ಆ ರಸ್ತೆಯಲ್ಲೊಂದು ಕಾರು. ನಿಲ್ಲಲೊಲ್ಲದೆ ಬರ್ರನೆ ಓಡುತ್ತಿದೆ ಜೋರು. ಕಾಡಹಾದಿಯಾದ ಕಾರಣ ಆ ರಸ್ತೆ ಎಲೆಗಳ ಹಾಸಿಗೆ. ಆ ಎಲೆಗಳನ್ನೆಲ್ಲ ಮೆಟ್ಟುತ್ತಾ, ಗುರಿ ತಲುಪುವ ಆ ಕಾರಿನ ಜೋಶ್‌ನಲ್ಲಿ ಇನ್ನೊಂದು ವಸ್ತು ಅಪ್ಪಚ್ಚಿಯಾಗುತ್ತದೆ. ತುಳಿತಕ್ಕೊಳಗಾಗುತ್ತದೆ, ನಿಜ. ಇದೆಲ್ಲ ಕಾರಿನ ಗಮನಕ್ಕೆ ಬರುವುದಿಲ್ಲ. ತನ್ನ ಚಕ್ರಕ್ಕೆ ಸಿಕ್ಕ ವಸ್ತುಗಳನ್ನು ತುಳಿಯುವುದು ಕಾರಿನ ಉದ್ದೇಶವಲ್ಲ. ಗುರಿ ತಲುಪುವುದಷ್ಟೇ ಅದಕ್ಕೆ ಗೊತ್ತು.
ಆದರೂ, ತುಳಿತಕ್ಕೊಳಗಾದ ಎಲೆಗಳು, ಮಣ್ಣಪುಡಿಗಳು, ಕಾಗದದ ಚೂರುಗಳು ಏನೇನೋ ಕಲ್ಪನೆಗಿಳಿಯುತ್ತವೆ. ತಮ್ಮ ಮೇಲೆ ದಬ್ಬಾಳಿಕೆ ಆಗುತ್ತಿದೆ ಅಂತಲೇ ಭಾವಿಸುತ್ತವೆ. ಹೀಗಾಗಿ, ಕಾರಿನ ಚಕ್ರಕ್ಕೆ ಸಿಲುಕಿದ ಕೂಡಲೇ ಅವು ರೊಚ್ಚಿಗೆದ್ದು ಕಾರನ್ನು ಹಿಂಬಾಲಿಸಿ ಹೊಡೆಯಲು ಕೆಲವು ದೂರದ ವರೆಗೆ ಓಡಿಬರುತ್ತವೆ. ಕೊನೆಗೆ ಕಸುವೆಲ್ಲ ಇಂಗಿದ ಮೇಲೆ ಸುಸ್ತಾಗಿ, ಅದೇ ರಸ್ತೆಯಲ್ಲೇ ಜಾಗಪಡೆಯುತ್ತವೆ. ಮತ್ತೆ ಇನ್ನೊಂದು ಕಾರು. ಮತ್ತೆ ತುಳಿತ. ಮತ್ತೆ ಛಲ ಕಾಣದ ಹೋರಾಟ. ಫಲ ಕಾಣದ ಹಾರಾಟ.
