ಅದು ಕಾಕತಾಳೀಯವಾ? ಮನಸ್ಸಾಕ್ಷಿ ನುಡಿದ ಮಾತುಗಳಾ? ಅಥವಾ ದೇವರೇ ಪ್ರೇರೇಪಿಸಿದ್ದಾ? ತೀರ್ಮಾನ ನಿಮ್ಮ ವಿವೇಚನೆಗೆ ಬಿಟ್ಟಿದ್ದು. ಆದರೆ ಅಂತಹ ಒಂದು ಘಟನೆಯನ್ನು ಇಲ್ಲಿನ ಜನ ಇಂದಿಗೂ ಸ್ಮರಿಸಿಕೊಳ್ಳುವುದಂತೂ ಸತ್ಯ.
ಆಂಧ್ರದ ಗಡಿಗೆ ಅಂಟಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆ ಗೊತ್ತಲ್ಲಾ? ಇದೇ ಜಿಲ್ಲೆಯಲ್ಲಿದೆ ಗುಡಿಬಂಡೆ ತಾಲೂಕು. ವಿಸ್ತಾರದಲ್ಲಿ ಚಿಕ್ಕದಾಗಿದ್ದರೂ, ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದ್ದರೂ ಅಪರಾಧಗಳ ವಿಚಾರದಲ್ಲಿ ಸ್ವಲ್ಪ ಮುಂದೆ ಎಂಬ ಹಣೆಪಟ್ಟಿ ಇರುವ ತಾಲೂಕುಗಳಲ್ಲಿ ಇದೂ ಒಂದು. ಇದೇ ತಾಲೂಕಿನ ಸೋಮೇನಹಳ್ಳಿ ಒಂದು ಸಣ್ಣ ಗ್ರಾಮ. ಸುಮಾರು 400 ಮನೆಗಳಿರುವ ಈ ಗ್ರಾಮದಲ್ಲಿ ಒಂದು ಸಾವಿರ ಜನಸಂಖ್ಯೆ ಇರಬಹುದು. ಯಾವುದೇ ನದಿಮೂಲಗಳಿಲ್ಲದ ಈ ಪ್ರದೇಶದಲ್ಲಿ ಕೆರೆ ಮತ್ತು ಬಾವಿಗಳ ನೀರನ್ನೇ ನೀರಾವರಿಗೆ ಬಳಸುವುದು ಇಂದಿಗೂ ವಾಡಿಕೆ. ಆದರೆ ದಿನೇ ದಿನೆ ಕುಸಿದ ಮಳೆಯ ಪ್ರಮಾಣದಿಂದಾಗಿ ಕೆರೆಗಳು ತುಂಬದೇ ವರ್ಷಗಳೇ ಕಳೆದಿವೆ. ಹಾಗಾಗಿ ನೀರಾವರಿ ಇಂದು ಬೋರ್‌ವೆಲ್ ಕಡೆ ತಿರುಗಿದೆ.
50 ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಗ್ರಾಮದಲ್ಲಿ ಆಗ 150 ಮನೆ ಇತ್ತು. ಈಗ ಡಾಂಬರು ಕಂಡಿರುವ ರಸ್ತೆಗಳು ಆಗ ಮಣ್ಣಿನಿಂದ ಕೂಡಿದ್ದವು. ಟಿವಿ, ಮೊಬೈಲ್ ಸದ್ದು ಆಗ ಇರಲಿಲ್ಲ. ಪ್ರಾಮಾಣಿಕತೆಗೆ ಮಾತ್ರ ಗ್ರಾಮಸ್ಥರಲ್ಲಿ ಕೊರತೆ ಇರಲಿಲ್ಲವೆಂದೇ ಹೇಳಬಹುದು.
