ಬೈಟುಕಾಫಿ

Be ಬ್ರೇವ್ (ಬೈಟು ಕಾಫಿ ಕಾಳಜಿ)




ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಸಂಸಾರ ತೂಗಿಸಲು, ಪತಿಯೊಂದಿಗೆ ಆರ್ಥಿಕ ಸಮನ್ವಯ ಸಾಧಿಸಲು ಮಹಾನಗರಗಳ ಮಹಿಳೆ ಇಂದು ಅನಿವಾರ್ಯವಾಗಿ ದುಡಿಯುವ ಸ್ಥಿತಿಯಿದೆ. ಪತಿ ದೂರದಲ್ಲಿದ್ದಾಗ ಮಹಿಳೆಯೊಬ್ಬಳೇ ಸಂಚರಿಸಬೇಕಾದ ಅನಿವಾರ್ಯತೆ. ರಾಜ್ಯದಲ್ಲೂ ಲಕ್ಷಾಂತರ ಮಹಿಳೆಯರು ನಿತ್ಯ ಬಸ್, ರೈಲುಗಳಲ್ಲಿ ರಾತ್ರಿ, ಹಗಲು ಎನ್ನದೆ ಸಂಚರಿಸುವಾಗ ನಿರಂತರ ಲೈಂಗಿಕ ಕಿರುಕುಳಕ್ಕೊಳಗಾಗುತ್ತಾರೆ. ಇಂಥ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಈ ಬಗ್ಗೆ ಮಹಿಳೆಯರು ಹೆಚ್ಚಿನ ಜಾಗ್ರತೆ ವಹಿಸಬೇಕೇ ವಿನಃ ಭಯ ಪಡುವ ಅಗತ್ಯವಿಲ್ಲ. ಮಹಿಳೆಯರು ಧೈರ್ಯವಂತರಾದಾಗ, ಈ ಅರಿವು ಹೊಂದಿದ್ದಾಗ ಮಾತ್ರ ಕಿರುಕುಳಗಳಿಂದ ಮುಕ್ತಿ ಹೊಂದಲು ಸಾಧ್ಯ.
ಹೀಗೆ ಮಾಡಿ
ಸಾಧ್ಯವಾದಷ್ಟು ರಾತ್ರಿ ಪ್ರಯಾಣದಿಂದ ದೂರವಿರಿ. ಪ್ರಯಾಣ ಅನಿವಾರ್ಯ ಎನ್ನುವ ಸ್ಥಿತಿ ಎದುರಾದಲ್ಲಿ ಮಹಿಳೆಯರ ಪಕ್ಕದಲ್ಲಿಯೇ ಸೀಟು ನೀಡುವಂತೆ ಸೂಚಿಸಿ. ಈಚೆಗೆ ಮಹಿಳೆಯರ ರಾತ್ರಿ ಸಂಚಾರಕ್ಕಾಗಿಯೇ ಕೆಲ ಖಾಸಗಿ ಸಂಸ್ಥೆಗಳು ಪ್ರತ್ಯೇಕ ಸೀಟ್ ಸೌಲಭ್ಯ ನೀಡುತ್ತಿವೆ. ಸ್ವಲ್ಪ ಹಣ ಹೆಚ್ಚಾದರೂ ಅದೇ ಬಸ್‌ಗಳಲ್ಲಿಯೇ ಪ್ರಯಾಣಿಸಿ. ಬಸ್ ಹತ್ತಿದ ತಕ್ಷಣ ನಿಮ್ಮ ಸೀಟ್ ಬಗ್ಗೆ ಗಮನ ನೀಡಿ, ಪುರುಷ ಪ್ರಯಾಣಿಕರನ್ನು ಹೆಚ್ಚು ಗಮನಿಸಿ ನೋಡಬೇಡಿ. ಸ್ನೇಹದ ಹೆಸರಿನಲ್ಲಿ ಪರಿಚಯಕ್ಕೂ ಆಸ್ಪದ ನೀಡಬೇಡಿ.  ಬ್ಯಾಗ್‌ಗಳಲ್ಲಿ ಸಾಧ್ಯವಾದಲ್ಲಿ ಖಾರದ ಪುಡಿ ಅಥವಾ ಘಾಟು ಸ್ಪ್ರೇಗಳನ್ನು ಇಟ್ಟುಕೊಂಡಿರಿ. ನೀವು ಪದೇ ಪದೆ ಸಂಚರಿಸುವ ರೈಲು ಮತ್ತು ಬಸ್ ನಿಲ್ದಾಣಗಳಲ್ಲಿನ ಪೊಲೀಸ್ ಠಾಣೆಯ ನಂಬರ್ ಇಟ್ಕೊಂಡಿರಿ. ಬಸ್‌ಗಳಲ್ಲಿ ಯಾವುದೇ ಕಾರಣಕ್ಕೂ ನಿದ್ದೆ ಮಾತ್ರೆ ಸೇವಿಸಿ ಪ್ರಯಾಣಿಸದಿರಿ. ಸಹ ಪುರುಷ ಪ್ರಯಾಣಿಕರನ್ನು ಮಾತನಾಡಿಸಲೇಬೇಕಾದ ಅನಿವಾರ್ಯತೆ ಎದುರಾದಲ್ಲಿ ಆತ್ಮವಿಶ್ವಾದಿಂದ ವರ್ತಿಸಿ. ಆತಂಕ ಪ್ರದರ್ಶಿಸಬೇಡಿ.
ಪಕ್ಕದಲ್ಲಿ ಕುಳಿತ ವ್ಯಕ್ತಿಯ ಅಸಭ್ಯ ವರ್ತನೆ ಸಹಿಸಿಕೊಂಡು ಕುಳಿತುಕೊಂಡಲ್ಲಿ ಅದು ಅವರಿಗೆ ಮತ್ತಷ್ಟು ಉತ್ತೇಜನ ನೀಡುತ್ತದೆ. ನಿರ್ವಾಹಕರಿಗೆ ಹಾಗೂ ಸಹ ಪ್ರಯಾಣಿಕರಿಗೆ ವಿಷಯ ತಿಳಿಸಿ ಸೀಟು ಬದಲಾಯಿಸಿಕೊಳ್ಳಿ. ನಿಮ್ಮೊಟ್ಟಿಗೆ ಪ್ರಯಾಣಿಸುವವರಿಗೆ ವಿಷಯ ತಿಳಿಸಲು ಮುಜುಗರ ಪಟ್ಟಲ್ಲಿ ಮತ್ತಷ್ಟು ತೊಂದರೆ. ಕಿರುಕುಳ ಸಹಿಸಿಕೊಳ್ಳದೇ ಬಲವಾಗಿ ಖಂಡಿಸಿ, ನೀವು ತೆರಳುತ್ತಿರುವುದು ಬಸ್ ಆದಲ್ಲಿ ಸಮೀಪದ ಪೊಲೀಸ್ ಠಾಣೆಗೆ (ಮಹಿಳಾ ಸಹಾಯವಾಣಿಗೆ) ದೂರು ನೀಡಿ. ರೈಲು ಪ್ರಯಾಣವಾಗಿದ್ದಲ್ಲಿ, ರೇಲ್ವೆ ಟಿಸಿಗಳ ಮೂಲಕ ಮುಂದಿನ ರೇಲ್ವೆ ಪೊಲೀಸರಿಗೆ ದೂರು ನೀಡಿ.
ಲೈಂಗಿಕ ಕಿರುಕುಳಕ್ಕೆ ಶಿಕ್ಷೆ
ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿ ಭಾರತೀಯ ದಂಡ ಸಂಹಿತೆ 354 ಹಾಗೂ 304ರ ಅಡಿಯಲ್ಲಿ ಆರೋಪ ಸಾಬೀತಾದಲ್ಲಿ 12 ವರ್ಷ ಶಿಕ್ಷೆ, ಬಸ್, ರೇಲ್ವೆಗಳಲ್ಲಿ ಮದ್ಯಪಾನ ಮಾಡಿ ಅಶಿಸ್ತಿನಿಂದ ವರ್ತಿಸಿದಲ್ಲಿ ರು. 75 ಸಾವಿರ ದಂಡ ಹಾಗೂ 10 ತಿಂಗಳಿಗೂ ಹೆಚ್ಚು ಜೈಲು ಶಿಕ್ಷೆ, ಅನ್ಯ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ ಸಾಬೀತಾದಲ್ಲಿ ರು. 14 ಸಾವಿರ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.




