ರಾಜ್ಯ

ಕೊಡಗಿನ ವ್ಯಕ್ತಿಗೆ ಕೊರೋನಾ ವೈರಸ್ ದೃಢ, ರಾಜ್ಯದಲ್ಲಿ 15ಕ್ಕೆ ಏರಿಕೆ: ಸಚಿವ ಶ್ರೀರಾಮುಲು

Shilpa D

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ಹೆಚ್ಚಾಗುತ್ತಿದ್ದು, ಕೇರಳಕ್ಕೆ ಹೊಂದಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಇಂದು ಮತ್ತೊಂದು ಪ್ರಕರಣ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. 

ಸೌದಿ ಅರೆಬಿಯಾದಿಂದ ಬಂದಿದ್ದ ಈ ವ್ಯಕ್ತಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ. ಸೋಂಕಿತರನ್ನು ಪ್ರತ್ಯೇಕವಾಗಿ ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅನಿಸ್ ಕಣ್ಮಣಿ ಜಾಯ್ ಅವರು, 35 ವರ್ಷದ ವಿರಾಜಪೇಟೆಯ ವ್ಯಕ್ತಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ. ಇವರು ದುಬೈನಿಂದ ಆಗಮಿಸಿದ್ದು, ಇವರಿಗೆ ಕೊಡಗಿನ ವೈದ್ಯಕೀಯ ಕಾಲೇಜಿನ ಐಸೊಲೇಷನ್ ವಾರ್ಡ್ ನಲ್ಲಿ ಕಳೆದ ಎರಡು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದರು. 

ಮೈಸೂರಿನ ಪ್ರಯೋಗಾಲಯದಲ್ಲಿ ಎರಡು ಹಂತಗಳಲ್ಲಿ ಪರೀಕ್ಷೆ ಮಾಡಲಾಗಿದ್ದು, ಸೋಂಕು ತಗಲಿರುವುದು ಖಚಿತವಾಗಿದೆ. ಮಾರ್ಚ್ 15 ರಂದು ಈತ ದುಬೈನಿಂದ ಬೆಂಗಳೂರಿಗೆ ವಿಮಾನದ ಮೂಲಕ ಆಗಮಿಸಿದ್ದು, ಬಳಿಕ ಮಾರ್ಚ್ 16 ರಂದು ಅವರು ರಾಜಹಂಸ ಬಸ್ ಮೂಲಕ ಮೂರ್ನಾಡುಗೆ ತೆರಳಿದ್ದಾರೆ. ಮರು ದಿನ 17 ರಂದು ಮಡಿಕೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಎಲ್ಲೆಲ್ಲಿ ಪ್ರಯಾಣಮಾಡಿದ್ದರು ಅಂತಹ ಕಡೆಗಳಲ್ಲಿ ಸಹ ಪರಿಶೀಲನೆ ನಡೆಲಾಗಿದೆ. ಅವರ ಕುಟುಂಬ ಸದಸ್ಯರ ಮೇಲೂ ನಿಗಾ ವಹಿಸಲಾಗಿದೆ ಎಂದು ಹೇಳಿದರು. 

ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ಗಡಿ ಭಾಗದ ಚೆಕ್ ಪೋಸ್ಟ್ ಗಳಲ್ಲಿ ವ್ಯಾಪಕ ಕಣ್ಗಾವಲು ಹಾಕಲಾಗಿದ್ದು, ಯಾವುದೇ ರೀತಿಯಲ್ಲೂ ಸಮಸ್ಯೆ ಇರುವವರು ಕಣ್ಣು ತಪ್ಪಿಸಿ ಬರದಂತೆ ನೋಡಿಕೊಳ್ಳಲಾಗುತ್ತಿದೆ. ಕೊಡಗಿನ ರೆಸಾರ್ಟ್ ನಲ್ಲಿ 180ಕ್ಕೂ ಹೆಚ್ಚು ಜನ ಇದ್ದಾರೆ. ಇವರಿಗೂ ಸಹ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಸೋಂಕು ಹರಡುವುದನ್ನು ತಡೆಯಲು ಮುಂಜಾಗೃತ ಕ್ರಮವಾಗಿ ವಿದೇಶದಿಂದ ಬೆಂಗಳೂರಿಗೆ ಬರುತ್ತಿರುವ ಪ್ರಯಾಣಿಕರಿಗೆ 14 ದಿನಗಳ ಪ್ರತ್ಯೇಕಿಕರಣದ ಗುರುತಾಗಿ, ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕೈಗಳ ಮೇಲೆ ಸ್ಟ್ಯಾಂಪಿಂಗ್ ಮಾಡಲಾಗುತ್ತಿದೆ ಎಂದು ಶ್ರೀರಾಮುಲು ಮಾಹಿತಿ ನೀಡಿದ್ದಾರೆ.

SCROLL FOR NEXT