ಕಣ್ಣಿದ್ದವರೂ ಮಾಡಲು ಅಸಾಧ್ಯವಾದುದನ್ನು ತಮ್ಮ ದೃಷ್ಟಿ ವೈಫಲ್ಯತೆಯನ್ನು ಮೀರಿ ಅಂಧರು ಸಾಧಿಸಬಲ್ಲರು ಎನ್ನುವುದಕ್ಕೆ ಗದಗ ಜಿಲ್ಲೆಯ ಹೊಳೆಆಲೂರಿನಲ್ಲಿನ ಜ್ಞಾನಸಿಂಧು ಅಂಧ ಶಾಲೆಯ ಮಕ್ಕಳು ಉತ್ತಮ ಉದಾಹರಣೆ.
ಈ ಜಗತ್ತಿನ ಆಗುಹೋಗುಗಳನ್ನು ನೋಡಲಾಗದ ಇಲ್ಲಿನ ಮಕ್ಕಳು, ಕಣ್ಣಿದ್ದವರೂ ನಾಚುವಂತೆ ಯೋಗಾಸನ ಮಾಡುತ್ತಾರೆ. ಪ್ರಚಲಿತ, ಐತಿಹಾಸಿಕ ವಿದ್ಯಮಾನಗಳ ಬಗ್ಗೆ ಅರಳು ಹುರಿದಂತೆ ಉತ್ತರಿಸುತ್ತಾರೆ.
ಮಣಿಕಂಠನ ಸಾಧನೆ
ಬದಾಮಿ ತಾಲೂಕು ಹನುಮಸಾಗರದ ಪುಟ್ಟ ಬಾಲಕ ಮಣಿಕಂಠ 3 ವರ್ಷದವನಿದ್ದಾಗಲೇ ಈ ಶಾಲೆಗೆ ಸೇರಿದ. ಆಗ ನಡೆದಾಡಲೂ ಸಾಧ್ಯವಾಗುತ್ತಿರಲಿಲ್ಲ. ಈಗ ಇಲ್ಲಿನ ಶಿಕ್ಷಕರ ಪರಿಶ್ರಮದಿಂದ ಹಲವಾರು ವಿಶೇಷ ಯೋಗಾಸನ ಹಾಕುತ್ತಾನೆ. ತನ್ನ ಯೋಗಾಸನ ಕೌಶಲದ ಮೂಲಕವೇ ರಾಜ್ಯ ಮಾತ್ರವಲ್ಲ, ಪಕ್ಕದ ಮಹಾರಾಷ್ಟ್ರದಲ್ಲಿಯೂ ಜನಮನ್ನಣೆ ಗಳಿಸಿದ್ದಾನೆ. ಬೆಂಗಳೂರಿನಲ್ಲಿ ಈಚೆಗೆ ನಡೆದ ಇಂಟರ್‌ನ್ಯಾಷನಲ್ ಯೋಗಾಸನ ಸ್ಪರ್ಧೆಯಲ್ಲಿ ದೃಷ್ಟಿಯುಳ್ಳವರ ಜತೆ ಪೈಪೋಟಿ ನೀಡಿ ಪ್ರಥಮ ಸ್ಥಾನ ಗಳಿಸಿದ್ದು ದೊಡ್ಡ ಸಾಧನೆ. ಈತನ ಇನ್ನೊಂದು ಕೌಶಲ್ಯ, ನೆನಪಿನ ಶಕ್ತಿ. ರಾಜ್ಯದ ಪ್ರಥಮ ಮುಖ್ಯಮಂತ್ರಿಯಿಂದ ಜಗದೀಶ ಶೆಟ್ಟರ್‌ವರೆಗೆ ಅವರ ಆಡಳಿತಾವಧಿಗಳನ್ನು ನೆನಪಿಸಿಕೊಳ್ಳಬಲ್ಲ. ಕನ್ನಡ ಕವಿಗಳ ಕಾವ್ಯ, ಕಾವ್ಯನಾಮ, ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳ, ಅಧ್ಯಕ್ಷತೆ, ನಡೆದ ವರ್ಷ ಸಮೇತ ಈತನಿಗೆ ಕಂಠಸ್ಥ.
ಮನಸೆಳೆವ ಯೋಗ
ಇಲ್ಲಿನ ಮಕ್ಕಳು ಸಾಧನೆಯಲ್ಲೇ ತಮ್ಮ ಅಂಧತ್ವವನ್ನು ಮರೆತಿದ್ದಾರೆ. ಶಕುಣಾಸನ, ಪಂಚಶಲಭಾಸನ, ವೃಶ್ಚಿಕಾಸನ, ಹಸ್ತಲಾಕಿನನಾಸನ, ತ್ರೈಮುಖಾಸನ, ಕಾಕಶಕುನಾಸನ, ಏಕಪಾದವಾಮ ದೇವಾಸನಗಳನ್ನು ಮಾಡುವುದನ್ನು ನೋಡಿದರೆ, ಇವರಲ್ಲಿ ಆಗಾಧ ಶಕ್ತಿ ಅಡಗಿದೆ ಎನ್ನಿಸದಿರದು. ಇವರೆಲ್ಲ ಒಬ್ಬರಿಗಿಂತ ಒಬ್ಬರು ಜಾಣರು. ಓದಿನೊಂದಿಗೆ ಯೋಗ, ನೃತ್ಯದ ಮೂಲಕ ಮೈಸೂರು, ಧಾರವಾಡ, ಮುಧೋಳದ ರನ್ನ, ನಾಡಹಬ್ಬ, ಸಾಂಸ್ಕೃತಿಕ ಉತ್ಸವಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.
ಇಲ್ಲಿರುವ 30 ವಿದ್ಯಾರ್ಥಿಗಳಿಗೆ ಸಂಸ್ಥೆಯು ಹಲವಾರು ವಿಷಯಗಳ ಬಗ್ಗೆ ಸಮಗ್ರ ತರಬೇತಿ ನೀಡಿದೆ. ಬ್ರೈಲ್, ಇಂಗ್ಲಿಷ್, ಕನ್ನಡ, ವಿಜ್ಞಾನ, ಇತಿಹಾಸ, ಸಂಗೀತ, ನೃತ್ಯ, ಗಣಿತ, ಸಾಮಾನ್ಯ ಜ್ಞಾನದಲ್ಲಿ ಪರಿಣತರು.
ಪಾಟೀಲ ಪುಟ್ಟಪ್ಪ ಮೆಚ್ಚುಗೆ
ಈ ಮಕ್ಕಳ ಸಾಧನೆ ಗಮನಿಸಿದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಈಚೆಗೆ ಮುಂಬೈನಲ್ಲಿ ನಡೆದ ಮುಂಬೈ ಕನ್ನಡಿಗರ ಸಮ್ಮೇಳನದಲ್ಲಿ ವಿಶೇಷ ಅತಿಥಿಗಳನ್ನಾಗಿ ಆಹ್ವಾನಿಸಿ, ಈ ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಿಕೊಟ್ಟಿದ್ದರು.
- ಶಿವಕುಮಾರ ಕುಷ್ಟಗಿ