ವಿಶೇಷ

ಆತ್ಮಹತ್ಯೆಗೈದ 2,500 ರೈತರ ಕುಟುಂಬಗಳಿಗೆ ಅಚ್ಛೇ ದಿನ್: 20 ವರ್ಷಗಳಿಂದ ಅವರ ಸೇವೆಯಲ್ಲಿ ನಿರತರಾಗಿರುವ ಅಸಲಿ ಮಣ್ಣಿನ ಮಗ

Harshavardhan M

ಲೇಖನ: ವಿವೇಕ್ ಭೂಮಿ

ಭಾವಾನುವಾದ: ಹರ್ಷವರ್ಧನ್ ಸುಳ್ಯ

ಹೈದರಾಬಾದ್: ನಾವು ಸುದ್ದಿಮಾಧ್ಯಮಗಳಲ್ಲಿ, ದೃಶ್ಯವಾಹಿನಿಗಳಲ್ಲಿ ರೈತರ ಆತ್ಮಹತ್ಯೆ ಸುದ್ದಿಗಳನ್ನು ಕೇಳಿಸಿಕೊಂಡು ಒಂದು ಕ್ಷಣ ಸಂತಾಪ ಸೂಚಿಸಿ ಮತ್ತೆ ತಮ್ಮ ದೈನಂದಿನ ಬದುಕಿಗೆ ಮರಳುತ್ತೇವೆ. ಆ ರೈತನ ಕುಟುಂಬದ ಗತಿಯೇನಾಯಿತು ಎನ್ನುವುದು ಯಾರ ಗಣನೆಗೂ ಬಾರದೇ ಅದು ಒಂದು ಸಂಖ್ಯೆಯಂತೆ ಮರೆಯಾಗಿ ಹೋಗುವುದೇ ಹೆಚ್ಚು.

ಕಷ್ಟ ಕಾರ್ಪಣ್ಯ ಜೀವಂತ

ಆತ್ಮಹತ್ಯೆ ಮಾಡಿಕೊಂಡ ರೈತ ಸಾವಿಗೂ ಮುನ್ನ ಅಗಾಧ ಒತ್ತಡಕ್ಕೆ ಒಳಗಾಗಿರುತ್ತಾನೆ. ಬೆಟ್ಟದಷ್ಟು ಕಷ್ಟಗಳನ್ನು ಹೊತ್ತುಕೊಂಡಿರುತ್ತಾನೆ. ಅದರಲ್ಲಿ ಎರಡು ಮಾತಿಲ್ಲ. ಆದರೆ ಆತ ಸತ್ತ ನಂತರ ಅವೆಲ್ಲಾ ಕಾರ್ಪಣ್ಯಗಳು ಮನೆಯವರ ಹೆಗಲೇರುತ್ತದಲ್ಲ. ಅದರ ಕುರಿತು ಮಾತನಾಡುವವರು ನಮ್ಮಲ್ಲಿಲ್ಲ.

ಅಷ್ಟೂ ಸಂಕಟಗಳನ್ನು ಬದುಕಿರುವವರೆಗೂ ಹೊತ್ತು ಪ್ರತಿನಿತ್ಯ ಸತ್ತು ಬದುಕುತ್ತಿರುತ್ತಾರಲ್ಲ. ಅವರನ್ನು ಸಮಾಧಾನಿಸುವವರು ನಮ್ಮಲ್ಲಿಲ್ಲ. ಆದರೆ ರಾಜು ಅಪರೂಪದವರಲ್ಲಿ ಅಪರೂಪ. 

ವೃತ್ತಿಯಲ್ಲಿ ಶಿಕ್ಷಕ ಪ್ರವೃತ್ತಿಯಲ್ಲಿ ಮನೆಮಗ

ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ರಾಜು ಶಿಕ್ಷಕ ವೃತ್ತಿಯಲ್ಲಿದ್ದಾರೆ. ಆದರೆ ಅವರ ಸಾಧನೆ ಗಡಿಗಳನ್ನು ಅಕ್ಷರಶಃ ಮೀರಿದ್ದು. ಅವರ ಕಣ್ಣಿಗೆ ಬಿದ್ದಿದ್ದು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳು.