ಗ್ರಾಮಕ್ಕೆ ರಾಮಸಮುದ್ರ ಮತ್ತು ಲಕ್ಷ್ಮೀಸಾಗರ ಎಂಬ ಎರಡು ಕೆರೆಗಳಿಂದ ನೀರು ಹರಿದು ಬರುತ್ತದೆ. ಈ ಕೆರೆಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ ರೈತರು ಬತ್ತವನ್ನು ಬೆಳೆಯುತ್ತಾರೆ. ಕೆರೆ ಅಚ್ಚುಕಟ್ಟು ಪ್ರದೇಶದ ಭೂಮಿ ಅಧಿಕ ಬೆಲೆ ಬಾಳುವ ಕಾರಣದಿಂದ ಬಹುತೇಕ ರೈತರು ಅಲ್ಪ ಭೂಮಿಯನ್ನೇ ಹೊಂದಿರುತ್ತಾರೆ. ಅಂತಹ ರೈತರಲ್ಲಿ ವೆಂಕಟೇಶಪ್ಪನೂ ಒಬ್ಬ. ಪಿತ್ರಾರ್ಜಿತವಾಗಿ ಬಂದಿದ್ದ ಅರ್ಧ ಎಕರೆ ಭೂಮಿಯಲ್ಲಿ ಬತ್ತ ಬೆಳೆದು ಹೆಂಡತಿಯೊಂದಿಗೆ ಸುಖವಾಗಿದ್ದ. ಆತನ ಜಮೀನಿನ ಪಕ್ಕದಲ್ಲಿಯೇ ಶ್ರೀರಾಮಪ್ಪ ಎಂಬ ರೈತನ ಭೂಮಿ ಇತ್ತು. ಆತನಿಗೆ ತಂದೆಯಿಂದ ಬಂದ ಆಸ್ತಿಯೇ ಅಪಾರವಾಗಿತ್ತು.
ಕೆರೆಯಿಂದ ಕಾಲುವೆಗಳ ಮೂಲಕ ಬಿಡುವ ನೀರನ್ನು ರೈತರು ಹಂಚಿಕೊಂಡು ಬೆಳೆಗೆ ಕಟ್ಟುವುದು ವಾಡಿಕೆ. ಹಾಗೆ ಎಲ್ಲರಿಗೂ ಸಮಾನವಾಗಿ ನೀರು ಹಂಚುವುದಕ್ಕಾಗಿಯೇ ನೀರಗಂಟಿಯನ್ನು ನೇಮಿಸಿರುತ್ತಾರೆ. ನೀರು ಹಾಯಿಸುವ ವಿಚಾರದಲ್ಲಿ ರೈತರ ಮಧ್ಯೆ ಜಗಳ ನಡೆಯದಂತೆ ನೀರಗಂಟಿ ಸಮಾನವಾಗಿ ಗದ್ದೆಗಳಿಗೆ ನೀರು ಹಾಯಿಸುತ್ತಾನೆ. ಆದರೂ ಉಳ್ಳವರು ಎಂಬ ಕಾರಣಕ್ಕೆ ಹೆಚ್ಚಿನ ಮುತುವರ್ಜಿ ತೋರಿಸುವ ನೀರಗಂಟಿಗಳೂ ಇರುತ್ತಾರೆ. ಅಂತಹವರೇ ಇಲ್ಲೂ ಇದ್ದರು. ಹಾಗಾಗಿಯೇ ಇಂತಹ ಭೀಕರ ಘಟನೆಯೊಂದು ನಡೆದು ಹೋಯಿತು.
ಇನ್ನೂ ಉಳುಮೆಯ ಹಂತದಲ್ಲಿದ್ದ ಬತ್ತದ ಗದ್ದೆಗೆ ನೀರು ಹಾಯಿಸಲು ಇಂದು ತನ್ನದೇ ಸರದಿ ಎಂದು ಹೇಳಿ ಅಂದು ಸಂಜೆ ಹೋದ ವೆಂಕಟೇಶಪ್ಪ ಮತ್ತೆ ವಾಪಸ್ ಮನೆಗೆ ಬರಲಿಲ್ಲ. ಗದ್ದೆಗೆ ನೀರು ಬಿಟ್ಟು ಹಾಗೆಯೇ ಪರಿಚಯಸ್ಥರ ಮನೆಗೆ ಹೋಗಿರಬಹುದು, ಬರುತ್ತಾನೆ ಎಂದು ಆತನ ಹೆಂಡತಿ, ತುಂಬು ಗರ್ಭಿಣಿಯಾಗಿದ್ದ ಶಕುಂತಲಾ ಸುಮ್ಮನಿದ್ದಳು. ಆದರೆ ಮೂರು ದಿನ ಕಳೆದರೂ ವೆಂಕಟೇಶಪ್ಪ ವಾಪಸ್ ಬರಲಿಲ್ಲ.
