ಬೈಟುಕಾಫಿ

ಅಬ್ಬಾ ಭಬಾನಿ!

ಅನಾಹುತಗಳು ಹೇಳಿ ಕೇಳಿ ಬರೋದಿಲ್ಲ ಎಂಬುದಕ್ಕೆ ಈ ಸತ್ಯಘಟನೆ ಸಾಕ್ಷಿ.

ಅನಾಹುತಗಳು ಹೇಳಿ ಕೇಳಿ ಬರೋದಿಲ್ಲ ಎಂಬುದಕ್ಕೆ ಈ ಸತ್ಯಘಟನೆ ಸಾಕ್ಷಿ. ಸ್ವಲ್ಪ ಸಮಯಪ್ರಜ್ಞೆ ಪ್ರದರ್ಶಿಸಿದರೆ ಎಂಥ ಅನಾಹುತದ ವೇಳೆಯೂ ಜಾಣ್ಮೆಯಿಂದ ಕಂಬನಿ ಒರೆಸಿಕೊಳ್ಳಬಹುದು... ನಗು ಚಿಮ್ಮಿಸಿಕೊಳ್ಳಬಹುದು.... ಮುಂದೆ ಓದಿ...

ಅಂಥ ರೈತ ಕುಟುಂಬಕ್ಕೆ ಸೇರಿದ ಆಂಜನಪ್ಪ- ಕಮಲಮ್ಮ ದಂಪತಿಗೆ ಇದ್ದ ಏಕೈಕ ಪುತ್ರಿ ಭವಾನಿ. ಎಸ್ಸೆಸ್ಸೆಲ್ಸಿ ಮುಗಿಸಿ ಮೂರು ವರ್ಷಗಳಾಗಿದ್ದರಿಂದ ಮನೆಯಲ್ಲಿ ಆಕೆಯ ಮದುವೆಗೆ ಸಿದ್ಧತೆ ನಡೆಸುತ್ತಿದ್ದರು.
ಸಮೀಪದ ನಾರೇಪಲ್ಲಿಯ ರಾಮಪ್ಪನಿಗೆ 8 ಎಕರೆ ಜಮೀನು. ಇಬ್ಬರು ಗಂಡುಮಕ್ಕಳು. ಗಟ್ಟಿ ಆಳುಗಳು. ಮಿಗಿಲಾಗಿ ಸಜ್ಜನ. ಆಂಜನಪ್ಪ ಕುಟುಂಬದೊಂದಿಗೆ ವಿವಾಹ ಸಂಬಂಧ ಬೆಳೆಸಿದರೆ ಚೆನ್ನಾಗಿರುತ್ತೆ ಅಂತ ಅವರಿಗೂ ಯಾರೋ ಹೇಳಿದರು.
=
ವಧುಪರೀಕ್ಷೆ ಮುಗಿಯಿತು. ರಾಮಪ್ಪನ ಹಿರಿಯ ಮಗ ರಾಮಾಂಜಿ ಜೊತೆ ಭವಾನಿ ವಿವಾಹದ ಮುಹೂರ್ತ ನಿಗದಿಯೂ ಆಯಿತು. ಕೈಲಾದಷ್ಟು ಹಣ ಸುರಿದು ಆಂಜಿನಪ್ಪ ಮಗಳಿಗೆ ಮದುವೆ ಮಾಡಿದ. ಮದುವೆ ಮುಗಿದ ಮಾರನೇ ದಿನ ಮೊದಲ ರಾತ್ರಿ ಶಾಸ್ತ್ರಕ್ಕೆ ಎಲ್ಲಾ ಸಿದ್ಧತೆಗಳು ಆಂಜನಪ್ಪನ ಮನೆಯಲ್ಲಿ ಮಾಡಲಾಯಿತು. ಅಂದು ನವ ದಂಪತಿಗೆ ಮರೆಯಲಾರದ ದಿನ ನಿಜ. ಆದರೆ, ಅದು ಸುಖದ ಕಾರಣಕ್ಕಂತೂ ನಿಜವಾಗಲಿಲ್ಲ. ಹಾಗಾದರೆ...?
