ಅಥಣಿಪುರ ಎಂಬ ಊರಿನಲ್ಲಿ ಭಿಕ್ಷುಕನೊಬ್ಬನಿದ್ದ. ಪ್ರಮುಖ ವೃತ್ತದಲ್ಲಿ ಭಿಕ್ಷೆ ಬೇಡುವುದು ಅವನ ವೃತ್ತಿಯಾಗಿತ್ತು. ಒಂದು ದಿನ ಗಿಳಿಮರಿಯೊಂದು ರೆಕ್ಕೆಗೆ ಗಾಯ ಮಾಡಿಕೊಂಡು ಬಂತು. ಭಿಕ್ಷುಕ ಮರುಕದಿಂದ ಗಿಳಿಗೆ ಆರೈಕೆ ಮಾಡಿ ಅದರ ಸ್ನೇಹ ಸಂಪಾದಿಸಿದ. ಚಾಣಾಕ್ಷ ಗಿಳಿಯನ್ನು ಕಂಡ ಭಿಕ್ಷುಕ ಗಿಳಿ ಭವಿಷ್ಯವನ್ನು ಯಾಕೆ ಪ್ರಾರಂಭ ಮಾಡಬಾರದೆಂದು ಯೋಚಿಸಿ, ಭವಿಷ್ಯದ ಕಾರ್ಡುಗಳಿಗೆ ಅನ್ನ ಅಂಟಿಸಿ, ಗಿಳಿ ಅದನ್ನು ಕೆದಕಿ ತೆಗೆಯುವಂತೆ ತರಬೇತಿ ನೀಡಿದ. ವೃತ್ತದಿಂದ ಭಿಕ್ಷುಕ ಪೇಟೆ ಮಧ್ಯದಲ್ಲಿ ಕುಳಿತು ಭವಿಷ್ಯ ಹೇಳಲು ಪ್ರಾರಂಭಿಸಿದ. ಭವಿಷ್ಯ ಕೇಳಲು ಜನ ಮುಗಿಬೀಳಲಾರಂಭಿಸಿದರು. ಹಣದ ದುರಾಶೆಗೆ ಬಿದ್ದ ಭಿಕ್ಷುಕ ಗಿಳಿಗೆ ಆಹಾರವನ್ನೇ ನೀಡದೆ ಹಾಗೇ ದುಡಿಸಿಕೊಳ್ಳುತ್ತಿದ್ದ. ಆಗ ಗಿಳಿ ಇವನಿಂದ ತಪ್ಪಿಸಿಕೊಂಡು ಹೋಗಲು ಯೋಚಿಸಿತು. ಭಿಕ್ಷುಕನಿಗೆ ಅದು ತಿಳಿದು ಕುತ್ತಿಗೆಗೆ ಸರಳನ್ನು ಕಟ್ಟಿದ. ಗಿಳಿ ಭಿಕ್ಷುಕನ ವಿಶ್ವಾಸ ಗಳಿಸಿ, ಸರಳನ್ನು ತೆಗೆಯುವಂತೆ ಮಾಡುತ್ತದೆ. ಗಿಳಿ ಉಪಾಯದಿಂದ ಪುರ್ರನೆ ಹಾರಿ ಹೋಗುತ್ತದೆ. ಸ್ವಾರ್ಥ ಬುದ್ಧಿಯ ಭಿಕ್ಷುಕ ಅಲ್ಲೇ ಕುಳಿತುಕೊಳ್ಳುತ್ತಾನೆ. <
= ರಂಜೀತ ರಣಸಿಂಗೆ