ಒಂದು ವಾರದಲ್ಲಿ ಹೆರಿಗೆಯಾಗುವ ಹಂತದಲ್ಲಿದ್ದ ಶಕುಂತಲಾ ಸ್ಥಿತಿ ಕಂಡು ಅಕ್ಕಪಕ್ಕದ ಮನೆಗಳವರು ಆಕೆಯ ತವರು ಮನೆಗೆ ಸುದ್ದಿ ಮುಟ್ಟಿಸಿದರು. ಗದ್ದೆಗೆ ನೀರು ಬಿಡಲು ಹೋದ ವ್ಯಕ್ತಿ ಏನಾದ ಎಂಬ ಬಗ್ಗೆ ವಿಚಾರ ಮಾಡಿದ ಅವರು ಬೇರೆ ದಾರಿಯಿಲ್ಲದೆ ಪೊಲೀಸರಿಗೆ ಒಂದು ದೂರು ನೀಡಿ ಮಗಳನ್ನು ಹೆರಿಗೆಗಾಗಿ ತವರು ಮನೆಗೆ ಕರೆದೊಯ್ದರು.
ಒಂದು ತಿಂಗಳು ಕಳೆದಿದೆ. ಅದೊಂದು ದಿನ ಹುಣ್ಣಿಮೆ. ಬೇಸಿಗೆ ಕಾಲವಾದ ಕಾರಣ ಆಕಾಶದಲ್ಲಿ ಮೋಡಗಳಿಲ್ಲದೆ ಶುಭ್ರವಾಗಿತ್ತು. ಹುಣ್ಣಿಮೆ ಚಂದಿರ ಮಿಂಚುತ್ತಿದ್ದ. ಶ್ರೀರಾಮಪ್ಪನ ಹೆಂಡತಿ ತನ್ನ ಎಳೆಯ ಮಗುವಿಗೆ ಸುಂದರ ಚಂದಮಾಮನನ್ನು ತೋರಿಸುತ್ತಾ ತುತ್ತು ತಿನ್ನಿಸುತ್ತಿದ್ದಳು. ಮನೆಯ ಎದುರಿಗಿದ್ದ ಬಾವಿಯಲ್ಲಿ ಚಂದ್ರನ ಪ್ರತಿಬಿಂಬ ತೋರಿಸಿ 'ನೀನು ತಿನ್ನಲಿಲ್ಲ ಎಂದರೆ ಚಂದಮಾಮನಿಗೆ ತಿನ್ನಿಸುತ್ತೇನೆ' ಎನ್ನುತ್ತಾ ಇದ್ದಳು. ಆಗ ಮನೆಯೊಳಗೆ ಊಟ ಮಾಡುತ್ತಿದ್ದ ಶ್ರೀರಾಮಪ್ಪ ಎಂಜಲು ಕೈಯಿಂದಲೇ ಹೊರಗೆ ಓಡಿ ಬಂದು 'ಲೇ, ಚಂದ್ರ ನಮ್ಮ ವಿರೋಧಿ. ಅವನನ್ನು ತೋರಿಸಿ ನನ್ನ ಮಗನಿಗೆ ಊಟ ಮಾಡಿಸಬೇಡ' ಎಂದು ಒಂದೇ ಉಸಿರಿಗೆ ಹೇಳಿ ಮಗುವನ್ನು ಕಿತ್ತುಕೊಂಡು ಒಳಗೆ ಹೋದ.
