ಹಳ್ಳಿಗಳಲ್ಲಿ ಈಗಲೂ ಆಯುರ್ವೇದ, ನಾಟಿ ವೈದ್ಯಗಳುಂಟು. ನಮ್ಮ ಮನೆಗಳಲ್ಲಿ ಅಜ್ಜಿ ನೀಡುತ್ತಿದ್ದ 'ಅಜ್ಜಿ ಮದ್ದು' ಏನು ಕಡಿಮೆಯೇ? ಇವರೆಲ್ಲ ಏನು ಮಾಡುತ್ತಿದ್ದರು ಎಂದರೆ ಮದ್ದಿನ ಜತೆಗೆ ಕಟ್ಟುನಿಟ್ಟಿನ ಪಥ್ಯವನ್ನೂ ಹೇಳುತ್ತಿದ್ದರು. ಹೋಮಿಯೋಪಥಿ, ಆಯುರ್ವೇದಗಳಲ್ಲಿ ಈಗಲೂ ಪಥ್ಯ ಹೇಳುವುದುಂಟು. ನಮ್ಮ ತಲೆಮಾರಿನ ಆಲೋಪಥಿ ವೈದ್ಯರು ಕೇವಲ ಗುಳಿಗೆ, ಔಷಧಗಳನ್ನಷ್ಟೇ ಕೊಡುತ್ತಿರಲಿಲ್ಲ. ಪಥ್ಯ ಮಾಡಲು ಹೇಳುತ್ತಿದ್ದರು. ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳಿಗೆ ಸೂಚಿಸುತ್ತಿದ್ದರು. ರೋಗಿಯ ಮನೆಗೇ ಹೋಗಿ ಚಿಕಿತ್ಸೆ ನೀಡುತ್ತಿದ್ದ ವೈದ್ಯರೊಬ್ಬರು ವೈದ್ಯಕೀಯದ ಜತೆಗೆ ಬಿಗಿಯಾದ ಪಥ್ಯವನ್ನೂ ಪಾಲಿಸುವಂತೆ ಮಾಡಿ ಟೈಫೈಡ್‌ನಿಂದ ಬಳಲುತ್ತಿದ್ದವನನ್ನು ಕೇವಲ ಹದಿನೈದೇ ದಿನಗಳಲ್ಲಿ ಸಂಪೂರ್ಣ ಗುಣಮುಖನನ್ನಾಗಿ ಮಾಡಿದ್ದನ್ನು ನಾನೇ ಕಂಡಿದ್ದೇನೆ.
ಇವತ್ತಿನ ವೈದ್ಯರು ನಾವಾಗಿ ಕೇಳಿದರೂ 'ಪಥ್ಯವೇನೂ ಬೇಡ. ಕೋರ್ಸ್ ಮುಗಿಯುವವರೆಗೆ ಮಾತ್ರೆ ಮಾತ್ರ ಬಿಡಬೇಡಿ' ಎಂದುಬಿಡುತ್ತಾರೆ. ನೋಡುತ್ತಿರಿ. ಕೆಲವೇ ವರ್ಷಗಳಲ್ಲಿ ಪಥ್ಯ ಮತ್ತು ಆಹಾರ ಪದ್ಧತಿಗಳು ವೈದ್ಯ ವಿಜ್ಞಾನದ ಭಾಗವಾಗುತ್ತವೆ. ಈಗಾಗಲೇ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ 'ಆಹಾರ ತಜ್ಞ'ರಿದ್ದಾರೆ. ಅವರು ನಮ್ಮ ಔಷಧೋಪಚಾರ ಮತ್ತು ಕಾಯಿಲೆಯ ಸ್ವರೂಪ ಗಮನಿಸಿ, ಅದಕ್ಕೆ ಸಂಬಂಧಿಸಿದಂತೆ ಸೇವಿಸಬೇಕಾದ ಪೌಷ್ಟಿಕ ಆಹಾರದ ಬಗ್ಗೆ ಸಲಹೆ ಕೊಡುತ್ತಾರೆ.
