ಬೈಟುಕಾಫಿ

ಬೆಂಗಳೂರಿನಲ್ಲಿ ಮದುಮಗಳು

ಮೂರು ವರ್ಷ ಹಿಂದೆ ಮೈಸೂರಿನಲ್ಲಿ ವಿಜೃಂಭಿಸಿದ್ದ 9 ಗಂಟೆಗಳ 'ಮಲೆಗಳಲ್ಲಿ ಮದುಮಗಳು' ನಾಟಕ ಬೆಂಗಳೂರಿಗೆ ಬರುತ್ತಿದೆ.

ಮೂರು ವರ್ಷ ಹಿಂದೆ ಮೈಸೂರಿನಲ್ಲಿ ವಿಜೃಂಭಿಸಿದ್ದ 9 ಗಂಟೆಗಳ 'ಮಲೆಗಳಲ್ಲಿ ಮದುಮಗಳು' ನಾಟಕ ಬೆಂಗಳೂರಿಗೆ ಬರುತ್ತಿದೆ.
ಮೈಸೂರಿನ ಕುಕ್ಕರಹಳ್ಳಿ ಕೆರೆಗೆ ಹೊಂದಿಕೊಂಡಂತಿರುವ ರಂಗಾಯಣ ಆವರಣದ ನಾಲ್ಕು ವೇದಿಕೆಗಳಲ್ಲಿ ಮೂರು ವರ್ಷ ಹಿಂದೆ ವಿಜೃಂಭಿಸಿದ್ದ 'ಮಲೆಗಳಲ್ಲಿ ಮದುಮಗಳು' ನಾಟಕ ಮತ್ತೆ ಸಮಕಾಲೀನ ವಿಚಾರಗಳೊಂದಿಗೆ ತಳುಕು ಹಾಕಿಕೊಂಡು ಬೆಂಗಳೂರಿನ ಮಲ್ಲತ್ತಹಳ್ಳಿ ಬಳಿಯ ಕಲಾಗ್ರಾಮದಲ್ಲಿ ಪ್ರದರ್ಶನಕ್ಕೆ ಸಿದ್ಧವಾಗುತ್ತಿದೆ.
9 ಗಂಟೆ ಕಾಲ ಪ್ರದರ್ಶನವಾಗುವ ಮಲೆಗಳಲ್ಲಿ ಮದುಮಗಳು ನಾಟಕವನ್ನು ನಿರ್ದೇಶಿಸಿ ದಾಖಲೆ ನಿರ್ಮಿಸಿದ್ದ ರಂಗ ನಿರ್ದೇಶಕ ಸಿ. ಬಸವಲಿಂಗಯ್ಯ ಅವರು ಮತ್ತೆ ತಮ್ಮ ಹಳೆಯ ತಂತ್ರಜ್ಞರ ತಂಡದೊಂದಿಗೆ ಹೊಸ ಕಲಾವಿದರನ್ನು ಒಟ್ಟುಗೂಡಿಸಿಕೊಂಡು ಮಲೆಗಳಲ್ಲಿ ಮದುಮಗಳು ನಾಟಕ ನಿರ್ದೇಶಿಸುತ್ತಿದ್ದಾರೆ. ಕಲಾಗ್ರಾಮದ ಆವರಣದಲ್ಲಿ ನಾಟಕದ ರಿಹರ್ಸಲ್ ನಡೆಯುತ್ತಿದೆ. ಏಪ್ರಿಲ್ ಎರಡನೇ ವಾರದಿಂದ ಆರಂಭವಾಗಿ ಮೇ ಕೊನೆಯವರೆಗೂ ನಾಟಕ ಪ್ರದರ್ಶನಗೊಳ್ಳಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಇಲಾಖೆಯ ಸಹಯೋಗವಿದೆ.
ಈ ನಾಟಕದಲ್ಲಿ ಕಾವೇರಿ ಎಂಬಾಕೆಯ ಮೇಲೆ ಅತ್ಯಾಚಾರವಾಗುವ ಸನ್ನಿವೇಶವಿದೆ. ನೂರು ವರ್ಷದ ಹಿಂದೆ ನಡೆದ ಈ ಘಟನೆಯನ್ನು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಗ್ಯಾಂಗ್ ರೇಪ್‌ನೊಂದಿಗೆ ಹೋಲಿಸಿ, ಅತ್ಯಾಚಾರದ ಕರಾಳ ಮುಖವನ್ನು ಜನರಿಗೆ ತೋರಿಸಿ ಅರಿವು ಮೂಡಿಸಲು ನಿರ್ದೇಶಕರು ಕೊಂಚ ಬದಲಾವಣೆ ಮಾಡಿಕೊಂಡಿದ್ದಾರೆ.
ವಾರದಲ್ಲಿ ನಾಲ್ಕು ಪ್ರದರ್ಶನ
ವಾರದಲ್ಲಿ ನಾಲ್ಕು ಪ್ರದರ್ಶನಗಳಿರುತ್ತವೆ. ಉಳಿದ ಮೂರು ದಿನ ಕಲಾವಿದರಿಗೆ ವಿಶ್ರಾಂತಿ. ಮಲ್ಲತ್ತಹಳ್ಳಿ ಬಸ್ ನಿಲ್ದಾಣದ ಬಳಿ ಇರುವ 12 ಎಕರೆ ವಿಸ್ತಾರದ ಕಲಾಗ್ರಾಮ ಇನ್ನೂ ಅಪರಿಚಿತವಾಗಿಯೇ ಉಳಿದಿದೆ. ಈ ನಾಟಕದೊಂದಿಗೆ ಲೋಕಾರ್ಪಣೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಿದೆ. ಇದಕ್ಕಾಗಿ 70 ಲಕ್ಷ ರು. ವಿನಿಯೋಗಿಸಿ ನೂರು ಮೀಟರ್ ಅಂತರದಲ್ಲಿ ನಾಲ್ಕು ಕಡೆ ವೇದಿಕೆ ನಿರ್ಮಿಸಲಾಗುತ್ತಿದೆ. ಕಾಡು, ನದಿ, ಪರಿಸರದ ದೃಶ್ಯವನ್ನು ಕಟ್ಟಿಕೊಡಲು ಕಲಾನಿರ್ದೇಶಕ ಶಶಿಧರ ಅಡಪ ದುಡಿಯುತ್ತಿದ್ದಾರೆ. ಈ ಹಿಂದೆ ದ್ವಾರಕನಾಥ್ ನಿರ್ಮಿಸಿದ್ದ ವೇದಿಕೆಯನ್ನೇ ಮೂಲವನ್ನಾಗಿ ತೆಗೆದುಕೊಳ್ಳಲಾಗಿದೆ.
ಬೆಂಗಳೂರಿಗರಿಗೆ ಹಬ್ಬ
ಧಾವಂತವೇ ಬದುಕಾಗಿರುವ ಬೆಂಗಳೂರಿನ ಜನಕ್ಕೆ ಇಡೀ ರಾತ್ರಿಯ ಮನರಂಜನೆ ಹೊಸದು ಎನ್ನಬಹುದು. ಇಂಥ ಹಬ್ಬದ ಸಂಭ್ರಮ ಸೃಷ್ಟಿಸುವ, ಕನ್ನಡದ ಮಹಾಕವಿಯ ಸಾಹಿತ್ಯ ಪರಿಚಯಿಸುವ ಸಾಹಸಕ್ಕೆ ಬಸವಲಿಂಗಯ್ಯ ಮುಂದಾಗಿದ್ದಾರೆ. ಈ ಹಿಂದೆ ಮದುಮಗಳು ನಾಟಕ ಪ್ರದರ್ಶನಗೊಂಡ ಬಳಿಕ ಕಾದಂಬರಿ ನಾಲ್ಕು ಮುದ್ರಣ ಕಂಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಹೊಸ ಮುಖಗಳ ನರ್ತನ
ಈ ಸಾರಿ ಬಸವಲಿಂಗಯ್ಯ ರಾಜ್ಯಾದ್ಯಂತ ಓಡಾಡಿ 80 ಮಂದಿ ಹೊಸ ಕಲಾವಿದರನ್ನು ಹುಡುಕಿದ್ದಾರೆ. ಅವರಿಗೆಲ್ಲ ಕಳೆದ 15 ದಿನಗಳಿಂದ ತರಬೇತಿ ನೀಡುತ್ತಿದ್ದಾರೆ. ಮೈಸೂರಿನ ರಂಗಾಯಣದ 25 ತಂತ್ರಜ್ಞರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಕಾದಂಬರಿಯನ್ನು ನಾಟಕರೂಪಕ್ಕೆ ಇಳಿಸಿದ ಸಾಹಿತಿ ಡಾ.ಕೆ.ವೈ. ನಾರಾಯಣಸ್ವಾಮಿ, ಸಂಗೀತ ನಿರ್ದೇಶಕ ಹಂಸಲೇಖ, ವಸ್ತ್ರ ವಿನ್ಯಾಸಕಾರ ಪ್ರಮೋದ್ ಶಿಗ್ಗಾಂವ್ ಸೇರಿದಂತೆ ಹಳೆಯ ತಂಡ ಪುನಃ ತನ್ನ ಕೈಚಳಕ ತೋರಿಸಲಿದೆ.