=
ಅಂದು ಆಂಜಿನಪ್ಪನ ಮನೆ ಸಡಗರದ ಕಡಲು. ಇದ್ದ ಏಕೈಕ ಮಗಳ ಮದುವೆ ಆಗಿ ಮೊದಲ ರಾತ್ರಿಯೂ ಮುಗಿದಿತ್ತು. ಪ್ರಸ್ಥದ ಕೋಣೆಯಿಂದ ಬಂದ ಭವಾನಿ ನಾಚಿಕೆಯಿಂದ ಅಡುಗೆಮನೆಯಿಂದ ಹೊರಗೆ ಬರದೆ ಚಿಟ್ಟೆಯಂತೆ ಬಚ್ಚಿಟ್ಟುಕೊಂಡಳು. ನೆಂಟರಿಗೆ ಆತಿಥ್ಯ ಏರ್ಪಡಿಸುವ ಗಡಿಬಿಡಿಯಲ್ಲಿದ್ದರು ಕಮಲಮ್ಮ. ತಡವಾಗಿ ಎದ್ದ ಮದುಮಗ ರಾಮಾಂಜಿ ಮನೆಯಿಂದ ಹೊರಗಡೆ ಹೋದ.
ಅದು ತೀರಾ ಹಿಂದುಳಿದ ಹಳ್ಳಿ. ಯಾವುದೇ ಮನೆಯಲ್ಲೂ ಟಾಯ್ಲೆಟ್ಟಿಲ್ಲ. ಮಹಿಳೆಯರಿಗೂ ಬಯಲೇ ಶೌಚಕ್ಕೆ ಆಧಾರ. ಅದೇ ಕಾರಣಕ್ಕೆ ಊರ ಹೊರಗೆ ಹೊರಟಿದ್ದ ಮದುಮಗ ರಾಮಾಂಜಿಯನ್ನು ಕರೆದ ಅತ್ತೆ ಕಮಲಮ್ಮ 'ಮದುಮಗ ಒಬ್ಬನೇ ಹೋಗಬಾರದು. ಜೊತೆಯಲ್ಲಿ ಯಾರನ್ನಾದರೂ ಕರೆದುಕೊಂಡು ಹೋಗು' ಎಂದರು. ಇದನ್ನು ಕಿವಿಗೆ ಹಾಕಿಕೊಳ್ಳದ ರಾಮಾಂಜಿ ಹೊರಟು ಹೋದ.
=
ಅರಳಿಕಟ್ಟೆ ಮೇಲೆ ಕೂತು ಹರಟೆಯಲ್ಲಿ ತೊಡಗಿದ್ದ ಆಂಜಿನಪ್ಪನಿಗೆ ಗಡಿಬಿಡಿಯಿಂದ ಓಡುತ್ತಿರುವ ಜನರು ಕಂಡರು. ಅದರಲ್ಲಿ ಒಬ್ಬನನ್ನು ತಡೆದು ಕಾರಣ ಕೇಳಿದಾಗ, ಕಾಡಾನೆಗಳು ಬಂದು ಕಬ್ಬಿನ ಗದ್ದೆಗೆ ನುಗ್ಗಿವೆ. ಅವನ್ನು ಓಡಿಸಲು ಎಲ್ಲರೂ ಹೋಗುತ್ತಿರುವುದಾಗಿ ಹೇಳಿದ. ಗ್ರಾಮಸ್ಥರೊಂದಿಗೆ ಆಂಜಿನಪ್ಪನೂ ಹೋಗಿ ಆನೆಗಳನ್ನು ಓಡಿಸಲು ನೆರವಾದ. ಎಲ್ಲ ಮುಗಿಯುವಾಗ ಗಂಟೆ ಹನ್ನೊಂದು.
