ಮಹಿಳೆಯರಿಗೆ ಗೌರವಕೊಡಿ
'ಮೋದಿಯವರೇ, ಮಹಿಳೆಯರಿಗೆ ಶಕ್ತಿ ನೀಡುತ್ತೇನೆ ಎನ್ನುವ ನೀವು ಮೊದಲು ಅವರಿಗೆ ಸ್ವಲ್ಪವಾದರೂ ಗೌರವ ಕೊಡುವುದನ್ನು ಕಲಿಯಿರಿ'.
ವಾರಾಣಸಿ: 'ಮೋದಿಯವರೇ, ಮಹಿಳೆಯರಿಗೆ ಶಕ್ತಿ ನೀಡುತ್ತೇನೆ ಎನ್ನುವ ನೀವು ಮೊದಲು ಅವರಿಗೆ ಸ್ವಲ್ಪವಾದರೂ ಗೌರವ ಕೊಡುವುದನ್ನು ಕಲಿಯಿರಿ'.
ವಾರಾಣಸಿಯಲ್ಲಿ ಶನಿವಾರ ಬೃಹತ್ ರೋಡ್ಶೋ ನಡೆಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದ ಪರಿಯಿದು. ಗುಜರಾತ್ ಸರ್ಕಾರ ನಡೆಸಿದೆಯೆನ್ನಲಾದ ಬೇಹುಗಾರಿಕೆಯನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ರಾಹುಲ್, ಮೋದಿ ಅವರು ಮೊದಲು ಮಹಿಳೆಯರ ಫೋನ್ ಕದ್ದಾಲಿಕೆ ಮಾಡುವುದನ್ನು ನಿಲ್ಲಿಸಲಿ ಎಂದಿದ್ದಾರೆ.
ಶಕ್ತಿ ನೀಡಬೇಕಿಲ್ಲ, ಅವರಲ್ಲೇ ಇದೆ
- ಬಿಜೆಪಿ ಪ್ರಧಾನಿ ಅಭ್ಯರ್ಥಿಗೆ ದೇಶದ ಹಾಗೂ ಜನರ ಶಕ್ತಿ ಎಷ್ಟಿದೆಯೆಂದು ಗೊತ್ತಿಲ್ಲ. ಮಹಿಳೆಯರಿಗೆ ನಾನು ಶಕ್ತಿ ನೀಡುತ್ತೇನೆ ಎಂದು ಅವರು ಹೇಳುತ್ತಾರೆ. ಆದರೆ ಮಹಿಳೆಯರಿಗೆ ಯಾರೂ ಶಕ್ತಿ ನೀಡಬೇಕಾಗಿಲ್ಲ. ಅವರಲ್ಲೇ ಶಕ್ತಿಯಿದೆ. ಮೋದಿಯವರಿಗೆ ದೇಶದ ಬಗ್ಗೆ ಗೊತ್ತಿಲ್ಲ. ಮಹಿಳೆಯರ ಬೇಹುಗಾರಿಕೆ ನಡೆಸಲು ಮಾತ್ರವೇ ಗೊತ್ತು.
- ಮೋದಿಯವರೇ, ನೀವು ಗುಜರಾತ್ನಲ್ಲಿ ಮಹಿಳೆಯರ ಹಿಂದೆ ಪೊಲೀಸರನ್ನು ಕಳುಹಿಸುತ್ತೀರಿ.ಅವರ ಫೋನ್ಗಳನ್ನು ಕದ್ದಾಲಿಸುತ್ತೀರಿ. ಮಹಿಳೆಯರ ಸಂಭಾಷಣೆಯನ್ನು ಪೊಲೀಸರು, ಗೃಹ ಸಚಿವಾಲಯ ಆಲಿಸುವಂತೆ ಮಾಡುತ್ತೀರಿ. ಮೊದಲು ಅದನ್ನು ನಿಲ್ಲಿಸಿ. ಮಹಿಳೆಯರಿಗೆ ಶಕ್ತಿ ನೀಡುವ ಅಗತ್ಯವಿಲ್ಲ, ಮೊದಲು ಅವರಿಗೆ, ದೇಶಕ್ಕೆ ಸ್ವಲ್ಪವಾದರೂ ಗೌರವ ಕೊಡಿ.
