ನಿಧಾನವಾಗಿ ಬೀಸುತ್ತಿರುವ ಗಾಳಿ ನಿಮ್ಮನ್ನು ಸೋಕುತ್ತಿದೆ. ಸ್ವಲ್ಪ ಸಮಯಕ್ಕೆ ಮಳೆ ಹನಿ ನಿಮ್ಮ ತಲೆಯ ಮೇಲೆ ಜಿನುಗುತ್ತದೆ. ಇದ್ದಕ್ಕಿದ್ದ ಹಾಗೆ ನೀವು ಕೂತ ಕಡೆ ಭೂಕಂಪ... ಮರು ಕ್ಷಣದಲ್ಲೇ ತ್ಸುನಾಮಿ ಮಧ್ಯದಲ್ಲಿ ನೀವು ! ಇದೇನು ಎಂದು ಆಶ್ಚರ್ಯಪಡುವಷ್ಟರಲ್ಲಿ ನೀವು ಜಾರುಬಂಡಿ (ರೋಲರ್‌ಕೋಸ್ಟರ್) ಮೇಲಿರುತ್ತೀರಿ! ಸಂತೋಷ, ಆಶ್ಚರ್ಯ, ಆತಂಕಗಳಿಂದ ಕೂಡಿದ ಅನುಭವ.
ಈ ಅನುಭವಗಳನ್ನು ಕೂತ ಕಡೆಯಿಂದ ಕಾಲು ಕದಲಿಸದ ಹಾಗೆ ಏಕಕಾಲದಲ್ಲಿ ಅನುಭವಿಸಬಹುದು. ಇದು ಹೇಗೆ ಸಾಧ್ಯ? ಇಷ್ಟಕ್ಕೂ ಇದೆಲ್ಲಾ ಎಲ್ಲಿ ಎಂದು ಯೋಚಿಸುತ್ತೀದ್ದೀರಾ? ಇನ್ನೆಲ್ಲಿ, ಚಿತ್ರಮಂದಿರದಲ್ಲಿ. ಹಾಗೆಂದು ಎಲ್ಲಾ ಥಿಯೇಟರ್‌ಗಳಲ್ಲಿ ಸಾಧ್ಯವಿಲ್ಲ. ಕೇವಲ 7ಡಿ ಸೌಕರ್ಯವಿರುವ ಚಿತ್ರಮಂದಿರದಲ್ಲಿ ಮಾತ್ರ ಇದು ಸಾಧ್ಯ.
ಪ್ರಸ್ತುತ ನಾವು ಹಾಗೇ ಕೋಲ್ಕತ್ತಾಗೆ ಹೋಗೋಣ. ಯಾಕೆಂದರೆ ಪ್ಲಾನೆಟ್ 7ಡಿ ಅಲ್ಲೇ ಇರೋದು! ಆದರೆ ಜಾಗ್ರತೆ. ಈ ಚಿತ್ರಮಂದಿರದಲ್ಲಿ ಕುರ್ಚಿಗಳು ನೆಟ್ಟಗಿರುವುದಿಲ್ಲ. ನಮ್ಮನ್ನೂ ಇರುವುದಕ್ಕೆ ಬಿಡುವುದಿಲ್ಲ. 'ರಿಪೇರಿ ಮಾಡಿಸಿದರೆ ಸರಿ' ಎಂದು ಚಿತ್ರಮಂದಿರದ ಮಾಲೀಕರಿಗೆ ಹೇಳೋಣ ಅಂತೀರಾ? ಅದು ಸಾಧ್ಯವಿಲ್ಲ. ನಮ್ಮನ್ನೇ ಚಿತ್ರಮಂದಿರದವರು ಸೀಟ್ ಬೆಲ್ಟ್ ಕಟ್ಟಿಕೊಳ್ಳಲು ಹೇಳುತ್ತಾರೆ. ಯಾಕೆಂದರೆ ಅಲ್ಲಿನ ಕುರ್ಚಿಗಳು ತೆರೆ ಮೇಲೆ ಬರುವ ಸನ್ನಿವೇಶಗಳಿಗೆ ಅನುಗುಣವಾಗಿ ಸ್ಪಂದಿಸುತ್ತವೆ. ಒಂದೊಂದು ಬಾರಿ ಅವು ಹೇಗಿರುತ್ತವೆ ಎಂದರೆ ಗಾಳಿಯಲ್ಲಿ ತೇಲುತ್ತಿರುವ ಅನುಭವ ನಮಗಾಗುತ್ತದೆ.
