ಕೆಲಮೊಮ್ಮೆ ಹಾಗಾಗುತ್ತದೆ. ಎಲ್ಲದ್ದಕ್ಕೂ ರೋಷ ಉಕ್ಕಿ ಬರುತ್ತದೆ. ಅದಕ್ಕೆ ಕಾರಣವೇ ಬೇಕೆಂದಿಲ್ಲ. ಏನೋ ನಿರ್ದಿಷ್ಟ ಕಾರಣವಿದ್ದರೆ ಅದು ಬೇರೆ ಪ್ರಶ್ನೆ. ಆದರೆ, ಇದು ಹಾಗಲ್ಲ, ಸುಮ್ಮನೆ ನಮ್ಮವರಾದ ಯಾರನ್ನೇ ನೋಡಿದರೂ ರೋಷ ಉಕ್ಕುತ್ತದೆ. ಹಾಗಂತ ಅದು ಯಾರನ್ನಾದರೂ ಚಚ್ಚಿ ಹಾಕುವಂಥ ಸಿಟ್ಟೂ ಅಲ್ಲ. ಸಣ್ಣದಾಗಿ ಆರಂಭವಾಗಿ ಇಡೀ ದಿನ ಮನಸ್ಸನ್ನು ಕೊರೆದ ಬಳಿಕ ಉಕ್ಕುವ ರೋಷ. ಕ್ರಮೇಣ ಅದು ದ್ವೇಷವಾಗಿಯೂ ಮಾರ್ಪಾಡು ಆಗಬಲ್ಲದು. ಇವರೆಲ್ಲರೂ ಕೆಟ್ಟವರು, ನನ್ನನ್ನು ಈ ಪ್ರಪಂಚದಲ್ಲಿ ಅರಿತುಕೊಳ್ಳುವವರು ಯಾರೂ ಇಲ್ಲ. ನನ್ನ ಮನಸ್ಸು ಯಾರಿಗೂ ಅರ್ಥವಾಗುವುದಿಲ್ಲ. ಈ ಹೆಂಡತಿಯಿರುವುದೂ ನನ್ನ ಪಾಲಿಗೆ ವೇಸ್ಟ್. ಅವಳೂ ಹಿಂದಿನಂತಿಲ್ಲ. ಅಪ್ಪ ಅಮ್ಮನೇ ಅವಳ ಪಾಲಿಗೆ ಎಲ್ಲವೂ ಹೌದು. ನಾನು ಅವಳಿಗೆ ಬೇಕಾಗಿಯೇ ಇಲ್ಲ ಎಂದೆಲ್ಲ ಮನಸ್ಸು ಯೋಚಿಸುತ್ತಿದ್ದರೆ, ಹೆಂಡತಿ ಎದುರಾದರೆ ಸಾಕು, ರೋಷ ಉಕ್ಕುತ್ತದೆ.
ಪ್ರತಿಯೊಬ್ಬರಿಗೂ ಇದು ಆಗುವಂಥದ್ದೇ. ಯಾವಾಗಲೋ ಒಮ್ಮೆ ಹೀಗಾದರೆ ಪರವಾಗಿಲ್ಲ, ಪದೇ ಪದೇ ಆಗುತ್ತಿದ್ದರೆ ಸಂಸಾರ ನರಕವಾಗುವುದು ಗ್ಯಾರಂಟಿ. ಆಗ ಅವರು ಬೇರೆಯವರ ಎದುರಿನಲ್ಲೂ ತಮ್ಮ ಹೆಂಡತಿ, ಮಕ್ಕಳ ಬಗ್ಗೆ ಒಂದೇ ಒಂದು ಒಳ್ಳೆಯ ಮಾತನ್ನು ಆಡುವುದಿಲ್ಲ. ಅವರೆಲ್ಲ ತನ್ನ ವಿರುದ್ಧವೇ ಏನೋ ಮಸಲತ್ತು ಮಾಡುತ್ತಿದ್ದಾರೆ ಎಂಬ ಅನುಮಾನವೂ ಹುಟ್ಟಬಲ್ಲದು. ಅಂಥ ಭಾವನೆಗಳು ಹುಟ್ಟಲು ಆರಂಭವಾದರೆ ಅದಕ್ಕೆ ಕೊನೆ ಎಂಬುದೇ ಇಲ್ಲ. ಒಂದಾದ ಮೇಲೆ ಒಂದರಂತೆ ಕೆಟ್ಟ ಯೋಚನೆಗಳು ಬಂದು ಮನಸ್ಸನ್ನು ಇನ್ನಷ್ಟು ರಾಡಿಗೊಳಿಸುತ್ತವೆ. ಮನೆಯ ಸದಸ್ಯರ ಮೇಲೆ ಉಂಟಾಗುವ ಅಸಮಾಧಾನ ಮನದಲ್ಲೇ ಉಳಿದುಹೋದರೆ, ಹೀಗಾಗುತ್ತದೆ ಎನ್ನುತ್ತಾರೆ ಮನೋವೈದ್ಯರು.
ಆದರೆ, ಹೀಗೆ ವರ್ತಿಸುತ್ತ ಹೋದರೆ ಒಂದಿಲ್ಲೊಂದು ದಿನ ಕುಟುಂಬದಲ್ಲಿ ಎಲ್ಲರಿಗೂ ತಾಳ್ಮೆ ಎಂಬುದು ನಾಶವಾಗುತ್ತದೆ. ನಮ್ಮ ಬದುಕನ್ನೇ ಹೀಗೆ ನಾಶದತ್ತ ದೂಡಿಕೊಳ್ಳುವುದರಲ್ಲಿ ಅರ್ಥವಿದೆಯಾ? ಮನದಲ್ಲಿ ಏನಾದರೂ ಅಸಮಾಧಾನ ಹುಟ್ಟಿದರೆ ಅದನ್ನು ಬಾಯಿಬಿಟ್ಟು ಹೇಳಿಕೊಳ್ಳುವುದು ಉತ್ತಮ ಪರಿಹಾರ. ಆಗಿಂದಾಗ್ಗೆ ಬೇಸರವನ್ನು ಪರಿಹಾರ ಮಾಡಿಕೊಳ್ಳುತ್ತಿದ್ದರೆ ಅದು ಗುಡ್ಡವಾಗಿ ಬೆಳೆಯುವುದಿಲ್ಲ. ಯಾವುದೋ ಕೋಪಕ್ಕೆ ಅದನ್ನು ಬೆಟ್ಟವಾಗಿ ಬೆಳೆಯಲು ಬಿಡಬಾರದು. ಎಷ್ಟೆಂದರೂ ನಮ್ಮದೇ ಬದುಕಲ್ಲವೇ? ಅದನ್ನು ಚೆಂದವಾಗಿ ಬಾಳಬೇಕಲ್ಲವೇ? <
- ಸಹನೆ