ಸಂಗ್ರಹ ಚಿತ್ರ 
ರಾಜ್ಯ

"ಲೀಟರ್ ಹಾಲಿಗೆ ರೂ.42 ವೆಚ್ಚ, ಸಿಗುತ್ತಿರುವುದು ಬರೀ ರೂ.35: ದರ ಏರಿಕೆಗೆ KMFಗೆ ಮುಕ್ತ ಅಧಿಕಾರ ನೀಡಿ; ಸರ್ಕಾರಕ್ಕೆ MLC ಎಸ್‌. ರವಿ ಆಗ್ರಹ..!

ಸಾಮಾನ್ಯ ಟೋನ್ಡ್ ನಂದಿನಿ ಹಾಲಿನ ಬೆಲೆ ಪ್ರತಿ ಲೀಟರ್‌ಗೆ ರೂ.46 ಇದ್ದರೆ, ಕರ್ನಾಟಕದಲ್ಲಿ ಖಾಸಗಿ ಕಂಪನಿಗಳ ಹಾಲಿನ ಬೆಲೆ ರೂ.56ರವರೆಗೂ ಇದೆ ಎಂದು ಗಮನಸೆಳೆದರು.

ಬೆಂಗಳೂರು: ರಾಜ್ಯದಲ್ಲಿ ಹಾಲಿನ ಉತ್ಪಾದನಾ ವೆಚ್ಚ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ, ಹಾಲಿನ ದರವನ್ನು ಪ್ರತಿ ಲೀಟರ್‌ಗೆ ಕನಿಷ್ಠ 12 ರಿಂದ 15 ರೂಪಾಯಿಗಳಷ್ಟು ಹೆಚ್ಚಳ ಮಾಡಬೇಕು ಎಂದು ಕಾಂಗ್ರೆಸ್ ಎಂ.ಎಲ್.ಸಿ ಎಸ್. ರವಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬರ ಹಾಗೂ ರೈತರ ಸಮಸ್ಯೆಗಳ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಒಂದು ಲೀಟರ್ ಹಾಲು ಉತ್ಪಾದಿಸಲು ರೂ.42.20 ವೆಚ್ಚವಾಗುತ್ತಿದ್ದು, ಸಹಕಾರಿ ಸಂಘಗಳ ಮೂಲಕ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ಕೇವಲ ರೂ.35 ದೊರೆಯುತ್ತಿದೆ. ಹೀಗಾಗಿ ರೈತರು ಪ್ರತಿ ಲೀಟರ್ ಹಾಲಿಗೆ ಕನಿಷ್ಠ ರೂ.7.20 ನಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಸಾಮಾನ್ಯ ಟೋನ್ಡ್ ನಂದಿನಿ ಹಾಲಿನ ಬೆಲೆ ಪ್ರತಿ ಲೀಟರ್‌ಗೆ ರೂ.46 ಇದ್ದರೆ, ಕರ್ನಾಟಕದಲ್ಲಿ ಖಾಸಗಿ ಕಂಪನಿಗಳ ಹಾಲಿನ ಬೆಲೆ ರೂ.56ರವರೆಗೂ ಇದೆ ಎಂದು ಗಮನಸೆಳೆದರು.

ಮೇವಿನ ಕೊರತೆಯಿಂದ ರೈತರ ಮೇಲಿನ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗಿದೆ. ಜಾನುವಾರುಗಳ ವಿಮೆ ಹಾಗೂ ಲಸಿಕೆ ವೆಚ್ಚವನ್ನೂ ರೈತರೇ ಭರಿಸಬೇಕಾಗಿದೆ. ನೈಸರ್ಗಿಕ ನೀರಿನ ಮೂಲಗಳ ಕೊರತೆಯೂ ಹೈನುಗಾರರ ಸಮಸ್ಯೆಗಳನ್ನು ಮತ್ತಷ್ಟು ಬಿಗಡಾಯಿಸಿದೆ ಎಂದು ತಿಳಿಸಿದರು.

ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಹಾಲಿನ ದರ ಹೆಚ್ಚಿಸುವ ಕುರಿತು ರಾಜ್ಯ ಸರ್ಕಾರದ ಅನುಮತಿ ಪಡೆಯದೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಬಹುದು. ಆದರೆ, ಕೆಎಂಎಫ್‌ಗೆ ಸರ್ಕಾರ ನೀಡುತ್ತಿರುವ ಬೆಂಬಲದ ಹಿನ್ನೆಲೆಯಲ್ಲಿ ಸರ್ಕಾರದೊಂದಿಗೆ ಸಮಾಲೋಚನೆ ನಡೆಸುವ ಪದ್ಧತಿ ಮುಂದುವರಿದಿದೆ. ಈ ಪದ್ಧತಿಯನ್ನು ರದ್ದುಪಡಿಸುವ ಕುರಿತು ನಿರ್ಣಯ ಕೈಗೊಂಡು, ಹಾಲಿನ ದರದ ಬಗ್ಗೆ ಕೆಎಂಎಫ್ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.

