ಬೆಂಬಲ ಅಸಾಧ್ಯ ಬಿಎಸ್ಪಿ, ಟಿಎಂಸಿ
ಮೋದಿಗೆ ಬೆಂಬಲ ನೀಡಲ್ಲ ಎಂದು ಬಿಎಸ್ಪಿ ಮತ್ತು ತೃಣಮೂಲ ಕಾಂಗ್ರೆಸ್ ಕಡ್ಡಿ ಮುರಿದಂತೆ..
ವಾರಾಣಸಿ/ಲಖನೌ: ಅಗತ್ಯಬಿದ್ದರೆ ಯಾವ ಪಕ್ಷದ ಜತೆಯೂ ಚುನಾವಣೋತ್ತರ ಮೈತ್ರಿಗೆ ಸಿದ್ಧ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಮೋದಿಗೆ ಬೆಂಬಲ ನೀಡಲ್ಲ ಎಂದು ಬಿಎಸ್ಪಿ ಮತ್ತು ತೃಣಮೂಲ ಕಾಂಗ್ರೆಸ್ ಕಡ್ಡಿ ಮುರಿದಂತೆ ಹೇಳಿದೆ.
ಗುರುವಾರವಷ್ಟೇ ಸುದ್ದಿವಾಹಿನಿಯೊಂದು ನಡೆಸಿದ ಸಂದರ್ಶನದಲ್ಲಿ ಮೋದಿ, 'ಅಗತ್ಯಬಿದ್ದರೆ ಎಡಿಎಂಕೆ ನಾಯಕಿ ಜಯಲಲಿತಾ, ಟಿಎಂಸಿ ನಾಯಕಿ ಮಮತಾ ಮತ್ತು ಬಿಎಸ್ಪಿ ವರಿಷ್ಠೆಯ ಬೆಂಬಲವನ್ನೂ ಪಡೆಯಲು ಸಿದ್ಧ' ಎಂದಿದ್ದರು. ಅದಕ್ಕೆ ಶುಕ್ರವಾರ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್, 'ಬಿಜೆಪಿಯ ಬಾಗಿಲು ಎಲ್ಲರಿಗೂ ತೆರೆದಿದೆ ಎಂದು ಮೋದಿ ಹೇಳಿದರೆ, ಅವರದೇ ಮಾತಿನಲ್ಲಿ ನಮ್ಮ ಪಕ್ಷದ ನಿಲುವನ್ನು ಹೀಗೆ ಸ್ಪಷ್ಟಪಡಿಸುತ್ತೇವೆ: ಮೋದಿ ಅವರಿಗೆ ನಮ್ಮ ಪಕ್ಷದ ಬಾಗಿಲು ಮುಚ್ಚಿದೆ ಮಾತ್ರವಲ್ಲ ಅದರ ಕೀಲಿಕೈ ಕೂಡ ಕಾಣೆಯಾಗಿದೆ' ಎಂದಿದೆ.
ಮೋದಿಗೆ ಸಾಧ್ಯವಿಲ್ಲ: ಎನ್ಡಿಎ ಬೆಂಬಲಿಸಲ್ಲ ಎಂದು ಟಿಎಂಸಿ, ಬಿಎಸ್ಪಿ ಹೇಳಿದ್ದೇ ತಡ ಮೋದಿ ಪ್ರಧಾನಿಯಾಗುವುದು ಅಸಾಧ್ಯ ಎಂದು ಕಾಂಗ್ರೆಸ್ ಹೇಳಿದೆ. ಬಿಜೆಪಿಗೆ ಸಾಕಷ್ಟು ಸ್ಥಾನ ಸಿಗುವುದಿಲ್ಲ, ಸಾಕಷ್ಟು ಅಂಗಪಕ್ಷಗಳ ಬೆಂಬಲವೂ ಸಿಗುವುದಿಲ್ಲ. ಹಾಗಾಗಿ ಮೋದಿ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಹೇಳಿದ್ದಾರೆ.