ಲಕ್ಷ್ಮಿದೇವಮ್ಮನವರ ಬಗ್ಗೆ ಹಲವಾರು ಇಂಟರೆಸ್ಟಿಂಗ್ ವಿಷಯಗಳಿವೆ. ಅವರಿಗೀಗ 58 ವರ್ಷ. ಈ ಇಳಿ ವಯಸ್ಸಿನಲ್ಲೂ ತಮ್ಮ ಆರೂವರೆ ಎಕರೆ ಭೂಮಿಯಲ್ಲಿ ಹಗಲಿರುಳು ದುಡಿದು, ವರ್ಷದ ಎಲ್ಲಾ ಖರ್ಚುವೆಚ್ಚ ಕಳೆದು, 5 ಲಕ್ಷ ರು. ಲಾಭ ಗಳಿಸುತ್ತಾರೆ. ಇವರು ಪೇಟೆಯಿಂದ ಹಳ್ಳಿಗೆ ಬಂದು ಯಶಸ್ವಿಯಾದವರು. ಮತ್ತು, ಮಂಡ್ಯ ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ ಪುರಸ್ಕೃತೆ!
ಕೃಷಿ ಕ್ಷೇತ್ರದ ಹೆಚ್ಚಿನ ಕೆಲಸವನ್ನು ಮಹಿಳೆಯೇ ಮಾಡಿದರೂ ಯಶಸ್ಸಿನ ಲಾಭ ಪಡೆಯುವವರು ಮಾತ್ರ ಪುರುಷರು. ಆದರೆ ಕೆ.ಆರ್.ಪೇಟೆ ತಾಲೂಕಿನ ಕಂಚನಹಳ್ಳಿಯ ಲಕ್ಷ್ಮಿದೇವಮ್ಮನವರ ವಿಚಾರದಲ್ಲಿ ಶ್ರಮ, ಯಶಸ್ಸು, ಫಲ ಎಲ್ಲವೂ ಅವರದೇ. ರೈತಾಪಿ ಕುಟುಂಬದ ಲಕ್ಷ್ಮಿದೇವಮ್ಮ ಕೈಹಿಡಿದದ್ದು ಪಾಂಡವಪುರದ ಪೋಸ್ಟ್ಮಾಸ್ಟರ್ ರಾಮಕೃಷ್ಣ ಅವರನ್ನು. ತಂದೆ ಕಾವೇರಿಗೌಡರ ಊರು ಹೊಸಕೋಟೆ. ಪತಿ ಇತರೆ ಊರುಗಳಿಗೆ ವರ್ಗವಾದರೂ ಲಕ್ಷ್ಮಿದೇವಮ್ಮ ಪಾಂಡವಪುರದಲ್ಲಿ ನೆಲೆಸಿದ್ದರು. ಹೊಲಿಗೆ ತರಬೇತಿ ಕೇಂದ್ರ ನಡೆಸುತ್ತಿದ್ದರು. 10 ಹೊಲಿಗೆ ಯಂತ್ರಗಳ ಒಡತಿ, ಸಿದ್ಧ ಉಡುಪುಗಳನ್ನು ಮೈಸೂರಿಗೆ ಕಳುಹಿಸುತ್ತಿದ್ದರು. ಈ ವೃತ್ತಿ ಲಕ್ಷ್ಮಿದೇವಮ್ಮನವರಿಗೆ ಖುಷಿ ತರಲಿಲ್ಲ. ತಂದೆಯ ಸಲಹೆ ಮೇರೆಗೆ ಕಂಚಹಳ್ಳಿಯಲ್ಲಿ 3 ಎಕರೆ ಜಮೀನು ಖರೀದಿಸಿ ಅಲ್ಲಿಯೇ ನೆಲೆಸಿದರು. ಜಮೀನು ಆರೂವರೆ ಎಕರೆಗೆ ವಿಸ್ತಾರವಾಯಿತು. ಕಬ್ಬು, ಭತ್ತ, ತೆಂಗು, ಬಾಳೆ ಹೀಗೆ ವೈವಿಧ್ಯಮಯ ಬೆಳೆ ಬೆಳೆಯತೊಡಗಿದರು. ಜೊತೆಗೆ ಹೈನುಗಾರಿಕೆ ಆರಂಭಿಸಿದರು. ಮೈಸೂರಿನ ಬಾನುಲಿ ಕೃಷಿಕರ ಬಳಗ ಆಯೋಜಿಸಿದ್ದ ತರಬೇತಿಯೊಂದರಲ್ಲಿ ಭಾಗವಹಿಸಿ ಅಲಂಕಾರಿಕ ಮೀನುಗಳ ಅಂಗಡಿಯೊಂದನ್ನು ಕೆ.ಆರ್.ಪೇಟೆಯಲ್ಲಿ ಆರಂಭಿಸಿ ನಡೆಸತೊಡಗಿದರು.