2001ರಿಂದ ಇದುವರೆಗೂ ಅವರು ರಾಜ್ಯಾದ್ಯಂತ 2,500 ಮನೆಗಳಿಗೆ ಭೇಟಿ ನೀಡಿದ್ದಾರೆ. ಅದಕ್ಕಾಗಿ ಅವರು ಕ್ರಮಿಸಿರುವ ದೂರ 1.5 ಲಕ್ಷ ಕಿ.ಮೀ. ನಿಸ್ವಾರ್ಥ ಉದ್ದೇಶಕ್ಕೆ ಲಕ್ಷಾಂತರ ಕಿ.ಮೀ ದೂರ ಕ್ರಮಿಸಿರುವ ರಾಜು ಅವರಂಥವರು ನಿಜಕ್ಕೂ ಕೋಟಿಗೊಬ್ಬರು.

ಜೀವನ ಪರಿಸ್ಥಿತಿಯ ಡಾಕ್ಯುಮೆಂಟರಿ

ಮನೆ ಯಜಮಾನ ಆತ್ಮಹತ್ಯೆ ಮಾಡಿಕೊಂಡ ನಂತರ ದಿಕ್ಕಿಲ್ಲದಂತಾಗಿದ್ದ ಕುಟುಂಬಗಳನ್ನು ಭೇಟಿ ಮಾಡಿದ ರಾಜು ಅವರಿಗೆ ದಿಕ್ಸೂಚಿ ತೋರುತ್ತಾರೆ. ಅವರನ್ನೂ ಕೇಳುವ ಜನರು ಇನ್ನೂ ಸಮಾಜದಲ್ಲಿದ್ದಾರೆ ಎನ್ನುವ ಧೈರ್ಯವನ್ನು ರಾಜು ತುಂಬುತ್ತಾರೆ.

ರಾಜು ಆ ರೈತನ ಕುಟುಂಬದ ಜೊತೆ ಕಾಲ ಕಳೆದು ಅವರ ಜೀವನ ಪರಿಸ್ಥಿತಿಯನ್ನು ಡಾಕ್ಯುಮೆಂಟರಿ ಮೂಲಕ ಸೆರೆ ಹಿಡಿಯುತ್ತಾರೆ. ನಂತರ ಸಮಾನ ಮನಸ್ಕರೊಡನೆ ಚರ್ಚಿಸಿ ಅವರಿಗೆ  ತಮ್ಮ ಕೈಲಾಗುವ ಸಹಾಯವನ್ನು ಒದಗಿಸುತ್ತಾರೆ. ಸರ್ಕಾರ ಮಟ್ಟದಲ್ಲಿ ಏನೇನು ಸವಲತ್ತು ಕೊಡಿಸಬಹುದೋ ಅದಕ್ಕೂ ವ್ಯವಸ್ಥೆ ರೂಪಿಸುತ್ತಾರೆ. ಹಲವು ಸಂಘ ಸಂಸ್ಥೆಗಳು, ಉದ್ಯೋಗಿಗಳು ರಾಜು ಸಂಪರ್ಕದಲ್ಲಿದ್ದಾರೆ. 

ರೈತರ ಬವಣೆ ನಿಂತಿಲ್ಲ

ರಾಜು ಅವರ ಸಾಧನೆಯನ್ನು ಗುರುತಿಸಿ 2017ರಲ್ಲಿ ಅತ್ಯುತ್ತಮ ಶಿಕ್ಷಕ 2019ರಲ್ಲಿ ರೈತು ನೆಸ್ತಂ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮಾಧ್ಯಮಗಳಲ್ಲಿ ವರದಿಯಾಗುತಿಲ್ಲದ ಮಾತ್ರಕ್ಕೆ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ ಎನ್ನುವುದು ಸುಳ್ಳು ಎಂದು ರಾಜು ಅಭಿಪ್ರಾಯ ಪಡುತ್ತಾರೆ.

ಇಂದಿಗೂ ಸಮಾಜದಲ್ಲಿ ರೈತರ ಆತ್ಮಹತ್ಯೆ ಮುಂದುವರಿದಿದೆ, ಅವರ ಸಮಸ್ಯೆಗಳು ಕೊನೆಗೊಳ್ಳುವುದಕ್ಕೆ ಬದಲಾಗಿ ಸೇರಿಕೊಳ್ಳುತ್ತಾ ಸಾಗಿದೆ ಎನ್ನುತ್ತಾರೆ ರಾಜು. 

SCROLL FOR NEXT