ಬೈಟುಕಾಫಿ

ದಿನದ ಮಟ್ಟಿಗೆ ಮಗುವಾಗಿ

ಒಂದು ದಿನ ಬೆಳಗ್ಗೆ ಏಳುತ್ತಲೇ ಹೀಗೊಂದು ನಿರ್ಧಾರಕ್ಕೆ ಬಂದು ಬಿಡಿ, 'ಇವತ್ತೊಂದು ದಿನ ನಾನು ಮಗು. ಯಾವುದೇ ಕಾರಣಕ್ಕೂ ಆ ಪರಿಧಿಯಿಂದ ಹೊರಬರುವುದಿಲ್ಲ' ಎಂದು ಸಂಕಲ್ಪಿಸಿಕೊಳ್ಳಿ. ಅದಕ್ಕೆ ಬದ್ಧರಾಗಿಬಿಡಿ. ಮೊದಲು ನಿಮ್ಮ ಮೊಬೈಲ್, ಲ್ಯಾಪಟಾಪ್ ಇತ್ಯಾದಿ ಇತ್ಯಾದಿಗಳನ್ನು ದೂರವಿಟ್ಟುಬಿಡಿ. ಏಳುತ್ತಲೇ ನಿಮ್ಮೊಳಗಿನ ಮಗುವನ್ನು ಹೊರಕರೆದುಬಿಟ್ಟುಬಿಡಿ. ಇವತ್ತೊಂದು ದಿನ ಆ ಮಗುಮನಸ್ಸಿಗೆ ಯಾವುದೇ ನಿರ್ಬಂಧವಿಲ್ಲ. ಅಲ್ಲಿ ಕಲ್ಮಶವಿಲ್ಲ, ಕಪಟವಿಲ್ಲ. ಸಿಟ್ಟು, ನಗು, ಅಳು ಹೀಗೆ ಭಾವನೆಗಳಿಗೆ ಚೌಕಾಸಿಯಿಲ್ಲ. ಆಟ, ಮನರಂಜನೆಗಳಿಗೆ ಮಿತಿಯಿಲ್ಲ. ಕುತೂಹಲಕ್ಕೆ ಕೊನೆಯಿಲ್ಲ... ಒಟ್ಟಾರೆ ಮನಸ್ಸು ಪಕ್ಕಾ ಮೊದಲಿನ ಹಸಿತನಕ್ಕೆ ಮರಳಿಬಿಡಬೇಕು. ಹೀಗಾಗಲು ಮೊದಲಿಗೆ ನೀವು ಮಾಡಬೇಕಾಗಿದ್ದು ನಿಮ್ಮ ತಲೆಯೊಳಗೆ ನೀವು ಹೊತ್ತು ಕುಳಿತಿದ್ದೀರಲ್ಲಾ ನೂರೆಂಟು ಯೋಚನೆಗಳ ಹೊರೆ, ಅದನ್ನು ಮೊದಲು ಕೆಳಗಳಿಸಿಬಿಡಿ. ನೀವು ಬಾಲ್ಯವೆಂಬುದನ್ನು, ಅದರ ಮುಗ್ಧತೆಯನ್ನು ಕಳೆದುಕೊಂಡಿದ್ದರೆ ಅದಕ್ಕೆ ಕಾರಣವೇ ನೀವು ಸೃಷ್ಟಿಸಿಕೊಂಡಿರುವ ನೂರೆಂಟು ಯೋಚನೆಗಳ ಬಲೆ. ಬದುಕಿನ ಅತ್ಯುತ್ತಮ ದಿನಗಳು ಯಾವುದೆಂದು ಜಗತ್ತಿನಲ್ಲಿ ಯಾರನ್ನೇ ಕೇಳಿದರೂ ಅವರು ಹೇಳುವುದು ಬಾಲ್ಯವೆಂದೇ. ಆದರೂ ಅದು ಗೊತ್ತಿಲ್ಲದಂತೆ ಕಳೆದು ಹೋಗಿಬಿಡುತ್ತದೆ. ಬಾಲ್ಯ ಕಳೆದು ಹೋದರೆ ಹೋಗಲಿಬಿಡಿ. ಬಾಲಿಶತನವನ್ನು ಕೆಲವಾದರೂ ವಿಚಾರದಲ್ಲಿ ಕಳಕೊಳ್ಳದೇ ಇರುವುದು