ಬೈಟುಕಾಫಿ

ನಾರಿ ಕೇಳೆ

ನಾರಿಯರೂ ತೆಂಗಿನಮರವೇರಿ ಕಾಯಿ ಕೀಳೋದನ್ನು ಅಲ್ಲಲ್ಲಿ ಕೇಳಿರ್ತೀರಿ ಬಿಡಿ. ಕಾಸರಗೋಡು ನಾರಿಯರು ಅದಕ್ಕಿಂತ 'ಎತ್ತರ'ಕ್ಕೆ ಏರಿದ್ದಾರೆ. ಅಜಮಾಸು 50 ಅಡಿ ಎತ್ತರದ ತೆಂಗಿನಮರವನ್ನು ಸರಸರನೆ ಏರ್ತಾರೆ. ಕಾಯಿಗಳ ಗೊನೆಗಿಂತ ಮೇಲೇರಿ ಸಂ'ಶೋಧನೆ' ಮಾಡ್ತಾರೆ.
ಸುಳ್ಳಲ್ಲ ಮಾರಾಯ್ರೆ. ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರಕ್ಕೆ (ಸಿಪಿಸಿಆರ್‌ಐ) ಬಂದ್ರೆ ಇಂಥ ದೃಶ್ಯ ಕಾಣುವುದುಂಟು. ಮುಗಿಲಿಗೆ ಸನಿಹದಲ್ಲಿದ್ದಾರೆ ಎನ್ನುವ ಅನುಭವ ಮರದ ಬುಡದಲ್ಲಿದ್ದವರಿಗೆ. ಅವರು ಮಾತ್ರ ತಮ್ಮ ಕಾರ್ಯ ಮಾಡ್ತಾ ಇರ್ತಾರೆ. ಈ ಕೇಂದ್ರದಲ್ಲಿ ನಾರಿಕೇಳದ ಪುಷ್ಪ ಪರಾಗಸ್ಪರ್ಶ ಮಾಡೋರು ನಾರಿಯರು. ಹೆಣ್ಮಕ್ಕಳು ಇಂಥ ಕೆಲಸ ಮಾಡ್ತಿರೋದು ದೇಶದಲ್ಲೇ ಇದು ಮೊದಲು!
ಕುಟ್ಟಿಕೋಲ್‌ನ ಬಿಂದು ಅಶೋಕ್, ಶಾರದಾ ಹಾಗೂ ಪೈವಳಿಕೆ ಬಾಯಿಕಟ್ಟೆಯ ಕೃಷ್ಣವೇಣಿ ಮರವೇರಿ ಪ್ರಯೋಗ ನಡೆಸುವ ಧೀರೆಯರು. ಅವರಲ್ಲಿ ನಿವಾಸಿ 24ರ ಹರೆಯದ ಕೃಷ್ಣವೇಣಿ ಕನ್ನಡತಿ. ಬೆಳಗ್ಗೆ ಮರ ಏರಿ ಕಸ ಕಡ್ಡಿ ಭಾಗ ಬೇರ್ಪಡಿಸುವುದು, ಕೀಟಬಾಧೆ ತಡೆಗೆ ಶಿರೋಭಾಗದಲ್ಲಿ ಔಷಧ ಸಿಂಪಡಣೆ ಮಾಡುವುದು, ಹೈಬ್ರಿಡ್ ತಳಿಯ ಬೀಜಗಳನ್ನು ಕೃತಕ ಪರಾಗಸ್ಪರ್ಶ ಮೂಲಕ ಸೃಷ್ಟಿಸುವುದು ಈ ಧೀರೆಯರ ಕಾಯಕ. ಇವರಿಗೆ ಸಿಪಿಸಿಆರ್‌ಐ ವತಿಯಿಂದ ದಿನಕ್ಕೆ 600 ವೇತನ, ವಿಮಾ ಸೌಲಭ್ಯವಿದೆ.
ಮರದಲ್ಲಿ ಹೊಸದಾಗಿ ಅರಳುವ ಹೂವಿನ ಸಂಗ್ರಹ, ಪ್ರಯೋಗಾಲಯದಲ್ಲಿ ಅವುಗಳ ಸಂಸ್ಕರಣೆ, ಗಂಡು ಹೂ ಬೇರ್ಪಡಿಸುವಿಕೆ, ಪರಾಗಸ್ಪರ್ಶ ಬಳಿಕ ಹೂವಿಗೆ ಚೀಲ ಕಟ್ಟುವುದು, ನಂತರ ತೆಗೆಯವುದು ಮುಂತಾದ ಪ್ರಕ್ರಿಯೆಗಳಲ್ಲಿ ಮಹಿಳೆಯರೂ ಭಾಗಿಯಾಗುತ್ತಾರೆ.