ಎಕರೆಗೆ 80 ಟನ್ ಕಬ್ಬು
ಪತಿ ರಾಮಕೃಷ್ಣ ನಿವೃತ್ತಿಯ ನಂತರ ಬೇಸಾಯದಲ್ಲಿ ಪತ್ನಿಯ ಜೊತೆಗೂಡಿದ್ದಾರೆ. ಮಗ ಉದ್ಯೋಗಿ, ರಜಾದಿನಗಳಲ್ಲಿ ತಾಯಿಗೆ ನೆರವಾಗುತ್ತಾರೆ. ಪ್ರಯೋಗಶೀಲ ಮನಸ್ಸಿನ ಲಕ್ಷ್ಮಿದೇವಮ್ಮ ಕಬ್ಬಿನಲ್ಲಿ ಅಂತರ ಬೆಳೆಯಾಗಿ ಮುಸುಕಿನ ಜೋಳ ಬೆಳೆದಿದ್ದಾರೆ. ಜೋಡಿ ಸಾಲು ಕಬ್ಬಿನಲ್ಲಿ ತರಗಿನ ನಿರ್ವಹಣೆ ಮೂಲಕ ಭೂಮಿಯ ಫಲವತ್ತತೆ ಹೆಚ್ಚಿಸಿದ್ದಾರೆ. ತೆಂಗಿನ ನಡುವೆ ಮೇವಿನ ಜೋಳ ಬೆಳೆಯುತ್ತಾರೆ. ಮೇವಿನ ಬೆಳೆ ನಡುವೆ ಸಪೋಟ ಬೆಳೆಯುತ್ತಾರೆ. ತೋಟದ ಬದುಗಳಲ್ಲಿ ತೇಗ ಬೆಳೆಸಿದ್ದಾರೆ. ಕೃಷಿ ಇಲಾಖೆ ಸಬ್ಸಿಡಿ ಪಡೆದು ಬಯೋಡೈಜೆಸ್ಟರ್ ಅಳವಡಿಸಿಕೊಂಡು, ದ್ರವರೂಪದ ಗೊಬ್ಬರವನ್ನು ಜಮೀನಿಗೆ ನೀಡುತ್ತಿದ್ದಾರೆ. ರಾಸಾಯನಿಕ ಗೊಬ್ಬರಗಳ ಅವಲಂಬನೆ ಕ್ರಮೇಣ ಕಡಿಮೆ ಮಾಡಿಕೊಳ್ಳುತ್ತಾ, ಈಗ ಶೇ. 90ರಷ್ಟು ಸಾವಯವ ಗೊಬ್ಬರ ಹಾಗೂ ಕಾಂಪೋಸ್ಟ್ ಬಳಕೆ. ಎಕರೆಗೆ 80 ಟನ್ ಕಬ್ಬಿನ ಇಳುವರಿ ಪಡೆದಿದ್ದಾರೆ. ಕಳೆದ ವರ್ಷ 600 ಟನ್ ಕಬ್ಬು ಬೆಳೆದ ತೃಪ್ತಿ.
ಕೃಷಿ ವಿಜ್ಞಾನಿಗಳು, ಅಧಿಕಾರಿಗಳು ಈ ರೈತ ಮಹಿಳೆ ಸಾಧನೆ ಮೆಚ್ಚಿದ್ದಾರೆ. ಮಂಡ್ಯ ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ ಕೂಡ ಲಕ್ಷ್ಮಿದೇವಮ್ಮ ಅವರಿಗೆ ಸಂದಿದೆ. ಮೈಸೂರು ಆಕಾಶವಾಣಿ, ರಾಜ್ಯ ವಾರ್ತಾ ಇಲಾಖೆ ಆಯೋಜಿಸಿದ್ದ ಕೃಷಿ ಮತ್ತು ಮಹಿಳಾ ಸಬಲೀಕರಣ ಕಾರ್ಯಾಗಾರದಲ್ಲಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಮಂಡ್ಯ ಹಾಗೂ ಮೈಸೂರಿನಲ್ಲಿ ನಡೆಯುವ ಕೃಷಿ ವಿಚಾರ ಸಂಕಿರಣಗಳು, ಪ್ರಾತ್ಯಕ್ಷಿಕೆಗಳಿಗೆ ಲಕ್ಷ್ಮಿದೇವಮ್ಮ ತಪ್ಪದೆ ಹಾಜರ್. ಹೊಸ ತರಬೇತಿ ಮತ್ತು ಮಾಹಿತಿಗಳನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಯೇ ಸಿದ್ಧ.
ಕೃಷಿ ಲಾಭದಾಯಕ. ಸರ್ಕಾರ ಮತ್ತಷ್ಟು ಪ್ರೋತ್ಸಾಹ ನೀಡಬೇಕು. ನಿರುದ್ಯೋಗಿ ಯುವಕರು ಕೆಲಸಕ್ಕಾಗಿ ಅಲೆಯುವ ಬದಲು ಭೂಮಿಯಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ದುಡಿಯಬೇಕು ಎನ್ನುವ ಆಶಯ ಲಕ್ಷ್ಮಿದೇವಮ್ಮನವರದು. ಅವರನ್ನು ಅಭಿನಂದಿಸಲು: 9902439683.
- ಕೆ. ಎನ್. ರವಿ
knravimandya@gmail.com