ಅಲ್ಲಿ 'ಹೊಂಬೆಳಕು' ಹಸಿದ ಹೊಟ್ಟೆಗಳನ್ನು ತುಂಬಿಸುತ್ತದೆ. ಬೆಳಕಿನಿಂದ ಹೊಟ್ಟೆ ತುಂಬುವುದೆಂದರೆ ಏನದು? ಅದು ಸಾಧ್ಯವೂ ಇಲ್ಲ ಬಿಡಿ. ಆದರೆ, ಈ ಹೊಂಬೆಳಕೇ ಬೇರೆ. ತಿಂಗಳ ಪ್ರತೀ ಮೊದಲ ಭಾನುವಾರದ 'ಜ್ಞಾನ ದಾಸೋಹ'.
ಕೊಡಗು ಜಿಲ್ಲೆಯ ವಿರಾಜಪೇಟೆ ಬಳಿಯ ಅರಮೇರಿ ಕಳಂಚೇರಿ ಮಠದಲ್ಲಿ ಪ್ರತೀ ತಿಂಗಳು 'ಹೊಂಬೆಳಕು' ನಡೆಯುತ್ತದೆ. ಸುತ್ತಲಿನ ಹತ್ತಾರು ಗ್ರಾಮಗಳ ನೂರಾರು ಜನರಿಗೆ ವೈವಿಧ್ಯಮಯ ವಿಚಾರಗಳ ಜ್ಞಾನ ದಾಸೋಹ. ಅಂದಹಾಗೆ, ಈ ಬೆಳಕಿಗೆ ಈಗ 10 ವರ್ಷ.
ಮಡಿಕೇರಿಯಿಂದ 26 ಕಿ.ಮೀ., ವಿರಾಜಪೇಟೆಯಿಂದ 4 ಕಿ.ಮೀ. ದೂರದ ಅರಮೇರಿ ಗ್ರಾಮದ ಈ ಕಳಂಚೇರಿ ಮಠಕ್ಕೆ ಕೊಡಗಿನಲ್ಲಿ ಪ್ರಮುಖ ಸ್ಥಾನ. ತಮ್ಮ ಜನಾಂಗಕ್ಕೆ ಮಠ, ಮಠಾಧೀಪತಿಯೇ ಇಲ್ಲದ ಕೊಡವರ ನಾಡಿನಲ್ಲಿ ಅರಮೇರಿ ಮಠ ಸಾವಿರಾರು ಭಕ್ತರ ಪಾಲಿಗೆ ಹೊಂಬೆಳಕು ಚೆಲ್ಲಿದೆ. ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನರ ಹೊಸ ದೃಷ್ಟಿಕೋನದ ಪರಿಣಾಮವೇ ಮಠದಲ್ಲಿ ಹೊಂಬೆಳಕು ಎಂಬ ವಿನೂತನ ಕಾರ್ಯಕ್ರಮ ಬೆಳಕು ಚೆಲ್ಲಲು ಕಾರಣವಾಯಿತು.
ಜ್ಞಾನ ಪಸರಿಸಿದ ಕೀರ್ತಿ
ಜನರಿಗೆ ಪ್ರಸಕ್ತ ವಿದ್ಯಮಾನಗಳು, ವೈಚಾರಿಕ ವಿಚಾರಗಳು, ಅಧ್ಯಾತ್ಮ, ವಿಜ್ಞಾನ, ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ, ಸಂಗೀತ, ಸಂಪ್ರದಾಯ, ಕೃಷಿ, ಆರೋಗ್ಯ, ಪರಿಸರ, ಜೀವನಶೈಲಿ... ಹೀಗೆ ನಾನಾ ವಿಚಾರಗಳ ಬಗ್ಗೆ ಸೂಕ್ತ ಮಾಹಿತಿ ನೀಡಬೇಕೆಂಬ ಉದ್ದೇಶದಿಂದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ 10 ವರ್ಷಗಳ ಹಿಂದೆ 'ಹೊಂಬೆಳಕು' ಶುರುಮಾಡಿದರು. ಪ್ರತಿ ತಿಂಗಳ ಮೊದಲ ಭಾನುವಾರ ತಮ್ಮ ಮಠದ ಸಭಾಂಗಣದಲ್ಲಿ ವಿಚಾರಗೋಷ್ಠಿ ಆರಂಭಿಸಿದರು. ರಾಜ್ಯದ ವಿವಿಧೆಡೆಗಳ ಖ್ಯಾತನಾಮರು ಇದರಲ್ಲಿ ಪಾಲ್ಗೊಂಡಿದ್ದಾರೆ.
