ಬೈಟುಕಾಫಿ

ಕಾಫಿಡೇ

ಕಾಫಿ ಬೀಜವಾಗುವ ಹಾದಿಯಲ್ಲಿ ಹೂವರಳುವ ಪ್ರಕ್ರಿಯೆ ಸಸ್ಯಸಂಕುಲದ ವೈಶಿಷ್ಟ್ಯಗಳಲ್ಲೊಂದು. ಹಾರ್ಮೋನುಗಳ ಮೇಲಾಟ, ನೀರಿನ ಸಾಂಗತ್ಯ, ಸಸ್ಯದ ಜೈವಿಕ ಗಡಿಯಾರ ಎಲ್ಲ ಮೇಳೈಸುವ ಈ ನಿಸರ್ಗದಾಟವನ್ನು ಗಮನಿಸುವುದೇ ಒಂದು ಸೊಗಸು. ಈ ಸೌಂದರ್ಯ ಕೂಡ ಪ್ರೇಮದಿಂದಲೇ ಫಲಿಸಿದ್ದು. ಮಿಗಿಲಾಗಿ ಕಾಫಿ ಮೇಲೆ ನಮ್ಮಗಳ ಪ್ರೇಮವನ್ನು ಉಕ್ಕೇರಿಸಿದ್ದು...

ಕಾಫಿಯ ಸುವಾಸನೆ ಹಾಗೂ ಸ್ವಾದ ಯಾರಿಗೆ ಗೊತ್ತಿಲ್ಲ? ಬಿರು ಬಿಸಿಲಾಗಲಿ, ಜಡಿ ಮಳೆಯಾಗಲಿ, ಮರಗಟ್ಟಿಸುವ ಚಳಿಯಾಗಲಿ. ಚುಮುಚುಮು ನಸುಕಿನಲ್ಲಿ ಒಂದು ಗುಟುಕು ಕಾಫಿ ಎನ್ನುವ ದ್ರವ ಹೊಟ್ಟೆಗೆ ಬಿದ್ದರೆ ದೇಹದಲ್ಲಿ ಚೈತನ್ಯ ಸಂಚಾರವಾಗಿಬಿಡುತ್ತದೆ. ನಿಯಮಿತ ಹೊತ್ತಿನಲ್ಲಿ ಕಾಫಿ ಬೇಕೇ ಬೇಕು ಎನ್ನುವವರನ್ನು ಕೇಳಿ ನೋಡಿ, ಕಾಫಿಯ ಗುಣಗಾನ ಆರಂಭ. ಇಂತಿಪ್ಪ ಕಾಫಿಯ ಇನ್ನೊಂದು ವಿಶೇಷ ಗೊತ್ತಾ?
ಕಾಫಿ ಬೀಜವಾಗುವ ಹಾದಿಯಲ್ಲಿ ಹೂವರಳುವ ಪ್ರಕ್ರಿಯೆ ಸಸ್ಯಸಂಕುಲದ ವೈಶಿಷ್ಟ್ಯಗಳಲ್ಲೊಂದು. ಹಾರ್ಮೋನುಗಳ ಮೇಲಾಟ, ನೀರಿನ ಸಾಂಗತ್ಯ, ಸಸ್ಯದ ಜೈವಿಕ ಗಡಿಯಾರ ಎಲ್ಲ ಮೇಳೈಸುವ ಈ ನಿಸರ್ಗದಾಟವನ್ನು ಗಮನಿಸುವುದೇ ಒಂದು ಸೊಗಸು.
ಕಾಫಿ ಹೂ ಅರಳಿಸಲು ಹೂ ಮಳೆ (ಬೇಸಿಗೆಯ ಮಳೆ) ಅತ್ಯಗತ್ಯ. ನಿಸರ್ಗದ ಚೋದ್ಯ ಅಂದರೆ ಗಿಡಕ್ಕೆ ಮೇಲಿನಿಂದಲೇ ನೀರು ಬೀಳಬೇಕು. ಬುಡಕ್ಕೆ ನೀರು ಕೊಟ್ಟರೆ ಕಾಫಿ ಹೂ ಸರಿಯಾಗಿ ಬಿಡುವುದಿಲ್ಲ. ಅಂದರೆ ಫೆಬ್ರವರಿ-ಮಾರ್ಚ್‌ನಲ್ಲಿ ಒಂದೆರಡು ಮಳೆಯಾದರೆ ಸಾಕು. ಕಾಫಿ ಹೂ ಅರಳಿ ಇಳುವರಿ ಬರುತ್ತದೆ. ಮಳೆ ಇಲ್ಲದಿದ್ದರೆ ತೋಟದ ಮಾಲೀಕರೆಲ್ಲ ಕಾಫಿ ಗಿಡಗಳಿಗೆ ಸ್ಪ್ರಿಂಕ್ಲರ್ ಮೂಲಕ ನೀರಾವರಿ ಕೊಡುತ್ತಾರೆ.
