಳಿಸಿದ್ದಾರೆ.

ಆಡ್ವಾಣಿ ರಥಯಾತ್ರೆ ತಡೆದಂತೆ
ನರೇಂದ್ರ ಮೋದಿ ರ್ಯಾಲಿಗೆ ಅನುಮತಿ ನೀಡದೆ ಇದ್ದ ಜಿಲ್ಲಾಡಳಿತದ ಕ್ರಮವನ್ನು ಬಿಹಾರದ ಮಾಜಿ ಸಿಎಂ ಲಾಲು ಯಾದವ್ ಸಮರ್ಥಿಸಿಕೊಂಡಿದ್ದಾರೆ. 1990ರಲ್ಲಿ ತಾವು ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ಆಡ್ವಾಣಿಯವರು ರಥಯಾತ್ರೆಯನ್ನು ಕೈಗೊಂಡಿದ್ದರು. ಅದನ್ನು ತಾವು ತಡೆದು, ಅವರನ್ನು ಬಂಧಿಸಲೂ ಆದೇಶ ನೀಡಿದಂತೆ ಈ ಕ್ರಮವೂ ಆಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಆದರೆ ತಮ್ಮ ಟ್ವೀಟ್‌ನಲ್ಲಿ ಲಾಲು ಮೋದಿ ಮತ್ತು ಆಡ್ವಾಣಿ ಹೆಸರನ್ನು ಪ್ರಸ್ತಾಪಿಸದೆ 'ಗುರು' ಮತ್ತು 'ಶಿಷ್ಯ' ಎಂದಷ್ಟೇ ಪ್ರಸ್ತಾಪಿಸಿದ್ದಾರೆ.

ಮೋದಿ ವಾರಾಣಸಿಯಲ್ಲಿ ಕೈಗೊಳ್ಳಲು ಉದ್ದೇಶಿಸಿದ್ದ ಗಂಗಾ ಆರತಿ ಧಾರ್ಮಿಕ ಕಾರ್ಯಕ್ರಮವಲ್ಲ. ಅದು ಕೇವಲ ರಾಜಕೀಯ ಉದ್ದೇಶದಿಂದ ಕೂಡಿದ್ದಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿಗೆ 150ಕ್ಕಿಂತ ಹೆಚ್ಚು ಸ್ಥಾನ ಬರಲಾರದು.
- ಅಖಿಲೇಶ್ ಯಾದವ್,
ಸಮಾಜವಾದಿ ಪಕ್ಷದ ನಾಯಕ


ಚುನಾವಣೆಯ ಕೊನೆಯ ಹಂತದಲ್ಲಿ ಬಿಜೆಪಿ ಕೋಮು ದ್ವೇಷದ ಭಾವನೆಗಳನ್ನು ಕೆರಳಿಸುವ ಮೂಲಕ ಮತ ಗಳಿಸುವ ಯೋಚನೆಯಲ್ಲಿದೆ. ಆದರೆ ಇದರಿಂದ ಏನೂ ಪ್ರಯೋಜನವಾಗದು. ಬಿಜೆಪಿಗೆ ಚುನಾವಣಾ ಆಯೋಗದ ವಿರುದ್ಧ ಅಭಿಪ್ರಾಯಗಳಿದ್ದರೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲಿ.
- ಸೀತಾರಾಮ್ ಯೆಚೂರಿ, ಸಿಪಿಎಂ ನಾಯಕ

ಚುನಾವಣೆಯ ಕೊನೆಯ ಹಂತದಲ್ಲಿ ಬಿಜೆಪಿ ಮತ್ತು ಎಸ್‌ಪಿ ಉತ್ತರಪ್ರದೇಶದಲ್ಲಿ ಹೊಸ ನಾಟಕ ಮಾಡಲು ಹೊರಟಿವೆ. 18 ಸ್ಥಾನಗಳಿಗೆ ಮತದಾನ ನಡೆಯಬೇಕಿದೆ. ಈ ಹಂತದಲ್ಲಿ ಮುಲಾಯಂ ಮತ್ತು ಮೋದಿ ಸ್ಪರ್ಧೆಯಲ್ಲಿದ್ದಾರೆ. ಕೋಮು ಮತ್ತು ಜಾತಿ ಭಾವನೆಯನ್ನು ಕೆರಳಿಸಿದರೂ ಆ ಎರಡೂ ಪಕ್ಷಗಳ ಸ್ಥಿತಿ ಚಿಂತಾಜನಕವಾಗಿದೆ.
- ಮಾಯಾವತಿ, ಬಿಎಸ್‌ಪಿ ನಾಯಕಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement