ನೀವವನನ್ನು ನಂಬಿ ತಪ್ಪಿಲ್ಲ. ದೇವರ ನಿರಾಕರಣೆ ಎನ್ನುವುದು ಫ್ಯಾಷನ್ ಆಗಬೇಕಿಲ್ಲ. ಮನುಷ್ಯನ ಹತಾಶೆ, ಅಸಹಾಯಕತೆ, ನಿರಾಸೆಗಳನ್ನು ಹೊಡೆದೋಡಿಸುವ ಅತ್ಯದ್ಭುತ ಅಸ್ತ್ರವಾಗಿ ನಮಗೆ ದೇವರು ಬೇಕೇ ಬೇಕು. ನಂಬಿಕೆಯ ಮೂಲ ಸ್ರೋತವನ್ನೇ ನಾವು ಕಳಕೊಂಡರೆ ನೈತಿಕ ಚೌಕಟ್ಟಿಗೆ ಬೆಲೆಯೇ ಇರುವುದಿಲ್ಲ. ಆದರೆ ಅಂಥ ದೇವರು ನಮ್ಮ ಪ್ರಯತ್ನದ ಕಟ್ಟಕಡೆಯ ಭಾಗದಲ್ಲಿ ನಿಂತಿರಬೇಕು. ಯಾವತ್ತಿಗೂ ಆತ ನಮ್ಮ ಸಂಕಲ್ಪಕ್ಕೆ ಪ್ರೇರಕವಾಗಿರಬೇಕು. ಸದ್ಭಾವನೆಗಳಿಗೆ ಆಕಾರವಾಗಿ ನಿಲ್ಲಬೇಕು. ಛಲಕ್ಕೆ ಬಲವಾಗಿ ಬೆನ್ನಿಗಿರಬೇಕು. ಸಾಧನೆಯ ಗುರಿಗೆ ಮುನ್ನುಡಿಯಾಗಿರಬೇಕು. ಇದಾವುದೂ ಇಲ್ಲದ ಮೇಲೆ ದೇವರ ಅಸ್ತಿತ್ವ ಮತ್ತು ನಂಬಿಕೆ ಇವೆರಡಕ್ಕೂ ಅರ್ಥವೇ ಇಲ್ಲ.
ಹಾಗೆಯೇ ಅದೃಷ್ಟವು ಸಹ. ಛಲಗಾರನಿಗೆ, ಕಠಿಣ ಪರಿಶ್ರಮಿಗೆ, ಸುಮನಸಿನ ಶ್ರದ್ಧಾಳುವಿಗೆ ಮಾತ್ರ ಅದೃಷ್ಟ ಒಲಿಯಬಲ್ಲದು. ಮಾತ್ರವಲ್ಲ ಛಲಗಾರನಿಗೆ ತನ್ನ ಅದೃಷ್ಟವನ್ನು ತನ್ನ ಮೂಗಿನ ನೇರಕ್ಕೆ ಬದಲಿಸಿಕೊಳ್ಳಬಲ್ಲ ಸಾಮರ್ಥ್ಯವೂ ಇರುತ್ತದೆ. ಹೀಗಾಗಿ ಅದೃಷ್ಟವಿಲ್ಲ, ಯೋಗವಿಲ್ಲವೆಂದು ಕುಳಿತುಕೊಳ್ಳುವವ ಒಂದೋ ಮೂರ್ಖನಾಗಿರುತ್ತಾನೆ ಅಥವಾ ಕೆಲಸಮಾಡಲಾರದ ಸೋಂಬೇರಿತನಕ್ಕೆ ನೆಪವನ್ನು ಹುಡುಕುತ್ತಿರುತ್ತಾನೆ. ಎಂಥ ಯೋಗವೂ ನಮ್ಮ ನಿರ್ಧಾರ, ಇಚ್ಛಾಶಕ್ತಿಗೆ ಬಗ್ಗಲೇಬೇಕು. ದೇವರೊಲುಮೆಯೂ ಅದಕ್ಕೆ ಇದ್ದೇ ಇರುತ್ತದೆ. ಹಾಗಿದ್ದೂ ಅದರಲ್ಲಿ ನಾವು ವಿಫಲರಾಗಿದ್ದೇವೆ ಎಂದರೆ ಮೊದಲನೆಯದಾಗಿ ನಮ್ಮ ಉದ್ದೇಶ ಶುದ್ಧತೆ ಇಲ್ಲವೆಂದರ್ಥ. ಮಾತ್ರವಲ್ಲ ವಿಷಯದ ಖಚಿತತೆ, ಆಯ್ದುಕೊಂಡ ಮಾರ್ಗ, ಆ ನಿಟ್ಟಿನಲ್ಲಿ ನಮ್ಮ ಪರಿಶ್ರಮವೂ ಪ್ರಮುಖ ಅಂಶಗಳಾಗಿರುತ್ತದೆ. ಹಾಗೆಂದು ಜೀವನದಲ್ಲಿ ಹೊಸ ಸಾಮ್ರಾಜ್ಯಗಳನ್ನೇ ಕಟ್ಟಬೇಕಿಲ್ಲ. ಸ್ವಂತ ಬಲದಿಂದ ನಮ್ಮದೇ ಜೀವನವನ್ನೇ ಸಾಮ್ರಾಜ್ಯವನ್ನಾಗಿಸಿಕೊಂಡು ನೆಮ್ಮದಿಯನ್ನು ಕಂಡುಕೊಳ್ಳಲು ಖಂಡಿತಾ ಸಾಧ್ಯ.
ಇಲ್ಲಿ ಎಲ್ಲರೂ ಎಡವುವುದು ಆರಂಭದಲ್ಲೇ. ಪ್ರಯತ್ನಕ್ಕೆ ಕೈ ಹಾಕುವ ಮುನ್ನವೇ ಫಲದ ಬಗ್ಗೆ ಚಿಂತೆಯನ್ನು ಆರಂಭಿಸಿರುತ್ತಾರೆ. ಫಲದ ದಿಕ್ಕು ತಪ್ಪಿಸುವುದೇ ಇಂಥ ಚಿಂತೆ. ಇದು ನಿಮ್ಮನ್ನು ದೇವರು, ಅದೃಷ್ಟ, ಯೋಗ ಇಂಥ ನಂಬಿಕೆಯ ಹಾದಿಯಲ್ಲೇ ಕೊಂಡೊಯ್ಯುತ್ತವಯೇ ವಿನಾ ನಿಮ್ಮ ಮೇಲಿನ, ನಿಮ್ಮ ಸಾಮರ್ಥ್ಯದ ಮೇಲಿನ ವಿಶ್ವಾಸಕ್ಕೆ ಇಂಬು ನೀಡುವುದೇ ಇಲ್ಲ. ಎಷ್ಟು ಉತ್ತಮ ಪ್ರಯತ್ನವನ್ನು ನೀವು ಮಾಡುತ್ತೀರೋ ಅಷ್ಟು ಉತ್ತಮ ಫಲ, ಅದೃಷ್ಟ ನಿಮ್ಮದಾಗುತ್ತದೆ ಎಂಬುದು ನೆನಪಿನಲ್ಲಿರಲಿ. ನಿಮ್ಮ ಪ್ರಯತ್ನ ಉತ್ತಮದಿಂದ ಅತ್ಯುತ್ತಮಕ್ಕೆ ಏರಿದಾಗ ಮಾತ್ರ ದೇವರ ಸಾಕ್ಷಾತ್ಕಾರ ಆಗಲಿಕ್ಕೆ ಸಾಧ್ಯ. ಅದಿಲ್ಲದಿದ್ದರೆ ದೇವರು ಅಸ್ತಿತ್ವನ್ನೇ ಕಳೆದುಕೊಳ್ಳುತ್ತಾನೆ! <
- ಸಹನೆ