ಪ್ರವಾಹದ ವಿರುದ್ಧ ಈಜುವುದು ಎಂದರೆ ಅದು ಸುಲಭದ ಮಾತಲ್ಲ. ಅದಕ್ಕೊಂದು ಗಟ್ಟಿ ಗುಂಡಿಗೆ ಅಗತ್ಯ. ಶಕ್ತಿ ಮೀರಿದ ಪ್ರಯತ್ನ ಅನಿವಾರ್ಯ. ಎಲ್ಲಕ್ಕಿಂತ ಹೆಚ್ಚಾಗಿ ಸೆಳೆತ ಅಂತ ಒಂದಿರುತ್ತದಲ್ಲಾ, ಅದನ್ನು ಹಿಮ್ಮೆಟ್ಟಿಸಿ ಮುಂದಕ್ಕೆ ಹೋಗುವುದು ಸಾಹಸವೇ ಸರಿ. ಅಷ್ಟಕ್ಕೂ ವಿರುದ್ಧ ದಿಕ್ಕಿನಲ್ಲೇ ಸಾಗಿ ಸಾಧಿಸುವುದಾದರೂ ಏನಿದೆ? ಅದೇ ಹಠವೇಕೆ?
ಹೌದು, ಭಿನ್ನವಾಗಿಯೇ ಬದುಕಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆಂದು ಅಂಥ ಭರದಲ್ಲಿ ಎಲ್ಲವೂ ಉಲ್ಟಾ ಆಗಲೇಬೇಕೆಂಬುದೇನೂ ಇಲ್ಲ. ಪ್ರವಾಹದ ಜತೆಜತೆಗೇ ಸಾಗಿ ಅಲ್ಲಿಯೂ ಒಂದಷ್ಟು ಮುನ್ನಡೆಯನ್ನು ಸಾಧಿಸುವ ಅವಕಾಶಗಳು ಹೇರಳವಾಗಿವೆ. ಇದರಿಂದ ಒಂದು ಲಾಭವೆಂದರೆ ನಮ್ಮ ಹಾದಿಯ ಓಘಕ್ಕೆ ಪ್ರವಾಹದ ವೇಗವನ್ನೂ ಜತೆಗೂಡಿಸಿಕೊಂಡು ಹೋಗಬಹುದು. ಅದರೊಂದಿಗೆ ನಮ್ಮ ಇಚ್ಛಾಶಕ್ತಿಯನ್ನೂ ಸೇರಿಸಿಕೊಂಡು ಮುನ್ನುಗ್ಗಿದಲ್ಲಿ ಖಂಡಿತಾ ನಾವು ಇತರೆಲ್ಲರಿಗಿಂತ ಕನಿಷ್ಠ ನಾಲ್ಕಾರು ಹೆಜ್ಜೆಯಾದರೂ ಮುಂದೆ ಇರುತ್ತೇವೆ. ಹಾಗೆಂದು ಎಲ್ಲರೂ ಸಾಗುತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ ನಾವೂ ಗುಂಪಿನಲ್ಲಿ ಗೋವಿಂದ ಆಗಿ ಬಿಡಬೇಕು ಎಂದೇನೂ ಅರ್ಥವಲ್ಲ. ಅಥವಾ ಪರಿವರ್ತನೆಯನ್ನೇ ಮರೆತು ತಲೆ ತಗ್ಗಿಸಿ ಎಲ್ಲವನ್ನೂ ಒಪ್ಪಿಕೊಳ್ಳಬೇಕೆಂದೇನೂ ಇಲ್ಲ. ನಮಗೆ ಸರಿ ಕಾಣದ್ದನ್ನು ವಿರೋಧಿಸಿ, ಅದರ ವಿರುದ್ಧ ಸೆಟೆದು ನಿಲ್ಲುವ ಎಲ್ಲ ಹಕ್ಕೂ ನಮಗಿದ್ದದೇ ಇರುತ್ತದೆ. ಆದರೆ ಅಂಥ ಹೆಜ್ಜೆಯಿಡುವ ಮುನ್ನ ಒಮ್ಮೆ ಫಲಾಫಲಗಳ ಬಗೆಗೆ ಪುಟ್ಟದ್ದೊಂದು ಆತ್ಮವಿಮರ್ಶೆಗಿಳಿಯುವುದು ಅಗತ್ಯವೆನಿಸುತ್ತದೆ. ಇಲ್ಲೂ ನಾವಿಟ್ಟ ಎಲ್ಲ ಹೆಜ್ಜೆಗಳಿಗೂ ಅಂತಿಮ ವಿಜಯ ನಮ್ಮದೇ ಆಗಿರುತ್ತದೆ ಎಂದೇನೂ ಅಲ್ಲ. ಆದರೆ ತಪ್ಪೆಂದು ಕಂಡ ಹಾದಿಯಲ್ಲಿ ನಾವು ಸಮ್ಮತಿಯ ಮುದ್ರೆಯೊತ್ತದೆ ನಮ್ಮತನವನ್ನು ನಾವುಳಿಸಿಕೊಂಡಿದ್ದೇವೆ ಎಂಬ ಸಮಾಧಾನವಾದರೂ ನಮ್ಮದಾಗಿರುತ್ತದೆ. ಆದರೆ ಅಸಲಿ ಗುಟ್ಟೇನು ಗೊತ್ತೇ? ನಿಜವಾದ ಬುದ್ಧಿವಂತ ಯಾವತ್ತೂ ಇಂಥ ಮಾರ್ಗವನ್ನು ಆಯ್ದುಕೊಳ್ಳುವುದೇ ಇಲ್ಲ. ಎಲ್ಲರೊಂದಿಗೆ ಪ್ರವಾಹದ ಜತೆಗೇ ಸಾಗುತ್ತ ಇಡೀ ಪ್ರವಾಹವನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ತನಗೆ ಬೇಕಾದ ದಿಕ್ಕಿನತ್ತ ಹೊರಳಿಸಿಕೊಳ್ಳುತ್ತಾನೆ. ಯಾರಿಗೂ ಆತ ವಿರುದ್ಧ ದಿಕ್ಕಿಗೆ ಈಜುತ್ತಿದ್ದಾನೆ ಎಂಬುದು ಅರಿವಿಗೆ ಬಾರದಂತೆ ಪರಿವರ್ತನೆಯನ್ನು ಸಾಧಿಸಿಬಿಟ್ಟಿರುತ್ತಾನೆ. ಅದೇ ನಿಜವಾದ ಸಾಮರ್ಥ್ಯ.
- ಸಹನೆ