ಇಡೀ ಜಗತ್ತಿಗೆ ಚಂದ್ರ ಇಷ್ಟವಾದರೆ ಅದ್ಹೇಗೆ ನಮಗೆ ಶತ್ರು ಎಂಬ ಅನುಮಾನದಿಂದಲೇ ಮನೆಯೊಳಗೆ ಬಂದ ಶ್ರೀರಾಮಪ್ಪನ ಹೆಂಡತಿ, ಕೋಪದಲ್ಲಿರುವ ಗಂಡನನ್ನು ಪ್ರಶ್ನಿಸಿ ಮತ್ತಷ್ಟು ಕೋಪ ಹೆಚ್ಚಿಸುವುದು ಬೇಡ ಎಂದ ಸುಮ್ಮನಾದಳು. ಆದರೆ ಅವಳ ತಲೆಯಲ್ಲಿ ಆ ಪ್ರಶ್ನೆ ಕೊರೆಯುತ್ತಲೇ ಇತ್ತು. ಊಟ ಮಾಡಿ ಮಲಗಿದ ನಂತರ ಗಂಡನನ್ನು ಈ ಬಗ್ಗೆ ಪ್ರಶ್ನಿಸಿದಳು. 'ಅದಕ್ಕೆ ಕಾರಣ, ನಾನು ಮಾಡಿರುವ ಕೊಲೆಗೆ ಅವನೇ ಸಾಕ್ಷಿ' ಎಂದು ಶ್ರೀರಾಮಪ್ಪ ಹೇಳಿದ. ಆಕೆಗೆ ಅರ್ಥವಾಗಲಿಲ್ಲ. ಆತ ವಿವರವಾಗಿ ಹೇಳತೊಡಗಿದ...
-ಅದೇ ಶಕುಂತಲಾ ಗಂಡ ವೆಂಕಟೇಶ್ ಕಾಣೆಯಾಗಿದ್ದಾನಲ್ಲವೆ? ಆತ ಎಲ್ಲಿಗೂ ಪರಾರಿಯಾಗಿಲ್ಲ. ಸತ್ತುಹೋಗಿದ್ದಾನೆ! ಸತ್ತು ನಮ್ಮ ಬತ್ತದ ಗದ್ದೆಯಲ್ಲಿ ಮಣ್ಣಾಗುತ್ತಿದ್ದಾನೆ! ಅವನು ಕಾಣೆಯಾದನಲ್ಲಾ ಅದೇ ದಿನ ಅವನ ಗದ್ದೆಗೆ ನೀರು ಹಾಯಿಸಲು ಬಂದ. ನನ್ನ ಸರದಿ ಮುಗಿದು ಅವನ ಸರದಿಗೆ ನೀರು ಹೋಗಬೇಕಿತ್ತು. ಆದರೆ ನಮ್ಮ ಗದ್ದೆಗೆ ಇನ್ನೂ ಪೂರ್ಣವಾಗಿ ನೀರು ತುಂಬಿರಲಿಲ್ಲ.
ಒಂದು ದಿನ ನೀರು ನನಗೆ ಬಿಡು, ನನ್ನ ಗದ್ದೆ ತುಂಬುತ್ತದೆ. ಮತ್ತೆ ನೀರಗಂಟಿಗೆ ಹೇಳಿ ನಿನ್ನ ಗದ್ದೆಗೆ ನೀರು ಹಾಯಿಸಿದರಾಯಿತು ಎಂದು ಕೇಳಿದೆ. ಆದರೆ ಅವನು ನನ್ನ ಗದ್ದೆ ಒಣಗುತ್ತದೆ, ನೀರು ಬಿಡಲು ಆಗುವುದಿಲ್ಲ ಎಂದ. ಅದಕ್ಕೆ ಕೋಪ ಬಂದು ಅವನನ್ನು ಹೊಡೆದು ಸಾಯಿಸಿದೆ. ಅಂದೂ ಕೂಡ ಹುಣ್ಣಿಮೆ. ಚಂದ್ರ ಹುಟ್ಟುತ್ತಿರುವಾಗ, ಸಂಜೆ ವೇಳೆ ಯಾರೂ ಗದ್ದೆಗಳಲ್ಲಿ ಇರದೆ ಮನೆಗಳಿಗೆ ಊಟಕ್ಕೆ ಹೋಗಿದ್ದರು. ನಾವಿಬ್ಬರೇ ಅಲ್ಲಿ ಇದ್ದೆವು. ಸಾಯುವಾಗ ಆತ 'ಸ್ವಾಮಿ ಚಂದಿರ, ನನ್ನ ಸಾವಿಗೆ ನೀನೆ ಸಾಕ್ಷಿ, ನನ್ನ ಹೆಂಡತಿಯನ್ನು ನೀನೆ ಕಾಪಾಡಬೇಕು' ಎಂದು