ಮನೆಗೆ ಬರುವಾಗ ಆಂಜಿನಪ್ಪನಿಗೆ ಸುಸ್ತು. ಆಗಲೇ ಮಾತೊಂದು ಕಿವಿಗೆ ಬಿತ್ತು. ಹೆಂಡತಿ ಕಮಲಮ್ಮ ದುಗುಡದಿಂದ ದನಿಯೊಡೆದರು, 'ಬೆಳಗ್ಗೆ ಹೊರಗಡೆ ಹೋದ ಅಳಿಯ ಇನ್ನೂ ಮನೆಗೆ ಬಂದಿಲ್ಲ. ಹೇಳೋಣವೆಂದರೆ ನೀನೂ ಪತ್ತೆಯಿಲ್ಲ' ಎಂದು ರೇಗಿದರು. ಎಲ್ಲೋ ಸ್ನೇಹಿತರನ್ನು ಮಾತನಾಡಿಸುತ್ತಾ ಇರಬಹುದು ಎಂದು ಆಂಜಿನಪ್ಪ ಹೇಳಿದರಾದರೂ ಆ ಊರಿನಲ್ಲಿ ರಾಮಾಂಜಿಗೆ ಯಾವುದೇ ಸ್ನೇಹಿತರಿಲ್ಲ ಅಂತಲೂ ಅನ್ನಿಸಿತು. ಏನೋ ಎಡವಟ್ಟಾಗಿದೆ ಎಂಬ ಭೀತಿಯಿಂದ ಆಂಜಿನಪ್ಪ ಸ್ವಲ್ಪ ಕಂಪಿಸಿದ.
ತಿಂಡಿ ತಿನ್ನಬೇಕೆಂಬ ಹಸಿವಿನಲ್ಲಿದ ಆತನಿಗೆ ಹಸಿವು ಮಾಯವಾಗಿತ್ತು. ಭೀತಿ ಆವರಿಸಿತ್ತು. ಗ್ರಾಮದ ಆಯಕಟ್ಟಿನ ಜಾಗಗಳಲ್ಲಿ ಹುಡುಕಿ, ಕಂಡ ಕಂಡವರನ್ನು ವಿಚಾರಿಸಿದರು. ಆದರೂ ಪ್ರಯೋಜನವಾಗಲಿಲ್ಲ. ಇದಾದ ಸ್ವಲ್ಪ ಸಮಯಕ್ಕೆ ಅಸಲಿ ವಿಚಾರ ಬಹಿರಂಗಗೊಂಡಿತ್ತು. ಈ ವಿಚಾರದಿಂದ ಊರಿಗೇ ಊರೇ ಕಂಬನಿ ಮಿಡಿದಿತ್ತು!

ನಡೆದದ್ದೇನು?
ನಿರ್ಜನ ಪ್ರದೇಶದ ಕಡೆಗೆ ಬಹಿರ್ದೆಸೆಗೆ ಹೋದ ರಾಮಾಂಜಿ ಒಂದು ಪೊದೆಯ ಮರೆಯಲ್ಲಿ ಬೆಳಗಿನ ಕಾರ್ಯಕ್ರಮ ಮುಗಿಸುತ್ತಿದ್ದ. ಅದೇ ವೇಳೆಗೆ ಕಾಡಾನೆಗಳು ಅತ್ತ ಧಾವಿಸಿದವು. ಸಮೀಪಕ್ಕೆ ಬರುವವರೆಗೆ ರಾಮಾಂಜಿ ಆನೆಗಳನ್ನು, ಆನೆಗಳು ರಾಮಾಂಜಿಯನ್ನು ಗಮನಿಸಲಿಲ್ಲ. ತೀರಾ ಸಮೀಪಕ್ಕೆ ಆನೆಗಳು ಬಂದಾಗ ಭೀತಿಗೊಂಡು ಆತ ಎದ್ದು ನಿಂತ. ಅವನನ್ನು ಕಂಡು ಆನೆಗಳೂ ಭೀತಿಗೊಂಡವು.
ತಮ್ಮ ಮೇಲೆ ಆಕ್ರಮಣ ನಡೆಸಲೇ ಈ ಮನುಷ್ಯ ಇಲ್ಲಿದ್ದಾನೆಂದು ನಂಬಿದ ಆನೆಗಳು ರಾಮಾಂಜಿಗೆ ಚೀರಾಡುವ ಅವಕಾಶವನ್ನೂ ನೀಡದೆ ಪಡ್ಚ ಮಾಡಿದವು! ಆನೆಗಳ ದಾಳಿ ಯಾವ ರೀತಿ ಇತ್ತೆಂದರೆ ಆತನ ಶವವನ್ನು ಕೇವಲ ಆತ ಉಟ್ಟಿದ್ದ ಪ್ರಸ್ಥದ ಬಟ್ಟೆಯಿಂದಷ್ಟೇ ಗುರುತಿಸಬಹುದಿತ್ತು. ಅಷ್ಟು ಭಯಂಕರವಾಗಿ ಹೊಸಕಿ ಹಾಕಿದ್ದವು.
=
ಸ್ಥಳದಲ್ಲಿ ಗ್ರಾಮಸ್ಥರೆಲ್ಲ ಜಮಾಯಿಸಿದರು. ಕೆಲವೇ ಗಂಟೆಗಳ ಹಿಂದೆ ಮೊದಲ ರಾತ್ರಿ ಮುಗಿಸಿದ್ದ ಭವಾನಿ, ಬರ ಸಿಡಿಲನ್ನು ತಾಳಲಾರದೆ ಕಂಬನಿಗರೆಯತೊಡಗಿದಳು. ಒಂದು ದಿನದ ಹಿಂದೆ ಕೊರಳನ್ನು ಅಲಂಕರಿಸಿದ್ದ ತಾಳಿಯನ್ನು ಆನೆಗಳು ತುಂಡರಿಸಿದ್ದವು. ನೂರು ವರ್ಷದ ದಾಂಪತ್ಯದ ಕನಸಿಗೆ ಕಾಲಿಟ್ಟಿದ್ದ ಭವಾನಿಯ ಬಾಳು ಮೊದಲ ಹೆಜ್ಜೆಯಲ್ಲೇ ಎಡವಿತ್ತು.
ಮುಂದೆ...?
ರಾಮಾಂಜಿ ಎಂಬ ನೂತನ ವರ ದುರ್ಮರಣಕ್ಕೆ ಈಡಾದ ಘಟನೆ ನಡೆದಿದ್ದು 2003ರಲ್ಲಿ. ಅಂದಿಗೆ ಸರಿಯಾಗಿ 10 ವರ್ಷಗಳ ಹಿಂದೆ ಅಂದರೆ 1993ರಲ್ಲಿ ಸುಡಾನ್ ದೇಶದಲ್ಲಿ ಭೀಕರ ಬರಗಾಲ ಬಂದಿತ್ತು. ಬರದ ವರದಿ ಮಾಡಲು ವಿದೇಶಗಳಿಂದ ಪತ್ರಕರ್ತರ ದಂಡೇ ಅಲ್ಲಿಗೆ ಆಗಮಿಸಿತ್ತು. ಹಾಗೆ ಬಂದಿದ್ದ ಒಬ್ಬ ಫೋಟೋ ಜರ್ನಲಿಸ್ಟ್‌ಗೆ ಕರುಳು ಹಿಂಡುವ ಚಿತ್ರಣ ಕಾಣಿಸಿತ್ತು. ಅದನ್ನು ಆತ ಕೂಡಲೇ ತನ್ನ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ್ದ.
ಬರದ ತೀವ್ರತೆಯಿಂದ ಸುಡಾನ್‌ನಲ್ಲಿ ಆಹಾರವಿಲ್ಲದೆ ಹಸಿವಿನಿಂದ ಸಾವಿರಾರು ಜನ ನಿತ್ಯ ಸಾಯುತ್ತಿದ್ದರು. ಸರ್ಕಾರ ಗಂಜಿ ಕೇಂದ್ರಗಳನ್ನು ತೆರೆದು ಹಸಿವಿಗೆ ಸಾಂತ್ವನ ಹೇಳುತ್ತಿತ್ತು. ಅಂಥ ಗಂಜಿ ಕೇಂದ್ರದ ಕಡೆಗೆ ಮಗುವೊಂದು ನಡೆಯಲೂ ಆಗದ ಸ್ಥಿತಿಯಲ್ಲಿ ತೆವಳುತ್ತಾ ಬರುತ್ತಿತ್ತು. ಮಗು ಈಗಲೋ ಆಗಲೋ ಸಾಯಬಹುದು, ಸತ್ತ ಕೂಡಲೇ ಮಗು ತನಗೆ ಆಹಾರವಾಗುತ್ತದೆ ಎಂಬ ಆಸೆಯಿಂದ ಮಗುವಿನ ಹಿಂದೆ ಒಂದು ರಣಹದ್ದು ಬರುತ್ತಿತ್ತು. ಇದನ್ನು ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ಪತ್ರಕರ್ತನ ಹೆಸರು ಕೆವಿನ್ ಕಾರ್ಟರ್.