ಇನ್ನೇನು ಕಾಫಿಯ ನಾಡಾದ ಕೊಡಗಿನ ಎಲ್ಲೆಲ್ಲೂ ಕಾಫಿ ಹೂ ಅರಳಲು ಶುರುವಾಗುತ್ತದೆ. ಎಸ್ಟೇಟಿನ ತುಂಬೆಲ್ಲ ಜೇನ್ನೊಣಗಳ ಝೇಂಕಾರ. ತೋಟಕ್ಕೆ ಕಾಲಿಟ್ಟರೆ ಸಾಕು ಹೂವಿನ ವಿಶಿಷ್ಟ ಮನವರಳಿಸುವ ಸುಗಂಧ.

ವ್ಯಾಪ್ತಿಯುದ್ದಕ್ಕೂ ಕಣ್ಣು ಹಾಯಿಸಿದರೆ ಮಲ್ಲಿಗೆ ಹೂರಾಶಿಯ ಹಾಗೆ ಕಾಣುವ ಕಾಫಿ ಹೂ. ಬೆಳದಿಂಗಳು ಹಾಸಿದೆಯೋ ಎಂಬಂತೆ ಭಾಸವಾಗುವ, ಮೊಗ್ಗಿನ ಜಡೆಯಂತೆ ಕಾಣುವ, ಇಲ್ಲವೇ ಯಾರೋ ಮೊಸರು ಚೆಲ್ಲಿ ಹೋದರೆ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕದೆ ಇರದು. ಇದೆಲ್ಲವೂ ಸರಿ. ಆದರೆ ಕಾಫಿ ಹೂವು ಹೇಗೆ ಅರಳುತ್ತದೆ ಎಂದು ವೈಜ್ಞಾನಿಕ ಮಾಹಿತಿ ನಿಮಗೆ ಗೊತ್ತೇ? ಇಲ್ಲಿದೆನೋಡಿ...
ಮೊಗ್ಗರಳಿ ಹೂವಾಗಿ
ಮಳೆ ಬಂದೋ ಅಥವಾ ಸ್ಪ್ರಿಂಕ್ಲರ್ ಮೂಲಕವೋ ನೀರು ಮೇಲಿಂದ ಬಿದ್ದ ಕೂಡಲೇ ಕಾಫಿ ಹೂ ಬಿಟ್ಟು ಬಿಡುವುದಿಲ್ಲ. ಇದಕ್ಕೆಂದು ಸಮಯ ಇದೆ. ಒಮ್ಮೆ ಫಸಲಿಗೆ ಬಂದ ಕಾಫಿ ಬೆಳೆಯ ಕೊಯ್ಲು ಮಾಡಿದ ನಂತರ 15 ದಿನ ಹಾಗೇ ಬಿಡಬೇಕು. ಇದು ಅವುಗಳಿಗೆ ವಿಶ್ರಾಂತಿಯ ಸಮಯ. ಈ ಸಂದರ್ಭದಲ್ಲಿ ಕಾಫಿ ಗಿಡಗಳು ಸೊರಗಿದಂತೆ ಕಾಣುತ್ತದೆ. ಆದರೆ ಹೂವು ಅರಳಲು ಬೇಕಾದ ಆಹಾರವನ್ನು ಈ ಅವಧಿಯಲ್ಲಿ ಶೇಖರಿಸಿಟ್ಟುಕೊಳ್ಳುತ್ತದೆ. ಆ ಸಮಯದಲ್ಲಿ ಮಳೆಯಾದರೆ ಅಥವಾ ಮೇಲಿನಿಂದ ನೀರು ಹಾಯಿಸಿದರೆ ಹೂ ಅರಳುತ್ತದೆ.
ಮೇಲಿಂದಲೇ ಯಾಕೆ?
ಗಿಡದ ಮೇಲಿಂದಲೇ ನೀರು ಏಕೆ ಕೊಡಬೇಕೆಂದರೆ ಕಾಫಿ ಮೊಗ್ಗುಗಳ (ಅತಿ ಚಿಕ್ಕದಿರುವಾಗ) ಮೇಲೆ ಆಬ್ಸಿಸಿಕ್ ಆಮ್ಲ ಎಂಬ ಹಾರ್ಮೋನಿನ ತೆಳುವಾದ ಪದರವಿರುತ್ತದೆ. ಇದು ಮೊಗ್ಗನ್ನು ಹೂವಾಗಲು ಬಿಡುವುದಿಲ್ಲ. ಮೇಲಿನಿಂದ ನೀರು ಬಿದ್ದರೆ, ಈ ಹಾರ್ಮೋನು ತೊಳೆದು ಹೋಗಿ ಹೂ ಬಿಡುವುದಕ್ಕೆ ಅನುಕೂಲವಾಗುತ್ತದೆ ಎನ್ನುತ್ತಾರೆ ಸ್ವತಃ ಕಾಫಿ ಬೆಳೆಗಾರರಾದ ಡಾ. ಆನಂದ್ ಪಿರೇರಾ.