ಪ್ರತಿ ತಿಂಗಳೂ ಹೊಸ ಅತಿಥಿಗಳನ್ನು ಹೊಂಬೆಳಕಿನ ಮೂಲಕ ಜನತೆಗೆ ಪರಿಚಯಿಸುವುದು ಸವಾಲಿನ ಕೆಲಸ. ಆದರೆ ಈ ನಿಟ್ಟಿನಲ್ಲಿ 10 ವರ್ಷಗಳಿಂದ ಒಂದೇ ಒಂದು ತಿಂಗಳು ಕೂಡ ಸ್ಥಗಿತಗೊಳ್ಳದಂತೆ ಅದನ್ನು ಮುನ್ನಡೆಸಿದ ಕೀರ್ತಿ ಶಾಂತಮಲ್ಲಿಕಾರ್ಜುನರದ್ದು. ಸಾಮಾನ್ಯವಾಗಿ ಮಠಗಳೆಂದರೆ ಅಧ್ಯಾತ್ಯ, ಧಾರ್ಮಿಕ ವಿಚಾರಗಳನ್ನೇ ಇಲ್ಲಿನ ಕಾರ್ಯಕ್ರಮಗಳಲ್ಲಿ ಬಿಂಬಿಸಲಾಗುತ್ತದೆ ಎಂಬ ನಂಬಿಕೆಗೆ ಹೊರತಾಗಿ ಇಲ್ಲಿ ವಿಜ್ಞಾನ, ನಿಸರ್ಗ ಸಂರಕ್ಷಣೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಹೆಚ್ಚಾಗಿ ಮೂಡಿಬಂದಿವೆ.
ವಿರಾಜಪೇಟೆಯವರೇ ಆದ ಖ್ಯಾತ ಖಗೋಳ ತಜ್ಞ ಡಾ.ಎಸ್.ವಿ. ನರಸಿಂಹನ್ 120ನೇ ಹೊಂಬೆಳಕಿನ ಕಾರ್ಯಕ್ರಮದ ಮೂಲಕ ಖಗೋಳ ವಿಸ್ಮಯಗಳ ಹೊಸ ಲೋಕವನ್ನು ತೆರೆದಿಟ್ಟಿದ್ದಾರೆ. ಇದೀಗ ಕಳಂಚೇರಿ ಮಠ ಏಪ್ರಿಲ್ 7 ಕ್ಕೆ 121ನೇ ಹೊಂಬೆಳಕು ಕಾರ್ಯಕ್ರಮಕ್ಕೆ ಸಿದ್ಧಗೊಂಡಿದ್ದು, ಪ್ರೊ. ಕೃಷ್ಣೇಗೌಡ ಹಾಸ್ಯದ ಹೊನಲು ಹರಿಸಲಿದ್ದಾರೆ.
ರಿಪೀಟ್ ಆಗಿಲ್ಲ...
ಈ 120 ಕಾರ್ಯಕ್ರಮಗಳಲ್ಲಿ ಯಾವೊಂದು ವಿಚಾರವೂ ಎರಡನೇ ಬಾರಿಗೆ ಪುನರಾರ್ವರ್ತನೆಯಾಗಿಲ್ಲ. ಪ್ರತಿ ಬಾರಿಯೂ ಹೊಸ ವಿಷಯ, ಹೊಸ ಉಪನ್ಯಾಸಕರರು ಹೊಂಬೆಳಕಿನಲ್ಲಿ ಪಾಲ್ಗೊಂಡಿದ್ದಾರೆ.
ಇಂಥ ವಿಶಿಷ್ಟ ಮಠಗಳು ಇನ್ನಷ್ಟು ಹುಟ್ಟಲಿ...
ಬಂದ ಗಣ್ಯರು...
ಕನ್ನಡಪ್ರಭ- ಸುವರ್ಣ ನ್ಯೂಸ್ನ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಕನ್ನಡಪ್ರಭ ಸುದ್ದಿಸಂಪಾದಕ ಪ್ರತಾಪ್ ಸಿಂಹ, ಸಾಹಿತಿ ಜಯಂತ್ ಕಾಯ್ಕಿಣಿ, ಭಾರತ ದರ್ಶನ ಖ್ಯಾತಿಯ ವಿದ್ಯಾನಂದ ಶೆಣೈ, ರಾಜೀವ್ ದೀಕ್ಷಿತ್, ಪ್ರೊ. ನರೇಂದ್ರ ನಾಯಕ್, ದುಂಡಿರಾಜ್, ಜರಗನಹಳ್ಳಿ ಶಿವಶಂಕರ್, ಸ್ನೇಕ್ ಶ್ಯಾಮ್... ಹೀಗೆ ವಿವಿಧ ರಂಗಗಳ ಖ್ಯಾತನಾಮರು ಹೊಂಬೆಳಕಿನಲ್ಲಿ ಪಾಲ್ಗೊಂಡಿದ್ದಾರೆ.
-ಅನಿಲ್ ಎಚ್.ಟಿ.