ಉತ್ತಮವೇನೋ. ಅದು ನಮ್ಮ ಕೈಯಲ್ಲೇ ಇರುತ್ತದೆ. ಎಲ್ಲೋ ಒಂದು ಕಡೆ ನಾವು ಬೆಳೆದಂತೆಲ್ಲ ಬೇರೆಯವರಿಗಿಂತ ನಮ್ಮೊಳಗೇ ನಮ್ಮ ಬಗ್ಗೆ ನಿರೀಕ್ಷೆಗಳ ಕಂತೆ ಹೆಚ್ಚುತ್ತಾ ಹೋಗುತ್ತದೆ. ಅದನ್ನು ಮುಟ್ಟುವ ಭರದಲ್ಲಿ ಮನಸ್ಸನ್ನು ಕಟ್ಟಿಹಾಕಲಾರಂಭಿಸುತ್ತೇವೆ. ಪ್ರಬುದ್ಧವಾಗಿ ವರ್ತಿಸುವುದು ತೀರಾ ಅಗತ್ಯ, ಅನಿವಾರ್ಯ ಎಂಬ ತೀರ್ಮಾನಕ್ಕೆ  ಬಂದು ಬಿಡುತ್ತೇವೆ. ಪ್ರತಿಷ್ಠೆ, ಘನತೆ, ಸ್ಥಾನಮಾನ, ಹುದ್ದೆ, ಅಧಿಕಾರಗಳಿಗಾಗಿ ಹಾಗೂ ಅವೆಲ್ಲಕ್ಕಿಂತ ಹೆಚ್ಚಾಗಿ ತನ್ನನ್ನು ಸಮಾಜ ಪ್ರೌಢನೆಂದು ಗುರುತಿಸಬೇಕು ಎಂಬ ಕಾರಣಕ್ಕಾಗಿ ನಾವು ಗಂಭೀರತೆಯ ಮುಖವಾಡವನ್ನು ಹೊತ್ತು ತಿರುಗಲಾರಂಭಿಸುತ್ತೇವೆ. ನಗುವ ಅವಕಾಶದಲ್ಲೂ ನಗುವುದನ್ನು ಮರೆಯುತ್ತೇವೆ. ಅಳು ಒತ್ತರಿಸಿ ಬಂದಾಗಲೂ ತುಟಿ ಕಚ್ಚಿ ಹಿಡಿಯುತ್ತೇವೆ. ಒಟ್ಟಾರೆ ನಮ್ಮ ಬಾಲ್ಯವನ್ನು ನಾವೇ ಕಿತ್ತುಕೊಳ್ಳುತ್ತೇವೆ. ಹೊರಗಿನ ಅರಿವು ನಮ್ಮನ್ನು ಇಂಥ ಜಡತೆಗೆ ತಳ್ಳುತ್ತದೆ. ವಾಸ್ತವವಾದದ ಹೆಸರಿನಲ್ಲಿ ಬಾಲ್ಯದ ಸ್ವಾತಂತ್ರ್ಯವನ್ನು, ಕುತೂಹಲವನ್ನು ಸಮಾಧಿ ಮಾಡಿ ಮೇಲೊಂದು ಕಲ್ಮಶಗಳ ಗೂಡನ್ನು ಪ್ರತಿಷ್ಠಾಪಿಸಿಬಿಡುತ್ತೇವೆ. ಅಂಥವೆಲ್ಲ ಹಂಗುಗಳನ್ನು ತೊರೆದು ತಿಂಗಳಿಗೆ ಒಮ್ಮೆಯಾದರೂ ನಿಮ್ಮನಿಮ್ಮ ಬಾಲ್ಯದ ಅದೇ ನೆನಪಿನೊಂದಿಗೆ ಮಗುವಾಗಿ ಇರಲು ಪ್ರಯತ್ನಿಸಿ ನೋಡಿ. ನಿಮ್ಮ ಎಷ್ಟೋ ಸಮಸ್ಯೆಗಳು ದೂರವಾಗಿ ಬದುಕು ಸುಂದರ ಎನಿಸತೊಡಗದಿದ್ದರೆ ಹೇಳಿ.
-ಸಹನೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!