ಬೈಟುಕಾಫಿ

ಬೇಸಿಗೆಯ ಸಂಜೀವಿನಿ ನಿಂಬೆಯ ಪಾನಕ...

ನಿಂಬೆಹಣ್ಣಿಲ್ಲದೆ ಬೇಸಿಗೆ ಕಳೆಯುವುದು ಸಾಧ್ಯವೇ ಇಲ್ಲ. ಬಿಸಿಲಿನ ಸೆಕೆಗೆ ನಿಂಬೆಹಣ್ಣಿನ ಪಾನಕ (ಶರಬತ್ತು) ಹಿತವಾಗಿರುತ್ತದೆ. ಅಷ್ಟೇ ಅಲ್ಲ ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ನಗರವಾಸಿಗಳಿಗೆ ನಿಂಬೆಹಣ್ಣಿಲ್ಲದಿದ್ದರೆ ಬೆಳಗಿನ ತಿಂಡಿ ಆಗುವುದೇ ಇಲ್ಲ. ಉಪ್ಪಿಟ್ಟು, ಚಿತ್ರಾನ್ನಕ್ಕೆ ನಿಂಬೆಹಣ್ಣು ಬೇಕೇಬೇಕು. ನಿಂಬೆಹಣ್ಣಿನ ಚಿತ್ರಾನ್ನದ ರುಚಿಯನ್ನಂತೂ ಸವಿದೇ ನೋಡಬೇಕು. ಇನ್ನು ನಿಂಬೆಹಣ್ಣಿನ ಉಪ್ಪಿನಕಾಯಿ ರುಚಿಗೆ ಬೇರೆ ಸಾಟಿಯಿಲ್ಲ. ಸಿಹಿ ತಿಂಡಿಗಳಲ್ಲೂ ನಿಂಬೆಹಣ್ಣನ್ನು ಬಳಸುತ್ತಾರೆ! ಜಿಲೇಬಿಯ ಸಕ್ಕರೆ ಪಾಕಕ್ಕೆ, ಅನ್ನದಿಂದ ಮಾಡುವ ಕೇಸರಿಬಾತ್‌ಗೆ ನಿಂಬೆಹಣ್ಣು ಉಪಯೋಗಿಸುತ್ತಾರೆ.
ನಿಂಬೆಹಣ್ಣಿನ ಎಲ್ಲ ಭಾಗಗಳೂ ಉಪಯೋಗಕ್ಕೆ ಬರುವಂಥದ್ದು. ಸಿಪ್ಪೆ, ಬೀಜ, ರಸ, ನಿಂಬೆ ಗಿಡದ ಎಲೆ ಎಲ್ಲವೂ. ರಸ ಹಿಂಡಿ ತೆಗೆದ ನಿಂಬೆಸಿಪ್ಪೆಯನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡು ಮುಖ ತೊಳೆಯಲು ಉಪಯೋಗಿಸುತ್ತಾರೆ. ನಿಂಬೆಯಲ್ಲಿ ಬೆವರುದುರ್ಗಂಧ ನಿವಾರಿಸುವ ಗುಣವಿದೆ. ಸಿಪ್ಪೆಯನ್ನು ಕುಟ್ಟಿ ಪುಡಿಮಾಡಿ ಉಪ್ಪನ್ನು ಸೇರಿಸಿ ಹಲ್ಲುಜ್ಜುವುದರಿಂದ ಹಲ್ಲು ಫಳಫಳ ಹೊಳೆಯುತ್ತದೆ. ನಿಂಬೆ ಬೀಜವನ್ನು ನೀರಿನಲ್ಲಿ ತೇಯ್ದು ಚಿಕ್ಕಮಕ್ಕಳಲ್ಲಿ ಉಂಟಾಗುವ ಜಂತು ಬಾಧೆಗೆ ಚಿಕಿತ್ಸೆ ನೀಡುತ್ತಾರೆ.
