ಖುಷಿಯ ವಿಷಯ ಏನೆಂದರೆ ವೈದ್ಯ ವಿಜ್ಞಾನಕ್ಕೆ ಆಹಾರದ ಮಹತ್ವ ಅರಿವಾಗಿದೆ. ಆಹಾರ ಹೇಗೆ ಆರೋಗ್ಯವನ್ನು ಉತ್ತೇಜಿಸುತ್ತದೆ, ಸೂಕ್ಷ್ಮ ಕೋಶಗಳ ಹಂತದಲ್ಲಿ ರೋಗಾಣುಗಳ ವಿರುದ್ಧ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎನ್ನುವ ಕುರಿತಂತೆ ಚರ್ಚೆ, ಜಿಜ್ಞಾಸೆ, ಸಂಶೋಧನೆಗಳು ಶುರುವಾಗಿವೆ. ನೂರಾರು ವರ್ಷ ಹಿಂದೆ ನಮ್ಮ ಹಿರಿಯರು ರೂಢಿಸಿಕೊಂಡಿದ್ದ ಆಹಾರ ಪದ್ಧತಿಯನ್ನು ದಾಖಲಿಸುವ ಪ್ರಯತ್ನಗಳೂ ಅಲ್ಲಲ್ಲಿ ಪ್ರಾರಂಭವಾಗಿವೆ. ವಿಶೇಷವಾಗಿ ಪಾಶ್ಚಾತ್ಯ ರಾಷ್ಟ್ರಗಳು ಈ ಕುರಿತು ಕಾಳಜಿ, ಆಸಕ್ತಿ, ಉತ್ಸಾಹ ತೋರಿಸುತ್ತಿವೆ.
ಅಮೆರಿಕದ ಮಿನ್ನೆಸೋಟೊ ವಿಶ್ವವಿದ್ಯಾಲಯದ ಡಾ.ಜಾನ್ ಪಾಟರ್ ಅವರು ಪ್ರಾಚೀನ ಈಜಿಪ್ತ್‌ನಲ್ಲಿನ ಆಹಾರ ಪದ್ಧತಿ ಬಗ್ಗೆ ಇತ್ತೀಚೆಗೆ ಮೆಡಿಕಲ್ ಮ್ಯಾಗಜಿನ್ ಒಂದರಲ್ಲಿ ಸಂಶೋಧನಾತ್ಮಕ ಲೇಖನ ಬರೆದಿದ್ದಾರೆ. ಅವರು ದಾಖಲಿಸಿರುವ ಕುತೂಹಲದ ಸಂಗತಿ ಎಂದರೆ ಕ್ಯಾಬೇಜ್‌ಗೆ 27 ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ ಎನ್ನುವುದು ಈಜಿಪ್ತಿಯನ್ನರಿಗೆ ಆಗಲೇ ತಿಳಿದಿತ್ತು. ಉಳ್ಳಾಗಡ್ಡೆ ತಿನ್ನುವುದರಿಂದ 28 ರೀತಿಯ ಆರೋಗ್ಯ ತೊಂದರೆಗಳನ್ನು ದೂರ ಇಡಬಹುದು ಎನ್ನುವುದನ್ನು ಅರಿತಿದ್ದರು. ಬೆಳ್ಳುಳ್ಳಿಯನ್ನಂತೂ ಅವರು ಪೂಜ್ಯ ಭಾವನೆಯಿಂದ ನೋಡುತ್ತಿದ್ದರು. ತಲೆನೋವು, ಕಿವುಡುತನ, ಕಿವಿನೋವು, ಅತಿಸಾರ, ಸಂಧಿವಾತ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಔಷಧವಾಗಿ ಬಳಸುತ್ತಿದ್ದರು. ರೋಮನ್ನರು ಕೂಡ ಅತಿಸಾರಕ್ಕೆ ಬೆಳ್ಳುಳ್ಳಿ ಉಪಯುಕ್ತ ಮದ್ದು ಎಂದು ತಿಳಿದುಕೊಂಡಿದ್ದರು. ದ್ರಾಕ್ಷಿ ಮತ್ತು ಒಣದ್ರಾಕ್ಷಿಗಳನ್ನು ಔಷಧಗಳ ತಯಾರಿಕೆಯಲ್ಲಿ ಬಳಸುತ್ತಿದ್ದರು.