ಹೇಗೆ ಸಾಧ್ಯವಾಯಿತು?:
ಕಾರ್ಮಿಕರ ಕೊರತೆ ಕೃಷಿ ಕ್ಷೇತ್ರದಲ್ಲಿ ಇದ್ದದ್ದೇ. ಸಿಪಿಸಿಆರ್‌ಐ ತೆಂಗು ಕೀಳಲೂ ಆ ಸಮಸ್ಯೆ ಎದುರಾಯಿತು.  ಆಗ ಕೇಂದ್ರದ ಅಧಿಕಾರಿಗಳು ತೆಂಗು ತಳಿ ಸಂರಕ್ಷಣೆ ಹಾಗೂ ಯಾಂತ್ರಿಕವಾಗಿ ಮರ ಏರುವ ಯೋಜನೆಯಡಿ 'ಫ್ರೆಂಡ್ಸ್ ಆಫ್ ಕೊಕೊನಟ್ ಟ್ರೀ' ಎಂಬ ಆಂದೋಲನವನ್ನು ವರ್ಷದ ಹಿಂದೆ ಹಮ್ಮಿಕೊಂಡರು.
ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಹಾಗೂ ತೆಂಗು ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಈ ಯೋಜನೆಯನ್ವಯ ಉಚಿತವಾಗಿ 34 ಮಹಿಳೆಯರು ಸೇರಿದಂತೆ 207 ಗ್ರಾಮೀಣ ನಿವಾಸಿಗಳಿಗೆ ಕಾಯಿ ಕೀಳುವ ತರಬೇತಿ ನೀಡಲಾಯಿತು.  

ಕಷ್ಟವಾ? ಹಂಗಂದ್ರೇನು?
ತೆಂಗಿನಮರವೇರಿ ಪರಾಗಸ್ಪರ್ಶ ಮಾಡುವ ಕೃಷ್ಣವೇಣಿ ರಜಾ ದಿನಗಳಲ್ಲಿ ಊರಿನಲ್ಲಿ ತೆಂಗಿನ ಕಾಯಿ ಕೀಳುತ್ತಾರೆ. ದಿನಕ್ಕೆ 40 ತೆಂಗಿನಮರಗಳನ್ನು ಸಲಕರಣೆ ಸಹಾಯದಿಂದ ಏರಿ ಕಾಯಿ ಕೀಳುತ್ತಾರೆ. ಮರಕ್ಕೆ ಈಕೆಗೆ 20ರಂತೆ ಕೂಲಿ. ಎಸ್ಸೆಸ್ಸೆಲ್ಸಿವರೆಗೆ ಕಲಿತ ಈಕೆ ಮೂರು ತಿಂಗಳಿನಿಂದ ಪರಾಗಸ್ಪರ್ಶ ಪ್ರಯೋಗದಲ್ಲಿ ನಿರತಳಾಗಿದ್ದಾಳೆ. ಕೆಲಸದಲ್ಲಿ ಈಕೆಗೆ ತೃಪ್ತಿಯಿದೆ. ಕೃಷ್ಣವೇಣಿ ಊರು ಪೈವಳಿಕೆಯಲ್ಲಿ ಪುರುಷರು ತೆಂಗಿನಕಾಯಿ ಕಿತ್ತರೆ ಮರಕ್ಕೆ 15 ಕೊಟ್ಟರೆ, ಈಕೆ ಮಹಿಳೆಯೆಂಬ ಅಭಿಮಾನದಿಂದ 20 ಕೊಡುತ್ತಾರೆ ಎಂಬುದು ಹೆಮ್ಮೆ.

-ಕೃಷ್ಣಮೋಹನ ತಲೆಂಗಳ
ಚಿತ್ರಗಳು: ಶ್ಯಾಂ ಕುಂಚಿನಡ್ಕ , ಸಿಪಿಸಿಐರ್‌ಐ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