ರಾಜ್ಯದಲ್ಲಿ ಕಳೆದ 5 ವರ್ಷದಲ್ಲಿ 12,252ಕ್ಕೂ ಹೆಚ್ಚು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿವೆ. 2008ರಲ್ಲಿ 1954, 2009ರಲ್ಲಿ 2186, 2010ರಲ್ಲಿ 2544, 2011ರಲ್ಲಿ 2608, 2012ರಲ್ಲಿ 2960 ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಶೇ. 59ರಷ್ಟು ಪ್ರಕರಣಗಳು ಬಸ್ ಹಾಗೂ ರೇಲ್ವೆಗಳಲ್ಲಿಯೇ ನಡೆದವು. ಈ ಅಂಕಿ ಅಂಶಗಳನ್ನು ಗಮನಿಸಿದರೆ ಅತ್ಯಾಚಾರದಷ್ಟೇ ವ್ಯಾಪಕವಾಗಿ ದಿನನಿತ್ಯ ಲೈಂಗಿಕ ಕಿರುಕುಳದ ಪ್ರಕರಣಗಳು ವರದಿಯಾಗುತ್ತಿವೆ. ಮಹಿಳೆಯರು ದಿಟ್ಟತನದಿಂದ ಇವನ್ನು ಎದುರಿಸುವ ಸ್ವಭಾವ ಬೆಳೆಸಿಕೊಳ್ಳಬೇಕಿದೆ.


= ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