ಬೈಟುಕಾಫಿ

ಹಸು ಹಿಡಿವ ಮರ!

ಐದು ವರ್ಷ ಹಿಂದೆ ತಟಗಾರದ ಕೊಂಬೆಪಾಲದ ಮಂಜುನಾಥ ಭಟ್ಟ ಬೆಟ್ಟ ಪ್ರದೇಶವೊಂದರಲ್ಲಿ ಸಂಚರಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಮರವೊಂದು ಅವರನ್ನು ಸೆಳೆದುಕೊಂಡಿತು. ಅವರ ತಲೆಕೂದಲುಗಳನ್ನು ಬಿಗಿಯಾಗಿ ಹಿಡಿದು ಎಳೆಯುತ್ತಿತ್ತು. ಸುಮಾರು ಹತ್ತು ನಿಮಿಷ ಮಂಜುನಾಥರಿಗೆ ಮರದಿಂದ ಬಿಡಿಸಿಕೊಳ್ಳಲಾಗಲಿಲ್ಲ. ನಂತರ ಸೊಂಟಕ್ಕೆ ಕಟ್ಟಿದ್ದ ಕತ್ತಿಯಿಂದ ಮರಕ್ಕೆ ತಿವಿದು ಭಟ್ಟರು ಮರದಿಂದ ಬಿಡಿಸಿಕೊಂಡರು. ಇನ್ನೊಮ್ಮೆ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವನ್ನು ನಿರ್ಜೀವ ಮರದ ದಣಕಲು ಗಟ್ಟಿಯಾಗಿ ಹಿಡಿದಿತ್ತು. ಈ ವೇಳೆ ಮಾನವನ ಪ್ರಯತ್ನದಿಂದಾಗಿ ಹಸು ಬದುಕುಳಿಯಿತು. ಹಸುವಿನ ಬಾಲ ಮಾತ್ರ ಮರಕ್ಕೆ ಕೆಲ ಕಾಲ ಅಂಟಿ ಉಳಿಯಿತು.
ಮಲೆನಾಡಿನ ಹಲವಡೆ ವರ್ಷಕ್ಕೆ ಹತ್ತಾರು ಇಂತಹ ವಿಚಿತ್ರ ಪ್ರಕರಣಗಳು ಬೆಳಕಿಗೆ ಬರುತ್ತವೆ. ಈ ಹಿಂದೆ ಕಳಚೆಯ ಹೆಬ್ಬಾರಕುಂಬ್ರಿಯಲ್ಲಿ ಆಕಳ ಕರುವಿನ ಬಾಲವನ್ನು ಮರವೊಂದು ಆಹಾರವನ್ನಾಗಿಸಿಕೊಂಡಿತು. ಬರಗದ್ದೆಯ ಹುಲಿಪಾಲನಲ್ಲಿಯೂ ಹಸುವನ್ನು ಮರ ಹಿಡಿದಿತ್ತು. ವಡಗೆರೆ ಪಾಲ್‌ನ ಗಣಪತಿ ಗಾಂವ್ಕಾರರ ಆಕಳು ಕೂಡ ಮೇವಿಗೆಂದು ತೆರಳಿದ್ದು ಮರವೊಂದಕ್ಕೆ ಸಿಕ್ಕಿತ್ತು. ಅಗ್ಗಾಶಿಕುಂಬ್ರಿಯ ನಾರಾಯಣ ಭಟ್ಟ, ಜೋಡಳ್ಳದ ದೇವತೆಮನೆಯ ದನ ಕರುಗಳು ಸಹ ಇದೇ ಅನುಭವ ಪಡೆದಿದ್ದವು. ಜೋಡಳ್ಳದ ಕಾಡಿನಲ್ಲಿ ನಂತರ ಆಕಳ ಬಾಲ ಕೆಲಸದವನಿಗೆ ಗೋಚರಿಸಿತು. ಇಡಗುಂದಿಯ ದೋಣಗಾರದಲ್ಲಿ ಮರವೊಂದು ಆಕಳ ಬಾಲವನ್ನು ಹಿಡಿದಿತ್ತು. ನಂತರ ಆ ಮರವನ್ನೆ ತುಂಡರಿಸಲಾಯಿತು. ತುಂಡರಿಸಿದ ಮರದಲ್ಲಿ ಆಕಳ ಬಾಲದ ಕೂದಲುಗಳು ಲಭ್ಯವಾದವು. ಆ ಮರದ ಕಾಂಡಕ್ಕೆ ಇಂದಿಗೂ ಜೀವವಿದೆ. ಆದರೆ ಮರಳಿ ಅದೇ ಮರಕ್ಕೆ ಆಕಳ ಕೂದಲನ್ನಾಗಲಿ, ಮಾನವನ ದೇಹವನ್ನಾಗಲಿ ನೀಡಿದರೆ ಅದು ಪುನಃ ಸೆಳೆಯಲಿಲ್ಲ. ಹಲವು ಬಾರಿ ನಿರ್ಜೀವ ಮರದ ತುಂಡು ಸಹ ಆಕಳ ಬಾಲವನ್ನು ನುಂಗಿದ ಪ್ರಕರಣಗಳು ಬಿಸಿ ಬಿಸಿ ಸುದ್ದಿಯಾಗಿ ಮತ್ತೆ ತಣ್ಣಗಾದವು.