ಚಂದ್ರನಿಗೆ ಕೈಮುಗಿದು ಜೀವ ಬಿಟ್ಟ. ಕೂಡಲೇ ಅವನ ಹೆಣವನ್ನು ನಮ್ಮ ಗದ್ದೆಗೆ ತೆಗೆದುಕೊಂಡು ಹೋಗಿ ಕೆಸರಿನಲ್ಲಿ ಹೂತು ಹಾಕಿದೆ. ಈಗ ಬತ್ತದ ಪೈರು ತುಂಬಾ ಹುಲುಸಾಗಿ ಬೆಳೆದಿದೆಯಲ್ಲಾ, ಅಲ್ಲಿಯೇ ಅವನ ಹೆಣ ಹೂತಿರೋದು ಎಂದು ವಿವರಿಸಿದ.
ಇದಾದ ಒಂದೆರಡು ದಿನದಲ್ಲಿ ಕಾಣೆಯಾದ ವೆಂಕಟೇಶಪ್ಪನ ಹೆಂಡತಿಗೆ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ ಎಂಬ ಸುದ್ದಿ ಬಂತು. ಗ್ರಾಮದಿಂದ ಹಲವು ಹೆಂಗಸರು ಹೋಗಿ ಶಕುಂತಲೆಯನ್ನು ಮತ್ತು ಮಗುವನ್ನು ನೋಡಿ ಬಂದರು. ಅದೊಂದು ದಿನ ಮಧ್ಯಾಹ್ನ ಕೆಲಸಗಳೆಲ್ಲಾ ಮುಗಿದ ನಂತರ ಹೆಂಗಸರೆಲ್ಲಾ ಹರಟೆ ಹೊಡೆಯಲು ಕುಳಿತರು. ಹಾಗೆ ಕುಳಿತವರಲ್ಲಿ ಶ್ರೀರಾಮಪ್ಪನ ಹೆಂಡತಿಯೂ ಇದ್ದಳು. 'ಮಗು ಮುದ್ದಾಗಿದೆ. ಆದರೆ ಹಾಳಾದ ವೆಂಕಟೇಶ ಎಲ್ಲಿಗೆ ಹೋದನೋ ಯಾಕೆ ಹೋದನೋ ಯಾವಾಗ ಬರುತ್ತಾನೋ ಪಾಪ' ಎಂದು ಮಾತನಾಡತೊಡಗಿದರು.
ಶಕುಂತಲಾ ಬಗ್ಗೆ ಹೆಂಗಸರು ಆಡುತ್ತಿರುವ ಮಾತುಗಳನ್ನು ಕೇಳಿದ ಶ್ರೀರಾಮಪ್ಪನ ಹೆಂಡತಿ ಗುಟ್ಟನ್ನು ಅರಗಿಸಿಕೊಳ್ಳಲಾಗದೆ 'ಅಯ್ಯೋ ಎಲ್ಲಿ ಬರ್ತಾನೆ? ಬದುಕಿದ್ದರೆ ತಾನೆ ಬರುವುದು! ಸತ್ತು ಸ್ವರ್ಗ ಸೇರಿರುವ ವ್ಯಕ್ತಿ ಬದುಕಿ ಬರಲು ಸಾಧ್ಯವೇ?' ಎಂದು ಹೇಳಿದಳು. ಸುತ್ತಲೂ ಇದ್ದ ಹೆಂಗಸರು ಹುಬ್ಬೇರಿಸಿ 'ಸತ್ತು ಹೋಗಿದ್ದಾನಾ? ಎಲ್ಲಿ? ಹೇಗೆ? ನಿನಗೆ ಹೇಗೆ ಗೊತ್ತಾಯಿತು?' ಎಂದು ಪ್ರಶ್ನಿಸಿದರು. ಅದಕ್ಕೆ ಆಕೆ ಗಂಡ ಹೇಳಿದ ಕತೆ ಹೇಳಿದಳು. ಒಬ್ಬ ಹೆಂಗಸಿನ ಬಾಯಲ್ಲಿಯೇ ನಿಲ್ಲದ ಗುಟ್ಟು ನಾಲ್ಕು ಜನ ಹೆಂಗಸರ ಬಾಯಲ್ಲಿ ಉಳಿಯುತ್ತದೆಯೇ? ಅದು ಇಡೀ ಗ್ರಾಮ ವ್ಯಾಪಿಸಿ, ಗ್ರಾಮ ದಾಟಿ ಶಕುಂತಲೆಯ ಗ್ರಾಮವೂ ತಲುಪಿತು. ಪರಿಣಾಮ...