ಈತನ ಈ ಚಿತ್ರಕ್ಕೆ ಪತ್ರಿಕೋದ್ಯಮದಲ್ಲಿ ನೀಡುವ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಲಭಿಸಿತು! ಆದರೆ ಕೆವಿನ್ ಕಾರ್ಟರ್ ತೆಗೆದ ಚಿತ್ರಕ್ಕೆ ವಿಶ್ವದಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಯಿತು. ಕಾರಣ ವೃತ್ತಿಧರ್ಮದಲ್ಲಿ ಮಾನವೀಯತೆ ಮರೆತು ಮಗುವಿನ ಸಾವಿಗೆ ಕಾರಣರಾದರು ಎಂಬ ಆರೋಪ ಕೇಳಿಬಂದಿತ್ತು. ಅಂದು ಆತ ಫೋಟೋ ಕ್ಲಿಕ್ಕಿಸಿದ ಮಗು ಸತ್ತಿತ್ತು. ಸ್ವಲ್ಪ ಸಮಯದಲ್ಲಿ ಸಾವನ್ನಪ್ಪಿತ್ತು. ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸಿದ್ದರೆ ಮಗು ಬದುಕಿ ಉಳಿಯುತ್ತಿತ್ತು ಎಂದು ವೈದ್ಯರು ತಿಳಿಸಿದ್ದರು. ಕೆವಿನ್ ಕಾರ್ಟರ್ ತಕ್ಷಣ ಗಂಜಿ ಕೇಂದ್ರಕ್ಕೆ ಸಾಗಿಸಿದ್ದರೆ ಮಗು ಬದುಕುಳಿಯುತ್ತಿತ್ತು ಎಂಬುದು ಅವರ ಅಭಿಪ್ರಾಯ. ಇದರಿಂದ ಮನನೊಂದ ಕೆವಿನ್ ಕಾರ್ಟರ್ ಮಾನಸಿಕವಾಗಿ ಜರ್ಜರಿತನಾಗಿ ನಂತರ ಆತ್ಮಹತ್ಯೆ ಮಾಡಿಕೊಂಡ.
=
ಈ ಘಟನೆಗೂ ನಮ್ಮ ಕಥೆಗೂ ಏನೂ ಸಂಬಂಧವಿಲ್ಲ ನಿಜ, ಆದರೆ ಪತ್ರಕರ್ತನಿಗೆ ವೃತ್ತಿ ಧರ್ಮ ಮುಖ್ಯವೋ, ಮಾನವೀಯತೆ ಮುಖ್ಯವೋ ಎಂಬ ಪ್ರಶ್ನೆ ಇಲ್ಲಿಯೂ ಉದ್ಭವಿಸುತ್ತದೆ. ಅದೇ ರೀತಿ ನಮ್ಮ ಕತೆಯಲ್ಲೂ ಪತ್ರಕರ್ತರೊಬ್ಬರು ವೃತ್ತಿ ಧರ್ಮದ ಜೊತೆಗೆ ಮಾನವೀಯತೆಯೂ ಮೆರೆದ ಪ್ರಸಂಗ ನಡೆಯಿತು. ಪರಿಣಾಮ ಭವಾನಿಯ ಬದುಕಿನಲ್ಲಿ ಮತ್ತೆ ಆಶಾ ಜ್ಯೋತಿ ಬೆಳಗಿತ್ತು. ಆರಿದ್ದ ನಂದಾ ದೀಪ ಮತ್ತೆ ಪ್ರಜ್ವಲಿಸಿತ್ತು.