- ದೇಶವನ್ನು ಬದಲಿಸುತ್ತೇವೆ' ಎಂದು ನಾವು ಹೇಳುವುದಿಲ್ಲ. ಅದನ್ನು ನೀವೇ ಮಾಡುತ್ತೀರಿ, ನಿಮ್ಮ ಶಕ್ತಿಯೇ ಮಾಡುತ್ತದೆ. ಇದುವೇ ನಮಗೂ, ಬಿಜೆಪಿಗೂ ಇರುವ ವ್ಯತ್ಯಾಸ. ಅವರು ಜನರ ನಡುವೆ ದ್ವೇಷ ಹಬ್ಬುತ್ತಾರೆ, ಕಂದಕ ಸೃಷ್ಟಿಸುತ್ತಾರೆ, ನಾವು ಪ್ರೀತಿ ಮತ್ತು ಕರುಣೆಯನ್ನು ತುಂಬುತ್ತೇವೆ.
- ನಾವು ನಿಮ್ಮ ಕನಸನ್ನು ಸಾಕಾರಗೊಳಿಸುತ್ತೇವೆ. ಅವರು ಅದನಿಗೆ ಕನಸನ್ನು ತೋರಿಸುತ್ತಾರೆ. ನಾವು ನಿಮ್ಮನ್ನು ಸ್ವಾವಲಂಬಿಗಳನ್ನಾಗಿಸುತ್ತೇವೆ, ಮೋದಿ ಅವಲಂಬಿತರನ್ನಾಗಿಸುತ್ತಾರೆ.
- ದೇಶವು ಅಭಿವೃದ್ಧಿಯಾಗಬೇಕೆಂದರೆ ಕೈಗಾರಿಕೋದ್ಯಮಿಗಳು ಮತ್ತು ಕಾರ್ಮಿಕರ ನಡುವೆ ಪಾಲುದಾರಿಕೆ ಇರಬೇಕು. ಅಭಿವೃದ್ಧಿಯಲ್ಲಿ ರೈತರು, ಕಾರ್ಮಿಕರು ಎಲ್ಲರೂ ಒಳಗೊಂಡಿರಬೇಕು.
- ಮೋದಿ ಅವರು ಉದ್ಯಮಿಗಳಿಗೆ ಶೇ.0.1 ಬಡ್ಡಿ ದರದಲ್ಲಿ ಸಾಲ ನೀಡುತ್ತಾರೆ. ಆದರೆ ಕೃಷಿಕರಿಗೆ ಶೇ.14 ಬಡ್ಡಿದರ ವಿಧಿಸುತ್ತಾರೆ. ಇದೇನಾ ಗುಜರಾತ್ ಮಾದರಿ?
- ಉತ್ತರಪ್ರದೇಶದ ನೇಕಾರರ ಅಭಿವೃದ್ಧಿಗಾಗಿ ನಾನು ಸಾವಿರಾರು ಕೋಟಿ ನೀಡಿದ್ದೇವೆ. ಆದರೆ ರಾಜ್ಯ ಸರ್ಕಾರ ಅದನ್ನು ಬಳಸಲೇ ಇಲ್ಲ.
- ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸಲು ನಾವು ಹೋರಾಡುತ್ತಿದ್ದರೆ, ಸಮಾಜವಾದಿ ಪಕ್ಷ ಅದಕ್ಕೆ ಅಡ್ಡಿಯುಂಟುಮಾಡುತ್ತದೆ.