ಚಿಕ್ಕಮಕ್ಕಳಿರುವ ಮನೆಗಳಲ್ಲಿ ನಿಂಬೆಹಣ್ಣು-ಸಕ್ಕರೆ ಕುದಿಸಿ ಪಾಕ ಮಾಡಿಟ್ಟಿರುತ್ತಾರೆ. ಇದು ಚಿಕ್ಕಮಕ್ಕಳ ಕೆಮ್ಮಿಗೆ ರಾಮಬಾಣ. ಜ್ವರ ಬಂದು ಬಾಯಿ ಅರುಚಿ ಉಂಟಾದರೆ ನಿಂಬೆಹಣ್ಣಿನ ಉಪ್ಪಿನಕಾಯಿ ಅಥವಾ ನಿಂಬೆಹಣ್ಣಿನ ಸಾರು ಉತ್ತಮ ಪರಿಹಾರ. ನಿಂಬೆಯಲ್ಲಿರುವಷ್ಟು ಔಷಧೀಯ ಗುಣ ಬೇರಾವ ಹಣ್ಣಿನಲ್ಲೂ ಇಲ್ಲ ಎಂದೇ ಹೇಳಬಹುದು. ಅಸಿಡಿಟಿ, ಗ್ಯಾಸ್ಟ್ರಿಕ್ ನಿವಾರಣೆಗೆ, ತ್ವಚೆಯ ಸೌಂದರ್ಯಕ್ಕೆ, ತಲೆಯ ಹೊಟ್ಟು, ಕೂದಲು ಆರೈಕೆಗೆ, ಕೆಮ್ಮು ಕಫದ ಚಿಕಿತ್ಸೆಗೆ, ಅಪಸ್ಮಾರದ ಚಿಕಿತ್ಸೆಯಲ್ಲಿ, ವಾಂತಿ ನಿವಾರಣೆಗೆ, ಕೈ, ಕಾಲಿನ ಆರೈಕೆಗೆ.... ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಆಯುರ್ವೇದ ಚಿಕಿತ್ಸೆಯಲ್ಲಿ ಬೇರು-ನಾರು ತೇಯ್ದು ಕೊಡುವುದಕ್ಕೆ ನಿಂಬೆರಸ ಬೇಕೇಬೇಕು. ಒಟ್ಟಿನಲ್ಲಿ ಎಲ್ಲ ಬಗೆಯ ಆಯುರ್ವೇದ, ಹೋಮಿಯೋಪತಿ ಚಿಕಿತ್ಸೆಯಲ್ಲೂ ನಿಂಬೆಹಣ್ಣು ಬಳಕೆ ಇದ್ದೇ ಇರುತ್ತದೆ.
ನಿಂಬೆಹಣ್ಣಿನ ಬಳಕೆ ಇಷ್ಟಕ್ಕೇ ನಿಲ್ಲುವುದಿಲ್ಲ. ಹೆಚ್ಚಿನ ಎಲ್ಲ ಪೂಜೆಗಳಲ್ಲೂ ನಿಂಬೆಹಣ್ಣು ಬಳಸುತ್ತಾರೆ. ಹೊಸ ವಾಹನದ ಪೂಜೆಗೆ ನಿಂಬೆಹಣ್ಣು ಬೇಕೇಬೇಕು. ಕೆಲವರಿಗೆ ಮನೆಯಿಂದ ಆಚೆ ಹೊರಡುವಾಗ ನಿಂಬೆಹಣ್ಣು ಕೈಯಲ್ಲಿ ಇರಲೇಬೇಕು. ದೂರ ಪ್ರಯಾಣದ ವೇಳೆ ಹೆಚ್ಚಿನವರು ನಿಂಬೆಹಣ್ಣು ಜತೆಯಲ್ಲಿಟ್ಟುಕೊಂಡಿರುತ್ತಾರೆ.
ಏಷ್ಯಾ ಮೂಲದ ಈ ನಿಂಬೆ ಸರ್ವಋತು ಬೆಳೆಯಾದರೂ, ಜೂನ್‌ನಿಂದ ಅಕ್ಟೋಬರ್‌ವರೆಗೆ ಹೆಚ್ಚು ಫಸಲು ನೀಡುತ್ತದೆ. ಉಳಿದ ಋತುವಿನಲ್ಲಿ ಮಧ್ಯಮ ಪ್ರಮಾಣದಲ್ಲಿ, ಬೇಸಿಗೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಫಸಲು ನೀಡುವ ಗಿಡ. ಇದನ್ನು ಮನೆಯ ಸುತ್ತಮುತ್ತ ಇರುವ ಚಿಕ್ಕದಾದ ಜಾಗದಲ್ಲೇ ಬೆಳೆಸಿಕೊಳ್ಳಬಹುದು. ನಗರಗಳಲ್ಲಿ ವಾಸಿಸುವವರು ಸ್ಥಳಾಭಾವವಿದ್ದರೆ ಪಾಟ್‌ಗಳಲ್ಲೂ ಬೆಳೆಸಿಕೊಳ್ಳಬಹುದು.


-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