ಸೂರ್ಯ ಹುಟ್ಟುವಾಗ ಮುಂಜಾವಿನ ಆಕಾಶ ಕೆಂಪಾಗಿರುತ್ತದೆ. ಹೊತ್ತು ಏರುತ್ತಿದ್ದಂತೆ ಸೂರ್ಯನ ಬಣ್ಣ ಬೆಳ್ಳಗಾಗುತ್ತದೆ. ಸೂರ್ಯ ಮುಳುಗುವಾಗ ಮತ್ತೆ ಬಣ್ಣ ಕೆಂಪಾಗಿರುತ್ತದೆ. ಏಕೆ?
ಭೂಮಿ ಸೂರ್ಯನ ಸುತ್ತ ತಿರುಗುತ್ತಿರುತ್ತದೆ. ಸೂರ್ಯನ ಬೆಳಕು ಯಾವ ಭೂಭಾಗದ ಮೇಲೆ ಬಿದ್ದಿರುತ್ತದೆಯೋ ಆ ಭಾಗದಲ್ಲಿ ಹಗಲು ಇರುತ್ತದೆ. ಬೆಳ್ಳಗಿನ ಸೂರ್ಯನ ಬೆಳಕಿನಲ್ಲಿ ಏಳು ಬಣ್ಣಗಳು ಮಿಳಿತವಾಗಿರುತ್ತವೆ. ಅವುಗಳೆಂದರೆ ನೇರಳೆ, ಇಂಡಿಗೊ, ನೀಲಿ, ಹಸಿರು, ಹಳದಿ, ಕಿತ್ತಳೆ, ಮತ್ತು ಕೆಂಪು. ಬೆಳಗ್ಗೆ ಮತ್ತು ಸಂಜೆ ಸೂರ್ಯ ದಿಗಂತದಲ್ಲಿರುವುದರಿಂದ ಸೂರ್ಯನ ಕಿರಣಗಳು ವಾತಾವರಣದಲ್ಲಿ ಬಹುದೂರ ಹಾಯ್ದು ಬರಬೇಕಾಗುತ್ತದೆ. ಆದ್ದರಿಂದ ಬೆಳಗ್ಗೆ ಮತ್ತು ಸಂಜೆ ಸೂರ್ಯನ ಕಿರಣಗಳು ವಾತಾವರಣದಲ್ಲಿ ಹಾಯ್ದು ಬರಬೇಕಾದ ದೂರ ಮಧ್ಯಾಹ್ನದ ದೂರಕ್ಕಿಂತ ಐವತ್ತು ಪಟ್ಟು ಜಾಸ್ತಿಯಾಗಿರುತ್ತದೆ. ವಾತಾವರಣದಲ್ಲಿರುವ ಮಂಜಿನ ಮತ್ತು ನೀರಾವಿಯ ಅಂಶ ಹಳದಿ, ಕಿತ್ತಳೆ ಮತ್ತು ಕೆಂಪು ಇವನ್ನು ಬಿಟ್ಟು ಉಳಿದೆಲ್ಲ ಬಣ್ಣಗಳನ್ನು ಹರಡಿಬಿಡುತ್ತದೆ. ಈ ಕಾರಣದಿಂದ ಸೂರ್ಯನ ಬೆಳಕಿನಲ್ಲಿರುವ ನೇರಳೆ, ನೀಲಿ ಮತ್ತು ಹಸಿರು ಬಣ್ಣಗಳು ನಮ್ಮ ಕಣ್ಣು ಸೇರುವುದು ಅತಿ ಕಡಿಮೆ. ನಮ್ಮ ಕಣ್ಣಿಗೆ ಬೀಳುವ ಕೆಂಪು, ಕಿತ್ತಳೆ ಮತ್ತು ಹಳದಿ ಬಣ್ಣಗಳಲ್ಲಿ ಕೆಂಪು ಬಣ್ಣ ಅತಿ ಹೆಚ್ಚಾಗಿರುತ್ತದೆ. ಆದ್ದರಿಂದ ಈ ಮೂರು ಬಣ್ಣಗಳ ಮಿಶ್ರಣ ಕೆಂಪಾಗಿ ಕಾಣುತ್ತದೆ. ಹೀಗಾಗಿ ಸೂರ್ಯ ಹುಟ್ಟುವಾಗ ಮತ್ತು ಮುಳುಗುವಾಗ ಕೆಂಪಾಗಿ ಕಾಣುವುದಕ್ಕೆ ಇದೇ ಕಾರಣವಾಗಿದೆ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