ಗದಗದ ತೋಂಟದಾರ್ಯ ಮಠದಲ್ಲಿ ಫೆ.25ರಿಂದ ರೊಟ್ಟಿ ಜಾತ್ರೆ ನಡೆಯಲಿದೆ. ಶ್ರೀಮಠಕ್ಕೆ ಇದು 273ನೇ ಸಂಭ್ರಮ. ಅದರ ಮುನ್ನೋಟದ ಸವಿ ಇಲ್ಲಿ...
ತೋಂಟದಾರ್ಯ ಮಠ ಅಂದಾಕ್ಷಣ ನೆನಪಿಗೆ ಬರೋದು ಗದಗ. ಆದರೆ, ಈ ಮಠದ ಮೂಲ ಜಿಲ್ಲೆಯ ಮುಂಡರಗಿ ತಾಲೂಕಿನ ಐತಿಹಾಸಿಕವಾಗಿ ಪ್ರಸಿದ್ಧವಾದ ಡಂಬಳ. ಇಲ್ಲಿ ಪ್ರತಿ ವರ್ಷ ಜಾತ್ರಾ ಮಹೋತ್ಸವ ನಡೆಯುತ್ತದೆ. ಆದರಿದು ಎಲ್ಲ ಜಾತ್ರೆಯಂತಲ್ಲ. ಇದು ಸಮಾನತೆ ಸಾರುವ ರೊಟ್ಟಿ ಜಾತ್ರೆ!
ರೊಟ್ಟಿ ಊಟ ಉ.ಕರ್ನಾಟಕದ ಮುಖ್ಯ ಆಹಾರ. ಕಲೆ, ಸಂಸ್ಕೃತಿ, ಸಾಹಿತ್ಯ ಶೈಕ್ಷಣಿಕ ಹಿರಿಮೆಗಳನ್ನು ಕಾಪಾಡಿಕೊಂಡು, ಪ್ರೋತ್ಸಾಹಿಸುವುದು ಜಾತ್ರೆಯ ಉದ್ದೇಶ. ಲಂಬಾಣಿ ಜನಾಂಗದ ಗಂಗಾಳ ಭಜನೆ, ಡೊಳ್ಳು ಕುಣಿತ, ನಂದಿಕೋಲು ಹಾಗೆಯೇ ಹಲವು ಹಳ್ಳಿ ಹೈದರ ಜಾನಪದ ಸೊಗಡಿನ ತಂಡಗಳೊಂದಿಗೆ ಪೂಜ್ಯರನ್ನು ಕರೆತಂದು ಕಡುಬಿನ ಕಾಳಗದಲ್ಲಿ ಪಲ್ಲಕ್ಕಿ ನಡೆಯುತ್ತದೆ. ಇದಾದ ನಂತರ ರೊಟ್ಟಿ ಪ್ರಸಾದಕ್ಕೆ ಡಾ. ಸಿದ್ದಲಿಂಗ ಶ್ರಿಗಳು ಚಾಲನೆ ನೀಡುತ್ತಾರೆ.
ಭಕ್ತರು 25ರಿಂದ 30 ಕ್ವಿಂಟಲ್ ಜೋಳದಿಂದ ತಯಾರಿಸಿದ ರೊಟ್ಟಿಗಳು ಹಾಗೂ ಐದು ತೆರನಾದ ಧಾನ್ಯಗಳನ್ನು ನೆನೆಹಾಕಿ ಮೊಳಕೆಯೊಡೆಸಿ ಅದರ ಅಡುಗೆ ಮಾಡಿರುತ್ತಾರೆ. ಮೆಂತ್ಯೆ, ಪಾಲಕ್, ಪುಂಡಿಪಲ್ಲೇ ಮಿಶ್ರಮಾಡಿ ಅದರಲ್ಲಿ ಶೇಂಗಾ ಕಾಳನ್ನು ಬೆರೆಸಿ ಗರಗಟ ಮಾಡಿರುತ್ತಾರೆ. ಸೌತೆಕಾಯಿ, ಗಜ್ಜರಿ, ಕಡ್ಲೆಕಾಳು ಸೇರಿಸಿದ ಕರಿಹಿಂಡಿ ಈ ವೇಳೆ ಮುಖ್ಯ ಮೆನು. ಮಠದ ಆವರಣದಲ್ಲಿ ಭಕ್ತಾದಿಗಳು ಸಾಲು ಸಾಲಾಗಿ ಕುಳಿತು, ಭೋಜನ ಸವಿಯುತ್ತಾರೆ.