ಮರ ಹುಟ್ಟಿದ ಘಳಿಗೆ ಹಾಗೂ ಜೀವಿ ಜನಿಸಿದ ಜಾತಕ ಏಕಕಾಲದಲ್ಲಿದ್ದರೆ ಹೀಗಾಗುವದು ಎಂಬುದು ಸ್ಥಳೀಯ ನಂಬಿಕೆಯ ಪುರಾಣ. ನಿರ್ಜೀವ ಮರವೂ ಸಹ ಮಲಗಿದ ಮಾನವನನ್ನು ಕ್ಷಣಕಾಲ ಉಸಿರಾಡದಂತೆ, ಮಾತು ಬಾರದಂತೆ, ಕತ್ತನ್ನು ಹಿಚುಕುವಂತೆ ಮಾಡುವ ಶಕ್ತಿ ಹೊಂದಿದೆಯಂತೆ. ಅದನ್ನು 'ವತ್ತಗ' ಎನ್ನುತ್ತಾರೆ. ಈ ತರಹದ ಅನುಭವ ಪಡೆದವರು ನಮ್ಮಲ್ಲಿಯೇ ಕಾಣಸಿಗುತ್ತಾರೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಇವು ಅಧಿಕ. ಮೇವಿಗೆಂದು ತೆರಳಿದ ಜಾನುವಾರುಗಳು ಸಹ ಮಳೆಗಾಲದಲ್ಲಿ ತಮ್ಮ ಬಾಲವನ್ನು ಮರಗಳಿಗೆ ಆಹಾರವನ್ನಾಗಿಸಿ ಅರ್ಧಕ್ಕೆ ತುಂಡರಿಸಿಕೊಂಡು ಬರುವ ಉದಾಹರಣೆಗಳಿವೆ. ಕರಾವಳಿ ಹಾಗೂ ಬಯಲು ಸೀಮೆಗಿಂತಲೂ ತಂಪು ಪ್ರದೇಶದಲ್ಲಿ ಇಂತಹ ಪ್ರಕರಣಗಳು ಅಧಿಕವಾಗಿ ಗೋಚರಿಸುತ್ತವೆ. ಬೇಸಿಗೆಯಲ್ಲಿ ಇಂಥ ಘಟನೆ ವಿರಳಾತಿ ವಿರಳ. ಬೇಸಿಗೆಯಲ್ಲಿ ಅಪರೂಪಕ್ಕೆ ನಡೆದರೂ ಅದರ ಸ್ವರೂಪ ತೀವ್ರವಾಗಿರುತ್ತದೆ. ಬಾಲವನ್ನು ತುಂಡರಿಸಿಕೊಂಡು ಬಂದ ಹಸುವಿನ ದೇಹ ಹಂತ ಹಂತವಾಗಿ ಕೊಳೆಯಲಾರಂಬಿಸುತ್ತದೆ. ತಕ್ಷಣ ಚಿಕಿತ್ಸೆ ಮಾಡದಿದ್ದಲ್ಲಿ ಹಸು ತಿಂಗಳು ಕಳೆಯುವ ಮುನ್ನವೇ ಅಸುನೀಗುತ್ತದೆ. ಗವೆಗುಳಿಯ ನಾಟಿ ವೈದ್ಯ ನಾರಾಯಣ ಹೆಗಡೆ ಇಂತಹ ಘಟನೆಗಳನ್ನು ಕಂಡಿದ್ದಾರೆ. ಬಾಲ ತುಂಡರಿಸಿಕೊಂಡು ಬಂದ ಹಸುಗಳಿಗೆ ಇವರೇ ಆರೈಕೆ ಮಾಡಿ ಜೀವ ಉಳಿಸಿದ್ದಾರೆ.
ಇವರ ಮಾತಿನಂತೆ ಮೂರು ವಿಧಗಳಲ್ಲಿ ಮೇವಿಗೆ ತೆರಳಿದ ಜಾನುವಾರಗಳನ್ನು ಮರ ಸೆಳೆದುಕೊಳ್ಳುತ್ತದೆ. ಅಪರೂಪಕ್ಕೊಮ್ಮೆ ಮರ ಗಿಡ ಬಳ್ಳಿಗಳಿಗೂ ಇಂತಹ ಶಕ್ತಿ ಉದ್ಭವವಾಗುತ್ತದೆ. ಜೀವಿಯ ಬಾಲ ತುಂಡರಿಸುವಿಕೆ, ಇಡೀ ದೇಹವನ್ನೆ ಜೀರ್ಣಿಸಿಕೊಳ್ಳುವಿಕೆ ಹಾಗೂ ಮರದ ಸುತ್ತ ವೃತ್ತಾಕಾರದಲ್ಲಿ ಜೀವಿಯನ್ನು ಬಂಧಿಸುವಿಕೆಯ ಶಕ್ತಿ ಮರಗಳಿಗೆ ಬರುತ್ತದೆ. ಆ ವೇಳೆಗೆ ಮಾನವನ ಪ್ರವೇಶವಾದರೆ ಹಸುವನ್ನು ಬದುಕಿಸಲು ಸಾಧ್ಯ. ಮಾನವ ಪ್ರವೇಶವಾಗುತ್ತಲೇ ಮರದ ಶಕ್ತಿ ಕುಂದುತ್ತದೆ ಎನ್ನುತ್ತಾರೆ ಗವೆಗುಳಿಯವರು. ಅಂತಹ ಶಕ್ತಿ ಬಂದಾಗ ಮರದ ಬಳಿ ಅಕ್ಕಿಯನ್ನು ಕೊಂಡೊಯ್ದರೆ ಇರುವೆಗಳಂತೆ ಅಕ್ಕಿಯೂ ಮರವೇರುತ್ತದೆನ್ನುತ್ತಾರೆ. ಗ್ರಹಣ ಕಾಲದಲ್ಲಿ ಜನಿಸಿದ ಮರಗಳಿಗೆ ಇಂತಹ ಶಕ್ತಿ ಇರುತ್ತದೆಯೆಂದೂ ಕೆಲವರ ನಂಬಿಕೆ.
 ಯಾವುದೋ ಒಂದು ಜಾತಿಯ ಮರ ಮಾತ್ರ ಹೀಗೆ ಮಾಡುವುದಲ್ಲ. ಮತ್ತಿ, ತೇಗ, ಹಲಸು, ಕಡೆಗೆ ಪಾರ್ಥೇನಿಯಂ ಸಸಿ ಸಹ ಆಕಳ ಬಾಲವನ್ನು ಸೆಳೆದುಕೊಂಡ ಪುರಾವೆಗಳಿವೆ. ಮರ ಜೀವಿಯನ್ನು ಬಂಧಿಸಿದ ವೇಳೆ ಮರಕ್ಕೆ ಕಬ್ಬಿಣದ ಸ್ಪರ್ಶವಾದರೆ ಅದು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಎನ್ನುವವರು ಇದ್ದಾರೆ. ಆದರೆ ಕಬ್ಬಿಣದ ಮೊಳೆ ಹೊಡೆದ ಮರ ತುಂಡು ಸಹ ಹಸುವಿನ ಬಾಲವನ್ನು ತುಂಡರಿಸಿದ್ದಿದೆ. ಇದೆಲ್ಲವೂ ಭ್ರಮೆ ಎನ್ನುವವರು ಸಾಕಷ್ಟು ಮಂದಿ. ಮರದ ಕಾಂಡಕ್ಕೆ ಹಸು ಮೈ ತುರಿಸಿಕೊಳ್ಳತೊಡಗಿದಾಗ, ಅದರಿಂದ ಹುಟ್ಟುವ ವಿದ್ಯುತ್‌ಕಾಂತೀಯ ಶಕ್ತಿ ಬಾಲದ ಕೂದಲುಗಳನ್ನು ಮರದತ್ತ ಸೆಳೆಯುತ್ತದೆ ಎಂಬ ವಿವರಣೆಯೂ ಇದಕ್ಕೆ ಬಂದಿದೆ. ಆದರೆ, ಯಾವ ವಿವರಣೆಯೂ ಈ ಘಟನೆಗಳನ್ನು ಸಂಪೂರ್ಣ ವಿವರಿಸಲು ಶಕ್ತವಾಗಿಲ್ಲ ಎಂಬುದು ನಿಜ.

- ಅಚ್ಯುತಕುಮಾರ ಯಲ್ಲಾಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CJP ಪ್ರತಿಭಟನೆ: ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ!

ಸ್ಟಾರ್‌ಲಿಂಕ್ ವಿವಾದ: ಭಾರತ ವಸಾಹತಲ್ಲ- Elon Musk ಗೆ ಕಮಲ್ ಹಾಸನ್ ತಿರುಗೇಟು

'ರಾಹುಲ್ ಗಾಂಧಿ ಅವರೇ, ನಿಮ್ಮ ಉದ್ದೇಶಗಳು ಎಂದಿಗೂ ಈಡೇರಲ್ಲ': ವಿಪಕ್ಷದವರದ್ದು 'ನಗರ ನಕ್ಸಲ್' ಮನಸ್ಥಿತಿ; ನಿತಿನ್ ನಬಿನ್