-ಗ್ರಾಮಕ್ಕೆ ಎಂದೂ ಕಾಲಿಡದ ಪೊಲೀಸರು ಬಂದು ಶ್ರೀರಾಮಪ್ಪನನ್ನು ಬಂಧಿಸಿದರು. ಆತ ಹೇಳಿದ ಕಡೆ ಹುಲುಸಾಗಿ ಬೆಳೆದಿದ್ದ ಬತ್ತದ ಪೈರಿದ್ದ ಜಾಗದಲ್ಲಿ ಅಗೆದು ವೆಂಕಟೇಶಪ್ಪನ ದೇಹ ಹೊರತೆಗೆದರು. ನಾಲ್ಕು ಜನರ ಸಮಕ್ಷಮದಲ್ಲಿ ಪಂಚನಾಮೆ ಮಾಡಿ ಅಸ್ಥಿಪಂಜರವಾಗಿದ್ದ ಮೃತದೇಹವನ್ನು ಶಕುಂತಲೆಯ ಸುಪರ್ದಿಗೆ ನೀಡಲಾಯಿತು. ಶ್ರೀರಾಮಪ್ಪನನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಯಿತು. ವಿಚಾರಣೆಯಲ್ಲಿ ಶ್ರೀರಾಮಪ್ಪನ ಹೆಂಡತಿಯೇ ಪ್ರಮುಖ ಸಾಕ್ಷಿಯಾದಳು. ನೀರಗಂಟಿಯೂ ಈ ಬಗ್ಗೆ ಸಾಕ್ಷಿ ನುಡಿದ. ಪ್ರಕರಣಕ್ಕೆ ಪ್ರತ್ಯಕ್ಷ ಸಾಕ್ಷಿಗಳು ಇಲ್ಲದಿದ್ದರೂ, ಮಗುವಿಗೆ ತುತ್ತು ತಿನ್ನಿಸುವಾಗ ಗಂಡ ಹೇಳಿದ ಮಾತುಗಳನ್ನು ಶ್ರೀರಾಮಪ್ಪನ ಹೆಂಡತಿ ನ್ಯಾಯಾಲಯದಲ್ಲಿ ಪ್ರಾಮಾಣಿಕವಾಗಿ ಹೇಳಿದ ಪರಿಣಾಮ ಆತನಿಗೆ ಶಿಕ್ಷೆಯಾಯಿತು.
ಘಟನೆ ನಡೆದು 50 ವರ್ಷಗಳೇ ಕಳೆದಿದ್ದರೂ ಇಂದಿಗೂ ಈ ಭಾಗದ ಜನ ಸತ್ಯಕ್ಕೆ ಜಯವಿದೆ ಎಂಬುದನ್ನು ವೆಂಕಟೇಶಪ್ಪನ ಕೊಲೆ ಪ್ರಕರಣ ಸಾಬೀತು ಪಡಿಸಿದೆ ಎಂದೇ ಹೇಳುತ್ತಾರೆ.
- ಅಶ್ವತ್ಥನಾರಾಯಣ್ ಎಲ್.
sathyajns@gmail.com