ಕಾಫಿ ಹೂ ಅರಳಲು ತೋಟದಲ್ಲಿನ ತಂಪು ವಾತಾವರಣವೂ ಮುಖ್ಯ. ಹೂ ಅರಳುವ ಪ್ರಕ್ರಿಯೆಯಲ್ಲಿರುವಾಗ ಸಹಕರಿಸಲು ಹಲವಾರು ಹಾರ್ಮೋನುಗಳು ಉತ್ಪತ್ತಿಯಾಗುತ್ತವೆ. ಮೊಗ್ಗಿನ ಶುರುವಿನಿಂದ ಹೂವಾಗಲು 7-8 ದಿನ ಬೇಕು. ಒಮ್ಮೆ ಹೂವಾಗಿ ಪರಾಗಸ್ಪರ್ಶ ಹಾಗೂ ಗರ್ಭಧಾರಣೆಯಾದ ನಂತರ 48 ಗಂಟೆಗಳಲ್ಲಿ ಹೂ ಭಾಗಗಳೆಲ್ಲ ಉದುರಿ ಹೋಗುತ್ತವೆ. ಸರಿಯಾಗಿ ಕಾಫಿ ಹಣ್ಣಾಗಬೇಕಾದರೆ 21 ದಿನದ ನಂತರ ಮತ್ತೆ ಮೇಲಿನಿಂದ ನೀರು ಕೊಡಬೇಕು. ಈ ರೀತಿ ಮಳೆಗಾಲ ಆರಂಭವಾಗುವವರೆಗೂ ಕಾಫಿ ತೋಟದಲ್ಲಿ ತಂಪು ವಾತಾವರಣವನ್ನು ಕಾಪಾಡಬೇಕಾಗುತ್ತದೆ.
ಅಧ್ಯಯನ ಹೇಳೋದೇನು?
ಕಾಫಿ ಇಳುವರಿಯಲ್ಲಿ ಜೇನ್ನೊಣಗಳ ಪಾತ್ರ ಹಿರಿದು.
ಸ್ವಿಟ್ಜರ್‌ಲ್ಯಾಂಡಿನ ಇಟಿಎಚ್ ಸಂಸ್ಥೆಯ ಡಾ. ಸ್ಮಿತಾ ಕೃಷ್ಣನ್ ಅವರು ಕೊಡಗಿನಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಕಾಫಿ ಇಳುವರಿಯಲ್ಲಿ ಸುಮಾರು ಶೇ. 33ರಷ್ಟು ಜೇನ್ನೊಣಗಳಿಂದ ಆಗುವ ಪರಾಗಸ್ಪರ್ಶದಿಂದ ಬರುತ್ತದೆ. ಅರಣ್ಯ ಮತ್ತು ಕಾಫಿ ತೋಟಗಳಲ್ಲಿರುವ ನೆರಳಿನ ಮರಗಳು ಜೇನ್ನೊಣಗಳಿಗೆ ಪರಾಗ, ಮಕರಂದ ಮತ್ತು ಆಶ್ರಯ ಒದಗಿಸುತ್ತವೆ.
ಇನ್ನೊಂದು ವಿಶೇಷವೆಂದರೆ ಜೇನ್ನೊಣಗಳಿಂದ ಪರಾಗಸ್ಪರ್ಶವಾಗುವ ಮರಗಳು ಹೂ ಬಿಟ್ಟ ನಂತರ ಹೆಜ್ಜೇನುಗಳು ಕೊಡಗಿಗೆ ಬೇರೆ ಪ್ರದೇಶಗಳಿಂದ ವಲಸೆ ಬರುತ್ತವೆ. ಇದೇ ಸಮಯಕ್ಕೆ ಕಾಫಿಯೂ ಹೂ ಅರಳಿಸುತ್ತದೆ. ಬೀಟೆ, ನೇರಳೆ, ಬಳಂಜಿ, ಮಾವು, ಬಿಳಿ ನಂದಿ, ನೊಗ ಮರಗಳನ್ನು ಉಳಿಸಿ ಬೆಳೆಸುವುದರಿಂದ ಜೇನ್ನೊಣಗಳ ಸಂಖ್ಯೆಯನ್ನು ಹೆಚ್ಚಿಸಬಹುದು ಎನ್ನುತ್ತಾರೆ ಡಾ. ಸ್ಮಿತಾ.
-ಸೌಖ್ಯ ಮೋಹನ್ ತಲಕಾಲಕೊಪ್ಪ
   sowkhyamohan@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!