ರೋಡ್ಶೋಗಳ ಭರಾಟೆ
ವಾರಾಣಸಿಯಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದ ಶನಿವಾರದಂದು ದೇಗುಲ ನಗರಿಯು ರಾಜಕೀಯ ರಣಾಂಗಣವಾಗಿ ಬದಲಾಗಿದ್ದು ಕಂಡುಬಂತು. ವಿವಿಧ ಪಕ್ಷಗಳ ರ್ಯಾಲಿ, ರೋಡ್ಶೋ, ಪ್ರಚಾರಗಳು, ರಾಜಕೀಯ ಮುಖಂಡರ ವಾಗ್ದಾಳಿ, ಟೀಕೆಗಳು ಪೈಪೋಟಿಗೆ ಬಿದ್ದಂತೆ ನಡೆದವು. ದೇವರು ಮತ್ತು ಅಸುರರ ಕಾಳಗ ನಡೆದ ಭೂಮಿಯಲ್ಲಿ ಈ ಬಾರಿ ನರೇಂದ್ರ ಮೋದಿ, ಅರವಿಂದ ಕೇಜ್ರಿವಾಲ್, ಅಜಯ್ ರಾಯ್ ಮತ್ತಿತರ ಘಟಾನುಘಟಿಗಳು ಚುನಾವಣಾ ಕಣಕ್ಕಿಳಿದಿರುವುದು ವಿಶೇಷ. ಒಟ್ಟಾರೆಯಾಗಿ ಈ ಪ್ರತಿಷ್ಠಿತ ಕ್ಷೇತ್ರದಿಂದ ಎಸ್ಪಿ, ಬಿಎಸ್ಪಿ, ಟಿಎಂಸಿ ಮತ್ತಿತರ ಸಣ್ಣಪುಟ್ಟ ಪಕ್ಷಗಳ ಅಭ್ಯರ್ಥಿಗಳೂ ಸೇರಿದಂತೆ 42 ಮಂದಿ ಕಣದಲ್ಲಿದ್ದಾರೆ. ಶನಿವಾರ ಎಸ್ಪಿ ಪರ ಉತ್ತರ ಪ್ರದೇಶ ಸಿಎಂ ಅಖಿಲೇಶ್ ಪ್ರಚಾರ ನಡೆಸಿದರೆ, ಕೇಜ್ರಿವಾಲ್ ಅವರು ಮತ್ತೆ ರ್ಯಾಲಿ ನಡೆಸಿದರು.
ನನ್ನ ಬಯ್ಯಲು ಶಬ್ದಕೋಶ ಹುಡುಕ್ತಾರೆ
ಬಲಿಯಾ/ಕುಶಿನಗರ್ (ಉ.ಪ್ರ): 'ಕುಶಿನಗರದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನನ್ನ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಕಾಂಗ್ರೆಸ್ ನಾಯಕರು ಚುನಾವಣಾ ರ್ಯಾಲಿಯ ಹಿಂದಿನ ದಿನ ಶಬ್ದಕೋಶ ತೆರೆದು ನನ್ನ ವಿರುದ್ಧ ಯಾವ ಬೈಗುಳ ಪದ ಪ್ರಯೋಗಿಸುತ್ತಾರೆ ಎಂದು ಅಧ್ಯಯನ ನಡೆಸುತ್ತಾರೆ. ನನ್ನನ್ನು ಬೈದಷ್ಟು ಬಿಜೆಪಿಗೆ ಲಾಭವಾಗುತ್ತದೆ'
- ಹೀಗೆಂದು ಕಾಂಗ್ರೆಸ್ ನಾಯಕರನ್ನು ಲೇವಡಿ ಮಾಡಿದ್ದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ. ಉತ್ತರಪ್ರದೇಶದ ಕುಶಿನಗರ ಮತ್ತು ಬಲಿಯಾದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ವೇಳೆ ಅವರು ಈ ಲೇವಡಿ ಮಾಡಿದ್ದಾರೆ.
ಕೆಲ ರಾಜ್ಯಗಳಲ್ಲಿ ಕಾಂಗ್ರೆಸ್ಗೆ ಒಂದು ಸ್ಥಾನ ಪಡೆಯಲೂ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾವಣೆಯ ಮೂಲಕ ಉತ್ತಮ ಆಡಳಿತವನ್ನು ಪಡೆಯಲು ಶ್ರಮಿಸಬೇಕಾಗಿದೆ ಎಂದು ಪ್ರತಿಪಾದಿಸಿದರು.