ನಮ್ಮಲ್ಲೂ ಹಾಗೇ ಅಲ್ಲವೆ? ಕಿವಿನೋವು ಬಂದಾಗ ಕೊಬ್ಬರಿ ಎಣ್ಣೆಯಲ್ಲಿ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಕೊಂಚ ಬಿಸಿ ಮಾಡಿ ಕಿವಿಗೆ ಬಿಡುವುದಿಲ್ಲವೆ? ಕೊಬ್ಬಿನ ಅಂಶ ಅಧಿಕ ಇರುವವರಿಗೆ ಬೆಳ್ಳುಳ್ಳಿ ತಿನ್ನಲು ಹೇಳುತ್ತಾರೆ. ಅಧಿಕ ರಕ್ತದೊತ್ತಡದಿಂದ ಬಳಲುವವರಿಗೂ ಬೆಳ್ಳುಳ್ಳಿ ರಾಮಬಾಣ. ಜಾನುವಾರುಗಳಿಗೆ ನೀಡುವ ಬಹುತೇಕ ಎಲ್ಲ ಔಷಧಗಳಲ್ಲೂ ಬೆಳ್ಳುಳ್ಳಿ ಇದ್ದೇ ಇರುತ್ತದೆ. ನಾವು ಆಹಾರವಾಗಿ ಬಳಸುವ ಪದಾರ್ಥಗಳ ವೈದ್ಯಕೀಯ ಮಹತ್ವ ಏನು ಎನ್ನುವುದು ನಮ್ಮ ಪೂರ್ವಿಕರಿಗೆ ಚೆನ್ನಾಗಿ ತಿಳಿದಿತ್ತು. ಭಾರತದಲ್ಲಷ್ಟೇ ಅಲ್ಲದೆ ಜಗತ್ತಿನಾದ್ಯಂತ ಇದು ಚಾಲ್ತಿಯಲ್ಲಿತ್ತು ಎನ್ನುವುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ ಅನ್ನಿಸುತ್ತದೆ. ನಾಗರಿಕತೆ ಶುರುವಾದಾಗಿನಿಂದ ತೀರಾ ಈಚಿನವರೆಗೂ ಮಾನವನ ಬದುಕು ಆಹಾರ ಮತ್ತು ಔಷಧಕ್ಕಾಗಿ ಸಸ್ಯಸಂಕುಲವನ್ನು ಅವಲಂಬಿಸಿತ್ತು.
ನಾಟಿ ಔಷಧ ಇರಬಹುದು, ಆಹಾರ ಪದ್ಧತಿಯೇ ಆಗಿರಬಹುದು. ಹಿರಿಯರು ತಾವು ತಿಳಿದಿದ್ದ ಔಷಧೀಯ ಮಹತ್ವಗಳನ್ನು ತಮ್ಮ ಮುಂದಿನ ತಲೆಮಾರಿನವರಿಗೂ ವರ್ಗಾಯಿಸಿದರು. ಅವರಿಗೆ ಯಾವ ರೀತಿಯ ಆರೋಗ್ಯ ಸಮಸ್ಯೆಗೆ ಯಾವ ಗಿಡಮೂಲಿಕೆಯಲ್ಲಿ ಮದ್ದು ಇದೆ ಮತ್ತು ಯಾವ ಆಹಾರ ರೀತಿಯ ಸೇವಿಸಬೇಕು ಎನ್ನುವುದು ಗೊತ್ತಿತ್ತು. ಆದರೆ ಅದು ನಮ್ಮ ದೇಹದಲ್ಲಿ ಹೇಗೆ ಕೆಲಸ ಮಾಡುತ್ತದೆ ಎನ್ನುವುದರ ವೈಜ್ಞಾನಿಕ ಕಲ್ಪನೆ ಇರಲಿಲ್ಲ. ಹೀಗಾಗಿಯೇ ಆಧುನಿಕತೆ ಬಂದಂತೆಲ್ಲ ಹಳ್ಳಿ ಮದ್ದು, ಪಥ್ಯ ಇತ್ಯಾದಿಗಳನ್ನೆಲ್ಲ ಅಡಗೂಲಜ್ಜಿ ಕಥೆ ಎಂದು ಲೇವಡಿ ಮಾಡುವ ಪ್ರವೃತ್ತಿ ಶುರುವಾಯಿತಿರಬೇಕು.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com