ಇನ್ನಾವುದೋ ನದಿಯ ದಡದಲ್ಲಿ ನೆಟ್ಟಗೆ ನಿಂತ ಗಿಡ. ಅದರ ಹಸಿರಸಿರಿಯನ್ನು ಹೊಸಕಿ ಹಾಕುವ ಹೊಂಚು ಆ ನದಿಗಂತೂ ಖಂಡಿತಾ ಇಲ್ಲ. ಅಷ್ಟರಲ್ಲಾಗಲೇ ಮಳೆ. ಉಸಿರುಗಟ್ಟಿ ಸುರಿಯುವ ಮಳೆ. ಗಂಟೆಯ ನಂತರ ಪ್ರವಾಹದ ತಂಟೆ. ಹಸಿರು ಗಿಡ ಇಂಥ ಭೀತಿಯನ್ನು ಎಂದೋ ಎದೆಯಲ್ಲಿಟ್ಟುಕೊಂಡೇ ಬದುಕುತ್ತಿದೆ. ಆದರೆ, ಬೆನ್ನಮೂಳೆಯನ್ನೇ ಬಗ್ಗಿಸುವ ಆ ಪ್ರವಾಹ ಗಿಡದ ಬೆನ್ನನ್ನು ಬಗ್ಗಿಸಿದೆ. ಕೆಲವೇ ಹೊತ್ತಲ್ಲಿ ಮಳೆಯ ವಿರಾಮ. ಆ ಗಿಡಕ್ಕೆ ನದಿಯನ್ನು ಹಿಮ್ಮೆಟ್ಟಿಸುವ, ಅದರ ಪಾತ್ರಕ್ಕೆ ಹೋರಾಡಿ ಧಕ್ಕೆ ತರುವ ಉದ್ದೇಶಗಳಿಲ್ಲ. ಆ ಯತ್ನಕ್ಕದು ಕೈಯನ್ನೂ ಹಾಕುವುದಿಲ್ಲ. ಕೆಲವೇ ದಿನದಲ್ಲಿ ಮತ್ತೆ ಅದಕ್ಕೆ ಮೊದಲಿನ ಸ್ವರೂಪ. ನೆಟ್ಟಗಿನ ರೂಪ. ಅದೇ ಹಸಿರು. ಅದೇ ನದಿಯ ಪಕ್ಕದಲ್ಲಿ ಧ್ಯಾನ.
ಇವೆರಡು ಕೂಡ ಹೋರಾಟವೇ. ಮೊದಲನೆಯದ್ದಕ್ಕೆ ತನ್ನ ಸಾಮರ್ಥ್ಯದ ಬಗ್ಗೆ ಸ್ಪಷ್ಟ ತಿಳಿವಳಿಕೆ ಇಲ್ಲ. ಎರಡನೆಯದ್ದಕ್ಕೆ ತಿಳಿವಳಿಕೆ ಇದೆ. ಹೀಗಾಗಿ, ಅದು ತನ್ನ ಸ್ಥಾನ ಬಿಟ್ಟು ತನ್ನನ್ನು ತುಳಿದವರ ಬಗ್ಗೆ ಚಿಂತಿಸುವುದಿಲ್ಲ. ಬದುಕೂ ಅಷ್ಟೇ. ಕಾರಿಗೆ ಸಿಲುಕಿದ ಎಲೆಗಳ ಥರ ವ್ಯರ್ಥವಾಗಿ ಯತ್ನಿಸಿ, ಆಲೋಚಿಸಿ ಸ್ಥಾನ ಕಳೆದುಕೊಳ್ಳುವ ಅಂಶಗಳಾಗುವುದರಲ್ಲಿ ಅರ್ಥವೇ ಇಲ್ಲ. ಸುನಾಮಿಗೆ ಸಿಕ್ಕರೂ ಗಿಡ ಎದ್ದು ನಿಲ್ಲುತ್ತದೆ. ಗಟ್ಟಿಯಾಗಿಯೇ ನಿಂತು, ತನ್ನ ಬೇರುಗಳನ್ನು ಇನ್ನಷ್ಟು ಆಳದ ವರೆಗೆ ಬಿಟ್ಟುಕೊಳ್ಳುತ್ತದೆ. ಆ ಗಿಡಕ್ಕೆ ಗೊತ್ತು ಮುಂದೆ ತಾನೊಂದು ಹೆಮ್ಮರವಾಗುತ್ತೇನೆಂದು, ಸಮಾಜಕ್ಕೆ ಉಪಯೋಗವಾಗುತ್ತೀನೆಂದು...
- ಸಹನೆ