ಎಕ್ಸ್‌ಟ್ರಾಆರ್ಡಿನರಿ ಪ್ರತಿಭೆ, ಪ್ರಚಾರದಲ್ಲಿರುವ ಕಲೆ, ಗಾಡ್‌ಫಾದರ್- ಇವುಗಳಲ್ಲಿ ಯಾವುದಾದರೊಂದು ಇದ್ದರೂ ಸಾಕು, ಬಾಲಿವುಡ್‌ನಲ್ಲಿ ಉಳಿಯಬಹುದು. ಮೂರೂ ಇಲ್ಲದಿದ್ದರೆ ಮೂಲೆಗುಂಪಾಗಬೇಕಾಗುತ್ತದೆ- ಊರ್ಮಿಳಾ ಮಾತೋಂಡ್ಕರ್ ಥರ.
ಊರ್ಮಿಳಾಗೆ ಇಂದು 39 ವರ್ಷ ತುಂಬುತ್ತಿದೆ. ಬರ್ತ್‌ಡೇ ವಿಶ್ ಮಾಡೋಣ ಅಂದರೂ ಆಕೆ ನಾಟ್ ರೀಚಬಲ್. ಬಾಲಿವುಡ್‌ನ ಬೀದಿಗಳಲ್ಲಿ ಹೊಸ ಹುಡುಗಿಯರದ್ದೇ ಹಾವಳಿ. ಮಧ್ಯೆ ಮಧ್ಯೆ ಮಾಧುರಿ, ಶ್ರೀದೇವಿಯಂಥ ಆಂಟಿಯರ ಚಮಕ್. ಅಲ್ಲೊಂದು ಜಾಹೀರಾತು, ಇಲ್ಲೊಂದು ರಿಯಾಲಿಟಿ ಶೋ ಎಂದು ಕಾಲ ಕಳೆಯುತ್ತಿರುವ ಊರ್ಮಿಳಾ ಈಗ ಪರದೆಯಾಚಿನ ಅಭಿಸಾರಿಕೆ. 'ಒಳ್ಳೆ ಕತೆ ಇದ್ದರೆ ನಟಿಸಲು ರೆಡಿ' ಎಂದು ಕಳೆದ ವರ್ಷ ಹೇಳಿಕೊಂಡಿದ್ದಳು.
'ರಂಗೀಲಾ'ದಲ್ಲಿ ಪರದೆಯೆಲ್ಲ ಬೆಚ್ಚಗಾಗುವಂತೆ ಕುಣಿದಾಗ ಆಕೆಗಿನ್ನೂ 21ರ ಹರೆಯ. ನಿರ್ದೇಶಕ ರಾಮ್‌ಗೋಪಾಲ್ ವರ್ಮಾನ ಸಾಂಗತ್ಯ ಅಲ್ಲಿಂದಲೇ ಶುರು. ಅದು ಸತ್ಯಾ, ಕೌನ್, ಭೂತ್‌ಗಳಲ್ಲೂ ಮುಂದುವರಿಯಿತು. ಮುಂದೆಂದೂ ವರ್ಮಾನ ಹೆಂಡತಿ ಅವರಿಬ್ಬರ ಗೆಳೆತನವನ್ನು ಆಕ್ಷೇಪಿಸಿ, ಅದಕ್ಕೆ ಊರ್ಮಿಳಾ ಕೆನ್ನೆಗೆ ಬಾರಿಸಿ, ಅದರಿಂದ ವರ್ಮಾ ಜತೆಗಿನ ಬಾಂಧವ್ಯ ಮುರಿದುಕೊಂಡದ್ದೂ ಆಯಿತು. 2003ರ ಏಕ್ ಹಸೀನಾ ಥಿಯ ನಂತರ ಆಕೆಯ ಕೈಯಲ್ಲಿ ಯಾವುದೇ ಚಿತ್ರ ಇಲ್ಲ.
ಮಾಧುರಿ, ಶ್ರೀದೇವಿಯರಂತೆ ಈಕೆಯೂ ಎರಡನೇ ಇನ್ನಿಂಗ್ಸ್ ತೊಡಗುವಂತಾಗಲಿ ಎಂಬುದು ಈ ಚಿರಕನ್ನಿಕೆಯ ಅಭಿಮಾನಿಗಳ ಹಾರೈಕೆ.