ಒಮ್ಮೆಲೆ ಕಸಿವಿಸಿಯಾಗುವಂಥ ಪ್ರಶ್ನೆ. ನಿಮ್ಮನ್ನು ಏಕಾಏಕಿ ಯಾರಾದರೂ ಈ ಪ್ರಶ್ನೆಯನ್ನು ಕೇಳಿದರೆಂದಿಟ್ಟುಕೊಳ್ಳಿ. ತಕ್ಷಣಕ್ಕೆ ನಿಮ್ಮ ತಲೆಯಲ್ಲಿ ಏನೇನೋ ಗೊಂದಲ, ಯೋಚನಾ ಸರಣಿ ಹುಟ್ಟಿಕೊಳ್ಳುತ್ತದೆ. ಯಾಕೆ ಹೀಗೆ ಕೇಳುತ್ತಿರಬಹುದು? ನನ್ನ ಮೈಯಿಂದ ಬೆವರಿನ ವಾಸನೆ ಏನಾದರೂ ಹೊಮ್ಮುತ್ತಿರಬಹುದೇ ಎಂಬ ಅನುಮಾನ ಕಾಡಿ, ಪ್ರಶ್ನೆ ಕೇಳಿದವರಿಗೆ ಗೊತ್ತಾಗದಂತೆ ನಿಮ್ಮ ಆಘ್ರಾಣೇಂದ್ರಿಯವನ್ನು ಜಾಗೃತಗೊಳಿಸಿಕೊಳ್ಳುತ್ತೀರಿ. ಬೆಳಗ್ಗೆ ಮೈಗೆ ಸೋಪು ಹಚ್ಚಿ ಸರಿಯಾಗಿ ತಿಕ್ಕಿ ಸ್ನಾನ ಮಾಡಿದ್ದೆನಲ್ಲಾ? ಮತ್ತೇಕೆ ಈ ಪ್ರಶ್ನೆ? ಅಥವಾ ತೊಟ್ಟ ಬಟ್ಟೆ ಎಲ್ಲಾದರೂ ಸರಿಯಾಗಿ ಒಣಗದೇ ಮುಗ್ಗುಲು ಬಡಿಯುತ್ತಿರಬಹುದೇ? ಅಥವಾ ನಡೆಯುವ ಗಡಿಬಿಡಿಯಲ್ಲಿ ಏನನ್ನಾದರೂ ತುಳಿದು...?
ಹೀಗೆ ತಲೆಯಿಂದ ಕಾಲಿನವರೆಗೆ, ದಿನದ ಆರಂಭದಿಂದ ಈವರೆಗಿನ ಎಲ್ಲ ಸಂಗತಿಯನ್ನೂ ಒಮ್ಮೆ ಸಿಂಹಾವಲೋಕನಕ್ಕೆ ಒಳಪಡಿಸುತ್ತೀರಿ. ಇದ್ಯಾವುದರಲ್ಲೂ ಲೋಪ ಇಲ್ಲ ಎಂದಾಕ್ಷಣ ತುಸು ಧೈರ್ಯ ತಂದುಕೊಂಡು ಹಾಗೆ ಪ್ರಶ್ನಿಸಿದವರನ್ನೇ ಅಂಥ ಅನುಮಾನ ಬಂದದ್ದೇಕೆಂದು ಮರು ಪ್ರಶ್ನಿಸುತ್ತೀರಿ. ಸರಿ, ಮತ್ತೆ ಅವರು ನಿಮ್ಮನ್ನು ಹಾಗೆಯೇ ಪ್ರಶ್ನಿಸಿದರೆ ತುಸು ಒಳಹೊಕ್ಕು ನಿಮ್ಮ ಯಾವುದೋ ಲೋಪದ ಬಗ್ಗೆ ಪರಿಶೀಲನೆ ಆರಂಭವಾಗುತ್ತದೆ. ನೀವು ನೌಕರರೋ, ಉದ್ಯಮಿಯೋ ಆಗಿದ್ದರೆ ನಿಮ್ಮ ವ್ಯವಹಾರದ ಶುದ್ಧತೆಯ ಬಗ್ಗೆ ಯೋಚಿಸಲಾರಂಭಿಸುತ್ತೀರಿ. ಮೇಲಿಂದ ಮೇಲೆ ಈ ಪ್ರಶ್ನೆಯೇ ಬರಲಾರಂಭಿಸಿದರೆ, ನಿಮ್ಮ ನೈತಿಕತೆ, ಚಾರಿತ್ರ್ಯ, ಉದ್ಯೋಗ, ವ್ಯವಹಾರ, ನಿತ್ಯದ ಚಟುವಟಿಕೆ, ಸಂಬಂಧ, ಸ್ನೇಹ, ಕುಟುಂಬ ಇತ್ಯಾದಿಗಳ ಬಗ್ಗೆಯೆಲ್ಲಾ ನೀವು ಪರಿಶೀಲನೆಗೆ ತೊಡಗುತ್ತೀರಿ. ಒಂದು ಹಂತದಲ್ಲಿ ಕಿರಿಕಿರಿ ಹೆಚ್ಚಿ ಕೋಪವೂ ಬರಬಹುದು. ಇಷ್ಟಾದರೂ ನಿಮ್ಮ ನಿಜವಾದ ಶುದ್ಧತೆಯ ಬಗ್ಗೆ ಯೋಚಿಸುವುದೇ ಇಲ್ಲ.
ಹಾಗಿದ್ದರೆ ನಿಜವಾದ ಶುದ್ಧತೆ ಯಾವುದು? ಅದು ದೇಹಕ್ಕೆ, ಭೌತಿಕ ಯಾವುದೇ ವ್ಯವಹಾರಕ್ಕೆ ಸಂಬಂಧಿಸಿದ್ದಲ್ಲವೇ ಅಲ್ಲ. ಶುದ್ಧತೆ ಎಂಬ ಪದ ಅನ್ವಯವಾಗುವಂತಿದ್ದರೆ ಅದು ಮನಸ್ಸಿಗೆ ಮಾತ್ರ. ಮನಸ್ಸು ಶುದ್ಧವಾಗಿರುವ ವ್ಯಕ್ತಿ ಮಾತ್ರ ಬೇರೆಲ್ಲ ರೀತಿಯಿಂದಲೂ ಶುದ್ಧನಾಗಿರಲು ಸಾಧ್ಯ.
ಸುಖದ ಪರಾಕಾಷ್ಠೆಯಲ್ಲಿರಲು ಇಂಥ ಮನಸ್ಸಿನ ವ್ಯಕ್ತಿಗಳಿಂದ ಮಾತ್ರ ಸಾಧ್ಯ. ಯಶಸ್ಸು ಗಳಿಕೆಯ ಹಾದಿಯಲ್ಲಿ ಚಿತ್ತಶುದ್ಧ ಕಳಕೊಳ್ಳುವುದು ಸಾರ್ಥಕ ಎನಿಸುವುದಿಲ್ಲ. ಯಶಸ್ಸಿನ ಹಾದಿಗೆ ತಂತ್ರಗಳು ಬೇಕು ನಿಜ. ಆದರೆ, ಚಿತ್ತ ಶುದ್ಧಿಯಿಲ್ಲದ ಯಶಸ್ಸಿಗೆ ಯಾವುದೇ ಮೌಲ್ಯವಿಲ್ಲ. ಶುದ್ಧ ಮನಸ್ಸು ಮಾತ್ರ ವಿಪತ್ತನ್ನು ಹತ್ತಿರ ಬರಗೊಡದೇ ಯಶಸ್ಸನ್ನು ಗಳಿಸಿಕೊಡಬಲ್ಲುದು. ಇದನ್ನೇ ಮಗುವಿನ ಮನಸ್ಸು ಎನ್ನುವುದು. ಅಂಥ ಮನಸ್ಸಿಗೆ ದುಃಖವೇ ಇಲ್ಲ. ಇದ್ದರೂ ಅದು ಕ್ಷಣಿಕ.