ನಾಟಕದ ವಿಶೇಷತೆಗಳು
* 12 ಎಕರೆ ಜಾಗದಲ್ಲಿ 4 ಬೃಹತ್ ವೇದಿಕೆ ನಿರ್ಮಾಣ
* 80 ಮಂದಿ ಹೊಸ ಕಲಾವಿದರ ಅಭಿನಯ
* 1 ಸಾವಿರ ಮಂದಿ ಏಕ ಕಾಲದಲ್ಲಿ ನಾಟಕ ವೀಕ್ಷಣೆ
* 70 ಲಕ್ಷ ರು. ವೆಚ್ಚದಲ್ಲಿ ನಾಟಕ ಸಿದ್ಧತೆ
* 28 ಪ್ರದರ್ಶನಗಳು

- ಜೆ. ಮಹದೇವ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ ಭಯಗೊಂಡಿದ್ದು ನಮ್ಮ ಹೋರಾಟದಲ್ಲಿ ಅರ್ಧ ಗೆದ್ದಿದ್ದೇವೆ, CEC ರಾಜೀನಾಮೆ ನೀಡುವವರೆಗೆ ಹಿಂಜರಿಯುವುದಿಲ್ಲ': ಇಂದು CJP ಪ್ರತಿಭಟನೆ ಮುಂದುವರಿಕೆ

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!

ಬರದಿಂದ ರೈತರು ಕಂಗಾಲಾಗಿದ್ದರೂ ಸಿಎಂ ಡಿಕೆಶಿಗೆ ಮಾತ್ರ ಸ್ಟಿಂಗ್ ಆಪರೇಷನ್'ನದ್ದೇ ಚಿಂತೆ: HDK ವ್ಯಂಗ್ಯ

‘Gen Z ಪ್ರತಿಭಟನೆಗಳಿಂದ ಮೋದಿ ಸರ್ಕಾರಕ್ಕೆ ನಡುಕ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