ನೀವು ಮಾನಸಿಕವಾಗಿ ಎಷ್ಟು ದೃಢವಾಗಿದ್ದರೂ ಹಾವಭಾವಗಳನ್ನು ತೋರ್ಪಡಿಸದೆ ಸಿನಿಮಾ ನೋಡುವುದು ಈ ಚಿತ್ರಮಂದಿರದಲ್ಲಿ ಸಾಧ್ಯವಿಲ್ಲ. ರಿಹರ್ಸಲ್ಸ್ ಮಾಡಿಕೊಂಡು ಬಂದವರ ಹಾಗೆ ಎಲ್ಲರೂ ಒಮ್ಮೆಗೇ 'ಓಹ್...' ಎನ್ನುತ್ತಾರೆ. ಕೈ ಮೇಲೆತ್ತುತ್ತಾರೆ, ಮುಂದಕ್ಕೆ ಬಾಗುತ್ತಾರೆ, ಹಿಂದಕ್ಕೆ ಬಾಗುತ್ತಾರೆ, ಗಟ್ಟಿಯಾಗಿ ಕಿರುಚುತ್ತಾರೆ, ಮನಸ್ಸು ತುಂಬಾ ನಗುತ್ತಾರೆ. ನಿಮಗೆ ಗೊತ್ತಿಲ್ಲದೆ ನೀವೆ ಸ್ಪಂದಿಸುತ್ತಿರುತ್ತೀರಿ.
ಇದೆಲ್ಲಾ ಹೇಗೆ ಸಾಧ್ಯ?
ಇದಕ್ಕಾಗಿ ವಿಶೇಷ ಏರ್ಪಾಡುಗಳಿರುತ್ತವೆ. ನೀವು ಕೂರುವ ಸೀಟು ಸಸ್ಪೆನ್ಷನ್‌ನಿಂದ ಕೂಡಿರುತ್ತದೆ. ಅಂದರೆ ತೆರೆ ಮೇಲಿನ ದೃಶ್ಯಕ್ಕನುಗುಣವಾಗಿ ಸೀಟು ಕೂಡಾ ಕದಲುತ್ತದೆ. ಉದಾಹರಣೆಗೆ ಚಿತ್ರದಲ್ಲಿ ನಾಯಕ ನಟ ವೇಗವಾಗಿ ಕಾರು ಓಡಿಸುತ್ತಾ ಏಕಾಏಕಿ ಬ್ರೇಕ್ ಹಾಕಿದ. ಆಗ ಏನಾಗುತ್ತದೆ? ನಾಯಕ ಮುಂದಕ್ಕೆ ಸ್ವಲ್ಪ ಮುಗ್ಗರಿಸುತ್ತಾನೆ. ಆದರೆ ಚಿತ್ರಮಂದಿರದಲ್ಲಿ ಸಿನಿಮಾ ನೋಡುತ್ತಿರುವವರೂ ಆತನ ಜೊತೆಗೆ ಮುಗ್ಗರಿಸುತ್ತಾರೆ!
ಮಳೆ, ಮಂಜು... ಇಂತಹ ಸ್ಪೆಷಲ್ ಎಫೆಕ್ಟ್‌ಗಳು ಪ್ರತ್ಯಕ್ಷವಾಗಿ ನೀವೂ ಅನುಭವಿಸುತ್ತೀರಿ. ಇದಕ್ಕಾಗಿ ಕೂಡಾ ವಿಶೇಷ ಏರ್ಪಾಡುಗಳಿರುತ್ತವೆ. ಸಿನಿಮಾದಲ್ಲಿ ಮಲ್ಲಿಗೆ ಹೂಗಳ ರಾಶಿ ಕಾಣಿಸಿದರೆ... ಅದರ ಸುವಾಸನೆ ನೀವೂ ಅನುಭವಿಸುತ್ತೀರಿ. ತೆರೆ ಮೇಲೆ ಹಾವು ಹೋಗುತ್ತಿದ್ದರೆ ಅದು ನಿಮ್ಮ ಕಾಲ ಮಧ್ಯೆ ಹರಿದಾಡುತ್ತಿದೆಯೇನೋ ಎಂಬ ಅನುಭವ. ಅಂದರೆ ನೀವು ಕೇವಲ ಸಿನಿಮಾ ನೋಡುತ್ತಿರುವುದಿಲ್ಲ, ಬದಲಿಗೆ ಪ್ರತ್ಯಕ್ಷವಾಗಿ ಅನುಭವಿಸುತ್ತೀರಿ.