ಮೊದಲ ರಾತ್ರಿ ಮುಗಿದ ಮೊದಲ ದಿನವೇ ರಾಮಾಂಜಿ ಆನೆ ದಾಳಿಯಲ್ಲಿ ಮೃತಪಟ್ಟಿರುವ ಸುದ್ದಿ ತಿಳಿದು ಖಾಸಗಿ ಸುದ್ದಿವಾಹಿನಿಯ ಕ್ರೈಂ ಕಾರ್ಯಕ್ರಮದ ಪತ್ರಕರ್ತರು ಅಲ್ಲಿಗೆ ಆಗಮಿಸಿದ್ದರು. ದುಃಖಿಸುತ್ತಿರುವ ಜನರ ಮಧ್ಯೆ ಒಬ್ಬ ಯುವಕನೂ ಇದ್ದ. ಈತ ಯಾರು ಎಂಬ ಬಗ್ಗೆ ಅಲ್ಲಿಗೆ ಬಂದಿದ್ದ ಪತ್ರಕರ್ತರು ವಿಚಾರಿಸಿದಾಗ ಆತ ಮೃತ ಪಟ್ಟ ರಾಮಾಂಜಿಯ ತಮ್ಮ ಎಂಬುದು ತಿಳಿದುಬಂತು. ಆತನಿಗೆ ಇನ್ನೂ ಮದುವೆ ಆಗಿಲ್ಲ ಎಂಬ ವಿಷಯವೂ ತಿಳಿಯಿತು. ಭವಾನಿಯ ಬಾಳು ಹಸನಾಗಲು ಆ ಯುವಕನ ಸಹಾಯ ಕೋರಲಾಯಿತು.
ಅದಕ್ಕೆ ಅಲ್ಲಿದ್ದವರ ವಿಚಿತ್ರ ದೃಷ್ಟಿ ಕಿರಿಕಿರಿ ಎನಿಸಿದರೂ ಪ್ರಯತ್ನ ಮುಂದುವರಿಸಲಾಯಿತು. ಸಾವಿನ ಮನೆಯಲ್ಲಿ ಮದುವೆ ಮುಹೂರ್ತ, ಅದರಲ್ಲೂ ಗಂಡ ಸತ್ತ ಹೆಣ್ಣಿಗೆ ಕಷ್ಟಸಾಧ್ಯವಾಗಿತ್ತು. ಆದರೆ, ಸತತ ಪ್ರಯತ್ನದ ಫಲವಾಗಿ ಎಲ್ಲರನ್ನೂ ಒಪ್ಪಿಸುವಲ್ಲಿ ಯಶಸ್ವಿಯಾದರು ಪತ್ರಕರ್ತರು. ಅದಕ್ಕೆ ಭವಾನಿಯ ಸಮ್ಮತಿಯೂ ದೊರೆಯಿತು. ಅದೇ ದಿನ ಭವಾನಿ ಮತ್ತು ರಾಮಾಂಜಿಯ ತಮ್ಮ ಗೋಪಿ ಜೊತೆ ಮದುವೆ ಮಾಡಲಾಯಿತು. ಇದರಿಂದಾಗಿ ಬತ್ತಿ ಹೋಗಿದ್ದ ಭವಾನಿಯ ಬಾಳಿನಲ್ಲಿ ಮತ್ತೆ ಆಸೆಗಳು ಚಿಗುರೊಡೆದವು. ಅಲ್ಲಿ ನೆರೆದಿದ್ದವರು ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದರೂ ನಂತರ ಪರಿಸ್ಥಿತಿಯನ್ನು ಒಪ್ಪಲೇಬೇಕಾಯಿತು.

- ಅಶ್ವತ್ಥನಾರಾಯಣ್ ಎಲ್.
sathyajns@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಸಮರ್ಥರಲ್ಲದಿದ್ದರೆ ಮೊದಲು ನೀವು ರಾಜಿನಾಮೆ ಕೊಡಿ: CJI ಸೂರ್ಯಕಾಂತ್ ರಾಜೀನಾಮೆಗೆ Congress ಒತ್ತಾಯ!

SIR ಅಕ್ರಮಗಳ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಹುಲ್ ಗಾಂಧಿ; TMC, RJD, ಮಿತ್ರಪಕ್ಷಗಳಿಂದಲೂ ಅರ್ಜಿ

ಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!