ಅಧಿಕಾರಿಗಳದ್ದೇ ಪಾರಮ್ಯ: ಹತ್ತು ವರ್ಷಗಳ ಯುಪಿಎ ಅವಧಿಯಲ್ಲಿ ಅಧಿಕಾರಿಗಳದ್ದೇ ಪಾರಮ್ಯವಾಗಿತ್ತು. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಅಧಿಕಾರದ ಸವಿಯನ್ನು ಉಣ್ಣುತ್ತಿದ್ದರು ಎಂದು ಮೋದಿ ಆರೋಪಿಸಿದರು. ಮಾರುಕಟ್ಟೆಗೆ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಲು ಬಂದಾಗ, ಸಮಸ್ಯೆಗಳನ್ನು ಅಧಿಕಾರಿಗಳ ಬಳಿಗೆ ನಿವೇದಿಸಲು ಹೊದಾಗ ಅವರು ಯಾರು ಇರುತ್ತಿರಲಿಲ್ಲ ಎಂದು ಮೋದಿ ಆರೋಪಿಸಿದರು.
ಮೋದಿ ತಡೆಯಲು 'ಸಬ್ಕಾ'ಯತ್ನ: ನರೇಂದ್ರ ಮೋದಿಯನ್ನು ತಡೆಯಲು 'ಸಬ್ಕಾ' (ಸಮಾಜವಾದಿ ಪಕ್ಷ, ಬಿಎಸ್ಪಿ ಮತ್ತು ಕಾಂಗ್ರೆಸ್) ಯತ್ನಿಸುತ್ತಿದೆ. ನಾನು ಪ್ರಧಾನಿಯಾಗುವುದನ್ನು ಎಲ್ಲರೂ ತಡೆಯುತ್ತಿದ್ದಾರೆ. ಬಿಎಸ್ಪಿ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳಿಗೆ ಕಾಂಗ್ರೆಸ್ ಅಧ್ಯಕ್ಷರು ಒಂದೇ ತಟ್ಟೆಯಲ್ಲಿ ದೆಹಲಿಯಲ್ಲಿ ಊಟ ಬಡಿಸುತ್ತಾರೆ. ಅವರು ಅದನ್ನು ಉಣ್ಣುತ್ತಾರೆ ಎಂದು ಮೋದಿ ಟೀಕಿಸಿದರು.
ರಾಹುಲ್ಜೀ 50 ರೋಡ್ಶೋಗಳನ್ನು ಮಾಡಲಿ, ನಮಗೇನೂ ಅಭ್ಯಂತರವಿಲ್ಲ. ಆದರೆ ನಮಗೆ ಅನುಮತಿ ನಿರಾಕರಿಸಿ, ಅವರಿಗೆ ಮಾತ್ರ ಅವಕಾಶ ನೀಡಿದ್ದು ಸರಿಯಲ್ಲ.
- ಮೀನಾಕ್ಷಿ ಲೇಖಿ, ಬಿಜೆಪಿ ವಕ್ತಾರೆ
ಮೋದಿ ಅವರಿಗೆ ರ್ಯಾಲಿ ನಡೆಸಲು ನಿರಾಕರಿಸಿದ ಪ್ರದೇಶದಲ್ಲಿ ರಾಹುಲ್ ಅವರು ವಿದಾಯ ರೋಡ್ ಶೋ ನಡೆಸುತ್ತಿದ್ದಾರೆ. ಇದು ವಾರಾಣಸಿಯ ಚುನಾವಣಾ ಅಧಿಕಾರಿಯ ಮತ್ತೊಂದು ಪಕ್ಷಪಾತ ಧೋರಣೆಯನ್ನು ತೋರಿಸಿದೆ.
- ಮುಖ್ತಾರ್ ಅಬ್ಬಾಸ್ ನಖ್ವಿ, ಬಿಜೆಪಿ ನಾಯಕ