ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಕಾನೂನು ಪ್ರಕಾರ ಆಯೋಗ ಕೆಲಸ ಮಾಡುತ್ತಿದೆ

ಅಮೇಠಿಯಲ್ಲಿ ಮತದಾನ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ..

Srinivasa Murthy VN
Updated On : 11 May 2014, 1:40 am

ನವದೆಹಲಿ: ಅಮೇಠಿಯಲ್ಲಿ ಮತದಾನ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತಗಟ್ಟೆಗಳಿಗೆ ಭೇಟಿ ನೀಡಿದ್ದು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಅಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಕ್ಲೀನ್‌ಚಿಟ್ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ರಾಹುಲ್ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯುನ್ಮಾನ ಮತಯಂತ್ರ ಕಾರ್ಯವೆಸಗುತ್ತಿರಲಿಲ್ಲ. ಈ ಬಗ್ಗೆ ಆಯೋಗ ನಡೆಸಿದ ತನಿಖೆಯಿಂದ ಕಂಡುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಶುಕ್ರವಾರ ನಡೆದಿದ್ದ ಬಿರುಸಿನ ಸಭೆಯಲ್ಲಿ ಮತಗಟ್ಟೆಗೆ ರಾಹುಲ್ ಭೇಟಿ ನೀಡಿದ್ದ ವಿಚಾರದ ಬಗ್ಗೆ ಹೆಚ್ಚಿನ ತನಿಖೆಯ ಅಗತ್ಯವಿದೆ. ಸೋಮವಾರದ ಒಳಗಾಗಿ ಈ ಬಗ್ಗೆ ವರದಿ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಆಯೋಗ ಸೂಚನೆ ನೀಡಿತ್ತು. ಅದರ ನಡುವೆಯೇ ಕಾಂಗ್ರೆಸ್ ಉಪಾಧ್ಯಕ್ಷಗೆ ಕ್ಲೀನ್‌ಚಿಟ್ ನೀಡಿದ್ದು ಅಚ್ಚರಿ ಮೂಡಿಸಿದೆ.
ರಾಹುಲ್ ಮತಗಟ್ಟೆಗೆ ಭೇಟಿ ನೀಡಿದ ಫೋಟೋ ತೆಗೆದ ಪತ್ರಿಕೆಯ ಛಾಯಾಚಿತ್ರಗಾರನ ಜತೆಯೂ ಖುದ್ದಾಗಿ ಚರ್ಚಿಸಿದ ಸಂದರ್ಭದಲ್ಲಿ ಹಕ್ಕುಚಲಾವಣೆ ಆಗುತ್ತಿರಲಿಲ್ಲ ಎಂದು ತಿಳಿಸಿದ್ದಾಗಿ ಸಂಪತ್ ತಿಳಿಸಿದ್ದಾರೆ.
ಆಯೋಗದಲ್ಲಿ ಭಿನ್ನಾಭಿಪ್ರಾಯವಿಲ್ಲ: ನರೇಂದ್ರ ಮೋದಿ ಅವರ ರ್ಯಾಲಿಗೆ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಆಯೋಗದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇರಲಿಲ್ಲ. ಚುನಾವಣಾ ಆಯುಕ್ತ ಎಚ್.ಎಸ್.ಬ್ರಹ್ಮ ಕೂಡ ನಿರ್ಧಾರ ಕೈಗೊಳ್ಳುವ ಪ್ರಕ್ರಿಯಲ್ಲಿ ಭಾಗವಹಿಸಿದ್ದರು ಎಂದು ಸಂಪತ್ ಪ್ರತಿಪಾದಿಸಿದ್ದಾರೆ. ಚುನಾವಣಾ ಆಯೋಗ ಶನಿವಾರ ಕೂಡ ಪೂರ್ಣ ಸಭೆ ನಡೆಸಿತ್ತು. ಬಿಜೆಪಿ ನಾಯಕ ಅರುಣ್ ಜೇಟ್ಲಿ ಆಯೋಗಕ್ಕೆ ಬರೆದ ಪತ್ರಕ್ಕೆ ಚುನಾವಣಾ ಆಯುಕ್ತ ಎಚ್.ಎಚ್.ಬ್ರಹ್ಮ ಮಾರೋಲೆ ಬರೆದಿದ್ದರು ಎಂದು ಸಂಪತ್ ತಿಳಿಸಿದ್ದಾರೆ. ಪತ್ರ ಸಿಕ್ಕಿದ ತಕ್ಷಣ ಉತ್ತರ ಬರೆಯಲು ಸಾಧ್ಯವಿಲ್ಲ. ಎಲ್ಲ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಿದ ಬಳಿಕವೇ ಆಯೋಗ ಮಾರೋಲೆ ಬರೆಯುತ್ತದೆ. ಏಕಾಏಕಿ ಬರೆಯಲು ಸಾಧ್ಯವಿಲ್ಲ ಎಂದಿದ್ದಾರೆ ಸಂಪತ್.
ಪರವೂ ಇಲ್ಲ; ವಿರೋಧವೂ ಇಲ್ಲ: ವಾರಾಣಸಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್‌ಗೆ ರೋಡ್ ಶೋ ನಡೆಸಲು ಅನುಮತಿ ನೀಡಿ, ಮೋದಿಯರ ರ್ಯಾಲಿಗೆ ಅನುಮತಿ ನೀಡದೆ ಇರುವ ವಿಚಾರದಲ್ಲಿ ಯಾವುದೇ ಪಕ್ಷಪಾತ ಧೋರಣೆಯನ್ನು ಆಯೋಗ ಎಸಗಿಲ್ಲ. ವಾರಾಣಸಿ ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿ ಪ್ರಾಂಜಲ್ ಯಾದವ್ ಎಲ್ಲ ವಿಚಾರಗಳನ್ನು ಪರಿಶೀಲಿಸಿಯೇ ನಿರ್ಧಾರ ಕೈಗೊಂಡಿದ್ದರು ಎಂದು ಮತ್ತೊಮ್ಮೆ ಜಿಲ್ಲಾಡಳಿತವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಬಿಜೆಪಿ ಮಾಡಿರುವ ಆರೋಪಗಳು ಸ್ವೀಕಾರಾರ್ಹವಲ್ಲ ಎಂದು ತಿಳಿಸಿದ್ದಾರೆ.

ರಾತ್ರಿಯ ವೇಳೆ
ಮೋದಿ ರ್ಯಾಲಿಗೆ ಅನುಮೋದನೆ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ವಿಚಾರವನ್ನು ಸಂಪತ್ ಬಹಿರಂಗಪಡಿಸಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿಯ ಭದ್ರತಾ ಕಾರಣಗಳು ಇರುವುದು ಹೌದಾದರೂ, ಬೇನಿಯಾಬಾಗ್‌ನಲ್ಲಿ ಬಿಜೆಪಿ ರಾತ್ರಿ ವೇಳೆ ರ್ಯಾಲಿ ಆಯೋಜಿಸಲು ನಿರ್ಧರಿಸಿತ್ತು. ಜತೆಗೆ ಜಿಲ್ಲಾಧಿಕಾರಿ, ಗುಜರಾತ್ ಪೊಲೀಸ್ ಇಲಾಖೆ, ಗುಪ್ತಚರ ಮೂಲಗಳು ಸೇರಿದಂತೆ ಎಲ್ಲರೂ ಕೂಡ ಚರ್ಚಿಸಿ ಬೇನಿಯಾಬಾಗ್ ಸ್ಥಳ ಮೋದಿ ರ್ಯಾಲಿಗೆ ಸೂಕ್ತವಲ್ಲ ಎಂಬ ತೀರ್ಮಾನಕ್ಕೆ ಬರಲಾಯಿತು ಎಂದಿದ್ದಾರೆ ಸಂಪತ್. ರ್ಯಾಲಿಗೆ ಅನುಮತಿ ನೀಡಲಾಗಲಿಲ್ಲ ಎಂಬ ಬಗ್ಗೆ ವಿಷಾದವಿದೆಯೇ ಎಂದು ಪ್ರಶ್ನಿಸಿದಾಗ 'ಯಾವುದೇ ಅಭ್ಯರ್ಥಿಗೆ ಪ್ರಚಾರಕ್ಕೆ ಅನುಮತಿ ಸಿಕ್ಕದೇ ಇದ್ದಾಗ ಆಯೋಗಕ್ಕೆ ವಿಷಾದವಾಗುತ್ತದೆ. ಅದರಲ್ಲೂ ಅವರಂಥ ನಾಯಕರಿಗೆ ಅನುಮತಿ ಸಿಗದೇ ಇದ್ದಾಗ ಬೇಸರವಾಗುತ್ತದೆ' ಎಂದರು ಸಂಪತ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement