ಹುಲಿಯನ್ನು ಯಾವ ರೀತಿಯಿಂದಲೂ ಮೋಸಗೊಳಿಸುತ್ತಾನೆ ಈ ಹುಲುಮಾನವ. ಥಾಯ್ಲೆಂಡ್ನಲ್ಲಿ ಬೌದ್ಧ ಸನ್ಯಾಸಿಗಳು ಹುಲಿಗಳಿಗೆ ಅಹಿಂಸಾ ಪಾಠ ಹೇಳಿಕೊಟ್ಟು ಮಂಕಾಗಿಸಿದ್ದು ಜಗಜ್ಜಾಹೀರ. ಇವತ್ತಿಗೂ ಥಾಯ್ಲೆಂಡಿನ 'ಟೈಗರ್ ಟೆಂಪಲ್'ನ ಆ ಹುಲಿಗಳು ಗರ್ಜಿಸುವುದೇ ಇಲ್ಲ. ಹೋಗಲಿ, ಮನುಷ್ಯರು ಹತ್ತಿರ ಹೋದರೂ ಬೆಕ್ಕುಗಳಂತೆ ಸುಮ್ಮನೆ ಇರುತ್ತವೆ. ಹಾರುವುದು, ಜಿಗಿಯುವುದು ಅಂತೂ ಗೊತ್ತೇ ಇಲ್ಲ. ಆ ಹುಲಿಗಳನ್ನು ಮೋಸಗೊಳಿಸಿ, ಮಾನವ ಅದನ್ನು ಟೂರಿಸಂನ ಭಾಗವನ್ನಾಗಿ ಪರಿವರ್ತಿಸಿಕೊಂಡಿದ್ದಾನೆ.
ನಿಜಕ್ಕೂ ಇದು ಅನ್ಯಾಯವೇ. ಈ ನಡುವೆ ಅಮೆರಿಕದ ಕ್ಯಾಲಿಫೋರ್ನಿಯಾದ ಝೂವೊಂದರಲ್ಲಿ ಅವನು ಮತ್ತೆ ಹುಲಿಗೆ ಮೋಸ ಮಾಡಿದ್ದಾನೆ. ಆದರೆ, ಈ ಮೋಸ ಹುಲಿಯ ಉಳಿವಿಗಾಗಿ!
ಹೌದು, ಇತ್ತೀಚೆಗೆ ಅಲ್ಲೊಂದು ಹೆಣ್ಣು ಹುಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿತು. ದುರಾದೃಷ್ಟ ಅಂದ್ರೆ ಅವು ನಾಲ್ಕು ದಿನವೂ ಬದುಕಲಿಲ್ಲ. ಹೆತ್ತ ಮಕ್ಕಳು ಸತ್ತವೆಂದು ಖಿನ್ನತೆಗೊಳಗಾದ ಆ ಹುಲಿ ದಿನೇ ದಿನೇ ಅದೇ ಚಿಂತೆಯಲ್ಲಿ ಕೊರಗಲು ಶುರುಮಾಡಿತು. ಹೊಟ್ಟೆಗೂ ತಿನ್ನದೇ ಉಪವಾಸ ಸತ್ಯಾಗ್ರಹ ನಡೆಸತೊಡಗಿತು. ಮರಿಹುಲಿ ಜೊತೆ ಮಾಡಿದರೆ ಸರಿ ಹೋಗುತ್ತೆ ಎಂದು ವೈದ್ಯರೇನೋ ಹೇಳಿದರು. ಆದರೆ, ಅಂಥ ಮರಿಯನ್ನು ಎಲ್ಲಿಂದ ತರೋದು?
ತುಂಬಾ ಚತುರನಾಗಿದ್ದ ಝೂ ಕೀಪರ್, ಹಂದಿಮರಿಗಳಿಗೆ ಕೃತಕ ಹುಲಿಚರ್ಮದ ಹೊದಿಕೆ ಸುತ್ತಿ ಆ ತಾಯಿ ಹುಲಿಯ ಜೊತೆಗೆ ಬಿಟ್ಟ. ತಾಯಿ ಹುಲಿ ಆ ಹಂದಿಮರಿಗಳನ್ನು ತಿನ್ನಲು ಹೋಗಲಿಲ್ಲ. ತನ್ನ ಮಕ್ಕಳೆಂದೇ ಭಾವಿಸಿ, ಅವುಗಳಿಗೆ ಹಾಲು ಕೊಡಲು ಶುರುಮಾಡಿತು. ಹುಲಿ ಆರೋಗ್ಯವಾಗಿದೆ. ಇವತ್ತಿಗೂ ಆ ಹಂದಿಮರಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಪೋಷಿಸುತ್ತಿದೆ. ಮಾನವನ ಈ ಮೋಸವನ್ನು ಪ್ರಶಂಸಿಸಲೇಬೇಕಲ್ಲವೇ?