ಚೀನಾದಲ್ಲೊಂದು ಗಾದೆ ಇದೆ. 'ಕಾಯಿಲೆಯ ತಂದೆ ಯಾವುದೇ ಆಗಿದ್ದರೂ ತಾಯಿ ಮಾತ್ರ ತಪ್ಪಾದ ಆಹಾರ ಪದ್ಧತಿ' ಎನ್ನುವುದು. ನಮ್ಮ ಆರೋಗ್ಯದಲ್ಲಿ ಆಹಾರ ಎಂಥ ಪಾತ್ರ ವಹಿಸುತ್ತದೆ ಎನ್ನುವುದನ್ನು ಇದಕ್ಕಿಂತ ಸುಂದರವಾಗಿ ಹೇಳಲು ಸಾಧ್ಯವೇ? ಒಂದು ವಿಚಾರವನ್ನು ಮೊದಲೇ ಹೇಳಿಬಿಡುತ್ತೇನೆ. ಈ ಹಿಂದೆ ಅನೇಕ ಸಲ ಹಣ್ಣು, ತರಕಾರಿಗಳ ಬಗ್ಗೆ ಹೇಳುವಾಗ ಅವುಗಳ ಔಷಧೀಯ ಮಹತ್ವವನ್ನೂ ವಿವರಿಸಿದ್ದೇನೆ. ಈಗ ಆಹಾರ ಮತ್ತು ಆರೋಗ್ಯದ ಬಗ್ಗೆ ಮಾತನಾಡುವಾಗ ಮತ್ತೆಮತ್ತೆ ಅವುಗಳ ಪ್ರಸ್ತಾಪ ಆಗಬಹುದು. ಭವಿಷ್ಯ ಹೇಳುವಾಗ ಗ್ರಹಗಳ ವರ್ತನೆ ಕೆಲವೊಂದು ಸಲ ಪುನರಾವರ್ತನೆ ಆಗುತ್ತದಲ್ಲ, ಹಾಗೆ.
ಇಲ್ಲಿ ಮತ್ತಷ್ಟು ಆಳವಾಗಿ, ಅಷ್ಟೇ ವಿಸ್ತ್ರತವಾಗಿ ಹೇಳುವುದು ನನ್ನ ಉದ್ದೇಶ. ಏಕೆಂದರೆ ನಮ್ಮ ದೇಹಾರೋಗ್ಯ ಆಧರಿಸಿ ಸರಿಯಾದ ಆಹಾರ ಯಾವುದು? ಯಾವುದನ್ನು ತಿನ್ನಬಾರದು ಎನ್ನುವುದನ್ನು ಅರಿತುಕೊಂಡಿದ್ದರೆ ಅದಕ್ಕಿಂತ ಮಿಗಿಲಾದ ಜ್ಞಾನ ಸಂಪತ್ತು ಬೇರೆ ಇಲ್ಲ ಎನ್ನುವುದು ನನ್ನ ಭಾವನೆ. ಸರಿಯಾದ ಆಹಾರ ಪದ್ಧತಿ ರೂಢಿಸಿಕೊಂಡಿದ್ದರೆ ಎಂತೆಂಥ ಮದ್ದಿಗೂ ಹೆದರದ ಕಾಯಿಲೆಗಳನ್ನು ಓಡಿಸಿಬಿಡಬಹುದು. ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು. ಆ ಮೂಲಕ ಅನೇಕ ಕಾಯಿಲೆಗಳನ್ನು ನಮ್ಮ ಬಳಿ ಬಾರದಂತೆ ತಡೆಯಬಹುದು. ಮುಖ್ಯವಾಗಿ ನಮ್ಮ ಜೀವಿತಾವಧಿಯನ್ನು ಹಿಗ್ಗಿಸಿಕೊಂಡು ಆರೋಗ್ಯಪೂರ್ಣ ಬದುಕು ಬಾಳಬಹುದು.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com