ಪ್ರಸ್ತುತ ಕೋಲ್ಕತ್ತಾದ ಪ್ಲಾನೆಟ್ 7ಡಿ ಚಿತ್ರಮಂದಿರದಲ್ಲಿ ಕೇವಲ ಷಾರ್ಟ್ ಫಿಲಂ ಮಾತ್ರ ಪ್ರದರ್ಶಿಸಲಾಗುತ್ತಿದೆ. ಅಲ್ಲಿರುವ ಕುರ್ಚಿಗಳ ಸಂಖ್ಯೆ 25 ಮಾತ್ರ. ಆದರೆ ಟಿಕೆಟ್ ದರ ಜಾಸ್ತಿ. ಯಾಕೆಂದರೆ ಈ ಚಿತ್ರಮಂದಿರ ನಿರ್ಮಿಸಲು ಕೋಟಿಗಟ್ಟಲೆ ಹಣ ಖರ್ಚಾಗಿದೆ. ಆದ್ದರಿಂದ ಒಂದು ಸಿನಿಮಾ ನೋಡಬೇಕೆಂದರೆ 120 ನೀಡಬೇಕು. 200 ಕೊಟ್ಟು ಎರಡು ಚಿತ್ರ ನೋಡಬಹುದು. ವಾರಾಂತ್ಯದಲ್ಲಿ ಮಾತ್ರ ಈ ಬೆಲೆ 150, 250 ಆಗುತ್ತದೆ. ಆದರೆ ಚಿತ್ರಮಂದಿರದಲ್ಲಿ ಹೊಂದುವ ಅನುಭವದ ಮುಂದೆ ಇದೇನು ದೊಡ್ಡ ಮೊತ್ತವಲ್ಲ. ಇಂತಹ 7ಡಿ ಸೌಕರ್ಯ ದೆಹಲಿಯಲ್ಲಿಯೂ ಇದೆ.
7ಡಿ ವಿಶೇಷಗಳು
ಸಿನಿಮಾದಲ್ಲಿ ಮಳೆ ಬಂದರೆ ಚಿತ್ರಮಂದಿರದಲ್ಲಿ ನಾವು ನೆನೆಯುತ್ತೇವೆ. ಚಿತ್ರಮಂದಿರದ ಗೋಡೆಗಳ ಮೇಲೆ ಮತ್ತು ಛಾವಣಿಗೆ ಸ್ಪ್ರಿಂಕ್ಲರ್‌ಗಳ ಏರ್ಪಾಟು ಮಾಡಿರುತ್ತಾರೆ.
ತೆರೆ ಮೇಲೆ ಸೂರ್ಯೋದಯವಾದರೆ ಚಿತ್ರಮಂದಿರದ ಒಳಗೆ ಸೂರ್ಯ ಉದಯಿಸುತ್ತಾನೆ. ಬೆಳಕು ಬೀರುವ ಹಾಗೆ ಸ್ಟ್ರಾಬ್ ಲೈಟ್‌ಗಳನ್ನು ಚಿತ್ರಮಂದಿರದ ಗೋಡೆಗಳಿಗೆ ನಿರ್ಮಿಸಿರುತ್ತಾರೆ.
ಬೆಳ್ಳಿ ತೆರೆ ಮೇಲೆ ಮಂಜು ಬಿದ್ದರೆ ನಮ್ಮ ಸುತ್ತಲೂ ಹೊಗೆ! ಸ್ಮೋಕ್ ಡಿಸ್ಪೆನ್ಷನ್‌ನೊಂದಿಗೆ ಚಿತ್ರಮಂದಿರದಲ್ಲಿ ಮಂಜು ಬೀಳುವ ಅನುಭವ ಸೃಷ್ಟಿಸುತ್ತಾರೆ.
ತೆರೆ ಮೇಲೆ ಮಲ್ಲಿಗೆ ಗಿಡ ಕಾಣಿಸಿದರೆ ಅದರ ಸುವಾಸನೆ ನಮ್ಮ ಮೂಗಿಗೆ ತಾಕುತ್ತದೆ! ಅರೋಮಾ ಯೂನಿಟ್ ದೃಶ್ಯಗಳಿಗೆ ಅನುಗುಣವಾಗಿ ಸೆಂಟ್ ಸಿಂಪಡಿಸಲಾಗುತ್ತದೆ.
= ಅಶ್ವತ್ಥನಾರಾಯಣ ಎಲ್.