12ನೇ ಶತಮಾನದ ಬಸವಣ್ಣವರ ಕಾಯಕವನ್ನು ತೋಂಟದ ಶ್ರೀಗಳು ಈ ಜಾತ್ರೆ ಮೂಲಕ ಮೈಗೂಡಿಸಿಕೊಂಡಿದ್ದಾರೆ. ಶರಣರಿಗಿದು ಅದ್ಧೂರಿ ದಾಸೋಹ. ಈ ರೊಟ್ಟಿ ಜಾತ್ರೆ ನಾಲ್ಕೈದು ದಿನಗಳಲ್ಲಿ ಮುಗಿದು ಹೋಗುತ್ತದೆ. ಆದರೆ, ಈ ಜಾತ್ರೆ ಹಿಂದೆ ಸಾಕಷ್ಟು ಶ್ರಮವಿದೆ. ಒಂದು ತಿಂಗಳಿಂದ ಬಿಳಿಜೋಳ ರೊಟ್ಟಿ ತಯಾರಿ ನಡೆಯುತ್ತದೆ. ಪ್ರತಿ ಮನೆ ಮನೆಗೂ ಮಠದಿಂದ ಹಿಟ್ಟು ಹಾಕಲಾಗುತ್ತದೆ. ಭಕ್ತರು ರೊಟ್ಟಿ ತಯಾರಿಸಿ ಬುಟ್ಟಿಯಲ್ಲಿಟ್ಟುಕೊಂಡು ಮಠಕ್ಕೆ ಒಯ್ಯುವುದನ್ನು ನೋಡೋದೇ ಚೆಂದ. ಸುತ್ತಲಿನ ಹಳ್ಳಿಯವರು ಚಕ್ಕಡಿ ಮೇಲೆ ರೊಟ್ಟಿಗಳನ್ನು ಹೇರಿಕೊಂಡು ಸಿಂಗರಿಸಿದ ಎತ್ತುಗಳಿಂದ ಆಕರ್ಷಣೆಗೆ ಕಾರಣರಾಗುತ್ತಾರೆ.
ಚರಿತೆ ಮೇಲೆ ಬೆಳಕು
ಮಠದ ಕಂಬಗಳು ಚಾಲುಕ್ಯ ಶಿಲ್ಪಶೈಲಿಯನ್ನು ಹೋಲುತ್ತವೆ. ಮಹಾದ್ವಾರವು ಅನೇಕ ಸುಂದರ ಕಲಾಕೃತಿಗಳಿಂದ ಕೂಡಿದೆ. ಬಸವಣ್ಣನವರ ನಂತರ ಅಳಿದು ಹೋದ ವಚನಸಾಹಿತ್ಯ ಸುಧಾರಿಸಿ ನವಸಮಾಜದ ನಿರ್ಮಾಣದತ್ತ ಗಮನಹರಿಸಿದವರು ಎಡೆಯೂರ ತೋಂಟದಾರ್ಯ ಶ್ರೀಗಳು. ಈಗಿರುವ ಪೀಠಾಧಿಪತಿ ಡಾ. ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿ, ಈ ಸ್ಥಾನ ಅಲಂಕರಿಸಿದ್ದು 1974ರಲ್ಲಿ. ಅದೂ 19ನೇ ಪೀಠಾಧಿಪತಿಗಳಾಗಿ. 1949ರ ಫೆ.21ರಂದು ಬಿಜಾಪೂರ ಜಿಲ್ಲೆಯ ಸಿಂದಗಿ ತಾಲೂಕಿನ ಕೋರವಾದ ಗ್ರಾಮದಲ್ಲಿ ಇವರು ಹುಟ್ಟಿದರು. ತಂದೆ ಮರಯ್ಯ, ತಾಯಿ ಶಂಕ್ರಮ್ಮ. ಪೂರ್ವಾಶ್ರಮದ ಹೆಸರು ಸಿದ್ಧರಾಮ. ಪ್ರಾಥಮಿಕ ಶಿಕ್ಷಣವನ್ನು ಸಿಂದಗಿಯಲ್ಲಿ ಪೂರೈಸಿ, ಹುಬ್ಬಳ್ಳಿಯಲ್ಲಿ ಪ್ರೌಢ ಹಾಗೂ ಪದವಿ ಶಿಕ್ಷಣ, ನಂತರ ಕರ್ನಾಟಕ ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದರು.
ಜಾತ್ರೆಯ ಟೈಮ್ ಟೇಬಲ್
ಡಾ. ತೋಂಟದ ಸಿದ್ದಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ಫೆ.25ರಂದು ಸಂಜೆ 4ಕ್ಕೆ ರೊಟ್ಟಿ ಜಾತ್ರೆ ಆರಂಭವಾಗುತ್ತದೆ.
ಶ್ರೀ ಬಸವಂತಪ್ಪ ಮರಿಬಸಪ್ಪ ಪಟ್ಟಣಶೆಟ್ಟರ ಅವರ ಮನೆಯಿಂದ ಶ್ರೀ ಮಠಕ್ಕೆ ಪೂಜ್ಯ ಸನ್ನಿಧಿಯವರ ಆಗಮನ. ಸಂಜೆ 6.30ಕ್ಕೆ ತೇರು ಸಾಗುತ್ತದೆ. ರಾತ್ರಿ 8ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರಾಯೋಜಿತ ಕಾರ್ಯಕ್ರಮ.
26ರಂದು ಮಲ್ಲಪ್ಪ ಚನ್ನಬಸಪ್ಪ ಪ್ಯಾಟಿ ಮನೆಯಿಂದ ಶ್ರೀಮಠಕ್ಕೆ ಪೂಜ್ಯ ಸನ್ನಿಧಿಯವರ ಆಗಮನ. ಸಂಜೆ 6.30ಕ್ಕೆ ಲಘು ರಥೋತ್ಸವ. ರಾತ್ರಿ 8ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಾರ್ಯಕ್ರಮ ಮತ್ತು ಹಳ್ಳಿಹೈದರ ಜಾನಪದ ಸೊಗಡಿನ ಡೊಳ್ಳಿನ ಪದಗಳು.
- ಲಕ್ಷ್ಮಣ ಹ. ದೊಡ್ಡಮನಿ