ಆ ವರ್ಷ ಭೀಕರ ಬರಗಾಲ. ಶ್ರಾವಣ ಮುಗಿಯುತ್ತ ಬಂದರೂ ಮಳೆರಾಯನ ಪತ್ತೆಯೇ ಇಲ್ಲ. ಮಳೆಯೇ ಇಲ್ಲ ಎಂದ ಮೇಲೆ ಬಿತ್ತುವುದು ಹೇಗೆ? ಬೆಳೆ ಬೆಳೆದಿಲ್ಲ ಎಂದರೆ ಮುಂದಿನ ವರ್ಷ ಹೊಟ್ಟೆಪಾಡೇನು? ಊರ ಜನರೆಲ್ಲ ಕಂಗಾಲಾದರು. ಮಳೆಗಾಗಿ ಪ್ರಾರ್ಥಿಸಿ ದೇವಸ್ಥಾನದಲ್ಲಿ ಪರ್ಜನ್ಯ, ವಿಶೇಷ ಪೂಜೆ ನಡೆಸಬೇಕು ಎಂದು ತೀರ್ಮಾನಿಸಿದರು. ಆ ದಿನ ಎಲ್ಲರೂ ದೇವಾಲಯದಲ್ಲಿ ಸೇರಿದರು. ಒಬ್ಬ ಪುಟ್ಟ ಬಾಲಕ ಮಾತ್ರ ತನ್ನೊಂದಿಗೆ ಕೊಡೆ ತಂದಿದ್ದ!
ದಾರಿ
ನಾಲ್ಕು ರಸ್ತೆ ಸೇರುವಲ್ಲಿ ಆತ ನಿಂತಿದ್ದ. ಭಾರಿ ಗೊಂದಲ. ಯಾವ ರಸ್ತೆ ಎಲ್ಲಿಗೆ ಹೋಗುತ್ತದೆ ಗೊತ್ತಿಲ್ಲ. ಅಷ್ಟರಲ್ಲಿ ವೃದ್ಧರೊಬ್ಬರು ನಿಧಾನವಾಗಿ ನಡೆದು ಬಂದರು. 'ಸರ್ ಈ ರಸ್ತೆ ಎಲ್ಲಿಗೆ ಹೋಗುತ್ತದೆ?' 'ನಿನಗೆ ಎಲ್ಲಿಗೆ ಹೋಗಬೇಕಪ್ಪಾ?' 'ಗೊತ್ತಿಲ್ಲ, ಸುಮ್ಮನೆ ನಡೆಯುತ್ತ ಬಂದೆ.' 'ಹಾಗಾದರೆ ನಿನಗೆ ಯಾವ ರಸ್ತೆ ಆದರೇನು? ಯಾವ ರಸ್ತೆಯಲ್ಲಾದರೂ ನಡೆ. ಆ ರಸ್ತೆ ಎಲ್ಲಿಗೆ ತಲುಪುತ್ತದೆ ಎಂದು ಗೊತ್ತಾದರೆ ನಿನ್ನಲ್ಲಿ ಆಗುವ ವ್ಯತ್ಯಾಸವಾದರೂ ಏನು?' ಎಂದು ಪ್ರಶ್ನಿಸದ ತಾತ, ಮಾತು ಮುಂದುವರಿಸದೆ ಹೆಜ್ಜೆ ಹಾಕಿದರು.