ನಿಮಗೆ ಇರಾನ್ ಜೀರಿಗೆ ಬಗ್ಗೆ ಹೇಳುವಾಗ ಅದರ ಬಣ್ಣ 'ಹಸಿರು' ಎಂದಿದ್ದೆ. ಇನ್ನು ಸಾಮಾನ್ಯ ಜೀರಿಗೆ ತಿಳಿಹಳದಿ ಎಂಬುದೂ ಗೊತ್ತಿದೆ. ಈಗ ನಾನು ಹೇಳಲು ಹೊರಟಿರುವುದು ಕಪ್ಪುಜೀರಿಗೆಯ ಬಗ್ಗೆ. ಬಹುಶಃ ನಿಮಗೆ ಈ ಹೆಸರು ಕೇಳಿಯೇ ಅಚ್ಚರಿಯಾಗಬಹುದು.
ಎಲ್ಲೋ ದಿನಸಿ ವ್ಯವಹಾರದಲ್ಲಿ ಪಳಗಿದವರಿಗಷ್ಟೇ ಈ ಕಪ್ಪುಜೀರಿಗೆ ಪರಿಚಿತ. ಅಂದಹಾಗೆ, ಇದರ ಶಾಸ್ತ್ರೀಯ ಹೆಸರು 'ನೈಜೆಲ್ಲಾ ಸಟೈವ ಲಿನ್'. 'ಅಂಬೆಲಿ ಫೆರಿ' ವಂಶ ಇದರದ್ದು. ಹಿಂದಿ, ಪಂಜಾಬಿ ಮತ್ತು ಉರ್ದುವಿನಲ್ಲಿ ಇದನ್ನು 'ಕಲೂಂಜಿ', 'ಕಾಲಾಜೀರ' ಅಂತಲೂ ಕರೆಯುತ್ತಾರೆ. ಬಂಗಾಳಿಯಲ್ಲಿ 'ಕಾಲಜೀರ', ಮಲಯಾಳಂನಲ್ಲಿ 'ಕರುಂಶೀರಗಮ್', ಮರಾಠಿಯಲ್ಲಿ 'ಕಲಂಜೀರೆ', ಸಂಸ್ಕೃತದಲ್ಲಿ 'ಕೃಷ್ಣಜೀರಕೆ', ತಮಿಳಿನಲ್ಲಿ 'ಕರುಂ ಜೀರಗಂ', ತೆಲುಗಿನಲ್ಲಿ 'ನುಲಜೀರಕಾರ' ಅಂತಲೂ ಕರೆಯುತ್ತಾರೆ.
ನಿಮಗೆ ಗೊತ್ತಿರಲಿ, ಇದರ ತವರು ಕೂಡ ಮೆಡಿಟರೇನಿಯನ್ ಪ್ರದೇಶ. 40 ಸೆಂ.ಮೀ. ಎತ್ತರದ ತನಕ ಇದರ ಗಿಡ ಬೆಳೆಯುತ್ತದೆ. ಬಹುಶಃ ಕರ್ನಾಟಕದಲ್ಲಿ ಇದರ ತಳಿಗಳ ಬಗ್ಗೆ ನಾನು ಕೇಳಿಲ್ಲ. ತೆಳುವಾಗಿ ಯಾವುದೋ ಮೂಲೆಯಲ್ಲಿ ಇದ್ದರೂ ಇರಬಹುದು. ನೀವು ಪಂಜಾಬ್, ಹಿಮಾಚಲ ಪ್ರದೇಶ, ಬಿಹಾರ, ಅಸ್ಸಾಂ ಕಡೆಗೆ ಹೋದರೆ ಅಲ್ಲಿನ ಹೊಲಗಳಲ್ಲಿ ಇದನ್ನು ಕಾಣಬಹುದು. ಕೆಲವು ಕಡೆ ಇದು ಕಳೆಯಾಗಿಯೂ ಬೆಳೆಯುತ್ತದೆ. ಹೂಗಳದ್ದು ತಿಳಿನೀಲಿ ಬಣ್ಣ. ಬೀಜಗಳು ಈ ಜೀರಿಗೆಯಂತೆ ಉದ್ದ ಅಲ್ಲ, ತ್ರಿಕೋನಾಕೃತಿ. ಕಪ್ಪುಬಣ್ಣ.