ನಿಧಿ ಹಂಚಿಕೆ ವಿಚಾರ: ವಾಕ್ಸಮರ

ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನ್ಯಾಯಯುತವಾಗಿ ದೊರೆಯಬೇಕಾದಷ್ಟು ಅನುದಾನ ನೀಡುತ್ತಿಲ್ಲ. ಈ ವಿಚಾರದಲ್ಲಿ ರಾಜ್ಯದ ಪರವಾಗಿ ಧ್ವನಿ ಎತ್ತಬೇಕಾದ ಬಿಜೆಪಿ ಸಂಸದರಿಗೆ ಅದನ್ನು ಮಾಡುವ ‘ದಮ್ ಇಲ್ಲ’ ಎಂದು ನಗರಾಭಿವೃದ್ಧಿ ಸಚಿವ ಎಚ್‌.ಸಿ. ಬಾಲಕೃಷ್ಣ ಹೇಳಿದರು.

ಬರ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್) ಮೂಲಕ ಅನುದಾನ ನೀಡುತ್ತದೆ. ಆದರೆ, ರಾಜ್ಯ ಸರ್ಕಾರವು ಪದೇಪದೆ ಕೇಂದ್ರದೊಂದಿಗೆ ಸಂಘರ್ಷದ ನಿಲುವು ತಾಳುತ್ತಿರುವುದರಿಂದ ಕರ್ನಾಟಕಕ್ಕೆ ತನ್ನ ಪಾಲಿನ ಅನುದಾನ ದೊರೆಯುತ್ತಿಲ್ಲ ಎಂದು ಬಿಜೆಪಿ ಸದಸ್ಯ ಎಸ್‌. ಅರುಣ್ ಆರೋಪಿಸಿದರು.

ಸಹಾಯಕ್ಕಾಗಿ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯಬೇಕಿತ್ತು ಎಂದೂ ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬಾಲಕೃಷ್ಣ, ಮುಖ್ಯಮಂತ್ರಿ ಈಗಾಗಲೇ ನಿಯೋಗದೊಂದಿಗೆ ದೆಹಲಿಗೆ ತೆರಳಿದ್ದರೂ ಯಾವುದೇ ಫಲಿತಾಂಶ ದೊರೆತಿಲ್ಲ ಎಂದರು.

ರಾಜ್ಯಕ್ಕೆ ನ್ಯಾಯಯುತವಾಗಿ ದೊರೆಯಬೇಕಾದ ಅನುದಾನಕ್ಕಾಗಿ ಸರ್ಕಾರ ಸುಪ್ರೀಂಕೋರ್ಟ್‌ನ್ನೂ ಸಂಪರ್ಕಿಸಿದೆ. ಆದರೆ, ಈ ವಿಚಾರದಲ್ಲಿ ಕೇಂದ್ರದೊಂದಿಗೆ ಮಾತನಾಡಲು ಬಿಜೆಪಿ ಸಂಸದರಿಗೆ ಧೈರ್ಯವಿಲ್ಲ ಎಂದು ಅವರು ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಘರ್ಷ ಅಂತ್ಯಕ್ಕೆ ಇರಾನ್ 7 ದಿನಗಳ ಯೋಜನೆ ಪ್ರಸ್ತಾಪ: ಹಾರ್ಮುಜ್ ಜಲಸಂಧಿ ಮತ್ತೆ ಮುಕ್ತ

ವಿಶ್ವಸಂಸ್ಥೆಯಲ್ಲಿ Pak ಪ್ರಧಾನಿಗೆ ಮುಖಭಂಗ: ಭಯೋತ್ಪಾದನೆ ಕುರಿತ ಪ್ರಶ್ನೆ ಎದುರಿಸಲಾಗದೆ ತಲೆತಗ್ಗಿಸಿ ನಡೆದ ಶೆಹಬಾಜ್ ಷರೀಫ್..! Video

ವಿಶ್ವಸಂಸ್ಥೆಯಲ್ಲಿ ನೆತನ್ಯಾಹುಗೆ ಬಿಗ್ ಶಾಕ್: ಭಾಷಣ ಬಹಿಷ್ಕರಿಸಿ ಹೊರನಡೆದ ಹತ್ತಾರು ದೇಶಗಳ ಪ್ರತಿನಿಧಿಗಳು,"ನೈತಿಕ ಹೇಡಿಗಳು" ಎಂದು ಕರೆದ ಇಸ್ರೇಲ್ ಪ್ರಧಾನಿ..!

ಶ್ವೇತಭವನದಲ್ಲಿ ಚೀನಾ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ: ಕ್ಸಿ ಜಿನ್‌ಪಿಂಗ್‌ ಜೊತೆಗಿನ ಹಳೆಯ ನಂಟು ಸ್ಮರಿಸಿ, ‘ನಮ್ಮದು ನಿಜಕ್ಕೂ ಅದ್ಭುತ ಸ್ನೇಹ’ ಎಂದ ಟ್ರಂಪ್‌..!

'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