ಈ ಬೀಜದ ತೈಲ ವೈದ್ಯಕೀಯದಲ್ಲಿ ಅತ್ಯುಪಯೋಗ ಹೊಂದಿದೆ. ಶ್ವಾಸನಾಳ ಸೆಳೆತ, ಕೆಮ್ಮು- ಉಬ್ಬಸ ರೋಗಗಳಿಗೆ ಪೂರ್ವಭಾವಿಯಾದ ಚಿಕಿತ್ಸಾ ಪ್ರಯೋಗಗಳಲ್ಲಿ ಬಳಕೆಯಾಗುತ್ತದೆ. ಈ ತೈಲ ಆಹಾರಯೋಗ್ಯ ಕೂಡ ಹೌದು. ಬೆಂಜೀನ್ ದ್ರಾವಣದಿಂದ ಎಣ್ಣೆ ತೆಗೆದು ನಂತರ ಹಭೆ ಭಟ್ಟಿಯಿಂದ ಚಂಚಲ ತೈಲ ತೆಗೆದಾಗ, ಸುಮಾರು ಶೇ.31 ಕೆಂಪು- ಕಂದು ಬಣ್ಣದ ಸ್ವಲ್ಪ ಒಣಗುವ ಗುಣವುಳ್ಳ ಎಣ್ಣೆ ದೊರೆಯುತ್ತದೆ. ಚಂಚಲ ತೈಲ ಮತ್ತು ಎಣ್ಣೆ ಅಲ್ಲದ ಕಪ್ಪು ಜೀರಿಗೆಯಲ್ಲಿ ಕಹಿ ಪದಾರ್ಥ, ಬ್ಯಾನಿನ್, ರಾಳ ಪದಾರ್ಥ, ಸಸಾರಜನಕ ಪದಾರ್ಥ, ಸಕ್ಕರೆ ಅಂಶ, ಅರಬಿಕ್ ಆಮ್ಲಗಳು ಇರುತ್ತವೆ.
ಸಾಮಾನ್ಯ ಜೀರಿಗೆಯಂತೆ ಕಪ್ಪು ಜೀರಿಗೆಗೂ ವಾತಹರ, ಉತ್ತೇಜಕ, ಮೂತ್ರವರ್ಧಕ, ಎಮನಗಾಗ್ ಮತ್ತು ಗೆಲಕ್ಟೋಗಾಗ್ ಗುಣಗಳಿವೆ. ಬಾಣಂತಿಗೆ ಜ್ವರ ಬಂದಾಗ, ಚಿಕಿತ್ಸೆಗೆ ಕಪ್ಪುಜೀರಿಗೆಯನ್ನು ಬಳಸುತ್ತಾರೆ. ಚರ್ಮದ ಮೇಲೆ ಗುಳ್ಳೆಗಳೆದ್ದಾಗ ಇದನ್ನು ಲೇಪಿಸಿದರೆ ಶಮನವಾಗುತ್ತದೆ. ಕೆಲವು ನಾಟಿ ವೈದ್ಯರು ಚೇಳಿನ ಕಡಿತಕ್ಕೆ ಔಷಧವಾಗಿಯೂ ಬಳಸುತ್ತಾರೆ. ಕಪ್ಪುಜೀರಿಗೆಯನ್ನು ಆಹಾರಯೋಗ್ಯ ಜಿಡ್ಡುಗಳು ಕೆಡದೆ ದೃಢವಾಗಿರಿಸಲು ಉಪಯೋಗಿಸಬಹುದು. ಬಟ್ಟೆ ಮತ್ತು ಉಣ್ಣೆ ಬಟ್ಟೆಗಳ ಮಡಿಕೆಗಳ ಮಧ್ಯೆ ಈ ಬೀಜಗಳನ್ನು ಹರಡುವುದರಿಂದ ಕೀಟಗಳ ಕಾಟವನ್ನು ದೂರಮಾಡಬಹುದು. ಒಂದರ್ಥದಲ್ಲಿ ನುಸಿಗುಳಿಗೆ ರೀತಿಯೇ ಇದು ಕೆಲಸ ಮಾಡುತ್ತದೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com